ಕರ್ತವ್ಯದ ಸಮಯದಲ್ಲಿ ಕಡ್ಡಾಯವಾಗಿ ಸುರಕ್ಷತಾ ಸಲಕರಣೆಗಳನ್ನು ಬಳಸಿ : ಬಿ.ಕೆ ಸಂಗಮೇಶ್ವರ್
೨ ಸಾವಿರ ಕಾರ್ಮಿಕರಿಗೆ ಸುರಕ್ಷತಾ ಕಿಟ್ ವಿತರಣೆ ಕಾರ್ಯಕ್ರಮ
ಭದ್ರಾವತಿ ನಗರದ ಬೈಪಾಸ್ ರಸ್ತೆ, ಉಜ್ಜನಿಪುರ, ಕಾರ್ಮಿಕರ ಭವನದಲ್ಲಿ ಕಾರ್ಮಿಕ ಇಲಾಖೆಯ ಕಾರ್ಮಿಕ ಇಲಾಖೆಯ ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಲ್ಯಾಣ ಮಂಡಳಿಯಿಂದ ಭಾನುವಾರ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಸುಮಾರು ೨ ಸಾವಿರ ಕಿಟ್‌ಗಳನ್ನು ನೋಂದಾಯಿತ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರಿಗೆ ವಿತರಿಸಲಾಯಿತು.
ಭದ್ರಾವತಿ : ಕಾರ್ಮಿಕರು ಕೆಲಸದ ಸಮಯದಲ್ಲಿ ತಮ್ಮ ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡಬೇಕು. ಸರ್ಕಾರ ನೀಡಿರುವ ಸುರಕ್ಷತಾ ಕಿಟ್ ಸಮರ್ಪಕವಾಗಿ ಬಳಕೆ ಮಾಡಿಕೊಳ್ಳಬೇಕೆಂದು ಕರ್ನಾಟಕ ಗ್ರಾಮೀಣ ಮೂಲ ಸೌಕರ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಶಾಸಕ ಬಿ.ಕೆ ಸಂಗಮೇಶ್ವರ್ ಸಲಹೆ ವ್ಯಕ್ತಪಡಿಸಿದರು.
ಅವರು ಭಾನುವಾರ ನಗರದ ಬೈಪಾಸ್ ರಸ್ತೆ, ಉಜ್ಜನಿಪುರ, ಕಾರ್ಮಿಕರ ಭವನದಲ್ಲಿ ಕಾರ್ಮಿಕ ಇಲಾಖೆಯ ಕಾರ್ಮಿಕ ಇಲಾಖೆಯ ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಲ್ಯಾಣ ಮಂಡಳಿಯಿಂದ ಆಯೋಜಿಸಲಾಗಿದ್ದ ೨ ಸಾವಿರ ನೋಂದಾಯಿತ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರಿಗೆ ಕಿಟ್‌ಗಳ ವಿತರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಕಾರ್ಮಿಕರು ಸುರಕ್ಷಿತವಾಗಿ, ಆರೋಗ್ಯವಾಗಿರಬೇಕು. ಆಗ ಮಾತ್ರ ನೆಮ್ಮದಿ ಕಾಣಲು ಸಾಧ್ಯ. ಈ ಹಿನ್ನಲೆಯಲ್ಲಿ ಸರ್ಕಾರ ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡುತ್ತಿದ್ದು, ಈ ನಿಟ್ಟಿನಲ್ಲಿ ಸುರಕ್ಷತಾ ಕಿಟ್‌ಗಳನ್ನು ವಿತರಿಸಲಾಗುತ್ತಿದೆ. ಕರ್ತವ್ಯದ ಸಮಯದಲ್ಲಿ ಇವುಗಳನ್ನು ಕಡ್ಡಾಯವಾಗಿ ಬಳಸಿಕೊಳ್ಳಬೇಕೆಂದರು.
ನಗರಸಭೆ ಹಿರಿಯ ಸದಸ್ಯ ಬಿ.ಕೆ ಮೋಹನ್ ಮಾತನಾಡಿ, ಕಾರ್ಮಿಕರ ಸಂಕಷ್ಟಗಳನ್ನು ಶಾಸಕರ ಕುಟುಂಬದವರು ಅರಿತುಕೊಂಡಿದ್ದಾರೆ. ಸಂಕಷ್ಟದಲ್ಲಿರುವ ಕಾರ್ಮಿಕರು ಯಾರೇ ಇರಲಿ ಅವರಿಗೆ ನೆರವಾಗುವುದು ನಮ್ಮ ಜವಾಬ್ದಾರಿಯಾಗಿದೆ ಎಂಬುದು ಮನಗಂಡಿದ್ದಾರೆ. ಈ ಹಿನ್ನಲೆಯಲ್ಲಿ ಕ್ಷೇತ್ರದ ಕಾರ್ಮಿಕರ ಬಹುತೇಕ ಬೇಡಿಕೆಗಳನ್ನು ಶಾಸಕರು ಈಡೇರಿಸಿದ್ದಾರೆ. ಸದಾ ಕಾಲ ಕಾರ್ಮಿಕರ ಹಿತಕಾಪಾಡಲು ಬದ್ಧರಾಗಿದ್ದಾರೆ ಎಂದರು.
ಸರ್ಕಾರದ ೫ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ತಾಲೂಕು ಅಧ್ಯಕ್ಷ ಬಿ.ಎಸ್ ಗಣೇಶ್, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಎಸ್. ಕುಮಾರ್ ಸೇರಿದಂತೆ ಇನ್ನಿತರರು ಮಾತನಾಡಿದರು.
ವಿವಿಧ ಕಾರ್ಮಿಕ ಸಂಘಟನೆಗಳ ಪ್ರಮುಖರಾದ ಪರಮೇಶ್(ತ್ಯಾಗರಾಜ್), ಮಧು, ಚಂದ್ರಶೇಖರ್, ನಾರಾಯಣಸ್ವಾಮಿ, ವಿ. ವಿನೋದ್, ಯಲ್ಲಪ್ಪ, ಮನೋಹರ್, ಇಳೆಯರಾಜ, ರಾಧಾಕೃಷ್ಣ, ಸಂಜೀವ ಕುಮಾರ್, ಅರಳಿಹಳ್ಳಿ ಸುಧಾಕರ್, ಪೇಪರ್‌ಟೌನ್ ಪೊಲೀಸ್ ಠಾಣೆ ಉಪ ನಿರೀಕ್ಷಕ ಕುಮಾರ್, ಕಾರ್ಮಿಕ ನಿರೀಕ್ಷಕರಾದ ಬಿ.ಎಂ ರಕ್ಷಿತ್, ಸುಪ್ರಿತಾ, ಸಚಿನ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
ಕಾರ್ಮಿಕ ಮುಖಂಡರಾದ ಸುಂದರ್ ಬಾಬು ಕಾರ್ಯಕ್ರಮ ನಿರೂಪಿಸಿ, ಅಭಿಲಾಷ್ ಸ್ವಾಗತಿಸಿದರು. ಹೆಲ್ಮೆಟ್, ಕನ್ನಡಕ, ಉಸಿರಾಟದ ಮುಖವಾಡ(ರೆಸ್ಪಿರೇಟರಿ ಮಾಸ್ಕ್), ಕೈಗವಸು, ಪ್ರತಿಫಲನಕಾರಕ ಜಾಕೆಟ್, ಬೆಲ್ಟ್/ಹಾರ್ನೆಸ್, ಬೂಟ್, ಗಮ್‌ಬೂಟ್ ಸೇರಿದಂತೆ ಇನ್ನಿತರ ಸುರಕ್ಷತಾ ಸಲಕರಣೆಗಳನ್ನು ಕಿಟ್ ಒಳಗೊಂಡಿದೆ. ಒಟ್ಟು ತಾಲೂಕಿಗೆ ಸುಮಾರು ೩ ಸಾವಿರ ಕಿಟ್‌ಗಳು ಮಂಜೂರಾಗಿದ್ದು, ಈ ಪೈಕಿ ಹೊಳೆಹೊನ್ನೂರು ಭಾಗದ ಸುಮಾರು ೧ ಸಾವಿರ ಕಿಟ್‌ಗಳನ್ನು ಹೊರತುಪಡಿಸಿ ಉಳಿದ ೨ ಸಾವಿರ ಕಿಟ್‌ಗಳನ್ನು ಆಯಾ ವೃತ್ತಿಗೆ ಸಂಬಂಧಿಸಿದ ನೋಂದಾಯಿತ ಕಾರ್ಮಿಕರಿಗೆ ವಿತರಿಸಲಾಯಿತು.
