ಉಕ್ಕಿನ ನಗರಕ್ಕೆ ಆಗಮಿಸಿದ ಎನ್‌ಡಿಎ ಪರೀಕ್ಷೆ ಪ್ರಥಮ ರ್‍ಯಾಂಕ್ ವಿಜೇತೆ ಶ್ರೇಯ ಎನ್. ಗೌಡ

ಅದ್ದೂರಿ ಸ್ವಾಗತ ಕೋರಿ ಅಭಿನಂದಿಸಿದ ಕ್ಷೇತ್ರದ ಜನತೆ


ಕೇಂದ್ರ ಲೋಕ ಸೇವಾ ಆಯೋಗ ರಾಷ್ಟ್ರೀಯ ರಕ್ಷಣಾ ಅಕಾಡೆಮಿ(ಎನ್‌ಡಿಎ)ಗೆ ನಡೆಸುವ ಪರೀಕ್ಷೆಯಲ್ಲಿ ದೇಶಕ್ಕೆ ಪ್ರಥಮ ರ್‍ಯಾಂಕ್ ಪಡೆದುಕೊಂಡಿರುವ ಶ್ರೇಯ ಎನ್. ಗೌಡ ಸೋಮವಾರ ಭದ್ರಾವತಿ ನಗರಕ್ಕೆ ಆಗಮಿಸಿದ್ದು, ಇವರನ್ನು ಕ್ಷೇತ್ರದ ಜನತೆ ಅದ್ದೂರಿಯಾಗಿ ಸ್ವಾಗತಿಸಿದರು.

    ಭದ್ರಾವತಿ : ಕೇಂದ್ರ ಲೋಕ ಸೇವಾ ಆಯೋಗ ರಾಷ್ಟ್ರೀಯ ರಕ್ಷಣಾ ಅಕಾಡೆಮಿ(ಎನ್‌ಡಿಎ)ಗೆ ನಡೆಸುವ ಪರೀಕ್ಷೆಯಲ್ಲಿ ದೇಶಕ್ಕೆ ಪ್ರಥಮ ರ್‍ಯಾಂಕ್ ಪಡೆದುಕೊಂಡಿರುವ ಶ್ರೇಯ ಎನ್. ಗೌಡ ಸೋಮವಾರ ನಗರಕ್ಕೆ ಆಗಮಿಸಿದ್ದು, ಇವರನ್ನು ಕ್ಷೇತ್ರದ ಜನತೆ ಅದ್ದೂರಿಯಾಗಿ ಸ್ವಾಗತಿಸಿದರು.

    ತಾಲೂಕಿನ ತಿಮ್ಲಾಪುರ ನಿವಾಸಿಗಳಾದ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ ನೌಕರ ಜೆ. ನಾಗೇಂದ್ರ ಹಾಗು ಹೊಸಮನೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಅತಿಥಿ ಉಪನ್ಯಾಸಕಿಯಾಗಿ ಕರ್ತವ್ಯ ನಿರ್ವಹಿಸುತ್ತಿರುವ ಡಾ. ಬಿ.ಎಂ ಆಶಾ ದಂಪತಿ ಪುತ್ರಿಯಾಗಿರುವ ಶ್ರೇಯ ಎನ್. ಗೌಡ ಎನ್‌ಡಿಎ ಪರೀಕ್ಷೆಯಲ್ಲಿ ಅತ್ಯುನ್ನತ ಶ್ರೇಣಿಯಲ್ಲಿ ದೇಶಕ್ಕೆ ಪ್ರಥಮ ರ್‍ಯಾಂಕ್ ಪಡೆಯುವ ಮೂಲಕ ರಾಷ್ಟ್ರಮಟ್ಟದಲ್ಲಿ ಉಕ್ಕಿನ ನಗರದ ಕೀರ್ತಿ ಪತಾಕೆ ಹಾರಿಸಿ ಎಲ್ಲರ ಗಮನ ಸೆಳೆದಿದ್ದಾರೆ.

    ನಗರಕ್ಕೆ ಆಗಮಿಸಿದ ಇವರನ್ನು ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಲ್ಲಿ ವಿಐಎಸ್‌ಎಲ್ ಕಾರ್ಖಾನೆ ನೌಕರರು, ಸ್ಥಳೀಯ ಮುಖಂಡರು, ಬಂಧು-ಬಳಗದವರು ಅದ್ದೂರಿಯಾಗಿ ಸ್ವಾಗತಿಸಿ ಅಭಿನಂದನೆಗಳನ್ನು ಸಲ್ಲಿಸಿದರು.

    ನೌಕರನ ಮಗಳ ಸಾಧನೆಗೆ ಕಾರ್ಮಿಕರ ಸಂಭ್ರಮ:

    ವಿಐಎಸ್‌ಎಲ್ ಕಾರ್ಖಾನೆ ನೌಕರನ ಮಗಳು ದೇಶಕ್ಕೆ ಪ್ರಥಮ ರ್‍ಯಾಂಕ್ ಪಡೆದುಕೊಂಡಿರುವುದು ಸಮಸ್ತ ನೌಕರರಿಗೆ ಹೆಮ್ಮೆಯ ಸಂಗತಿಯಾಗಿದ್ದು, ಶ್ರೇಯ ಎನ್. ಗೌಡ ಇತರರಿಗೆ ಮಾದರಿಯಾಗಿದ್ದಾರೆಂದು ಕಾರ್ಖಾನೆ ಮುಖ್ಯದ್ವಾರದ ಮುಂಭಾಗ ಕಾರ್ಮಿಕರು ಅವರನ್ನು ಅಭಿನಂದಿಸಿ ಸಂಭ್ರಮ ವ್ಯಕ್ತಪಡಿಸಿದರು. ಕಾರ್ಮಿಕ ಸಂಘದ ಅಧ್ಯಕ್ಷರು, ಪದಾಧಿಕಾರಿಗಳು, ಗುತ್ತಿಗೆ ಹಾಗು ನಿವೃತ್ತ ಕಾರ್ಮಿಕರ ಸಂಘದ ಪದಾಧಿಕಾರಿಗಳು, ಮುಖಂಡರು ಉಪಸ್ಥಿತರಿದ್ದರು.