ಕಾಂಗ್ರೆಸ್ ಪಕ್ಷ ಎಂದಿಗೂ ಶ್ರೀಸಾಮಾನ್ಯರ ಪಕ್ಷ : ಶಾಸಕ ಬಿ.ಕೆ ಸಂಗಮೇಶ್ವರ್

ಸುಮಾರು 6,500 ಕ್ಕೂ ಹೆಚ್ಚು ಪಿಂಚಣಿ ವಂಚಿತರಿಗೆ ಮರು ಮಂಜೂರಾತಿ ಆದೇಶ ಪತ್ರಗಳ ವಿತರಣೆ



ಭದ್ರಾವತಿ ಹಳೇನಗರದ ಕನಕಮಂಟಪ ಮೈದಾನದಲ್ಲಿ ಶುಕ್ರವಾರ ಆಯೋಜಿಸಲಾಗಿದ್ದ ಬೃಹತ್ ಕಾರ್ಯಕ್ರಮದಲ್ಲಿ ಪಿಂಚಣಿಗಳಿಂದ ವಂಚಿತರಾಗಿರುವ ಫಲಾನುಭವಿಗಳಿಗೆ ಮರು ಮಂಜೂರಾತಿ ಆದೇಶ ಪತ್ರಗಳನ್ನು ಕರ್ನಾಟಕ ಗ್ರಾಮೀಣ ಮೂಲ ಸೌಕರ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಶಾಸಕ ಬಿ.ಕೆ ಸಂಗಮೇಶ್ವರ್ ವಿತರಿಸಿದರು.

    ಭದ್ರಾವತಿ : ವಯೋವೃದ್ಧರು, ವಿಕಲಚೇತನರು, ವಿಧವೆಯರು ಸೇರಿದಂತೆ ಆರ್ಥಿಕವಾಗಿ ಅಶಕ್ತರಾದವರಿಗಾಗಿ ಕಾಂಗ್ರೆಸ್ ಸರ್ಕಾರ ತನ್ನ ಆಡಳಿತಾವಧಿಯಲ್ಲಿ ಜಾರಿಗೆ ತಂದ ಹಲವಾರು ಪಿಂಚಣಿ ಯೋಜನೆಗಳು ಇಂದಿಗೂ ಜಾಲ್ತಿಯಲಿದ್ದು, ಇವುಗಳಿಂದ ಸಾಕಷ್ಟು ಪ್ರಯೋಜನವಾಗುತ್ತಿದೆ ಎಂದು ಕರ್ನಾಟಕ ಗ್ರಾಮೀಣ ಮೂಲ ಸೌಕರ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಶಾಸಕ ಬಿ.ಕೆ ಸಂಗಮೇಶ್ವರ್ ಹೇಳಿದರು.

     ಅವರು ಶುಕ್ರವಾರ ಹಳೇನಗರದ ಕನಕಮಂಟಪ ಮೈದಾನದಲ್ಲಿ ಪಿಂಚಣಿಗಳಿಂದ ವಂಚಿತರಾಗಿರುವ ಫಲಾನುಭವಿಗಳಿಗೆ ಮರು ಮಂಜೂರಾತಿ ಆದೇಶ ಪತ್ರಗಳನ್ನು ವಿತರಿಸುವ ಬೃಹತ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

    ಸಮಾಜದಲ್ಲಿ ಪ್ರತಿಯೊಬ್ಬರು ಸ್ವಾಭಿಮಾನದಿಂದ ಬದುಕಬೇಕೆಂಬ ಉದ್ದೇಶದೊಂದಿಗೆ ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರು ತಮ್ಮ ಆಡಳಿತಾವಧಿಯಲ್ಲಿ ಹಲವಾರು ಪಿಂಚಣಿ ಯೋಜನೆಗಳನ್ನು ಜಾರಿಗೆ ತಂದರು. ಈ ಯೋಜನೆಗಳನ್ನು ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ  ತನ್ನ ಅಧಿಕಾರದ ಅವಧಿಯಲ್ಲಿ ಮುಂದುವರೆಸಿಕೊಂಡು ಹೋಗುತ್ತಿದೆ. ಕಾಂಗ್ರೆಸ್ ಪಕ್ಷ ಎಂದಿಗೂ ಶ್ರೀ ಸಾಮಾನ್ಯರ ಪಕ್ಷವಾಗಿ ಉಳಿದುಕೊಂಡಿದೆ ಎಂದರು.

    ಕ್ಷೇತ್ರದಲ್ಲಿ ಪಿಂಚಣಿ ಯೋಜನೆಯಿಂದ ವಂಚಿತರಾದವರು ಸಾಕಷ್ಟು ಜನರಿದ್ದು, ಇದನ್ನು ಮನಗಂಡು ಈ ಹಿಂದೆ ಬೃಹತ್ ಕಾರ್ಯಕ್ರಮ ಆಯೋಜಿಸಿ ಸುಮಾರು ೭,೫೦೦ಕ್ಕೂ ಹೆಚ್ಚು ಅರ್ಜಿಗಳನ್ನು ಸ್ವೀಕರಿಸಲಾಗಿತ್ತು. ಇದೀಗ ಸರ್ಕಾರದಿಂದ ಆ ಅರ್ಜಿಗಳ ಪೈಕಿ ಸುಮಾರು ೬,೫೦೦ಕ್ಕೂ ಹೆಚ್ಚು ಮರು ಮಂಜೂರಾತಿ ಮಾಡಿಸಿಕೊಡಲಾಗಿದೆ. ಈ ಕಾರ್ಯದಲ್ಲಿ ತಾಲೂಕು ಆಡಳಿತ, ತಾಲೂಕು ಪಂಚಾಯಿತಿ, ನಗರಸಭೆ ಹಾಗು ಕಂದಾಯ ಇಲಾಖೆ ಸೇರಿದಂತೆ ವಿವಿಧ ಸರ್ಕಾರಿ ಇಲಾಖೆಗಳ ಶ್ರಮ ಹೆಚ್ಚಿನದ್ದಾಗಿದೆ ಎಂದರು. 

     ನಗರಸಭೆ ಅಧ್ಯಕ್ಷೆ ಜೆ.ಸಿ ಗೀತಾ ರಾಜಕುಮಾರ್, ತಹಸೀಲ್ದಾರ್ ಪ್ರದೀಪ್ ದೇವಗಿರಿ, ನಗರಸಭೆ ಪೌರಾಯುಕ್ತ ಕೆ.ಎನ್ ಹೇಮಂತ್, ತಾಲೂಕು ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಆಶಾಲತಾ, ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ಬಿ. ಸಿದ್ದಬಸಪ್ಪ, ಸರ್ಕಾರದ ೫ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ತಾಲೂಕು ಸಮಿತಿ ಅಧ್ಯಕ್ಷ ಬಿ.ಎಸ್ ಗಣೇಶ್, ಎಸ್. ಕುಮಾರ್, ಬಿ.ಕೆ ಮೋಹನ್ ಸೇರಿದಂತೆ ನಗರಸಭೆ ಹಾಲಿ ಮತ್ತು ಮಾಜಿ ಸದಸ್ಯರು, ವಿವಿಧ ಸಂಘ-ಸಂಸ್ಥೆಗಳ ಮುಖಂಡರು ವೇದಿಕೆಯಲ್ಲಿ ಉಪಸ್ಥಿತರಿದ್ದರು.