ಸುಲ್ತಾನಮಟ್ಟಿ ಸರ್ಕಾರಿ ಶಾಲೆ ಮಕ್ಕಳಿಂದ ಕನ್ನಡ ರಾಜ್ಯೋತ್ಸವ

ದೇಶಭಕ್ತರ ವೇಷಭೂಷಣ, ಗ್ರಾಮದ ಬೀದಿಗಳಲ್ಲಿ ಮೆರವಣಿಗೆ

ಭದ್ರಾವತಿ ತಾಲೂಕಿನ ಗ್ರಾಮೀಣ ಭಾಗದ ಅರಳಿಕೊಪ್ಪ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸುಲ್ತಾನಮಟ್ಟಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಸಡಗರ ಸಂಭ್ರಮದಿಂದ ಕನ್ನಡ ರಾಜ್ಯೋತ್ಸವ ಆಚರಿಸಲಾಯಿತು.

    ಭದ್ರಾವತಿ: ತಾಲೂಕಿನ ಗ್ರಾಮೀಣ ಭಾಗದ ಅರಳಿಕೊಪ್ಪ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸುಲ್ತಾನಮಟ್ಟಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಸಡಗರ ಸಂಭ್ರಮದಿಂದ ಕನ್ನಡ ರಾಜ್ಯೋತ್ಸವ ಆಚರಿಸಲಾಯಿತು. ಶಾಲಾ ಮಕ್ಕಳು ವಿವಿಧ ಜಾನಪದ ಪ್ರಕಾರಗಳು, ಉಡುಗೆತೊಡುಗೆಗಳನ್ನು ತೊಟ್ಟು ಸುಲ್ತಾನಮಟ್ಟಿ ಗ್ರಾಮದ ಬೀದಿಗಳಲ್ಲಿ ಮೆರವಣಿಗೆ ಮುಖಾಂತರವಾಗಿ ಕಲಾ ಪ್ರದರ್ಶನ ನಡೆಸಿ ಗಮನ ಸೆಳೆದರು.

    ಮಕ್ಕಳು ತಾಯಿ ಭುವನೇಶ್ವರಿ, ಕನಕದಾಸ, ಸಂತ ಶಿಶುನಾಳ ಶರೀಫ, ಕಿತ್ತೂರ ರಾಣಿ ಚನ್ನಮ್ಮ. ಒನಕೆ ಓಬವ್ವ ಕಾವೇರಿ ಮಾತೆ, ಸಂಗೊಳ್ಳಿ ರಾಯಣ್ಣ ಮುಂತಾದ ದೇಶಭಕ್ತರ ವೇಷಭೂಷಣಗಳೊಂದಿಗೆ ಕಣ್ಮನ ಸೆಳೆದರು.


     ಶಾಲೆಯ ಮುಖ್ಯ ಶಿಕ್ಷಕ, ಜಾನಪದ ಕಲಾವಿದ ಎಂ.ಆರ್ ರೇವಣಪ್ಪ ಮಾತನಾಡಿ, ಕನ್ನಡ ನಾಡಿಗಾಗಿ ಅನೇಕ ಮಹನೀಯರು ಶ್ರಮಿಸಿದ್ದಾರೆ. ಅವರ ಹಾದಿಯಲ್ಲಿ ನಾವುಗಳು ಸಹ ನಡೆಯಬೇಕು. ಅಲ್ಲದೆ ಕನ್ನಡ ನಾಡಿನಲ್ಲಿ ಸರ್ವಧರ್ಮ ಸಮಾನತೆಯನ್ನು ಸಾರಬೇಕು. ಡೊಳ್ಳು ಕುಣಿತ, ಸುಗ್ಗಿ ಕುಣಿತ, ಕೋಲಾಟ, ವೀರಗಾಸೆ, ಸೋಮನ ಕುಣಿತ, ಪಟ್ಟ ಕುಣಿತ, ತಮಟೆ ವಾದ್ಯ ಮುಂತಾದ ಕನ್ನಡ ನಾಡಿನ ಜಾನಪದ ಕಲೆಗಳು ರಾಜ್ಯ, ರಾಷ್ಟ್ರ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ಪ್ರಸಿದ್ದಿಗೊಂಡಿರುವು ದು ಹೆಮ್ಮೆಯ ವಿಷಯವಾಗಿದೆ ಎಂದರು.

    ಕಾರ್ಯಕ್ರಮದಲ್ಲಿ ಎಸ್.ಡಿ.ಎಂ.ಸಿ ಅಧ್ಯಕ್ಷ ರಾಕೇಶ್, ಸದಸ್ಯರಾದ ನಾಗರಾಜ್, ಮಹಮ್ಮದ್ ಹುಸೇನ್, ಚಂದ್ರಶೇಖರ್, ನಾಗರತ್ನ, ರವಿ, ವಿಜಯಮ್ಮ, ಪುಷ್ಪಮ್ಮ ಮತ್ತು ಸರಸಮ್ಮಸೇರಿದಂತೆ ಮುಂತಾದವರು ಪಾಲ್ಗೊಂಡಿದ್ದರು. ಗ್ರಾಮದ ಹಿರಿಯರಾದ ರಾಮಮೂರ್ತಿ ಹಾಗೂ ಗೋಪಾಲಣ್ಣ ಅವರನ್ನು ಸನ್ಮಾನಿಸಲಾಯಿತು. ಅಂಗನವಾಡಿ ಶಿಕ್ಷಕಿ ಶೋಭಾ ಸ್ವಾಗತಿಸಿ, ಶಿಕ್ಷಕಿ ಸೆಲ್ಲಿನಾ ಕಾರ್ಯಕ್ರಮ ನಿರೂಪಿಸಿದರು.