ವಿದ್ಯುತ್ ಪ್ರವಹಿಸುವ ಹೈವೋಲ್ಟೇಜ್ ಟವರ್ನಲ್ಲಿ ಜೋತು ಬಿದ್ದ ಮೃತ ದೇಹ
ಭದ್ರಾವತಿ ನಗರದ ಜೆಪಿಎಸ್ ಕಾಲೋನಿ ಮೆಸ್ಕಾಂ ವಿದ್ಯುತ್ ವಿತರಣಾ ಕೇಂದ್ರದ ಸಮೀಪ, ಬೈಪಾಸ್ ರಸ್ತೆಗೆ ಸಂಪರ್ಕಗೊಂಡಿರುವ ಕಾರ್ಮಿಕರ ಭವನಕ್ಕೆ ತೆರಳುವ ರಸ್ತೆಯಲ್ಲಿ ವ್ಯಕ್ತಿಯೊಬ್ಬರ ಮೃತದೇಹ ಹೈವೋಲ್ಟೇಜ್ ವಿದ್ಯುತ್ ಪ್ರವಹಿಸುವ ಟವರ್ನಲ್ಲಿ ಜೋತು ಬಿದ್ದಿರುವ ಘಟನೆ ನಡೆದಿದೆ.
ಭದ್ರಾವತಿ : ನಗರದ ಜೆಪಿಎಸ್ ಕಾಲೋನಿ ಮೆಸ್ಕಾಂ ವಿದ್ಯುತ್ ವಿತರಣಾ ಕೇಂದ್ರದ ಸಮೀಪ, ಬೈಪಾಸ್ ರಸ್ತೆಗೆ ಸಂಪರ್ಕಗೊಂಡಿರುವ ಕಾರ್ಮಿಕರ ಭವನಕ್ಕೆ ತೆರಳುವ ರಸ್ತೆಯಲ್ಲಿ ವ್ಯಕ್ತಿಯೊಬ್ಬರ ಮೃತದೇಹ ಹೈವೋಲ್ಟೇಜ್ ವಿದ್ಯುತ್ ಪ್ರವಹಿಸುವ ಟವರ್ನಲ್ಲಿ ಜೋತು ಬಿದ್ದಿರುವ ಘಟನೆ ನಡೆದಿದೆ.
ಟವರ್ ಮೇಲ್ಭಾಗದಲ್ಲಿ ವಿದ್ಯುತ್ ಪ್ರವಹಿಸುವ ತಂತಿಯ ಮಧ್ಯಭಾಗದಲ್ಲಿ ಮೃತ ದೇಹ ಕಂಡು ಬಂದಿದೆ. ವಿದ್ಯುತ್ ಸಂಪರ್ಕದಿಂದ ಮೃತದೇಹದ ಸ್ವಲ್ಪ ಭಾಗ ಸುಟ್ಟು ಕರಕಲಾಗಿದೆ. ಜೆಪಿಎಸ್ ಕಾಲೋನಿಯ ವಿದ್ಯುತ್ ವಿತರಣಾ ಕೇಂದ್ರಕ್ಕೆ ವಿದ್ಯುತ್ ಪೂರೈಸುವ ಮುಖ್ಯ ವಿದ್ಯುತ್ ವಾಹಕಗಳನ್ನು ಒಳಗೊಂಡಿರುವ ಟವರ್ ಇದಾಗಿದೆ. ಬೆಳಗಿನ ಜಾವದಿಂದ ಸುತ್ತಮುತ್ತಲಿನ ನಿವಾಸಿಗಳು ಸ್ಥಳದಲ್ಲಿ ಜಮಾಯಿಸಿದ್ದು, ಮಧ್ಯಾಹ್ನ ೧೨ ಗಂಟೆಯಾದರೂ ಸ್ಥಳ ಮಹಜರು ಕಾರ್ಯ ಆರಂಭಗೊಂಡಿರಲಿಲ್ಲ. ೧.೩೦ರ ಸಮಯದಲ್ಲಿ ಮೆಸ್ಕಾಂ ಹಾಗು ಅಗ್ನಿಶಾಮಕ ಸಿಬ್ಬಂದಿಗಳು ಮೃತದೇಹ ಕೆಳಗೆ ಇಳಿಸಿದ್ದು, ಸುಮಾರು ೨೫ ರಿಂದ ೩೦ ವರ್ಷ ವಯಸ್ಸಿನ ಯುವಕನ ಮೃತದೇಹವಾಗಿದೆ.
ಮೆಸ್ಕಾಂ ಹಾಗು ಕೆಪಿಟಿಸಿಎಲ್ ಅಧಿಕಾರಿಗಳು, ಪೇಪರ್ಟೌನ್ ಠಾಣೆ ಪೊಲೀಸರು ಹಾಗು ವಿಧಿ ವಿಜ್ಞಾನ ಪ್ರಯೋಗಾಲಯದ ತಂತ್ರಜ್ಞರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದರು. ಸಾರ್ವಜನಿಕ ಸರ್ಕಾರಿ ಆಸ್ಪತ್ರೆಗೆ ಮೃತದೇಹವನ್ನು ಶವ ಪರೀಕ್ಷೆಗೆ ಕೊಂಡೊಯ್ಯಲಾಯಿತು. ಮೃತದೇಹ ಯಾರೆಂಬುದು ಇನ್ನೂ ತಿಳಿದು ಬಂದಿಲ್ಲ.
ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ:
ಟವರ್ ಕೆಳಭಾಗದಲ್ಲಿ ಮೃತ ದೇಹ ಪತ್ತೆಯಾಗಿರದೆ ಮೇಲ್ಭಾಗದಲ್ಲಿ ಪತ್ತೆಯಾಗಿರುವ ಹಿನ್ನಲೆಯಲ್ಲಿ ಇದೊಂದು ಅತ್ಮಹತ್ಯೆಯಾಗಿರಬಹುದೆಂದು ಸ್ಥಳೀಯರು ಶಂಕೆ ವ್ಯಕ್ತಪಡಿಸಿದ್ದಾರೆ. ಇದೊಂದು ನಿರ್ಜನ ಪ್ರದೇಶವಾಗಿದ್ದು, ಘಟನೆ ಬಗ್ಗೆ ಸ್ಥಳೀಯರಿಗೆ ತಕ್ಷಣ ಮಾಹಿತಿ ತಿಳಿದು ಬಂದಿಲ್ಲ ಎನ್ನಲಾಗಿದೆ. ಈ ನಡುವೆ ಮೆಸ್ಕಾಂ ಅಧಿಕಾರಿಗಳು ಸಂಜೆಯಾದರೂ ಪೊಲೀಸರಿಗೆ ದೂರು ದಾಖಲಿಸಿಲ್ಲ.
