ಸುಂದರ ಲಿಪಿಗಳ ರಾಣಿ, ಬರೆದಂತೆ ಓದಬಲ್ಲ ಭಾಷೆ ಕನ್ನಡ : ಕೋಗಲೂರು ತಿಪ್ಪೇಸ್ವಾಮಿ.

ಭದ್ರಾವತಿ ತಾಲೂಕಿನ ಲಕ್ಷ್ಮೀಪುರ ಗ್ರಾಮದಲ್ಲಿ ಆಯೋಜಿಸಲಾಗಿದ್ದ ಕನ್ನಡ ರಾಜ್ಯೋತ್ಸವ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷ, ಶಿಕ್ಷಕ ಕೋಗಲೂರು ತಿಪ್ಪೇಸ್ವಾಮಿ ಉದ್ಘಾಟಿಸಿ ಮಾತನಾಡಿದರು.

ಭದ್ರಾವತಿ: ಕನ್ನಡ ಸುಂದರ ಲಿಪಿಯಲ್ಲಿ ವಿಶ್ವದಲ್ಲೇ ಮೂರನೇ ಸ್ಥಾನ ಪಡೆದಿದ್ದು, ಆಚಾರ್ಯ ವಿನೋಭಾಭಾವೆಯವರು ಇದನ್ನು ಸುಂದರ ಲಿಪಿಗಳ ರಾಣಿ ಎಂದು ವರ್ಣಿಸಿದ್ದಾರೆ. ವಿಶ್ವ ಶ್ರೇಷ್ಠ ಸಾಹಿತಿ, ಕಲಾವಿದರನ್ನು ಬೆಳೆಸಿದ ಸಮೃದ್ಧ ಭಾಷೆ ಇದಾಗಿದ್ದು, ನಾವುಗಳು ಕನ್ನಡ ಭಾಷೆ ಬಗ್ಗೆ ಅಸಡ್ಡೆ ತೋರದೇ ಅಭಿಮಾನ ಬೆಳೆ ಸಿಕೊಳ್ಳಬೇಕೆಂದು ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷ, ಶಿಕ್ಷಕ ಕೋಗಲೂರು ತಿಪ್ಪೇಸ್ವಾಮಿ ಕರೆ ನೀಡಿದರು.

    ಅವರು ತಾಲೂಕಿನ ಲಕ್ಷ್ಮೀಪುರ ಗ್ರಾಮದಲ್ಲಿ ಆಯೋಜಿಸಲಾಗಿದ್ದ ಕನ್ನಡ ರಾಜ್ಯೋತ್ಸವ ಉದ್ಘಾಟಿಸಿ ಮಾತನಾಡಿ, ಬರೆದಂತೆ ಓದಬಲ್ಲ ಭಾಷೆ ಕನ್ನಡ. ಈ ಭಾಷೆಗೆ ೨೫೦೦ ವರ್ಷಗಳ ಪ್ರಾಚೀನ ಇತಿಹಾಸವಿದ್ದು, ಜಗತ್ತಿನ ಸರ್ವ ಶ್ರೇಷ್ಠ ಭಾಷೆ ಗಳಲ್ಲಿ ಒಂದಾಗಿದೆ ಎಂದರು.

    ಕನ್ನಡ ನಾಡು ಕಲೆ, ಸಾಹಿತ್ಯ, ಸಂಸ್ಕೃತಿಗೆ ಹೆಸರಾಗಿದ್ದು, ಹಿಂದೆ ಕಾವೇರಿಯಿಂದ ಗೋದಾವರಿವರೆಗೂ ವಿಸ್ತಾರಗೊಂಡಿದ್ದ ದೊಡ್ಡ ರಾಜ್ಯವಾಗಿತ್ತು. ಅಲ್ಲದೆ ಭಾರತ ದೇಶದಲ್ಲೇ ವಿಶಿಷ್ಟ ರಾಜ್ಯ ಎಂಬ ಹೆಗ್ಗಳಿಕೆಗೆ ಪಾತ್ರವಾಗಿತ್ತು. ಕದಂಬ ವಂಶ ದಿಂದ ಆರಂಭವಾದ ಕನ್ನಡ ಪರಂಪರೆ, ಗಂಗರು, ಚಾಲುಕ್ಯರು, ಹೊಯ್ಸಳರು, ವಿಜಯ ನಗರದ ಅರಸರು, ಮೈಸೂರು ಒಡೆಯರುಗಳ ಕಾಲದಲ್ಲಿ ಮುಂದುವರಿದು ವೈಭವಕ್ಕೆ ಹೆಸರಾಗಿತ್ತು. ಮುತ್ತು-ರತ್ನಗಳನ್ನು ಬಳ್ಳದಲ್ಲಿ ಅಳೆದು ಮಾರುತಿದ್ದ ಸಮೃದ್ಧ ರಾಜ್ಯ ಇದಾಗಿತ್ತು. ಇಂತಹ ನೆಲದಲ್ಲಿ ಹುಟ್ಟಿದ ನಾವೆಲ್ಲರೂ ಧನ್ಯರು ಎಂದ ಕೋಗಲೂರು ತಿಪ್ಪೇಸ್ವಾಮಿಯವರು ನಾಡು, ನುಡಿ, ಜಲದ ವಿಷಯಗಳಲ್ಲಿ ಒಗ್ಗಟ್ಟಾಗಿ ಹೋರಾಡಬೇಕೆಂದು ಕರೆ ನೀಡಿದರು.

    ಶಿಕ್ಷಕಿ ಶೋಭಾ ಸ್ವಾಗತಿಸಿ, ನಿವೃತ್ತ ಶಿಕ್ಷಕಿ ದೇವಕರಣಮ್ಮ ವಂದಿಸಿದರು. ಕಾರ್ಯಕ್ರಮ ದಲ್ಲಿ ಗ್ರಾಮ ಮುಖಂಡರುಗಳಾದ ತಿಮ್ಮಣ್ಣ, ವೆಂಕಟೇಶ್, ವಿಶ್ವನಾಥ್, ಮೂರ್ತಿ ಹಾಗೂ ಗ್ರಾಮಸ್ಥರು ಹಾಗೂ ಕನ್ನಡಾಭಿಮಾನಿಗಳು ಪಾಲ್ಗೊಂಡಿದ್ದರು.