ಭದ್ರಾ ಜಲಾಶಯದಿಂದ ನಾಲೆಗಳಿಗೆ ನೀರು : ಶಾಸಕರ ಶ್ರಮ ಸ್ವಾರ್ಥಕ್ಕಾಗಿ ಬಳಕೆ
ನಗರ, ಗ್ರಾಮಾಂತರ ಬ್ಲಾಕ್ ಕಾಂಗ್ರೆಸ್ನಿಂದ ಆರೋಪ
ಭದ್ರಾವತಿ ಹಳೇನಗರದ ಪತ್ರಿಕಾಭವನದಲ್ಲಿ ಮಂಗಳವಾರ ಆಯೋಜಿಸಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಕಾಂಗ್ರೆಸ್ ಪಕ್ಷದ ಪ್ರಮುಖರು ಮಾತನಾಡಿದರು.
ಭದ್ರಾವತಿ : ಸಂಕಷ್ಟದ ಸಂದರ್ಭದಲ್ಲೂ ತಾಲೂಕಿನ ಭದ್ರಾ ಜಲಾಶಯದಿಂದ ಬಲದಂಡೆ ಹಾಗು ಎಡದಂತೆ ಮತ್ತು ಗೊಂದಿ ನಾಲೆಗಳಿಗೆ ಸೂಕ್ತ ಸಮಯದಲ್ಲಿ ನೀರು ಹರಿಸುವಲ್ಲಿ ಕರ್ನಾಟಕ ಗ್ರಾಮೀಣ ಮೂಲ ಸೌಕರ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಶಾಸಕ ಬಿ.ಕೆ ಸಂಗಮೇಶ್ವರ್ರವರ ಶ್ರಮ ಹೆಚ್ಚಿನದ್ದಾಗಿದ್ದು, ಈ ಹಿನ್ನಲೆಯಲ್ಲಿ
ನಗರ ಮತ್ತು ಗ್ರಾಮಾಂತರ ಬ್ಲಾಕ್ ಕಾಂಗ್ರೆಸ್ ಅವರನ್ನು ಅಭಿನಂದಿಸುವ ಜೊತೆಗೆ ಕೆಲವರು ಈ ಸುಸಂದರ್ಭವನ್ನು ತಮ್ಮ ಸ್ವಾರ್ಥಕ್ಕಾಗಿ ಬಳಸಿಕೊಳ್ಳುತ್ತಿರುವುದನ್ನು ಖಂಡಿಸುತ್ತದೆ ಎಂದು ನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಸ್. ಕುಮಾರ್ ಮತ್ತು ನಗರಸಭೆ ಮಾಜಿ ಅಧ್ಯಕ್ಷ ಬಿ.ಕೆ ಮೋಹನ್ ತಿಳಿಸಿದರು.
ಬಿ.ಕೆ ಸಂಗಮೇಶ್ವರ್ರವರು ಮುಂಗಾರು ಸಂದರ್ಭದಲ್ಲಿ ಅಂದರೆ ಆ.೧೮ ರಂದು ಬೆಂಗಳೂರಿನ ವಿಕಾಸಸೌಧದಲ್ಲಿ ನಡೆದ ನೀರಾವರಿ ಸಲಹಾ ಸಮಿತಿ ಸಭೆಯಲ್ಲಿ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಹಾಗೂ ನೀರಾವರಿ ಇಲಾಖೆ ಸಚಿವ ಎನ್. ಚಟುವರಾಯಸ್ವಾಮಿ ಮತ್ತು ದಾವಣೆಗೆರೆ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್ ಮಲ್ಲಿಕಾರ್ಜುನ ಹಾಗೂ ನೀರಾವರಿ ಸಲಹಾ ಸಮಿತಿ ಅಧ್ಯಕ್ಷ ಮತ್ತು ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವ ಎಸ್. ಮಧು ಬಂಗಾರಪ್ಪನವರನ್ನು ವೈಯಕ್ತಿಕವಾಗಿ ಭೇಟಿ ಮಾಡಿ ಪ್ರಸ್ತುತ ಮಳೆಗಾಲವಾದ್ದರಿಂದ ಹೆಚ್ಚಿನ ನೀರನ್ನು ಯಾವ ಬೆಳೆಗಳು ಕೇಳುವುದಿಲ್ಲ ಬೆಳೆಗಳಿಗೆ ನಾಲೆಗಳಲ್ಲಿ ನೀರು ಹರಿಸದೇ ಇರುವುದರಿಂದ ಮುಂದೆ ಚಳಿಗಾಲ, ಬೇಸಿಗೆ ಕಾಲದಲ್ಲಿ ಕುಡಿಯುವ ನೀರಿಗಾಗಲೀ ಹಾಗೂ ಕೈಗಾರಿಕೆಗಾಗಲೀ ಮತ್ತು ತೋಟಗಾರಿಕೆ ಬೆಳೆಗಳಿಗಾಗಲೀ ನೀರಿನ ಅಭಾವವಾಗುವುದು ತಪ್ಪುತ್ತದೆ ಎಂದು ಮನವರಿಕೆ ಮಾಡಿಕೊಟ್ಟ ಹಿನ್ನಲೆಯಲ್ಲಿ ಇದೀಗ ಜಲಾಶಯದಲ್ಲಿ ೧೭೨ ಅಡಿ ನೀರಿದ್ದು, ಮುಂದೆ ಎದುರಾಗಬಹುದಾದ ಸಂಕಷ್ಟಗಳಿಂದ ತಪ್ಪಿಸಿಕೊಳ್ಳಬಹುದಾಗಿದೆ ಎಂದರು.
ಸೆಪ್ಟೆಂಬರ್ ತಿಂಗಳಿನಲ್ಲಿ ಮಳೆಯಾಗದ ಹಿನ್ನಲೆಯಲ್ಲಿ ತೋಟದ ಬೆಳೆಗಳಿಗೆ ಹಾಗೂ ಕುಡಿಯುವ ನೀರಿಗಾಗಿ ನಾಲೆಗಳಿಗೆ ೧೫ ದಿನ ನೀರು ಹರಿಸುವಲ್ಲಿ ಶಾಸಕರ ಶ್ರಮ ಮತ್ತು ಇಚ್ಚಶಕ್ತಿ ಹೆಚ್ಚಿನದ್ದಾಗಿದೆ. ಆದರೆ ಈ ಸಂದರ್ಭವನ್ನು ಅವಕಾಶವಾದಿಗಳು, ರಾಜಕೀಯ ಮುಖಂಡರು, ಹಲವು ಹೋರಟಗಾರರು ನಮ್ಮಿಂದ ನಾಲೆಗೆ ನೀರು ಹರಿಯಿತು ಎಂದು ಹೆಸರು ಮಾಡಿಕೊಳ್ಳಲು ಹೊರಟ್ಟಿದ್ದಾರೆ. ಇದು ಅಕ್ಷರಸಹ ಸುಳ್ಳು. ಇದು ನಿಜವಾಗಲೂ ಶಾಸಕರ ಶ್ರಮವನ್ನು ಮರೆಮಾಚುವ ಕೆಲಸವಾಗಿರುತ್ತದೆ ಎಂದು ದೂರಿದರು.
ಇದೀಗ ಪುನಃ ಶಾಸಕರು ಎಲ್ಲಾ ನಾಲೆಗಳಿಗೆ ನೀರು ಹರಿಸಲು ಬೆಂಗಳೂರಿನಲ್ಲಿ ಹಲವು ಸಭೆಗಳನ್ನು ನಡೆಸಿ ಮುಖ್ಯಮಂತ್ರಿ, ನೀರಾವರಿ ಸಚಿವರು, ಶಿವಮೊಗ್ಗ ಮತ್ತು ದಾವಣಗೆರೆ ಜಿಲ್ಲಾ ಉಸ್ತುವಾರಿ ಸಚಿವರನ್ನು ಭೇಟಿ ಮಾಡಿ ಭದ್ರಾ ಜಲಾಶಯ ಅಚ್ಚುಕಟ್ಟುದಾರರ ಸಮಸ್ಯೆಗಳ ಬಗ್ಗೆ ಚರ್ಚಿಸಿ ಎಲ್ಲರ ಮನವೊಲಿಸಿದ ಪರಿಣಾಮ ಭದ್ರಾ ಜಲಾಶಯದಿಂದ ನ.೧೫ರ ರಾತ್ರಿಯಿಂದ ನೀರನ್ನು ಹರಿಸಲಾಗುತ್ತಿದೆ ಎಂದರು.
ಶಾಸಕರು ರೈತರ ಮೇಲೆ ಹೊಂದಿರುವ ಕಾಳಜಿ ಹಾಗು ದೂರದೃಷ್ಟಿ ಚಿಂತನೆಯ ಫಲವಾಗಿ ಜಲಾಶಯದಲ್ಲಿ ಪ್ರಸ್ತುತ ಅಗತ್ಯವಿರುವಷ್ಟು ನೀರಿದ್ದು, ಯಾರು ಸಹ ಆತಂಕಕ್ಕೆ ಒಳಗಾಗಬಾರದು. ಸುಳ್ಳು ಸುದ್ದಿಗಳಿಗೆ ಕಿವಿಕೊಡಬಾರದು. ಭದ್ರಾ ಮೇಲ್ದಂಡೆ ಯೋಜನೆ ಸೇರಿದಂತೆ ಜಲಾಶಯದ ಎಲ್ಲಾ ಯೋಜನೆಗಳು ಮುಂದಿನ ದಿನಗಳಲ್ಲಿ ಯಶಸ್ವಿಯಾಗಿ ಪೂರ್ಣಗೊಳ್ಳುವ ವಿಶ್ವಾಸವಿದೆ. ಎಲ್ಲಾ ಸಮಸ್ಯೆಗಳು ಬಗೆಹರಿಯಲಿವೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ಚನ್ನಪ್ಪ, ಸಿ. ಜಯಪ್ಪ, ಕಲ್ಲಹಳ್ಳಿ ಶೇಖರ್, ಜುಂಜ್ಯಾನಾಯ್ಕ, ವಿಜಯಲಕ್ಷ್ಮೀ, ಕೃಷ್ಣಮೂರ್ತಿ, ಬಿ.ಎ ಮಂಜುನಾಥ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
