ಭೂಪಾಳಂರವರು ಗಾಂಧೀಜಿಯವರಿಂದ ಕನ್ನಡದಲ್ಲಿ ಸಹಿ ಮಾಡಿದ ಪತ್ರ ಪಡೆದು ಕನ್ನಡದ ಬದ್ಧತೆ ತೋರ್ಪಡಿಸಿದ್ದರು
ದತ್ತಿ ಕಾರ್ಯಕ್ರಮದಲ್ಲಿ ಕಸಾಪ ಜಿಲ್ಲಾ ಕಾರ್ಯದರ್ಶಿ ಎಂ. ಎಂ ಸ್ವಾಮಿ ಬಣ್ಣನೆ
ಕನ್ನಡ ಸಾಹಿತ್ಯ ಪರಿಷತ್ ಭದ್ರಾವತಿ ತಾಲೂಕು ಘಟಕದಿಂದ ನಗರದ ಉಂಬ್ಳೆಬೈಲು ರಸ್ತೆ, ರೋಟರಿ ಕ್ಲಬ್ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ದತ್ತಿ ಕಾರ್ಯಕ್ರಮ ಎಂ.ಎಂ ಸ್ವಾಮಿ, ಡಾ. ವಿಜಯದೇವಿ, ರತ್ನಯ್ಯ ಸೇರಿದಂತೆ ಇನ್ನಿತರರು ಉದ್ಘಾಟಿಸಿದರು.
ಭದ್ರಾವತಿ: ವಸುದೇವ ಭೂಪಾಳಂರವರ ವಿಚಾರಧಾರೆ ವಿಶಿಷ್ಟವಾಗಿತ್ತು. ಅವರು ಸ್ವಾತಂತ್ರ್ಯ ಹೋರಾಟದಲ್ಲಿ ಧುಮುಕಿ ಸೆರೆಮನೆ ವಾಸ ಅನುಭವಿಸಿದ್ದರು. ಮಹಾತ್ಮ ಗಾಂಧೀಜಿ ಅವರಿಗೆ ಜೈಲಿನಲ್ಲಿಯೇ ಕನ್ನಡ ಓದಲು ಮತ್ತು ಬರೆಯಲು ಹೇಳಿಕೊಡುವ ಮೂಲಕ ಅವರಿಂದ ಕನ್ನಡದಲ್ಲಿಯೇ ಸಹಿ ಮಾಡಿರುವ ಪತ್ರವನ್ನು ಪಡೆದಿದ್ದರು ಎಂದು ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಕಾರ್ಯದರ್ಶಿ ಎಂ.ಎಂ. ಸ್ವಾಮಿ ಹೇಳಿದರು.
ಅವರು ಕನ್ನಡ ಸಾಹಿತ್ಯ ಪರಿಷತ್ ತಾಲೂಕು ಘಟಕದಿಂದ ನಗರದ ಉಂಬ್ಳೆಬೈಲು ರಸ್ತೆ, ರೋಟರಿ ಕ್ಲಬ್ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ದತ್ತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಶಿವಮೊಗ್ಗದ ಪ್ರತಿಷ್ಠಿತ ಕುಟುಂಬದಲ್ಲಿ ಜನಿಸಿದ ವಸುದೇವ ಭೂಪಾಳಂರವರು ಸಾಹಿತ್ಯ ಕ್ಷೇತ್ರಕ್ಕೆ ಸಲ್ಲಿಸಿರುವ ಸೇವೆ ಅಪಾರವಾಗಿದ್ದು, ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ಮಹಾತ್ಮ ಗಾಂಧೀಜಿಯವರೊಂದಿಗೆ ಜೈಲಿನಲ್ಲಿದ್ದ ಸಂದರ್ಭದಲ್ಲಿ ಗಾಂಧೀಜಿಯವರಿಗೆ ಕನ್ನಡ ಓದಲು ಮತ್ತು ಬರೆಯಲು ಕಲಿಸಿದ್ದರು. ಜೈಲಿನಲ್ಲಿಯೇ ಕನ್ನಡದಲ್ಲಿ ಸಹಿ ಮಾಡಿದ ಪತ್ರವನ್ನು ಪಡೆದಿರುವುದು ಅವರಿಗೆ ಕನ್ನಡದ ಮೇಲಿನ ಪ್ರೀತಿ, ಅಭಿಮಾನ, ಬದ್ದತೆ, ಆತ್ಮಸ್ಥೈರ್ಯ ಮತ್ತು ಮನೋಬಲಕ್ಕೆ ಸಾಕ್ಷಿಯಾಗಿದೆ ಎಂದರು.
ಕನ್ನಡ ಸಾಹಿತ್ಯ ಪರಿಷತ್ತು ನಿರಂತರವಾಗಿ ದತ್ತಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಸಾಹಿತ್ಯ ಹಾಗೂ ಸಂಸ್ಕೃತಿಯ ಬೆಳವಣಿಗೆಗೆ ನೀಡುತ್ತಿರುವ ಕೊಡುಗೆ ಶ್ಲಾಘನೀಯವಾಗಿದೆ. ವಿಶೇಷ ವೇಷಭೂಷಣಗಳೊಂದಿಗೆ ನಡೆದ ವಚನ ಗಾಯನ ಸ್ಪರ್ಧೆ ಕಾರ್ಯಕ್ರಮಕ್ಕೆ ಮತ್ತಷ್ಟು ಕಳೆ ತಂದಿದೆ ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದರು.
ಶ್ರೀಮತಿ ಸರ್ವಮಂಗಳಮ್ಮ ಹಾಗೂ ಶ್ರೀ ಶಿವಶಂಕರಯ್ಯ ಅವರ ದತ್ತಿದಾನಿಗಳಾದ ಡಾ. ವಿಜಯಾದೇವಿ ಅವರು ಮಾತನಾಡಿ, ಇಂದಿನ ವಿಶೇಷ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸಾಹಿತ್ಯಾಸಕ್ತರು ಭಾಗವಹಿಸಿರುವುದು ತಮಗೆ ಅಪಾರ ಸಂತೋಷವನ್ನುಂಟುಮಾಡಿದೆ. ವಚನ ಗಾಯನದಲ್ಲಿ ಭಾಗವಹಿಸುವವರು ವಚನಗಳಲ್ಲಿರುವ ಪದಗಳನ್ನು ಅರ್ಥೈಸಿಕೊಂಡು, ಅವುಗಳ ಉಚ್ಚಾರಣೆಯನ್ನು ಸ್ಪಷ್ಟವಾಗಿ ಹಾಗೂ ಶುದ್ಧವಾಗಿ ಹಾಡಬೇಕು ಎಂದು ಸಲಹೆ ವ್ಯಕ್ತಪಡಿಸಿದರು.
ವಚನಗಳಿಗೆ ನಮ್ಮ ನಾಡಿನ ಸಂಸ್ಕೃತಿ ಮತ್ತು ಪರಂಪರೆಯಲ್ಲಿ ವಿಶಿಷ್ಟ ಸ್ಥಾನವಿದ್ದು, ಅವು ನಮ್ಮ ಸಂಸ್ಕೃತಿಯ ಗಟ್ಟಿತನವನ್ನು ಪ್ರತಿಬಿಂಬಿಸುತ್ತವೆ. ಆದ್ದರಿಂದ ವಚನಗಳನ್ನು ಅತ್ಯಂತ ಶ್ರದ್ಧೆ ಹಾಗೂ ಗೌರವದಿಂದ ಹಾಡಬೇಕು ಎಂದರು.
ವಸುದೇವ ಭೂಪಾಳಂ ದತ್ತಿ ಕುರಿತು ವಿಶೇಷ ಉಪನ್ಯಾಸ ನೀಡಿದ ಹಿರಿಯ ಸಾಹಿತಿ ರತ್ನಯ್ಯ, ವಸುದೇವ ಭೂಪಾಳಂರವರು ಸಾಹಿತ್ಯದ ವಿವಿಧ ಪ್ರಕಾರಗಳಲ್ಲಿ ಗಮನಾರ್ಹವಾದ ಸೇವೆ ಸಲ್ಲಿಸಿರುವ ಬಹುಮುಖ ಪ್ರತಿಭೆಯ ಸಾಹಿತಿಯಾಗಿದ್ದರು. ಅವರು ಸ್ವಾತಂತ್ರ್ಯ ಚಳವಳಿಯಲ್ಲಿ ಭಾಗವಹಿಸಿ ಸೆರೆಮನೆ ವಾಸ ಅನುಭವಿಸಿದ್ದರು. ಹಲವಾರು ಕೃತಿಗಳನ್ನು ರಚಿಸಿದ್ದು, ಅವುಗಳಲ್ಲಿ ‘ದೇವರು ಸತ್ತ’ ಎಂಬ ಲೇಖನ ಅತ್ಯಂತ ಗಮನಾರ್ಹವಾದುದು ಎಂದರು.
ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಡಿ. ಮಂಜುನಾಥ್ ರವರು ತಮ್ಮ ಅಧ್ಯಕ್ಷತೆಯ ಮೊದಲ ವರ್ಷದಲ್ಲಿಯೇ ಸಾಹಿತ್ಯ ಅಕಾಡೆಮಿಯ ಮೂಲಕ ವಸುದೇವ ಭೂಪಾಳಂ ಅವರ ಕೃತಿಗಳನ್ನು ಮುದ್ರಣಗೊಳಿಸಿರುವುದು ಹೆಮ್ಮೆಯ ಸಂಗತಿಯಾಗಿದೆ. ಅಲ್ಲದೆ ಶಿವಮೊಗ್ಗದಲ್ಲಿ ಅವರ ಸಾಹಿತ್ಯ ಕೃತಿಗಳನ್ನು ಜನರಿಗೆ ಪರಿಚಯಿಸಿ, ಉಚಿತವಾಗಿ ಹಂಚುವ ಕಾರ್ಯವೂ ನಡೆದಿರುವುದು ಉತ್ತಮ ಬೆಳವಣಿಗೆಯಾಗಿದೆ ಎಂದರು.
ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆ ತಾಲೂಕು ಅಧ್ಯಕ್ಷೆ ಎಂ.ಎಸ್. ಸುಧಾಮಣಿ, ಕನ್ನಡ ಸಾಹಿತ್ಯ ಪರಿಷತ್ ತಾಲೂಕು ಅಧ್ಯಕ್ಷ ಎಚ್. ತಿಮ್ಮಪ್ಪ, ಕರ್ನಾಟಕ ಜಾನಪದ ಪರಿಷತ್ ತಾಲೂಕು ಅಧ್ಯಕ್ಷ ಎಂ.ಆರ್ ರೇವಣಪ್ಪ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದು ಮಾತನಾಡಿದರು.
ಕನ್ನಡ ಸಾಹಿತ್ಯ ಪರಿಷತ್ ಭದ್ರಾವತಿ ತಾಲೂಕು ಘಟಕದಿಂದ ನಗರದ ಉಂಬ್ಳೆಬೈಲು ರಸ್ತೆ, ರೋಟರಿ ಕ್ಲಬ್ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ದತ್ತಿ ಕಾರ್ಯಕ್ರಮದಲ್ಲಿ ವಚನ ಗಾಯನ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಹಾಗು ಭಾಗವಹಿಸಿದ್ದ ತಂಡಗಳಿಗೆ ಬಹುಮಾನ ಹಾಗು ಪ್ರಶಸ್ತಿ ಪತ್ರಗಳನ್ನು ವಿತರಿಸಲಾಯಿತು.
ವಚನ ಗಾಯನ ಸ್ಪರ್ಧೆಯಲ್ಲಿ 24 ತಂಡಗಳು :
ವಚನ ಗಾಯನ ಸ್ಪರ್ಧೆಯಲ್ಲಿ ಒಟ್ಟು 24 ತಂಡಗಳು ಭಾಗವಹಿಸಿ, ತಮ್ಮ ಪ್ರತಿಭೆಯನ್ನು ಅನಾವರಣಗೊಳಿಸಿದವು. ಅತ್ಯುತ್ತಮ ಮೊದಲ ಮೂರು ತಂಡಗಳಿಗೆ ಬಹುಮಾನಗಳನ್ನು ನೀಡಲಾಯಿತು. ಪ್ರಥಮ ಬಹುಮಾನ ಡಾ. ವೀಣಾ ಭಟ್ ರವರ ನೇತೃತ್ವದ ಹವ್ಯಕ ಮಹಿಳಾ ವೇದಿಕೆ ಮತ್ತು ದ್ವಿತೀಯ ಬಹುಮಾನ ಸುನಂದ ರವರ ನೇತೃತ್ವದ ಶಾಶ್ವತಿ ಮಹಿಳಾ ವೇದಿಕೆ ಹಾಗೂ ತೃತೀಯ ಬಹುಮಾನ ಸದಾಶಿವಪ್ಪರವರ ನೇತೃತ್ವದ ಭದ್ರಾ ಸುಗಮ ಸಂಗೀತ ತಂಡ ಪಡೆದುಕೊಂಡವು.
ಇದಲ್ಲದೆ, ವಚನ ಗಾಯನದಲ್ಲಿ ಭಾಗವಹಿಸಿದ ತಂಡಗಳ ವಿಶೇಷ ವೇಷಭೂಷಣ ಹಾಗೂ ವಸ್ತ್ರ ವಿನ್ಯಾಸಕ್ಕೂ ಪ್ರೋತ್ಸಾಹ ನೀಡಲಾಯಿತು. ಸುಂದರ ವಸ್ತ್ರ ವಿನ್ಯಾಸದಲ್ಲಿ ಪ್ರಥಮ ಸ್ಥಾನವನ್ನು ಕದಳಿ ಮಹಿಳಾ ವೇದಿಕೆ ಹಾಗೂ ದ್ವಿತೀಯ ಸ್ಥಾನವನ್ನು ಅಂಬಾಭವಾನಿ ತಂಡ ಪಡೆದುಕೊಂಡಿತು. ವಚನ ಗಾಯನ ಸ್ಪರ್ಧೆಯಲ್ಲಿ ಭಾಗವಹಿಸಿದ್ದ ಎಲ್ಲಾ ತಂಡಗಳಿಗೂ ಪ್ರಶಸ್ತಿ ಪತ್ರ ಹಾಗೂ ವಿಜೇತರಾದವರಿಗೆ ಗೌರವಧನ ಹಾಗೂ ಪ್ರಶಸ್ತಿ ಪತ್ರವನ್ನು ನೀಡಿ ಗೌರವಿಸಲಾಯಿತು. ತೀರ್ಪುಗಾರರಾಗಿ ಸಂಗೀತ ಶಿಕ್ಷಕಿ ಪುಷ್ಪಾ ಹಾಗೂ ಶ್ರೀನಿವಾಸ ಕಾರ್ಯನಿರ್ವಹಿಸಿದರು.
ಕಾರ್ಯಕ್ರಮದ ಆರಂಭದಲ್ಲಿ ರೇವಣಪ್ಪ, ದಿವಾಕರ, ಹರೀಶ, ಜಂಬೂಸ್ವಾಮಿ, ಲಕ್ಷ್ಮೀದೇವಿ ಜಂಬೂಸ್ವಾಮಿ, ಲಲಿತಾಂಬ ಹಾಗೂ ಸುಚಿತ್ರ ಅವರನ್ನೊಳಗೊಂಡ ತಂಡದಿಂದ ನಾಡಗೀತೆ ಹಾಡಲಾಯಿತು.
ಪರಿಷತ್ ಸಂಘಟನಾ ಕಾರ್ಯದರ್ಶಿ ಬಿ. ಕಮಲಾಕರ ಸ್ವಾಗತಿಸಿ, ಡಿ. ನಾಗೋಜಿರಾವ್ ನಿರೂಪಿಸಿದರು. ತಾಲೂಕು ಜಾನಪದ ಪರಿಷತ್ ಪ್ರಧಾನ ಕಾರ್ಯದರ್ಶಿ ಬಿ.ಎಲ್ ಮೋಹನ್ ಕುಮಾರ್ ವಂದಿಸಿದರು.

.jpeg)