ಶ್ರೇಯ ಎನ್. ಗೌಡರವರ ಸಾಧನೆ ಇಡೀ ಕರ್ನಾಟಕ ರಾಜ್ಯಕ್ಕೆ ಹೆಮ್ಮೆಯ ಸಂಗತಿ : ಬಿ.ವೈ ರಾಘವೇಂದ್ರ
ಕೇಂದ್ರ ಲೋಕ ಸೇವಾ ಆಯೋಗ ರಾಷ್ಟ್ರೀಯ ರಕ್ಷಣಾ ಅಕಾಡೆಮಿ(ಎನ್ಡಿಎ)ಗೆ ನಡೆಸುವ ಪರೀಕ್ಷೆಯಲ್ಲಿ ದೇಶಕ್ಕೆ ಪ್ರಥಮ ರ್ಯಾಂಕ್ ಪಡೆದುಕೊಂಡಿರುವ ಭದ್ರಾವತಿ ತಿಮ್ಲಾಪುರ ನಿವಾಸಿ ಶ್ರೇಯ ಎನ್. ಗೌಡ ಅವರನ್ನು ಸಂಸದ ಬಿ.ವೈ ರಾಘವೇಂದ್ರ ಸನ್ಮಾನಿಸಿ ಅಭಿನಂದಿಸಿದರು.
ಭದ್ರಾವತಿ : ಕೇಂದ್ರ ಲೋಕ ಸೇವಾ ಆಯೋಗ ರಾಷ್ಟ್ರೀಯ ರಕ್ಷಣಾ ಅಕಾಡೆಮಿ(ಎನ್ಡಿಎ)ಗೆ ನಡೆಸುವ ಪರೀಕ್ಷೆಯಲ್ಲಿ ದೇಶಕ್ಕೆ ಪ್ರಥಮ ರ್ಯಾಂಕ್ ಪಡೆದುಕೊಂಡಿರುವ ಶ್ರೇಯ ಎನ್. ಗೌಡ ಅವರ ಸಾಧನೆ ಇಡೀ ಕರ್ನಾಟಕ ರಾಜ್ಯಕ್ಕೆ ಹೆಮ್ಮೆಯ ಸಂಗತಿಯಾಗಿದೆ ಎಂದು ಸಂಸದ ಬಿ.ವೈ ರಾಘವೇಂದ್ರ ಪ್ರಶಂಸೆ ವ್ಯಕ್ತಪಡಿಸಿದರು.
ಅವರು ನಗರದ ತಿಮ್ಲಾಪುರದಲ್ಲಿರುವ ಶ್ರೇಯ ಎನ್. ಗೌಡ ಅವರ ನಿವಾಸಕ್ಕೆ ತೆರಳಿ ಅವರನ್ನು ಸನ್ಮಾನಿಸಿ ಅಭಿನಂದಿಸಿದರು. ಇಂಜಿನಿಯರಿಂಗ್ ವಿದ್ಯಾಭ್ಯಾಸ ಬದಿಗಿಟ್ಟು, ದೇಶಸೇವೆಯ ಮಹತ್ತರ ಗುರಿಯೊಂದಿಗೆ ಮುನ್ನಡೆದಿರುವ ಶ್ರೇಯ ಅವರು ವಿಶೇಷವಾಗಿ ಯುವತಿಯರಿಗೆ ಆತ್ಮವಿಶ್ವಾಸ, ಧೈರ್ಯ, ಪರಿಶ್ರಮ ಮತ್ತು ದೇಶಭಕ್ತಿಯ ಮೂಲಕ ಸಾಧನೆಯ ಶಿಖರವೇರಲು ಪ್ರೇರಣೆಯಾಗಿದ್ದಾರೆ ಎಂದರು. ಮುಂದಿನ ದಿನಗಳಲ್ಲಿ ಭಾರತೀಯ ಸೇನೆಯಲ್ಲಿ ಉನ್ನತ ಜವಾಬ್ದಾರಿಯನ್ನು ನಿರ್ವಹಿಸುವ ಮೂಲಕ ಭಾರತಮಾತೆಯ ಸೇವೆಯಲ್ಲಿ ಇನ್ನಷ್ಟು ಎತ್ತರಕ್ಕೆ ಬೆಳೆಯಲಿ ಎಂದು ಹಾರೈಸಿ, ಇದೇ ಸಂದರ್ಭದಲ್ಲಿ ಕೇಂದ್ರ ಶಿಕ್ಷಣ, ಕೇಂದ್ರ ಗ್ರಾಹಕ ವ್ಯವಹಾರಗಳು, ಆಹಾರ ಮತ್ತು ಸಾರ್ವಜನಿಕ ವಿತರಣೆ, ನವೀಕರಿಸಬಹುದಾದ ಇಂಧನ ಸಚಿವರಾದ ಪ್ರಹ್ಲಾದ್ ಜೋಶಿ ಅವರು ದೂರವಾಣೆ ಕರೆಯ ಮೂಲಕ ಮಾತನಾಡಿ ಶ್ರೇಯಾ ಅವರ ಸಾಧನೆಯನ್ನು ಅಭಿನಂದಿಸಿ ಉಜ್ವಲ ಭವಿಷ್ಯಕ್ಕೆ ಶುಭ ಹಾರೈಸಿದರು.
ಶ್ರೇಯ ಅವರು ವಿಐಎಸ್ಎಲ್ ಕಾರ್ಖಾನೆ ನೌಕರ ಜೆ. ನಾಗೇಂದ್ರ ಹಾಗೂ ಹೊಸಮನೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಅತಿಥಿ ಉಪನ್ಯಾಸಕಿ ಬಿ.ಎಂ. ಆಶಾ ದಂಪತಿ ಪುತ್ರಿಯಾಗಿದ್ದಾರೆ.
ಬಿಜೆಪಿ ಜಿಲ್ಲಾಧ್ಯಕ್ಷ ಎನ್.ಕೆ ಜಗದೀಶ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಾಲತೇಶ್, ನಗರ ಮಂಡಲ ಅಧ್ಯಕ್ಷ ಜಿ. ಧರ್ಮ ಪ್ರಸಾದ್, ಮುಖಂಡರಾದ ಮಂಗೋಟೆ ರುದ್ರೇಶ್, ಜಿ. ಅನಂದ್ ಕುಮಾರ್, ಕೂಡ್ಲಿಗೆರೆ ಹಾಲೇಶ್, ಬಿ.ಜಿ ರಾಮಲಿಂಗಯ್ಯ, ಎಂ.ಎಸ್ ಸುರೇಶಪ್ಪ, ಪ್ರಧಾನ ಕಾರ್ಯದರ್ಶಿಗಳಾದ ರಘುರಾವ್, ಮೊಸರಳ್ಳಿ ಅಣ್ಣಪ್ಪ ಹಾಗು ಪಕ್ಷದ ಕಾರ್ಯಕರ್ತರು ಮತ್ತು ಶ್ರೇಯ ಅವರ ಕುಟುಂಬಸ್ಥರು ಉಪಸ್ಥಿತರಿದ್ದರು.
