ಹೋಟೆಲ್, ಅಂಗಡಿ ಮುಂಗಟ್ಟುಗಳ ಮೇಲೆ ಉಪವಿಭಾಗಾಧಿಕಾರಿ ದಾಳಿ : ಆಹಾರ ಪದಾರ್ಥಗಳ ಪರಿಶೀಲನೆ

ಕೊಳಕು ಸ್ಥಳದಲ್ಲಿ ಆಹಾರ ತಯಾರಿಕೆ, ದುರ್ವಾಸನೆ, ಅನಧಿಕೃತ ತಿಂಡಿತಿನಿಸುಗಳ ಮಾರಾಟಕ್ಕೆ ಬೇಸರ 


ಭದ್ರಾವತಿ ನಗರದಲ್ಲಿ ಬುಧವಾರ ಸಂಜೆ ವಿವಿಧ ಹೋಟೆಲ್‌ಗಳು, ಬೇಕರಿಗಳು ಹಾಗೂ ಸಿಹಿ ತಿನಿಸುಗಳ ತಯಾರಿಕೆ ಮತ್ತು ಮಾರಾಟ ಕೇಂದ್ರಗಳ ಮೇಲೆ ಉಪವಿಭಾಗಾಧಿಕಾರಿ ಡಾ. ಎಚ್.ಪಿ.ಎಸ್ ಮೈತ್ರಿ ಹಾಗೂ ತಹಶೀಲ್ದಾರ್ ಪ್ರದೀಪ್ ದೇವಗಿರಿ ನೇತೃತ್ವದ ಅಧಿಕಾರಿಗಳ ತಂಡ ದಿಢೀರ್ ದಾಳಿ ನಡೆಸಿತು.

    ಭದ್ರಾವತಿ: ಹೋಟೆಲ್, ಅಂಗಡಿ ಮುಂಗಟ್ಟುಗಳ ಬಳಿ ರೋಗ-ರುಜಿನ ಹರಡುವ ರೀತಿ ದುರ್ವಾಸನೆ, ಕೊಳಕು ಸ್ಥಳದಲ್ಲಿ ಆಹಾರ ತಯಾರಿಕೆ, ಅನಧಿಕೃತ ತಿಂಡಿತಿನಿಸುಗಳು. ಇವೆಲ್ಲವೂ ಬುಧವಾರ ಸಂಜೆ ನಗರದ ವಿವಿಧ ಹೋಟೆಲ್‌ಗಳು, ಬೇಕರಿಗಳು ಹಾಗೂ ಸಿಹಿ ತಿನಿಸುಗಳ ತಯಾರಿಕೆ ಮತ್ತು ಮಾರಾಟ ಕೇಂದ್ರಗಳ ಮೇಲೆ ಉಪವಿಭಾಗಾಧಿಕಾರಿ ಡಾ. ಎಚ್.ಪಿ.ಎಸ್ ಮೈತ್ರಿ ಹಾಗೂ ತಹಶೀಲ್ದಾರ್ ಪ್ರದೀಪ್ ದೇವಗಿರಿ ನೇತೃತ್ವದ ಅಧಿಕಾರಿಗಳ ತಂಡ ದಿಢೀರ್ ದಾಳಿ ನಡೆಸಿದ ಸಂದರ್ಭದಲ್ಲಿ ಕಂಡು ದೃಶ್ಯಗಳು.

    ಡಾ.ಎಚ್.ಪಿ.ಎಸ್ ಮೈತ್ರಿ ವಿಭಾಗಾಧಿಕಾರಿಯಾಗಿ ಅಧಿಕಾರವಹಿಸಿಕೊಂಡ ನಂತರ ಆಹಾರ ಪದಾರ್ಥಗಳ ಸುರಕ್ಷತೆಗೆ ಹೆಚ್ಚಿನ ಗಮನ ಹರಿಸಿದ್ದು, ಜಿಲ್ಲಾದ್ಯಂತ ನಿರಂತರವಾಗಿ ದಾಳಿ ನಡೆಸುವ ಮೂಲಕ ಗಮನ ಸೆಳೆದಿದ್ದಾರೆ.


    ಕೆಎಸ್‌ಆರ್‌ಟಿಸಿ ಮುಖ್ಯ ಬಸ್ ನಿಲ್ದಾಣದ ಬಳಿ ಹೋಟೆಲ್, ಬೇಕರಿ ಸೇರಿದಂತೆ ಅಂಗಡಿಮುಂಗಟ್ಟು ಮೇಲೆ ದಾಳಿ ನಡೆಸಿದ್ದು, ಈ ಸಂದರ್ಭದಲ್ಲಿ ಅವಧಿ ಮುಗಿದ ಅಡುಗೆ ಪದಾರ್ಥಗಳ ಬಳಕೆ, ಆಹಾರ ತಯಾರಿಕೆಯಲ್ಲಿ ರಾಸಾಯನಿಕ ವಸ್ತುಗಳ ಬಳಕೆ ಮಾಡುತ್ತಿರುವುದು ಪತ್ತೆಯಾಗಿದೆ. ಅನಧಿಕೃತ ತಿಂಡಿತಿನಿಸುಗಳ ಪ್ಯಾಕೆಟ್‌ಗಳು, ಬೀಡಾ ಅಂಗಡಿಗಳ ಬಳಿ ರೋಗ ರುಜಿನಗಳು ಹರಡುವ ರೀತಿಯಲ್ಲಿ ದುರ್ವಾಸನೆ  ಹಾಗೂ ಹೋಟೆಲ್‌ಗಳಲ್ಲಿ ಮತ್ತು ಅಂಗಡಿ ಮುಂಗಟ್ಟುಗಳ ಬಳಿ  ಸ್ವಚ್ಛತೆಯ ಕೊರತೆ ಕಂಡುಬಂದಿತು. ಈ ಹಿನ್ನೆಲೆಯಲ್ಲಿ ಸಂಬಂಧಪಟ್ಟ ಅಂಗಡಿ ಮತ್ತು ಹೋಟೆಲ್ ಮಾಲೀಕರಿಗೆ ಅಧಿಕಾರಿಗಳು ಎಚ್ಚರಿಕೆ ನೀಡಿದರು.    

    ಈ ವೇಳೆ ರಾಸಾಯನಿಕ ಬಣ್ಣ ಸೇರಿದಂತೆ ವಿವಿಧ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದ್ದು, ಆಹಾರ ಪದಾರ್ಥಗಳ ಗುಣಮಟ್ಟ ಪರಿಶೀಲನೆಗಾಗಿ ಮಾದರಿಗಳನ್ನು ಸಂಗ್ರಹಿಸಿ ಪ್ರಯೋಗಾಲಯಕ್ಕೆ ಕಳುಹಿಸಲು ಕ್ರಮ ಕೈಗೊಳ್ಳಲಾಯಿತು.


    ಸಿಹಿ ತಿನಿಸು, ಬ್ರೆಡ್ ಮತ್ತು ಬನ್‌ಗಳನ್ನು ತಯಾರಿಸುವ ಕೇಂದ್ರಗಳಲ್ಲಿ ಬಳಕೆಗೆ ಅರ್ಹವಲ್ಲದ ವಸ್ತುಗಳು ಕಂಡುಬಂದಿರುವುದರ ಜೊತೆಗೆ, ಕ್ರೀಮ್‌ಗಳು ಹಾಗೂ ಕೇಕ್ ತಯಾರಿಕೆಗೆ ಬಳಸುವ ಪದಾರ್ಥಗಳಲ್ಲಿಯೂ ಲೋಪಗಳು ಕಂಡುಬಂದವು. ಈ ಹಿನ್ನೆಲೆಯಲ್ಲಿ ಸಂಬಂಧಪಟ್ಟ ಆಹಾರ ಪದಾರ್ಥಗಳ ಮಾದರಿಗಳನ್ನು ಸಂಗ್ರಹಿಸಿ ಪ್ರಯೋಗಾಲಯಕ್ಕೆ ಕಳುಹಿಸಲು ಅಧಿಕಾರಿಗಳ ತಂಡ ಕ್ರಮ ಕೈಗೊಂಡಿತು.

    ಹೋಟೆಲ್‌ಗಳು ಮತ್ತು ಅಂಗಡಿಗಳಲ್ಲಿ ಅಗತ್ಯ ಪರವಾನಗಿಗಳನ್ನು ಗ್ರಾಹಕರಿಗೆ ಕಾಣುವಂತೆ ಪ್ರದರ್ಶಿಸಬೇಕು ಎಂದು ಸೂಚಿಸಲಾಯಿತು. ಮಾಂಸಾಹಾರಿ ಹೋಟೆಲ್‌ಗಳಲ್ಲಿ ಸ್ವಚ್ಛತೆಯ ಕೊರತೆ ಹಾಗೂ ಆಹಾರ ತಯಾರಿಕೆಗೆ ಬಳಸುತ್ತಿದ್ದ ಹಂಚುಗಳ ಸ್ಥಿತಿಯನ್ನೂ ಪರಿಶೀಲಿಸಲಾಯಿತು. ಅನುಪಯುಕ್ತವಾಗಿರುವ ಹಂಚುಗಳನ್ನು ತೆಗೆದುಹಾಕಿ, ಹೊಸ ಹಂಚುಗಳನ್ನು ಅಳವಡಿಸಿಕೊಂಡು ಆಹಾರ ತಯಾರಿಸಬೇಕು ಎಂದು ಹೋಟೆಲ್ ಮಾಲೀಕರಿಗೆ ಮುನ್ನೆಚ್ಚರಿಕೆ ನೀಡಿದರು.

    ದಾಳಿಯಲ್ಲಿ ಎಫ್‌ಎಸ್‌ಎಸ್‌ಎಐ ಫುಡ್ ಇನ್‌ಸ್ಪೆಕ್ಟರ್‌ಗಳಾದ ಶಶಿಕುಮಾರ್, ಬಿ.ಎಂ ಮನೋಜ್, ಉಮೇಶ್, ಮನೋಜ್ ಮತ್ತು ಸುಮಾ, ಉಪತಹಶೀಲ್ದಾರ್ ಮಂಜಾನಾಯ್ಕ, ಕಂದಾಯ ನಿರೀಕ್ಷಕ ಪ್ರಶಾಂತ್, ಗ್ರಾಮ ಲೆಕ್ಕಾಧಿಕಾರಿ ಶಿವಣ್ಣ ಕೂಡ್ಲಿಗೆರೆ ಹಾಗೂ ಆರ್‌ಐ ಅನಿಲ್ ರಾಜ್ ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.