ಪರಿಶಿಷ್ಟ ಜಾತಿ ಕುಟುಂಬಗಳಿಗೆ ಮಂಜೂರಾದ ಜಮೀನಿನ ಅಳತೆ ಕಾರ್ಯ ನಡೆಸಿ ಬೌಂಡರಿ ನಿಗದಿ

ಭದ್ರಾವತಿ ಪರಿಶಿಷ್ಟ ಜಾತಿಯ ಕುಟುಂಬಗಳಿಗೆ ಈ ಹಿಂದೆ  ಮಂಜೂರಾತಿಯಾಗಿರುವ ತಾಲೂಕಿನ ಕೂಡ್ಲಿಗೆರೆ ಹೋಬಳಿ ಕಾಚಗೊಂಡನಹಳ್ಳಿ ಗ್ರಾಮದ ಸರ್ವೆ ನಂ.೧೫ರ ಸುಮಾರು ೯೮ ಎಕರೆ ಜಮೀನಿನ ವಿಚಾರಕ್ಕೆ ಸಂಬಂಧಿಸಿದಂತೆ ಶುಕ್ರವಾರ ತಹಸೀಲ್ದಾರ್ ನೇತೃತ್ವದ ತಂಡ ಜಮೀನು ಅಳತೆ ಕಾರ್ಯ ನಡೆಸಿ ಬೌಂಡರಿ ನಿಗದಿಪಡಿಸಿತು. ಫಲಾನುಭವಿಗಳು, ಒತ್ತುವರಿದಾರರು, ದಲಿತ ಮುಖಂಡರು ಜಮಾಯಿಸಿದ್ದರು. ತಂಡದ ಅಧಿಕಾರಿಗಳೊಂದಿಗೆ ಸುಮಾರು ೩ ಗಂಟೆಗಳ ಕಾಲ ಚರ್ಚೆ ನಡೆಸಿದರು.

    ಭದ್ರಾವತಿ : ಪರಿಶಿಷ್ಟ ಜಾತಿಯ ಕುಟುಂಬಗಳಿಗೆ ಈ ಹಿಂದೆ  ಮಂಜೂರಾತಿಯಾಗಿರುವ ತಾಲೂಕಿನ ಕೂಡ್ಲಿಗೆರೆ ಹೋಬಳಿ ಕಾಚಗೊಂಡನಹಳ್ಳಿ ಗ್ರಾಮದ ಸರ್ವೆ ನಂ.೧೫ರ ಸುಮಾರು ೯೮ ಎಕರೆ ಜಮೀನಿನ ವಿಚಾರಕ್ಕೆ ಸಂಬಂಧಿಸಿದಂತೆ ಶುಕ್ರವಾರ ತಹಸೀಲ್ದಾರ್ ನೇತೃತ್ವದ ತಂಡ ಜಮೀನು ಅಳತೆ ಕಾರ್ಯ ನಡೆಸಿ ಬೌಂಡರಿ ನಿಗದಿಪಡಿಸಿತು.

    ಸ್ಥಳದಲ್ಲಿ ಜಮಾಯಿಸಿದ್ದ ದಲಿತ ಮುಖಂಡರು ಮಾತನಾಡಿ, ೧೯೫೫-೫೬ರಲ್ಲಿ ಪರಿಶಿಷ್ಟ ಜಾತಿಗೆ ಸೇರಿದ ಭೋವಿ ಸಮಾಜದ ಸುಮಾರು ೪೯ ಕುಟುಂಬಗಳಿಗೆ ತಲಾ ೨ ಎಕರೆಯಂತೆ ಒಟ್ಟು ೯೮ ಎಕರೆ ಜಮೀನು ಸರ್ಕಾರ ಮಂಜೂರಾತಿ ಮಾಡಿದ್ದು, ತದನಂತರ ಈ ಜಮೀನನ್ನು ಮೇಲ್ವರ್ಗದ ಸಮಾಜದವರು ಇಲ್ಲಿಯವರೆಗೂ ಅನುಭೋಗಿಸಿಕೊಂಡು ಬಂದಿದ್ದಾರೆ. ಈ ಹಿನ್ನಲೆಯಲ್ಲಿ ಕಳೆದ ೨ ವರ್ಷಗಳಿಂದ ದಲಿತ ಸಂಘರ್ಷ ಸಮಿತಿ ನಿರಂತರವಾಗಿ ಹೋರಾಟ ನಡೆಸಿಕೊಂಡು ಬರುತ್ತಿದೆ. ಈ ಜಮೀನಿನ ವಿಚಾರ ಜಿಲ್ಲಾ ಅಟ್ರಾಸಿಟಿ ಕಮಿಟಿಯಲ್ಲೂ ಚರ್ಚೆ ನಡೆದಿದ್ದು, ಜಮೀನನ್ನು ತಕ್ಷಣ ಮೂಲ ಮಂಜೂರಾತಿದಾರರಿಗೆ ಹಿಂದಿರುಗಿಸಬೇಕೆಂದು ಆಗ್ರಹಿಸಿದರು.

      ಪ್ರಸ್ತುತ ಉಪವಿಭಾಗಾಧಿಕಾರಿಯಾಗಿ ಆಗಮಿಸಿರುವ ಡಾ. ಎಚ್.ಪಿ.ಎಸ್ ಮೈತ್ರಿ ಅವರು ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದು, ಜಮೀನು ಗುರುತಿಸಿ, ಬೌಂಡರಿ ನಿಗದಿಪಡಿಸುವಂತೆ  ತಹಸೀಲ್ದಾರ್ ಪ್ರದೀಪ್ ದೇವಗಿರಿ ಅವರ ನೇತೃತ್ವದ ತಂಡಕ್ಕೆ ಸೂಚಿಸಿದ್ದರು ಎಂದು ತಿಳಿದು ಬಂದಿದೆ. ಈ ಹಿನ್ನಲೆಯಲ್ಲಿ ಸರ್ವೆ ಇಲಾಖೆ ಅಧಿಕಾರಿಗಳು, ಕಂದಾಯ ನಿರೀಕ್ಷಕರು, ಗ್ರಾಮ ಲೆಕ್ಕಾಧಿಕಾರಿಗಳನ್ನೊಳಗೊಂಡ ತಂಡ ಸ್ಥಳಕ್ಕೆ ಆಗಮಿಸಿತ್ತು. ತಂಡ ಆಗಮಿಸುತ್ತಿದ್ದಂತೆ ಫಲಾನುಭವಿಗಳು, ಒತ್ತುವರಿದಾರರು, ದಲಿತ ಮುಖಂಡರು ಜಮಾಯಿಸಿದ್ದರು. ತಂಡದ ಅಧಿಕಾರಿಗಳೊಂದಿಗೆ ಸುಮಾರು ೩ ಗಂಟೆಗಳ ಕಾಲ ಚರ್ಚೆ ನಡೆಸಿದರು. ಅಂತಿಮವಾಗಿ ಪೊಲೀಸರ ನೆರವಿನಿಂದ ಅಳತೆ ಕಾರ್ಯ ನಡೆಸಿ ಬೌಂಡರಿ ನಿಗದಿಪಡಿಸಿತು.

    ಮುಂದಿನ ದಿನಗಳಲ್ಲಿ ಹಂತ ಹಂತದಲ್ಲಿ ತೆರವು ಕಾರ್ಯ ನಡೆದು ಮೂಲ ಮಂಜೂರಾತಿದಾರರ ಜಮೀನು ಗುರುತಿಸುವ ಕಾರ್ಯ ನಡೆಯಲಿದೆ ಎಂದು ತಿಳಿದುಬಂದಿದೆ.

    ದಲಿತರ ಮುಖಂಡರಾದ ಏಳುಕೋಟಿ, ಶಿವಬಸಪ್ಪ, ಆರ್. ತಮ್ಮಯ್ಯ ಕುಬೇಂದ್ರಪ್ಪ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.