ನಿಯಂತ್ರಣ ಕಳೆದುಕೊಂಡು ರಸ್ತೆ ಮೇಲೆ ಬಿದ್ದ ದ್ವಿಚಕ್ರ ವಾಹನ : ಹಿಂಬದಿ ಸವಾರ ಸಾವು
ಭದ್ರಾವತಿ: ದ್ವಿಚಕ್ರ ವಾಹನ ಚಾಲಕನ ನಿಯಂತ್ರಣ ಕಳೆದುಕೊಂಡು ರಸ್ತೆ ಮೇಲೆ ಏಕಾಏಕಿ ಬಿದ್ದ ಪರಿಣಾಮ ತೀವ್ರವಾಗಿ ಗಾಯಗೊಂಡಿದ್ದ ಹಿಂಬದಿ ಸವಾರ ಸಾವನ್ನಪ್ಪಿರುವ ಘಟನೆ ನಡೆದಿದೆ.
ತಾಲೂಕಿನ ಕೂಡ್ಲಿಗೆರೆ ಗ್ರಾಮದ ಸುಬ್ರಹ್ಮಣ್ಯಸ್ವಾಮಿ ದೇವಸ್ಥಾನ ಬೀದಿ ನಿವಾಸಿ, ಲಾರಿ ಚಾಲಕ ಕೆ. ಚಿದಾನಂದ (48) ಮೃತಪಟ್ಟಿದ್ದಾರೆ. ನ.14ರ ರಾತ್ರಿ ಕೆಲಸ ಮುಗಿಸಿಕೊಂಡು ಚಿದಾನಂದ ಅವರು ತಮ್ಮ ಮನೆಗೆ ತೆರಳುತ್ತಿದ್ದ ವೇಳೆ ಕೂಡ್ಲಿಗೆರೆ ಕಡೆಗೆ ದ್ವಿಚಕ್ರ ವಾಹನದಲ್ಲಿ ತೆರಳುತ್ತಿದ್ದ ಕೋಡಿಹೊಸೂರು ಗ್ರಾಮದ ನಾಗೇಂದ್ರ ಅವರ ಬಳಿ ಕೂಡ್ಲಿಗೆರೆ ಗ್ರಾಮಕ್ಕೆ ಬಿಡಲು ನೆರವು ಕೇಳಿ ಹಿಂಬದಿಯಲ್ಲಿ ಕುಳಿತು ಪ್ರಯಾಣಿಸುತ್ತಿದ್ದಾಗ ತಾಲೂಕಿನ ಸೀತಾರಾಮಪುರ ಗ್ರಾಮದಲ್ಲಿ ರಸ್ತೆಯಲ್ಲಿದ್ದ ದಿಣ್ಣೆಯ ಬಳಿ ನಿಯಂತ್ರಣ ಕಳೆದುಕೊಂಡು ಏಕಾಏಕಿ ವಾಹನ ಕೆಳಗೆ ಬಿದ್ದಿದೆ ಎನ್ನಲಾಗಿದೆ.
ದುರ್ಘಟನೆಯಲ್ಲಿ ಚಿದಾನಂದ ಮತ್ತು ನಾಗೇಂದ್ರ ಇಬ್ಬರಿಗೂ ತೀವ್ರ ಗಾಯಗಳಾಗಿದ್ದು, ಶಿವಮೊಗ್ಗ ಮೆಗ್ಗಾನ್ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿದ್ದ ಚಿದಾನಂದರವರು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಈ ಸಂಬಂಧ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಚಿದಾನಂದರವರ ಪತ್ನಿ ನಾಗೇಂದ್ರ ವಿರುದ್ಧ ದೂರು ದಾಖಲಿಸಿದ್ದಾರೆ.
