ಭದ್ರಾವತಿ ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟು 1,78,264 ಮತದಾರರು
ಭದ್ರಾವತಿಯಲ್ಲಿ ಮಂಗಳವಾರ ತಹಸೀಲ್ದಾರ್ ಕಚೇರಿಯಲ್ಲಿ ಮತದಾರರ ನೋಂದಣಾಧಿಕಾರಿಯಾಗಿರುವ ನೂತನ ಉಪವಿಭಾಗಾಧಿಕಾರಿ ಡಾ. ಮೈತ್ರಿ ಎಚ್.ಪಿ.ಎಸ್ ಅಂತಿಮ ಮತದಾರರಪಟ್ಟಿ ಬಿಡುಗಡೆಗೊಳಿಸಿ ಮಾತನಾಡಿದರು.
- ಅಂತಿಮ ಮತದಾರರ ಪಟ್ಟಿ ಪ್ರಕಟಿಸಿದ ಉಪ ವಿಭಾಗಾಧಿಕಾರಿ ಡಾ. ಮೈತ್ರಿ ಎಚ್.ಪಿ.ಎಸ್
- ಒಟ್ಟು 86,529 ಪುರುಷ, 91,735 ಮಹಿಳಾ ಮತದಾರರು.
-ಹೊಸದಾಗಿ 4,348 ಮತದಾರರು ಸೇರ್ಪಡೆ, ತೆಗೆದು ಹಾಕಿದ ಮತದಾರರು 420
-ಒಟ್ಟು ಜನಸಂಖ್ಯೆಗೆ ಹೋಲಿಸಿದರೆ ಶೇ.61.45 ಮಂದಿ ಮತದಾರರು.
ಭದ್ರಾವತಿ : ತಾಲೂಕಿನ ಭದ್ರಾವತಿ ವಿಧಾನಸಭಾ ಕ್ಷೇತ್ರದ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆಯ(ಎಸ್ಐಆರ್) ಕಾರ್ಯ ಅಂತಿಮ ಹಂತ ತಲುಪಿದ್ದು, ಮಂಗಳವಾರ ಅಂತಿಮ ಪಟ್ಟಿ ಬಿಡುಗಡೆಗೊಳಿಸಲಾಗಿದೆ. ಕ್ಷೇತ್ರದಲ್ಲಿ ಒಟ್ಟು 1,78,264 ಮಂದಿ ಮತದಾನ ಹಕ್ಕು ಹೊಂದಿದ್ದಾರೆಂದು ಮತದಾರರ ನೋಂದಣಾಧಿಕಾರಿಯಾಗಿರುವ ನೂತನ ಉಪವಿಭಾಗಾಧಿಕಾರಿ ಡಾ. ಮೈತ್ರಿ ಎಚ್.ಪಿ.ಎಸ್ ತಿಳಿಸಿದರು.
ಅವರು ಈ ಕುರಿತು ತಾಲೂಕು ಕಛೇರಿ ಸಭಾಂಗಣದಲ್ಲಿ ಮಂಗಳವಾರ ಮಾಹಿತಿ ನೀಡಿ, ತಾಲೂಕಿನ 112- ಭದ್ರಾವತಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ 2026ರ ಅಂಕಿ ಅಂಶಗಳ ಪ್ರಕಾರ ಒಟ್ಟು 2,90,081 ಜನಸಂಖ್ಯೆ ಇದ್ದು, ಈ ಪೈಕಿ ಇಂದಿನ ದಿನಾಂಕಕ್ಕೆ ಒಟ್ಟು 1,78,264 ಮಂದಿ ಮತದಾನದ ಹಕ್ಕು ಹೊಂದಿದ್ದಾರೆ. ನಗರ ವ್ಯಾಪ್ತಿಯಲ್ಲಿ 145 ಹಾಗು ಗ್ರಾಮಾಂತರ ವ್ಯಾಪ್ತಿಯಲ್ಲಿ 112 ಒಟ್ಟು 257 ಮತಗಟ್ಟೆಗಳಿವೆ ಎಂದರು.
ವಿಧಾನಸಭಾ ಕ್ಷೇತ್ರದಲ್ಲಿ 169 ಪುರುಷ ಹಾಗು 8 ಮಹಿಳಾ ಸೇರಿದಂತೆ ಒಟ್ಟು 177 ಸೇವಾ ಮತದಾರರಿದ್ದು, ಉಳಿದಂತೆ ಒಟ್ಟು 86,529 ಪುರುಷ, 91,731 ಮಹಿಳಾ ಹಾಗು 4 ತೃತೀಯ ಲಿಂಗಿ ಸೇರಿದಂತೆ ಒಟ್ಟು 1,78,264 ಮತದಾರರಿದ್ದಾರೆ. ಈ ಪೈಕಿ 18 ರಿಂದ 19 ವರ್ಷದೊಳಗಿನ 2,494 ಮತ್ತು ಎನ್.ಆರ್.ಐ 10 ಮತ್ತು 85 ವರ್ಷ ಮೇಲ್ಪಟ್ಟ 980 ಹಾಗು 2,161 ವಿಕಲಚೇತನ ಮತದಾರರು ಸೇರಿದ್ದಾರೆ ಎಂದರು.
ಪ್ರಕಟಿಸಲಾಗಿರುವ ಒಟ್ಟು ಮತದಾರರ ಪಟ್ಟಿಯಲ್ಲಿ ಹೊಸದಾಗಿ 4,348 ಮತದಾರರ ಸೇರ್ಪಡೆಗೊಳಿಸಲಾಗಿದ್ದು, 420 ಮತದಾರರನ್ನು ತೆಗೆದು ಹಾಕಲಾಗಿದೆ. ಈ ಹಿಂದೆ ನೋಂದಾಯಿಸಿಕೊಂಡಿದ್ದ ಅದೇ ಭಾಗದಲ್ಲಿ ಕರಡು ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರು ಕಾಣಿಸುತ್ತಿಲ್ಲ ಎಂದು ಹಲವು ಮತದಾರರಿಂದ ಪ್ರಶ್ನೆಗಳು ಬಂದಿವೆ. ಮತಗಟ್ಟೆಗಳ ತಾರ್ಕಿಕೀಕರಣ ಮತ್ತು ಮತದಾರರ ಕ್ರಮಾಂಕದ ಮರುಹೊಂದಿಕೆ ಕಾರಣದಿಂದ ಭಾಗ ಸಂಖ್ಯೆ ಮತ್ತು ಕ್ರಮ ಸಂಖ್ಯೆ ಬದಲಾಗಿರಬಹುದು ಎಂದು ಸ್ಪಷ್ಟಪಡಿಸಲಾಗಿದೆ. ಈ ಹಿನ್ನಲೆಯಲ್ಲಿ ಹಿಂದಿನ ಭಾಗಗಳಲ್ಲಿ ತಮ್ಮ ಹೆಸರುಗಳನ್ನು ಕಂಡುಹಿಡಿಯಲು ಸಾಧ್ಯವಾಗದ ಮತದಾರರು ತಮ್ಮ ಎಫಿಕ್ ಸಂಖ್ಯೆಯನ್ನು ಬಳಸಿ ಚುನಾವಣಾ ಆಯೋಗದ voters.eci.gov.in ನಲ್ಲಿ ಅಥವಾ ಇಸಿಐನೆಟ್ ಮೊಬೈಲ್ ಅಪ್ಲಿಕೇಶನ್ ಮೂಲಕ ತಮ್ಮ ಹೆಸರನ್ನು ಹುಡುಕುವಂತೆ ಕೋರಿದರು.
ಒಂದು ವೇಳೆ ಅಂತಿಮ ಮತದಾರರ ಪಟ್ಟಿಯಲ್ಲಿ ಹೆಸರು ಇಲ್ಲದ ಅರ್ಹ ಮತದಾರರು ಆತಂಕಪಡುವ ಅಗತ್ಯವಿಲ್ಲ. ಫಾರಂ 6 ನಮೂನೆ ಬಳಸಿ ಅಗತ್ಯ ದಾಖಲೆಗಳನ್ನು ಹಾಗು ಘೋಷಣಾ ಪತ್ರ ನೀಡುವ ಮೂಲಕ ಸೇರ್ಪಡೆಗೊಳ್ಳಬಹುದಾಗಿದ್ದು, ಚುನಾವಣಾ ಆಯೋಗದ ಅಂತರ್ಜಾಲ ಬಳಸಿಕೊಳ್ಳಬಹುದು ಅಥವಾ ನೇರವಾಗಿ ಸಂಬಂದಪಟ್ಟ ಮತಗಟ್ಟೆ ಅಧಿಕಾರಿಗಳನ್ನು ಸಂಪರ್ಕಿಸಬಹುದಾಗಿದೆ ಎಂದರು.
ಸಹಾಯಕ ಚುನಾವಣಾಧಿಕಾರಿಯಾಗಿರುವ ತಹಸೀಲ್ದಾರ್ ಪ್ರದೀಪ್ ದೇವಗಿರಿ ಉಪಸ್ಥಿತರಿದ್ದರು. ವಿವಿಧ ರಾಜಕೀಯ ಪಕ್ಷಗಳ ಪ್ರಮುಖರಾದ ಆರ್. ಕರುಣಾಮೂರ್ತಿ, ಜಿ. ಧರ್ಮಪ್ರಸಾದ್, ರಂಗಸ್ವಾಮಿ, ಮಸರಹಳ್ಳಿ ಸುರೇಶ್, ಎನ್. ರಾಮಕೃಷ್ಣ, ಎಂ.ಎಸ್ ಸುರೇಶಪ್ಪ, ರಘುರಾವ್, ಹನುಮಂತನಾಯ್ಕ, ಲೋಕೇಶ್ ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.
