ವೀರಶೈವ ಲಿಂಗಾಯತ ಮಠಗಳು ಸಮಾಜದಲ್ಲಿ ಸೌಹಾರ್ದತೆ, ಮಾನವೀಯ ಮೌಲ್ಯಗಳನ್ನು ಬೆಳೆಸುವ ಶಕ್ತಿ ಕೇಂದ್ರಗಳು: ಸಿ.ಎಸ್. ಷಡಾಕ್ಷರಿ


ಭದ್ರಾವತಿ ತಾಲೂಕಿನ ಬಿಳಿಕಿ ಹಿರೇಮಠದಲ್ಲಿ ಶನಿವಾರ ಆಯೋಜಿಸಲಾಗಿದ್ದ ಲಿಂಗೈಕ್ಯ ಶ್ರೀ ರಾಚೋಟಿ ಶಿವಾಚಾರ್ಯ ಮಹಾಸ್ವಾಮಿಗಳವರ 59ನೇ ವರ್ಷದ ಪುಣ್ಯಸ್ಮರಣೋತ್ಸವ ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷರಾದ ಸಿ.ಎಸ್. ಷಡಾಕ್ಷರಿ ಪಾಲ್ಗೊಂಡು ಅವರು ಮಾತನಾಡಿದರು.

    ಭದ್ರಾವತಿ: ಒಂದು ಕಾಲದಲ್ಲಿ ಹಸಿದ ಹೊಟ್ಟೆಗೆ ಅನ್ನ, ಅಕ್ಷರ ಕಲಿಯಲು ಅವಕಾಶ, ಬದುಕಿನಲ್ಲಿ ಮುನ್ನಡೆಯಲು ಮಾರ್ಗದರ್ಶನವೂ ಇಲ್ಲದೆ ಸಂಕಷ್ಟ ಎದುರಿಸುತ್ತಿದ್ದ ಅಸಂಖ್ಯಾತ ಕುಟುಂಬಗಳಿಗೆ ವೀರಶೈವ ಲಿಂಗಾಯತ ಮಠಗಳು ಆಶ್ರಯ ನೀಡಿದವು ಎಂದು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷರಾದ ಸಿ.ಎಸ್. ಷಡಾಕ್ಷರಿ ಅವರು ಹೇಳಿದರು.

    ತಾಲೂಕಿನ ಬಿಳಿಕಿ ಹಿರೇಮಠದಲ್ಲಿ ಶನಿವಾರ ಆಯೋಜಿಸಲಾಗಿದ್ದ ಲಿಂಗೈಕ್ಯ ಶ್ರೀ ರಾಚೋಟಿ ಶಿವಾಚಾರ್ಯ ಮಹಾಸ್ವಾಮಿಗಳವರ 59ನೇ ವರ್ಷದ ಪುಣ್ಯಸ್ಮರಣೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

    ಅನ್ನದಾಸೋಹದ ಮೂಲಕ ಹಸಿವು ನೀಗಿಸಿದವು, ಜ್ಞಾನದಾಸೋಹದ ಮೂಲಕ ಅಜ್ಞಾನದ ಕತ್ತಲೆ ದೂರಮಾಡಿದವು, ಸಂಸ್ಕಾರ ಮತ್ತು ಧಾರ್ಮಿಕ ಚಿಂತನೆಯ ಮೂಲಕ ಬದುಕಿಗೆ ಹೊಸ ದಿಕ್ಕು ತೋರಿಸಿದವು. ಮಠಗಳ ನೆರಳಿನಲ್ಲಿ ಬೆಳೆದ ಸಾವಿರಾರು ವಿದ್ಯಾರ್ಥಿಗಳು ಇಂದು ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಉನ್ನತ ಸ್ಥಾನಕ್ಕೇರಿದ್ದಾರೆ. ಇಂತಹ ಮಠಪರಂಪರೆ ಕೇವಲ ಧಾರ್ಮಿಕ ಕೇಂದ್ರಗಳಲ್ಲ, ಅವು ಸಮಾಜವನ್ನು ಒಗ್ಗೂಡಿಸುವ, ಮಾನವೀಯತೆಯನ್ನು ಬೆಳೆಸುವ ಮತ್ತು ಸೌಹಾರ್ದತೆಯನ್ನು ಕಾಪಾಡುವ ಜೀವಂತ ಶಕ್ತಿ ಕೇಂದ್ರಗಳಾಗಿವೆ ಎಂದರು.

    ಮಹನೀಯರ ಜನ್ಮದಿನ ಅಥವಾ ಪುಣ್ಯಸ್ಮರಣೋತ್ಸವ ಆಚರಿಸುವುದರ ಹಿಂದೆ ಕೇವಲ ಒಂದು ಕಾರ್ಯಕ್ರಮ ನಡೆಸುವ ಉದ್ದೇಶವಿರುವುದಿಲ್ಲ. ಅವರು ಸಮಾಜಕ್ಕೆ ನೀಡಿದ ಕೊಡುಗೆ, ಸಾಧನೆ, ಆದರ್ಶ ಮತ್ತು ಜೀವನದ ಮೌಲ್ಯಗಳನ್ನು ಇಂದಿನ ಪೀಳಿಗೆಗೆ ಪರಿಚಯಿಸುವ ಮಹತ್ವದ ಆಶಯವಿರುತ್ತದೆ. ಹಿರಿಯರಿಗೆ ತಮ್ಮ ಕಾಲದ ಗುರುಗಳು, ಮಠಗಳು ಮತ್ತು ಧಾರ್ಮಿಕ ಪರಂಪರೆಯ ಇತಿಹಾಸ ತಿಳಿದಿರುತ್ತದೆ. ಆದರೆ ಇಂದಿನ ಯುವಜನತೆಗೆ ಈ ವಿಚಾರಗಳ ಅರಿವು ಕಡಿಮೆಯಾಗುತ್ತಿದೆ. ಹೀಗಾಗಿ ಇಂತಹ ಧಾರ್ಮಿಕ ಚಿಂತನ ಕಾರ್ಯಕ್ರಮಗಳು ಗುರುಪರಂಪರೆ, ಮಠಗಳ ಇತಿಹಾಸ, ಧರ್ಮದ ಆಶಯ ಮತ್ತು ಸಮಾಜದ ಬೆಳವಣಿಗೆಯಲ್ಲಿ ಮಹಾಸ್ವಾಮಿಗಳು ವಹಿಸಿದ ಪಾತ್ರವನ್ನು ತಿಳಿಸುವ ವೇದಿಕೆಗಳಾಗಬೇಕು ಎಂದರು.


    ಇಂದು ಮಕ್ಕಳು ಮನೆಯಲ್ಲಿಯೇ ಕುಳಿತು ಮೊಬೈಲ್, ರೀಲ್ಸ್ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಸಮಯ ಕಳೆಯುತ್ತಿದ್ದಾರೆ. ಯೂಟ್ಯೂಬ್‌ನಲ್ಲಿ ಕಾರ್ಯಕ್ರಮ ವೀಕ್ಷಿಸುವುದಕ್ಕಿಂತ ನೇರವಾಗಿ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡು ವಿಚಾರಗಳನ್ನು ಆಲಿಸುವ, ಚರ್ಚಿಸುವ ಮತ್ತು ಸಮಾಜದೊಂದಿಗೆ ಬೆರೆಯುವ ಅಭ್ಯಾಸ ಬೆಳೆಸಿಕೊಳ್ಳಬೇಕು. ಸಮಾಜದ ಜವಾಬ್ದಾರಿ ಕೇವಲ ಹಿರಿಯರು, ಮಠಾಧೀಶರು ಅಥವಾ ರಾಜಕಾರಣಿಗಳ ಮೇಲಿದೆ ಎಂದು ಭಾವಿಸಬಾರದು. ಯುವಕರು ಮತ್ತು ಮಹಿಳೆಯರೂ ಸೇರಿದಂತೆ ಪ್ರತಿಯೊಬ್ಬರೂ ಸಮಾಜ ನಿರ್ಮಾಣದ ಪ್ರಕ್ರಿಯೆಯಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಬೇಕೆಂದು ಕರೆ ನೀಡಿದರು.

    ಬಿಳಿಕಿ ಹಿರೇಮಠದ ಶ್ರೀ ರಾಚೋಟೇಶ್ವರ ಶಿವಾಚಾರ್ಯ ಸ್ವಾಮಿಗಳು ಕಾರ್ಯಕ್ರಮದ ದಿವ್ಯ ಸಾನ್ನಿಧ್ಯ ವಹಿಸಿದ್ದರು. ರಟ್ಟಿಹಳ್ಳಿಯ ಕಬ್ಬಿಣಕಂತಿಮಠದ ಶ್ರೀ ಶಿವಲಿಂಗ ಶಿವಾಚಾರ್ಯ ಸ್ವಾಮಿಗಳು, ದಿಂಡದಹಳ್ಳಿ ಕ್ಷೇತ್ರದ ಹಿರೇಮಠದ ಶ್ರೀ ಪಶುಪತಿ ಶಿವಾನಂದ ಶಿವಾಚಾರ್ಯ ಸ್ವಾಮಿಗಳು, ತಾವರೆಕೆರೆಯ ಶಿಲಾಮಠದ ಶ್ರೀ ಡಾ. ಅಭಿನವ ಸಿದ್ದಲಿಂಗ ಶಿವಾಚಾರ್ಯ ಸ್ವಾಮಿಗಳು, ದೊಡ್ಡಮೇಟಿಕುರ್ಕೆಯ ವಿರಕ್ತಮಠದ ಶ್ರೀ ಶಶಿಶೇಖರ ಸಿದ್ಧಬಸವ ಸ್ವಾಮಿಗಳು, ಮಡಿವಾಳೇಶ್ವರ ಮಠದ ಶ್ರೀ ಶಿವಪಂಚಾಕ್ಷರಿ ಸ್ವಾಮಿಗಳು ಹಾಗೂ ಬಿಳಿಕಿ ಹಿರೇಮಠದ ಶ್ರೀ ಗುರುಪ್ರಸಾದ್ ದೇವರು ಉಪಸ್ಥಿತರಿದ್ದರು.

    ಕಾರ್ಯಕ್ರಮದಲ್ಲಿ ಮಾಜಿ ಉಪಮುಖ್ಯಮಂತ್ರಿ ಕೆ.ಎಸ್ ಈಶ್ವರಪ್ಪ, ಬಿ.ಎಸ್ ಬಸವೇಶ್, ವೀರಶೈವ ಸೇವಾ ಸಮಿತಿಯ ಅಧ್ಯಕ್ಷ ಆರ್. ಮಹೇಶ್ ಕುಮಾರ್, ಶ್ರೀ ಬಸವೇಶ್ವರ ವೀರಶೈವ ಲಿಂಗಾಯತ ಸಮಾಜದ ಅಧ್ಯಕ್ಷ ಎಸ್.ಎಸ್ ಜ್ಯೋತಿಪ್ರಕಾಶ್, ಶಿವಮೊಗ್ಗ ಜಂಗಮ ಸಮಾಜದ ಅಧ್ಯಕ್ಷ ಪಿ.ಇ ಶಿವಕುಮಾರ್, ಸಾಗರದ ನಿವೃತ್ತ ಪ್ರಾಂಶುಪಾಲ ವೇ. ಪಂಚಾಕ್ಷರಯ್ಯ ಹಿರೇಮಠ, ಶ್ರೀ ಬಸವೇಶ್ವರ ವೀರಶೈವ ಲಿಂಗಾಯತ ಸಮಾಜದ ಸದಸ್ಯರಾದ ರೇಣುಕಾರಾಧ್ಯ, ವೀರಶೈವ ಲಿಂಗಾಯತ ಸಂಘಟನೆಯ ಜಿಲ್ಲಾ ಘಟಕದ ಅಧ್ಯಕ್ಷ ಪ್ರದೀಪ್ ಎಲಿ ಸೇರಿದಂತೆ ಶ್ರೀ ಮಠದ ಭಕ್ತರು, ಸಮಾಜದ ಮುಖಂಡರು ಹಾಗೂ ಗಣ್ಯರು ಪಾಲ್ಗೊಂಡಿದ್ದರು.