ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಮಹಿಳೆಯರ ಸಬಲೀಕರಣ : ಕೆ.ಸಿ ಸುರೇಶ್
ಭದ್ರಾವತಿ ತಾಲೂಕಿನ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃಧ್ಧಿ ಯೋಜನೆ ಬಿ.ಸಿ.ಟ್ರಸ್ಟ್ ವತಿಯಿಂದ ಹಳೇನಗರದ ಶ್ರೀ ಭಗೀರಥ ಸಮುದಾಯ ಭವನದಲ್ಲಿ ಏರ್ಪಡಿಸಲಾಗಿದ್ದ ತಾಲೂಕು ಮಟ್ಟದ ಮಹಿಳಾ ವಿಚಾರಗೋಷ್ಠಿ ಕಾರ್ಯಕ್ರಮ ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ಸಿ ಸುರೇಶ್ ಉದ್ಘಾಟಿಸಿದರು.
ಭದ್ರಾವತಿ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮಹಿಳೆಯರಲ್ಲಿ ಆತ್ಮವಿಶ್ವಾಸ ಹೆಚ್ಚಿಸುವ ಜೊತೆಗೆ ಅವರ ಸಬಲೀಕರಣದಲ್ಲಿ ಪ್ರಮುಖ ಪಾತ್ರವಹಿಸುತ್ತಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ಸಿ ಸುರೇಶ್ ಮೆಚ್ಚುಗೆ ವ್ಯಕ್ತಪಡಿಸಿದರು.
ಅವರು ತಾಲೂಕಿನ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃಧ್ಧಿ ಯೋಜನೆ ಬಿ.ಸಿ.ಟ್ರಸ್ಟ್ ವತಿಯಿಂದ ಹಳೇನಗರದ ಶ್ರೀ ಭಗೀರಥ ಸಮುದಾಯ ಭವನದಲ್ಲಿ ಏರ್ಪಡಿಸಲಾಗಿದ್ದ ತಾಲೂಕು ಮಟ್ಟದ ಮಹಿಳಾ ವಿಚಾರಗೋಷ್ಠಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಶ್ರೀ ಕ್ಷೇತ್ರ ಧರ್ಮಸ್ಥಳ ಕೇವಲ ಧಾರ್ಮಿಕ ಕ್ಷೇತ್ರದಲ್ಲಿ ಮಾತ್ರವಲ್ಲದೆ ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಹಾಗು ಆರ್ಥಿಕವಾಗಿ ಸಹ ಕಾರ್ಯ ನಿರ್ವಹಿಸುತ್ತಿದೆ. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮೂಲಕ ರಾಜ್ಯಾದ್ಯಂತ ಮನೆಮಾತಾಗಿದೆ. ರಾಜ್ಯದಲ್ಲಿ ಸುಮಾರು ೨೫೦ಕ್ಕೂ ಹೆಚ್ಚು ಸಂಘಗಳು ಸಕ್ರೀಯವಾಗಿ ಕಾರ್ಯ ನಿರ್ವಹಿಸುತ್ತಿರುವ ಮೂಲಕ ಮಹಿಳೆಯರು ಸಾಮಾಜಿಕವಾಗಿ, ಆರ್ಥಿಕವಾಗಿ ಸದೃಡಗೊಳ್ಳಲು ಸಹಕಾರಿಯಾಗಿವೆ ಎಂದರು.
.ಪೊಲೀಸ್ ನಗರ ವೃತ್ತ ನಿರೀಕ್ಷಕಿ ಕೆ. ನಾಗಮ್ಮ ಸಂಪನ್ಮೂಲ ವ್ಯಕ್ತಿಯಾಗಿ ಪಾಲ್ಗೊಂಡು `ಸಾಮಾಜಿಕ ಜಾಲತಾಣಗಳಿಂದ ಮಹಿಳೆಯರು ಮತ್ತು ಮಕ್ಕಳ ರಕ್ಷಣೆ ಹೇಗೆ ?' ಎಂಬ ವಿಷಯದ ಬಗ್ಗೆ ಮಾತನಾಡಿ, ಇಂದಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳ ಬಳಕೆ ಹೆಚ್ಚುತ್ತಿದ್ದು, ಅದರ ಜೊತೆಗೆ ಸೈಬರ್ ಅಪರಾಧಗಳು ಸಹ ಹೆಚ್ಚುತ್ತಿರುವುದು ಕಳವಳಕಾರಿ ಸಂಗತಿಯಾಗಿದೆ. ಈ ಹಿನ್ನಲೆಯಲ್ಲಿ ವಿಶೇಷವಾಗಿ ಮಹಿಳೆಯರು ಮತ್ತು ಮಕ್ಕಳು ಸಾಮಾಜಿಕ ಜಾಲತಾಣಗಳ ಬಳಕೆ ವೇಳೆ ಹೆಚ್ಚಿನ ಜಾಗೃತಿವಹಿಸಬೇಕಾಗಿದೆ. ಅನಗತ್ಯವಾಗಿ ಯಾರೊಂದಿಗೆ ವೈಯಕ್ತಿಕ ಮಾಹಿತಿಗಳನ್ನು ಹಂಚಿಕೊಳ್ಳಬಾರದು ಎಂದರು.
ಇಂದಿನ ದಿನಗಳಲ್ಲಿ ವಿದ್ಯಾವಂತರೇ ಹೆಚ್ಚಿನ ಹಣದ ಆಸೆ, ಸಾಲ ಸೇರಿದಂತೆ ಇತರ ಆಮಿಷಗಳಿಗೆ ಒಳಗಾಗಿ ಸೈಬರ್ ಅಪರಾಧಗಳಿಗೆ ಹೆಚ್ಚು ಬಲಿಯಾಗುತ್ತಿದ್ದಾರೆ. ಈ ಕೃತ್ಯ ಮಾಡುತ್ತಿರುವವರೆಲ್ಲರೂ ವಿದೇಶಗಳಲ್ಲಿ ಕುಳಿತು ಕಾರ್ಯಚರಣೆ ಮಾಡುತ್ತಿರುತ್ತಾರೆ. ಒಂದು ವೇಳೆ ವಂಚನೆ ಆದರೆ ಅದರ ಬಗ್ಗೆ ಕ್ರಮ ಕೈಗೊಳ್ಳುವುದು ಕಷ್ಟದ ಸಂಗತಿ ಎಂದರು.
ವಿದ್ಯಾರ್ಥಿಗಳು, ೧೮ ವರ್ಷದೊಳಗಿನ ಯುವ ಜನರು ಫೇಸ್‌ಬುಕ್, ವಾಟ್ಸಪ್ ಸೇರಿದಂತೆ ಇನ್ನಿತರ ಸಾಮಾಜಿಕ ಜಾಲತಾಣಗಳ ಖಾತೆಗಳನ್ನು ಯಾವುದೇ ಕಾರಣಕ್ಕೂ ತೆರೆಯಬಾರದು. ಅಲ್ಲದೆ ಪೋಷಕರು ಮಕ್ಕಳು ವಿದ್ಯಾಭ್ಯಾಸ, ಕ್ರೀಡೆ ಹಾಗು ಸಾಂಸ್ಕೃತಿಕ ಚಟುವಟಿಕೆಗಳ ಕಡೆ ಗಮನ ಹರಿಸುವಂತೆ ನೋಡಿಕೊಳ್ಳಬೇಕೆಂದು ಸಲಹೆ ನೀಡಿದರು.
ಪ್ರಸ್ತುತ ದಿನಗಳಲ್ಲಿ ಯುವತಿಯರು, ಮಹಿಳೆಯರು ತಾವು ಧರಿಸುವ ಉಡುಗೆ ತೊಡುಗೆಗಳಲ್ಲಿ ಸಭ್ಯತೆ ಕಾಯ್ದುಕೊಳ್ಳಬೇಕು. ಇದರಿಂದ ಯಾವುದೇ ರೀತಿಯ ತೊಂದರೆಗೆ ಒಳಗಾಗುವ ಸಂಭವ ಕಡಿಮೆ. ಯುವಕರು ಮಾದಕ ವಸ್ತುಗಳ ಸೇವನೆಯಿಂದ ದೂರವಿರಬೇಕು. ಅಲ್ಲದೆ ಯಾವುದೇ ದುಶ್ಚಟಗಳಿಗೆ ಬಲಿಯಾಗಬಾರದು ಎಂದರು.
ಬ್ರಹ್ಮಕುಮಾರಿ ಈಶ್ವರಿ ವಿಶ್ವವಿದ್ಯಾಲಯ ಬಿ.ಕೆ ಮಾಲಕ್ಕ ಮಾತನಾಡಿ, ಮಹಿಳೆಯರು ತಮ್ಮ ಅಭಿವೃಧ್ಧಿ ಉನ್ನತಿಯ ಬಗ್ಗೆ ಸಂಕಲ್ಪ ಮಾಡಿ ಆಗ ನಿಮ್ಮ ಒಳ್ಳೆಯ ಉದ್ದೇಶ ಯಾವುದೇ ತೊಂದರೆ ಇಲ್ಲದೆ ಗುರಿ ಮುಟ್ಟುವುದು ನಿಶ್ಚಿತ. ಆದರೆ ಈ ವಿಚಾರದಲ್ಲಿ ಯಾವುದೇ ಪೈಪೋಟಿ ಹೋಲಿಕೆಗಳನ್ನು ಮಾಡುವುದು ಸರಿಯಲ್ಲ ಎಂದರು.
ನಗರಸಭೆ ಅಧ್ಯಕ್ಷೆ ಜೆ.ಸಿ.ಗೀತಾ ರಾಜಕುಮಾರ್ ಅಧ್ಯಕ್ಷತೆ ವಹಿಸಿದ್ದರು. ರತ್ನಾ, ಮಣಿ, ಹರೀಶ್ ಕುಮಾರ್ ಶೆಟ್ಟಿ, ಗೊಂದಿ ಜಯರಾಮ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಶ್ವೇತ, ತಮಟೆ ಜಗದೀಶ್ ತೀರ್ಪುಗಾರರಾಗಿ ಆಗಮಿಸಿದ್ದರು.
ಪುಷ್ಪಗುಚ್ಚ, ರಂಗೋಲಿ, ಕರಕುಶಲ ವಸ್ತುಗಳ ಸ್ಪರ್ಧೆ ಏರ್ಪಡಿಸಲಾಗಿತ್ತು. ತಿಮ್ಲಾಪುರ ಶ್ರೀ ಲಕ್ಷ್ಮೀ ವೆಂಕಟೇಶ್ವರ ಭಜನಾ ಮಂಡಳಿ ಸದಸ್ಯೆಯರು ಭಕ್ತಿ ಗೀತೆ ಗಾಯನ ಪ್ರಸ್ತುತ ಪಡಿಸಿದರು. ರಮ್ಯ ಮತ್ತು ಸಂಗಡೀಗರು ಪ್ರಾರ್ಥಿಸಿ, ಹರೀಶ್ ಕುಮಾರ್ ಸ್ವಾಗತಿಸಿದರು. ಸುಮಂಗಲಿ ಕಾರ್ಯಕ್ರಮ ನಿರೂಪಿಸಿ, ಅರುಣ್ ವರದಿ ನೀಡಿದರು.
