ಭದ್ರಾ ಜಲಾಶಯದಿಂದ ನೀರು ಹರಿಸುವ ಆದೇಶ ಹಿಂಪಡೆಯಿರಿ
ಭದ್ರಾ ಮೇಲ್ದಂಡೆ ಯೋಜನೆ ಕಚೇರಿ ಮುಂಭಾಗ ಬೃಹತ್ ಪ್ರತಿಭಟನೆ
ಸರ್ಕಾರ ಭದ್ರಾ ಮೇಲ್ದಂಡೆ ಯೋಜನೆಗೆ 1 ಟಿಎಂಸಿ ಹೆಚ್ಚುವರಿ ನೀರು ಹರಿಸಲು ಆದೇಶಿಸಿರುವ ಕ್ರಮ ಖಂಡಿಸಿ ಭದ್ರಾ ಮೇಲ್ದಂಡೆ ಯೋಜನೆ ಕಚೇರಿ ಮುಂಭಾಗ ಶನಿವಾರ ಬೃಹತ್ ಪ್ರತಿಭಟನೆ ಹಾಗು ಧರಣಿ ಸತ್ಯಾಗ್ರಹ ನಡೆಸಲಾಯಿತು.
ಭದ್ರಾವತಿ : ಈ ಬಾರಿ ನಿರೀಕ್ಷಿತ ಪ್ರಮಾಣದಲ್ಲಿ ಮಳೆಯಾಗದ ಹಿನ್ನಲೆಯಲ್ಲಿ ಭದ್ರಾ ಜಲಾಶಯದಲ್ಲಿ ನೀರಿನ ಪ್ರಮಾಣ ಕಡಿಮೆ ಇದ್ದು, ಇದರಿಂದಾಗಿ ಈ ಭಾಗದ ರೈತರು ಸಂಕಷ್ಟಕ್ಕೆ ಒಳಗಾಗಿದ್ದಾರೆ. ಇಂತಹ ಸಂದರ್ಭದಲ್ಲಿಯೂ ಭದ್ರಾ ಮೇಲ್ದಂಡೆ ಯೋಜನೆಗೆ ಪ್ರಾಯೋಗಿಕವಾಗಿ ಈಗಾಗಲೇ 3 ಟಿಎಂಸಿ ನೀರು ಜಲಾಶಯದಿಂದ ಬಿಡಲಾಗಿದೆ. ಈ ನಡುವೆ ಇದೀಗ ಶುಕ್ರವಾರ ಜಲಸಂಪನ್ಮೂಲ ಇಲಾಖೆಯ ಸರ್ಕಾರದ ಮುಖ್ಯ ಕಾರ್ಯದರ್ಶಿಯವರು ಪುನಃ ಭದ್ರಾ ಮೇಲ್ದಂಡೆ ಯೋಜನೆಗೆ 1 ಟಿಎಂಸಿ ಹೆಚ್ಚುವರಿ ನೀರು ಹರಿಸಲು ಆದೇಶಿಸಿರುವುದು ಸರಿಯಲ್ಲ. ತಕ್ಷಣ ಆದೇಶ ಹಿಂಪಡೆಯಬೇಕು. ಇಲ್ಲವಾದಲ್ಲಿ ಉಗ್ರ ಹೋರಾಟ ನಡೆಸುವುದಾಗಿ ರೈತ ಮುಖಂಡರು ಶನಿವಾರ ಸರ್ಕಾರಕ್ಕೆ ಎಚ್ಚರಿಸಿದರು.
ಭದ್ರಾ ಮೇಲ್ದಂಡೆ ಯೋಜನೆ ಕಚೇರಿ ಮುಂಭಾಗ ಶನಿವಾರ ಬೃಹತ್ ಪ್ರತಿಭಟನೆ ಹಾಗು ಧರಣಿ ಸತ್ಯಾಗ್ರಹ ನಡೆಸಿ ಮಾತನಾಡಿದ ರೈತ ಮುಖಂಡರು, ಈ ಬಾರಿ ಜಲಾಶಯ ಪೂರ್ಣಪ್ರಮಾಣದಲ್ಲಿ ಭರ್ತಿಯಾಗದೆ ನೀರಿನ ಅಭಾವ ಎದುರಾಗಿದೆ. ಅಚ್ಚುಕಟ್ಟು ಭಾಗದ ರೈತರ ಬೆಳೆಗಳಿಗೆ ಹಾಗೂ ಕುಡಿಯುವ ನೀರಿಗೆ ಅಭಾವ ಉಂಟಾಗುವ ಭೀತಿ ಎದುರಾಗಿದೆ. ಇಂತಹ ಸಂದರ್ಭದಲ್ಲಿ ಸರ್ಕಾರ ಅವೈಜ್ಞಾನಿಕವಾಗಿ ಭದ್ರಾ ಮೇಲ್ದಂಡೆ ಯೋಜನೆಗೆ ನೀರು ಹರಿಸುತ್ತಿದ್ದು, ಈಗಾಗಲೇ 3 ಟಿಎಂಸಿ ನೀರು ಹರಿಸಲಾಗಿದೆ. ಈ ನಡುವೆ ಹೆಚ್ಚುವರಿಯಾಗಿ 1 ಟಿಎಂಸಿ ನೀರು ಹರಿಸಲು ಆದೇಶಿಸಿರುವುದು ಈ ಭಾಗದ ರೈತರು ಹಾಗು ನಿವಾಸಿಗಳ ಮೇಲೆ ಇನ್ನೂ ಹೆಚ್ಚಿನ ಪರಿಣಾಮವನ್ನುಂಟು ಮಾಡಲಿದೆ ಎಂದು ಆತಂಕ ವ್ಯಕ್ತಪಡಿಸಿದರು.
ತಕ್ಷಣ 1 ಟಿಎಂಸಿ ಹೆಚ್ಚುವರಿ ನೀರು ಹರಿಸುವ ಆದೇಶ ಹಿಂಪಡೆಯಬೇಕು. ತುಂಗಾ ತಿರುವು ಯೋಜನೆಯಿಂದ ನಿಗದಿತ ನೀರು ಭದ್ರಾ ಜಲಾಶಯಕ್ಕೆ ಹರಿಸಬೇಕು. ಭದ್ರಾ ಅಚ್ಚುಕಟ್ಟು ರೈತರ ಹಿತಕಾಪಾಡಲು ಮೊದಲ ಆದ್ಯತೆ ನೀಡಬೇಕೆಂದು ಆಗ್ರಹಿಸಿದರು.
ಭದ್ರಾ ಅಚ್ಚುಕಟ್ಟು ರೈತರ ಹಿತ ರಕ್ಷಣಾ ಸಮಿತಿ ಅಧ್ಯಕ್ಷ ಕಲ್ಲಹಳ್ಳಿ ನಂಜುಂಡೇಗೌಡ ಮತ್ತು ಪ್ರಧಾನ ಕಾರ್ಯದರ್ಶಿ ಸುರೇಶ್, ಪ್ರಮುಖರಾದ ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಶಾರದ ಅಪ್ಪಾಜಿ, ಕೆ.ಟಿ ಗಂಗಾಧರ್, ಯಶವಂತರಾವ್ ಘೋರ್ಪಡೆ, ವೀರೇಶ್, ಆರ್. ಕರುಣಾಮೂರ್ತಿ, ಚಂದ್ರೇಗೌಡ, ಗೊಂದಿ ಜಯರಾಂ, ಮಂಗೋಟೆ ರುದ್ರೇಶ್ ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.

.jpeg)