ಭದ್ರಾವತಿಯಲ್ಲಿ ಅ.೧೧ ರಿಂದ ೧೧ ದಿನಗಳ ಕಾಲ ನಾಡಹಬ್ಬ ದಸರಾ ಆಚರಣೆ



ಭದ್ರಾವತಿ ನಗರಸಭೆ ಸಭಾಂಗಣದಲ್ಲಿ ನಾಡಹಬ್ಬ ದಸರಾ ಆಚರಣೆ ಸಂಬಂಧ ೨೦೨೬ನೇ ಸಾಲಿನ ಲಾಂಛನ ಬಿಡುಗಡೆಗೊಳಿಸಲಾಯಿತು.

ಮುಖ್ಯಾಂಶಗಳು:

- ೫೦ ಲಕ್ಷ ರು. ವೆಚ್ಚದಲ್ಲಿ ಆಚರಣೆ, ಹಿರಿಯ ಶಿಕ್ಷಕ ವೆಂಕಟೇಶ್ ಉದ್ಘಾಟನೆ

- ವಿವಿಧ ಸಮಿತಿಗಳ ರಚನೆ, ಮಹಿಳಾ ದಸರಾ, ಕ್ರೀಡಾ ದಸರಾ

- ಪ್ರತಿದಿನ ಸಂಜೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು

    ಭದ್ರಾವತಿ : ನಗರಸಭೆ ವತಿಯಿಂದ ೧೧ ದಿನಗಳ ಕಾಲ ನಾಡಹಬ್ಬ ದಸರಾ ಆಚರಣೆ ನಡೆಯುತ್ತಿದ್ದು, ಹಿರಿಯ ಶಿಕ್ಷಕ ವೆಂಕಟೇಶ್ ಅ.೧೧ರ ಬೆಳಿಗ್ಗೆ ೧೧ ಗಂಟೆಗೆ ನಗರಸಭೆ ಆವರಣದಲ್ಲಿ ಉದ್ಘಾಟಿಸುವರು ಎಂದು ನಗರಸಭೆ ಅಧ್ಯಕ್ಷೆ ಜೆ.ಸಿ ಗೀತಾ ರಾಜಕುಮಾರ್ ತಿಳಿಸಿದರು.

    ಅವರು ಈ ಕುರಿತು ನಗರಸಭೆ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಸುಮಾರು ೫೦ ಲಕ್ಷ ರು. ವೆಚ್ಚದಲ್ಲಿ ನಾಡಹಬ್ಬ ದಸರಾ ಆಚರಿಸಲಾಗುತ್ತಿದೆ. ನಗರದ ವಿವಿಧ ಸಂಘ-ಸಂಸ್ಥೆಗಳು, ಜನಪ್ರತಿನಿಧಿಗಳು, ಸರ್ಕಾರಿ ಇಲಾಖೆಗಳು ಹಾಗು ನಾಗರಿಕರು ಹೆಚ್ಚಿನ ಸಹಕಾರ ನೀಡುವಂತೆ ಕೋರಿದರು.

    ನಗರಸಭೆ ಪೌರಾಯುಕ್ತ ಕೆ.ಎನ್ ಹೇಮಂತ್ ಸಂಪೂರ್ಣ ಮಾಹಿತಿ ನೀಡಿ, ದಸರಾ ಆಚರಣೆಗೆ ಪ್ರತಿ ವರ್ಷದಂತೆ ಈ ಬಾರಿ ಸಹ ವಿವಿಧ ಸಮಿತಿಗಳನ್ನು ರಚಿಸಲಾಗಿದೆ. ಉದ್ಘಾಟನೆ ಕಾರ್ಯಕ್ರಮದಲ್ಲಿ ಕರ್ನಾಟಕ ಗ್ರಾಮೀಣ ಮೂಲ ಸೌಕರ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಶಾಸಕ ಬಿ.ಕೆ ಸಂಗಮೇಶ್ವರ್ ಅಧ್ಯಕ್ಷತೆವಹಿಸಲಿದ್ದಾರೆ. ಪೌರಾಡಳಿತ ಖಾತೆ ಸಚಿವರು, ಜಿಲ್ಲಾ ಉಸ್ತುವಾರಿ ಸಚಿವರು, ಸಂಸದರು, ನಗರಸಭೆ ವ್ಯಾಪ್ತಿಗೆ ಒಳಪಡುವ ವಿಧಾನ ಪರಿಷತ್ ಸದಸ್ಯರು, ವಿವಿಧ ನಿಗಮ ಮಂಡಳಿಗಳ ಅಧ್ಯಕ್ಷರು, ನಗರಸಭೆ ಅಧ್ಯಕ್ಷೆ ಜೆ.ಸಿ ಗೀತಾ ರಾಜಕುಮಾರ್, ಉಪಾಧ್ಯಕ್ಷ ಬಷೀರ್ ಅಹಮದ್, ಸ್ಥಾಯಿ ಸಮಿತಿ ಅಧ್ಯಕ್ಷೆ ಕೆ.ಪಿ ಪ್ರೇಮಾ, ನಗರ ಆಶ್ರಯ ಸಮಿತಿ ಅಧ್ಯಕ್ಷ ಬಿ.ಎಸ್ ಗೋಪಾಲ್, ಪೌರ ಸೇವಾ ನೌಕರರ ಸೇವಾ ಸಂಘದ  ತಾಲೂಕು ಅಧ್ಯಕ್ಷ ಎಸ್. ಚೇತನ್ ಕುಮಾರ್ ಸೇರಿದಂತೆ ಇನ್ನಿತರರು ಪಾಲ್ಗೊಳ್ಳಲಿದ್ದಾರೆ ಎಂದರು.

    ಅ. ೧೧ರ ಸಂಜೆ ೬ ಗಂಟೆಗೆ ನಗರಸಭೆ ಕಛೇರಿ ಆವರಣದಲ್ಲಿ ಶಿವಮೊಗ್ಗ ಝೇಂಕಾರ ಮೆಲೋಡೀಸ್ ಅವರಿಂದ ಸುಗಮ ಸಂಗೀತ, ೧೨ರ ಬೆಳಿಗ್ಗೆ ೧೦ ಗಂಟೆಗೆ ನ್ಯೂಟೌನ್ ಬಂಟರ ಭವನದಲ್ಲಿ ನಗರದ ವಿವಿಧ ಇಲಾಖೆ, ಸಂಘ-ಸಂಸ್ಥೆಗಳು ಮತ್ತು ಮಹಿಳಾ ಸ್ವ-ಸಹಾಯ ಸಂಘಗಳ ಮಹಿಳೆಯರಿಂದ ಇಂದನ ರಹಿತ ಅಡುಗೆ ಸ್ಪರ್ಧೆ, ತಾಲೂಕು ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಆಶಾಲತಾ ಉದ್ಘಾಟಿಸುವರು. ಸಂಜೆ ೬ ಗಂಟೆಗೆ ನಗರಸಭೆ ಆವರಣದಲ್ಲಿ ಅಪರಂಜಿ ಅಭಿನಯ ಶಾಲೆ ವತಿಯಿಂದ ಸುಗಮ ಸಂಗೀತ, ರಾತ್ರಿ ೮ ಗಂಟೆಗೆ ಸಿರಿ ಚಂದನ ಕಲಾ ವೃಂದರವರಿಂದ ಸುಗಮ ಸಂಗೀತ, ಪೊಲೀಸ್ ಉಪಾಧೀಕ್ಷಕ ಪ್ರಕಾಶ್ ರಾಥೋಡ್ ಉದ್ಘಾಟಿಸುವರು. ೧೩ರಂದು ಬೆಳಿಗ್ಗೆ ೧೦ ಗಂಟೆಗೆ ಕ್ರೀಡಾ ದಸರಾ ಹಳೇನಗರದ ಕನಕಮಂಟಪ ಮೈದಾನದಲ್ಲಿ ಆರಂಭಗೊಳ್ಳಲಿದ್ದು,  ಅ.೧೪ರ ಬೆಳಿಗ್ಗೆ ೧೦ ಗಂಟೆಗೆ ಕನಕ ಮಂಟಪ ಮೈದಾನದಲ್ಲಿ ಮಹಿಳಾ ಮತ್ತು ಪುರುಷರ ಕ್ರೀಡಾ ಕೂಟ, ೧೫ರ ಬೆಳಿಗ್ಗೆ ೧೦ ಗಂಟೆಗೆ ನಗರದ ವಿವಿಧ ಇಲಾಖೆ, ಸಂಘ-ಸಂಸ್ಥೆಗಳು ಮತ್ತು ಮಹಿಳಾ ಸ್ವಸಹಾಯ ಸಂಘಗಳ ಮಹಿಳಾ ಕ್ರೀಡಾ ಕೂಟ ನಡೆಯಲಿದ್ದು, ಇವಿಎಸ್ ವಿದ್ಯಾಸಂಸ್ಥೆಯ ಹಿರಿಯ ದೈಹಿಕ ಶಿಕ್ಷಣ ನಿರ್ದೇಶಕ ಶಿವಲಿಂಗೇಗೌಡ ಉದ್ಘಾಟಿಸುವರು ಎಂದರು.


       ಕನಕಮಂಟಪ ಮೈದಾನದಲ್ಲಿ ಅ.೧೫ರ ಸಂಜೆ ೬ ಗಂಟೆಗೆ ಭದ್ರಾ ಸುಗಮ ಸಂಗೀತ ವೇದಿಕೆಯಿಂದ ಸುಗಮ ಸಂಗೀತ, ರಾತ್ರಿ ೮ ಗಂಟೆಗೆ ಮಿತ್ರಕಲಾ ಮಂಡಳಿ ಅವರಿಂದ ಸಾಂಸ್ಕೃತಿಕ ಕಾರ್ಯಕ್ರಮ, ಸಂಸದ ಬಿ.ವೈ ರಾಘವೇಂದ್ರ ಉದ್ಘಾಟಿಸುವರು. ೧೬ರ ಸಂಜೆ ೬ ಗಂಟೆಗೆ ಕನಕಮಂಟಪ ಮೈದಾನದಲ್ಲಿ ನಗರದ ವಿವಿಧ ಇಲಾಖೆ, ಸಂಘ-ಸಂಸ್ಥೆಗಳು ಮತ್ತು ಮಹಿಳಾ ಸ್ವ-ಸಹಾಯ ಸಂಘಗಳ ಮಹಿಳಾ ಸಾಂಸ್ಕೃತಿ ಕಾರ್ಯಕ್ರಮ, ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ ಉಪಾಧ್ಯಕ್ಷ ಬಿ.ಕೆ ಶಿವಕುಮಾರ್, ನಗರಸಭೆ ಮಾಜಿ ಅಧ್ಯಕ್ಷೆ ವೈ. ರೇಣುಕಮ್ಮ ಉದ್ಘಾಟಿಸುವರು. ೧೭ರಂದು ಬೆಳಿಗ್ಗೆ ೧೦ ಗಂಟೆಗೆ ಕಬ್ಬಡಿ ಪಂದ್ಯಾವಳಿ, ಹಿರಿಯ ರಾಜ್ಯಮಟ್ಟದ ಕಬ್ಬಡಿ ಆಟಗಾರ ಮುನಿಸ್ವಾಮಿ ಉದ್ಘಾಟಿಸುವರು. ೧೮ರಂದು ಬೆಳಿಗ್ಗೆ ೧೦ ಗಂಟೆಗೆ ಬಯಲು ಕುಸ್ತಿ ಪಂದ್ಯಾವಳಿ, ರಾಷ್ಟ್ರೀಯ ಕುಸ್ತಿಪಟು ಚನ್ನಬಸಪ್ಪ ಉದ್ಘಾಟಿಸುವರು. ೧೯ರಂದು ಸಂಜೆ ೬ ಗಂಟೆಗೆ ವಿವಿಧ ಮಾಧ್ಯಮಿಕ, ಪ್ರೌಢ ಶಾಲಾ, ಪದವಿ ಪೂರ್ವ ಕಾಲೇಜುಗಳ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ. ಸರ್ಕಾರ ೫ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ತಾಲೂಕು ಸಮಿತಿ ಅಧ್ಯಕ್ಷ ಬಿ.ಎಸ್ ಗಣೇಶ್ ಉದ್ಘಾಟಿಸುವರು ಎಂದರು.

    ಅ.೨೦ರ ಸಂಜೆ ೬.೩೦ಕ್ಕೆ ಚಲನಚಿತ್ರ ನಟ ಮುಖ್ಯಮಂತ್ರಿ ಚಂದ್ರು, ಮಿಮಿಕ್ರಿ ದಯಾನಂದ, ವಾಗ್ಮಿ ಇಂದುಮತಿ ಸಾಲಿಮಠ, ಹಾಸ್ಯ ಕಲಾವಿದ ಉಮೇಶ್ ಗೌಡ ಅವರಿಂದ ಹಾಸ್ಯ ಸಂಜೆ ಕಾರ್ಯಕ್ರಮ ನಡೆಯಲಿದ್ದು, ಕರ್ನಾಟಕ ಗ್ರಾಮೀಣ ಮೂಲ ಸೌಕರ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಶಾಸಕ ಬಿ.ಕೆ ಸಂಗಮೇಶ್ವರ್ ಉದ್ಘಾಟಿಸುವರು. ೨೧ರಂದು ಸಂಜೆ ೬ ಗಂಟೆಗೆ ತಹಸೀಲ್ದಾರ್ ಪ್ರದೀಪ್ ದೇವಗಿರಿ ಅವರಿಂದ  ಬನ್ನಿ ಮುಡಿಯುವ(ಶಮಿ ಪೂಜೆ) ಕಾರ್ಯಕ್ರಮ ನಡೆಯಲಿದ್ದು, ನಂತರ ಪಟಾಕಿ ಸಿಡಿಮದ್ದುಗಳನ್ನೊಳಗೊಂಡ ರಾವಣನ ಸಂಹಾರ ನಡೆಯಲಿದೆ ಎಂದರು.

    ಪತ್ರಿಕಾಗೋಷ್ಠಿಯಲ್ಲಿ ತಹಸೀಲ್ದಾರ್ ಪ್ರದೀಪ್ ದೇವಗಿರಿ, ತಾಲೂಕು ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಆಶಾಲತಾ, ನಗರ ಪೊಲೀಸ್ ವೃತ್ತ ನಿರೀಕ್ಷಕಿ ಕೆ. ನಾಗಮ್ಮ, ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷೆ ಕೆ.ಪಿ ಪ್ರೇಮಾ, ವಿವಿಧ ಸಮಿತಿಗಳ ಅಧ್ಯಕ್ಷರಾದ ಅನುಸುಧಾ ಮೋಹನ್ ಪಳನಿ, ಚನ್ನಪ್ಪ, ನಗರಸಭೆ ಹಿರಿಯ ಸದಸ್ಯ ಬಿ.ಟಿ ನಾಗರಾಜ್, ಪೌರಸೇವಾ ನೌಕರರ ಸೇವಾ ಸಂಘದ ಅಧ್ಯಕ್ಷ ಎಸ್. ಚೇತನ್ ಕುಮಾರ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.