ವಿಐಎಸ್ಎಲ್ ಸಹಾಯಕ ವ್ಯವಸ್ಥಾಪಕ ಗೋವಿಂದರಾಜು ಆತ್ಮಹತ್ಯೆ
ಗೋವಿಂದರಾಜು
ಭದ್ರಾವತಿ: ಕೇಂದ್ರ ಉಕ್ಕು ಪ್ರಾಧಿಕಾರದ ನಗರದ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆಯ ಸಹಾಯಕ ವ್ಯವಸ್ಥಾಪಕ(ಎಜಿಎಂ) ಗೋವಿಂದರಾಜು(52)ರವರು ತಮ್ಮ ನಿವಾಸ ಕಾರ್ಖಾನೆಯ ಅಧಿಕಾರಿಗಳ ವಸತಿಗೃಹದಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.
ತಮಿಳುನಾಡಿನ ಸೇಲಂ ಮೂಲದ ಗೋವಿಂದರಾಜು ಅವರು ಸೇಲಂ ಕಾರ್ಖಾನೆಯಲ್ಲಿ ಕರ್ತವ್ಯಕ್ಕೆ ನೇಮಕಗೊಂಡಿದ್ದರು. ನಂತರ ಇಲ್ಲಿಗೆ ವರ್ಗಾವಣೆಗೊಂಡು ಕಳೆದ ಸುಮಾರು ದಶಕಕ್ಕೂ ಹೆಚ್ಚು ವರ್ಷಗಳಿಂದ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಪ್ರಸ್ತುತ ಪದೋನ್ನತಿ ಪಡೆದು ಕಾರ್ಖಾನೆಯ ಎಲೆಕ್ಟ್ರಿಕ್ ವಿಭಾಗದಲ್ಲಿ ಸಹಾಯಕ ವ್ಯವಸ್ಥಾಪಕರಾಗಿ ಕರ್ತವ್ಯ ನಿರ್ವಹಿಸಿದ್ದರು. ಭಾನುವಾರ ಮಧ್ಯಾಹ್ನ ಸುಮಾರು 3 ಗಂಟೆಗೆ ಪತ್ನಿಯನ್ನು ರೈಲಿಗೆ ಕಳುಹಿಸಿದ್ದ ಗೋವಿಂದರಾಜು ಬಳಿಕ ಮನೆಗೆ ವಾಪಸ್ಸಾಗಿದ್ದರು ಎನ್ನಲಾಗಿದೆ.
ಸೋಮವಾರ ಕಾರ್ಖಾನೆಗೆ ತೆರಳಿ ಕೆಲವು ಕಡತಗಳಿಗೆ ಸಹಿ ಹಾಕಬೇಕಿದ್ದ ಅವರು ಕೆಲಸಕ್ಕೆ ಹಾಜರಾಗಿರಲಿಲ್ಲ. ಇದರಿಂದ ಅನುಮಾನಗೊಂಡ ಕಾರ್ಖಾನೆಯ ಅಧಿಕಾರಿಗಳು ಹಲವು ಬಾರಿ ಅವರಿಗೆ ಕರೆ ಮಾಡಿದ್ದು, ಕರೆ ಸ್ವೀಕರಿಸದ ಹಿನ್ನೆಲೆಯಲ್ಲಿ ಸಹೋದ್ಯೋಗಿಗಳು ಆತಂಕಗೊಂಡಿದ್ದರು.
ಇದೇ ವೇಳೆ ವಿದ್ಯುತ್ ಮೀಟರ್ ರೀಡರ್ ಸಿಬ್ವಂದಿ ಕೂಡ ಅವರ ಮನೆಗೆ ತೆರಳಿ ಬಾಗಿಲು ತಟ್ಟಿದರೂ ಯಾವುದೇ ಪ್ರತಿಕ್ರಿಯೆ ಬಂದಿರಲಿಲ್ಲ. ಬಳಿಕ ಕಾರ್ಖಾನೆಯ ಅಧಿಕಾರಿಗಳು ಮನೆಗೆ ತೆರಳಿ ಪರಿಶೀಲಿಸಿದಾಗ ಗೋವಿಂದರಾಜು ಅವರು ಆತ್ಮಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ.
ನ್ಯೂಟೌನ್ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣದ ಕುರಿತು ತನಿಖೆ ಮುಂದುವರಿಸಿದ್ದಾರೆ. ಆತ್ಮಹತ್ಯೆಗೆ ನಿಖರ ಕಾರಣ ತಿಳಿದುಬಂದಿಲ್ಲ. ಗೋವಿಂದರಾಜುರವರ ಕುಟುಂಬಸ್ಥರು ಬಂದ ನಂತರ ಮೃತದೇಹ ಸ್ಥಳದಿಂದ ತೆಗೆಯಲಿದ್ದು, ನಂತರ ನಿಖರ ಮಾಹಿತಿ ತಿಳಿದು ಬರಲಿದೆ.
