ರಕ್ತದಾನ ಜೀವ ಉಳಿಸುವ ಪವಿತ್ರ ಕಾರ್ಯ : ಕೆ.ಎಚ್ ತೀರ್ಥಯ್ಯ
ಪ್ರಧಾನಿ ನರೇಂದ್ರ ಮೋದಿ ಅವರು ಚುನಾಯಿತ ಸರ್ಕಾರದ ಮುಖ್ಯಸ್ಥರಾಗಿ 25 ವರ್ಷಗಳು ಪೂರೈಸಿದ ಹಿನ್ನಲೆಯಲ್ಲಿ ಭದ್ರಾವತಿ ಬಿಜೆಪಿ ಪಕ್ಷದ ಕಚೇರಿಯಲ್ಲಿ ರಕ್ತದಾನ ಶಿಬಿರ ಆಯೋಜಿಸಲಾಗಿತ್ತು.
ಭದ್ರಾವತಿ: ರಕ್ತದಾನವು ನೋವಿನಲ್ಲಿರುವ ವ್ಯಕ್ತಿಯ ಜೀವವನ್ನು ಉಳಿಸುವ ಪವಿತ್ರ ಕಾರ್ಯವಾಗಿದೆ ಎಂದು ಭಾರತೀಯ ಜನತಾ ಪಕ್ಷದ ತಾಲೂಕು ಗ್ರಾಮಾಂತರ ಘಟಕದ ಅಧ್ಯಕ್ಷ ಕೆ.ಎಚ್. ತೀರ್ಥಯ್ಯ ಹೇಳಿದರು.
ಪ್ರಧಾನಿ ನರೇಂದ್ರ ಮೋದಿ ಅವರು ಚುನಾಯಿತ ಸರ್ಕಾರದ ಮುಖ್ಯಸ್ಥರಾಗಿ 25 ವರ್ಷಗಳು ಪೂರೈಸಿದ ಹಿನ್ನಲೆಯಲ್ಲಿ ಇಲ್ಲಿನ ಪಕ್ಷದ ಕಚೇರಿಯಲ್ಲಿ ಇತ್ತೀಚಿಗೆ ರಕ್ತದಾನ ಶಿಬಿರ ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಅವರು, ನಾವು ದಾನ ಮಾಡುವ ರಕ್ತ ಅಪಘಾತದಲ್ಲಿ ಗಾಯಗೊಂಡವರು, ಶಸ್ತ್ರಚಿಕಿತ್ಸೆಗೆ ಒಳಗಾಗುವವರು ಹಾಗೂ ತುರ್ತು ಚಿಕಿತ್ಸೆಯಲ್ಲಿರುವ ರೋಗಿಗಳ ಜೀವ ಉಳಿಸಲು ಸಹಕಾರಿಯಾಗುತ್ತದೆ. ರಕ್ತವನ್ನು ಕೃತಕವಾಗಿ ಉತ್ಪಾದಿಸಲು ಸಾಧ್ಯವಿಲ್ಲವಾದ್ದರಿಂದ, ಆರೋಗ್ಯವಂತ ವ್ಯಕ್ತಿಗಳು ರಕ್ತದಾನ ಮಾಡಲು ಸ್ವಯಂಪ್ರೇರಣೆಯಿಂದ ಮುಂದೆ ಬರಬೇಕೆಂದರು.
ಪಕ್ಷದ ನಗರ ಘಟಕದ ಅಧ್ಯಕ್ಷ ಜಿ. ಧರ್ಮಪ್ರಸಾದ್ ಮಾತನಾಡಿ, ರಕ್ತದಾನದ ಮಹತ್ವದ ಬಗ್ಗೆ ಯುವಕರಲ್ಲಿ ಜಾಗೃತಿ ಮೂಡಿಸುವ ಅವಶ್ಯಕತೆ ಇದೆ. ರಕ್ತದಾನದ ಬಗ್ಗೆ ಇರುವ ತಪ್ಪು ಗ್ರಹಿಕೆಗಳನ್ನು ದೂರ ಮಾಡಲು ಅರೋಗ್ಯ ತಜ್ಞರು ಶ್ರಮಿಸಬೇಕೆಂದರು.
ಪಕ್ಷದ ಮುಖಂಡರಾದ ಮಂಗೋಟೆ ರುದ್ರೇಶ್, ಕೂಡ್ಲಿಗೆರೆ ಹಾಲೇಶ್, ಜಿ. ಆನಂದ ಕುಮಾರ್, ಚೆನ್ನೇಶ್, ರಘುರಾವ್, ಮೊಸರಳ್ಳಿ ಅಣ್ಣಪ್ಪ, ಹನುಮಂತ ನಾಯ್ಕ್, ಸರಸ್ವತಿ ವಿಜಯ್ ಕುಮಾರ್, ಜಯಲಕ್ಷ್ಮಿ, ಅಂಬರೀಶ್, ನಾಗಮಣಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
