ಅ.೧೨ರಂದು ರೈತ ಸ್ವಾಭಿಮಾನಿಯಾತ್ರೆ ಪ್ರತಿಭಟನೆ : ನಿಖಿಲ್ ಕುಮಾರಸ್ವಾಮಿ ಚಾಲನೆ

ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಶಾರದ ಅಪ್ಪಾಜಿ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ


ಭದ್ರಾವತಿ ಪತ್ರಿಕಾಭವನದಲ್ಲಿ ಶುಕ್ರವಾರ ಆಯೋಜಿಸಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಶಾರದ ಅಪ್ಪಾಜಿ ಮಾತನಾಡಿದರು.

    ಭದ್ರಾವತಿ: ರೈತರ ವಿವಿಧ ಸಮಸ್ಯೆಗಳನ್ನು ಬಗೆಹರಿಸಲು ಆಗ್ರಹಿಸಿ ಅ.೧೨ರಂದು ರೈತ ಸ್ವಾಭಿಮಾನಿಯಾತ್ರೆ ಪ್ರತಿಭಟನೆ ಹಮ್ಮಿಕೊಳ್ಳಲಾಗಿದ್ದು, ಜಾತ್ಯಾತೀತ ಜನತಾದಳ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಚಾಲನೆ ನೀಡಲಿದ್ದಾರೆಂದು ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿ ಶಾರದ ಅಪ್ಪಾಜಿ ತಿಳಿಸಿದರು.

    ಅವರು ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಅಂದು ಮಧ್ಯಾಹ್ನ ೩ ಗಂಟೆಗೆ ನಗರದ ಕೆಎಸ್‌ಆರ್‌ಟಿಸಿ ಮುಖ್ಯ ಬಸ್ ನಿಲ್ದಾಣದ ಮುಂಭಾಗ ಹಾಗು ಸಂಜೆ ಗಂಟೆಗೆ ತಾಲೂಕು ಕಛೇರಿ ಮುಂಭಾಗ ಬಹಿರಂಗ ಸಭೆ ನಡೆಯಲಿದೆ ಎಂದರು.

    ಕೆಎಸ್‌ಆರ್‌ಟಿಸಿ ಮುಖ್ಯ ಬಸ್ ನಿಲ್ದಾಣದಿಂದ ತಾಲೂಕು ಕಛೇರಿವರೆಗೂ ರೈತ ಸ್ವಾಭಿಮಾನಿ ಯಾತ್ರೆ ನಡೆಯಲಿದ್ದು, ಜೆಡಿಎಸ್ ಪಕ್ಷದ ಜಿಲ್ಲಾಧ್ಯಕ್ಷರು, ವಿವಿಧ ಘಟಕಗಳ ಅಧ್ಯಕ್ಷರು, ಪದಾಧಿಕಾರಿಗಳು, ಚುನಾಯಿತ ಪ್ರತಿನಿಧಿಗಳು, ಮುಖಂಡರು ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ. ರೈತರು, ಕೃಷಿ ಕೂಲಿ ಕಾರ್ಮಿಕರು, ಜೆಡಿಎಸ್ ಪಕ್ಷದ ಮುಖಂಡರುಗಳು, ಕಾರ್ಯಕರ್ತರು, ಅಭಿಮಾನಿಗಳು, ನಾಗರಿಕರು ಹೆಚ್ಚಿನ ಸಂಖ್ಯೆಯಲ್ಲಿ ಪ್ರತಿಭಟನಾ ಕಾರ್ಯಕ್ರಮದಲ್ಲಿ ಭಾಗವಹಿಸುವ ಮೂಲಕ ರೈತಪರ ಹೋರಾಟವನ್ನು ಯಶಸ್ವಿಗೊಳಿಸಬೇಕೆಂದು ಕೋರಿದರು.

    ಮುಖಂಡ ಟಿ. ಚಂದ್ರೇಗೌಡ ಮಾತನಾಡಿ, ಭದ್ರಾ ಜಲಾಶಯ ನೀರಾವರಿ ಯೋಜನೆಯ ಎಡದಂಡೆ ನಾಲೆ ಮತ್ತು ಬಲದಂಡೆ ನಾಲೆ ವ್ಯಾಪ್ತಿಯ ಅಚ್ಚುಕಟ್ಟು ರೈತರಿಗೆ ನೀರನ್ನು ಹರಿಸುವ ಹಾಗೂ ನಿಲುಗಡೆ ಮಾಡುವ ಅಧಿಕಾರವನ್ನು ಸಮೀಪದ ಮಲವಗೊಪ್ಪದ ಭದ್ರಾ ಅಚ್ಚುಕಟ್ಟು ಪ್ರಾಧಿಕಾರದ (ಭದ್ರಾ ಕಾಡಾ) ಅಧಿಕಾರವನ್ನು ಕಿತ್ತುಕೊಂಡು ಮೈಸೂರಿನ ಸಿಡಬ್ಲೂಎಂಸಿಗೆ ಭದ್ರಾ ಜಲಾಶಯದ ನೀರಿನ ಹಂಚಿಕೆ ಬಗ್ಗೆ ತೀರ್ಮಾನ ಕೈಗೊಳ್ಳುವ ಅಧಿಕಾರ ನೀಡಿರುವ ರಾಜ್ಯ ಸರ್ಕಾರದ ನಿಲುವು ರೈತರಿಗೆ ಮರಣ ಶಾಸನವಾಗಿದ್ದು, ಅವೈಜ್ಞಾನಿಕ ತೀರ್ಮಾನವನ್ನು ಖಂಡಿಸಿ ಎಂದಿನಂತೆ ಭದ್ರಾಕಾಡಾಗೆ ನೀರು ಹಂಚಿಕೆಯ ಅಧಿಕಾರ ಮರಳಿ ನೀಡುವಂತೆ ಹಾಗೂ ರೈತರ ಹಲವು ನ್ಯಾಯಯುತ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಹೋರಾಟ ಹಮ್ಮಿಕೊಳ್ಳಲಾಗುತ್ತಿದೆ ಎಂದರು.

. ಪತ್ರಿಕಾಗೋಷ್ಠಿಯಲ್ಲಿ ಪಕ್ಷದ ತಾಲೂಕು ಅಧ್ಯಕ್ಷ ಆರ್.ಕರುಣಾಮೂರ್ತಿ, ಪ್ರಮುಖರಾದ ರಾಮಕೃಷ್ಣ, ವಿಶಾಲಾಕ್ಷಿ, ಭಾಗ್ಯಮ್ಮ ಮಂಜುನಾಥ್, ಎಚ್.ಬಿ ರವಿಕುಮಾರ್, ರಾಮಕೃಷ್ಣ, ಉಮೇಶ್, ಲೋಕೇಶ್ ಸೇರಿದಂತೆ ಇನ್ನಿತರರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.