ಭದ್ರಾ ಮೇಲ್ದಂಡೆ ಯೋಜನಾ ವೃತ್ತ-01 ಕಚೇರಿಯಲ್ಲಿ ರಾಜ್ಯೋತ್ಸವ : ತಾಯಿ ಭುವನೇಶ್ವರಿಗೆ ಅವಮಾನ
ಕನ್ನಡಪರ ಹೋರಾಟಗಾರರು, ಕರ್ನಾಟಕ ರಾಜ್ಯ ರೈತ ಸಂಘ, ಹಸಿರು ಸೇನೆ ಪ್ರಮುಖರು ಆಕ್ರೋಶ
ಭದ್ರಾವತಿ ತಾಲೂಕಿನ ಬಿ.ಆರ್.ಪಿ ಅಧೀಕ್ಷಕ ಇಂಜಿನಿಯರ್ ರವರ ಕಚೇರಿ ವಿಶ್ವೇಶ್ವರಯ್ಯ ಜಲ ನಿಗಮ ನಿಯಮಿತ ಭದ್ರಾ ಮೇಲ್ದಂಡೆ ಯೋಜನಾ ವೃತ್ತ-01 ಕಚೇರಿಯಲ್ಲಿ ರಾಜ್ಯೋತ್ಸವದ ಅಂಗವಾಗಿ ಇಟ್ಟಿದ್ದ ತಾಯಿ ಭುವನೇಶ್ವರಿ ಭಾವಚಿತ್ರವನ್ನು ಒಂದು ರೊಟ್ಟಿನ (ಕಟ್ಟಿಗೆ ಹಲಗೆ) ಮೇಲೆ ಹಳದಿ ಪ್ಲಾಸ್ಟಿಕ್ ಕವರ್ ಸುತ್ತಿ, ಅಂಟಿಸಿ, ಕುರ್ಚಿಯ ಮೇಲೆ ಇಟ್ಟು ಪೂಜೆ ಮಾಡಲಾಗಿದೆ.
ಭದ್ರಾವತಿ : ನವೆಂಬರ್ 1 ಕನ್ನಡ ರಾಜ್ಯೋತ್ಸವದಂದು ರಾಜ್ಯಾದ್ಯಂತ ಸರ್ಕಾರಿ ಕಚೇರಿಗಳಲ್ಲಿ ವಿಜೃಂಭಣೆಯಿಂದ ತಾಯಿ ಭುವನೇಶ್ವರಿ ಪೂಜೆ ನಡೆದರೆ, ತಾಲೂಕಿನ ಬಿ.ಆರ್.ಪಿ ವಿಶ್ವೇಶ್ವರಾಯ ಜಲ ನಿಗಮ ನಿಯಮಿತ, ಭದ್ರಾ ಮೇಲ್ದಂಡೆ ಯೋಜನಾ ವೃತ್ತ ನಂಬರ್-01, ಅಧೀಕ್ಷಕ ಇಂಜಿನಿಯರ್ ರವರ ಕಚೇರಿಯಲ್ಲಿ ತಾಯಿ ಭುವನೇಶ್ವರಿಗೆ ಅವಮಾನ ಮಾಡಿರುವ ಘಟನೆ ನಡೆದಿದ್ದು, ಕನ್ನಡಪರ ಹೋರಾಟಗಾರರು ಹಾಗೂ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಪ್ರಮುಖರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕಚೇರಿಯಲ್ಲಿ ರಾಜ್ಯೋತ್ಸವದ ಅಂಗವಾಗಿ ಇಟ್ಟಿದ್ದ ತಾಯಿ ಭುವನೇಶ್ವರಿ ಭಾವಚಿತ್ರವನ್ನು ಒಂದು ರೊಟ್ಟಿನ (ಕಟ್ಟಿಗೆ ಹಲಗೆ) ಮೇಲೆ ಹಳದಿ ಪ್ಲಾಸ್ಟಿಕ್ ಕವರ್ ಸುತ್ತಿ, ಅಂಟಿಸಿ, ಕುರ್ಚಿಯ ಮೇಲೆ ಇಟ್ಟು ಪೂಜೆ ಮಾಡಲಾಗಿದೆ. ಕೋಟಿಗಟ್ಟಲೆ ಅನುದಾನ ಹೊಂದಿರುವ ನಿಗಮಕ್ಕೆ ಒಂದು ಉತ್ತಮ ಗುಣಮಟ್ಟದ ಫ್ರೇಮ್ ಇರುವ ಭಾವಚಿತ್ರ ತರಲು ಸಾಧ್ಯವಾಗಲಿಲ್ಲವೇ ಎಂದು ಸಾರ್ವಜನಿಕರು ಪ್ರಶ್ನಿಸಿದ್ದಾರೆ.
"ಇದು ಕನ್ನಡ ನಾಡು, ನುಡಿ, ತಾಯಿ ಭುವನೇಶ್ವರಿಗೆ ಮಾಡಿದ ಘೋರ ಅವಮಾನ. ಕನ್ನಡ ರಾಜ್ಯೋತ್ಸವದ ದಿನವೇ ಇಂತಹ ಬೇಜವಾಬ್ದಾರಿ ಖಂಡನೀಯ. ಸಂಬಂಧಪಟ್ಟ ಅಧೀಕ್ಷಕ ಇಂಜಿನಿಯರ್ ಮತ್ತು ಅಧಿಕಾರಿಗಳು ಕೂಡಲೇ ಕನ್ನಡಿಗರ ಕ್ಷಮೆ ಕೇಳಬೇಕು ಮತ್ತು ಶಾಶ್ವತವಾಗಿ ಉತ್ತಮ ಭಾವಚಿತ್ರ ಪ್ರತಿಷ್ಠಾಪಿಸಬೇಕು" ಎಂದು ಶಶಿ ನೆಲ್ಲಿಸರ ಮತ್ತು ರೈತ ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಪ್ರಮುಖರು ಒತ್ತಾಯಿಸಿದ್ದಾರೆ.

.jpeg)