ಆಟೋ ಚಾಲಕನ ಕನ್ನಡಾಭಿಮಾನಕ್ಕೆ ಎಲ್ಲೆಡೆ ಮೆಚ್ಚುಗೆ
ನೆಲ, ಜಲ, ಭಾಷೆಗಾಗಿ ಎಲ್ಲರೂ ಒಂದೇ ಎಂಬ ಸಂದೇಶ ಸಾರಿದ ಆಟೋ ಚಾಲಕರು
ಭದ್ರಾವತಿ ಜನ್ನಾಪುರ ನಿವಾಸಿ, ಆಟೋ ಶಂಕರ್ ಎಂದೇ ಗುರುತಿಸಿಕೊಂಡಿರುವ, ಆಟೋ ನಂಬಿ ಬದುಕು ಸಾಗಿಸುತ್ತಿರುವ ಚಾಲಕ ಶಂಕರಮೂರ್ತಿ ಪ್ರತಿ ವರ್ಷ ಕನ್ನಡ ರಾಜ್ಯೋತ್ಸವದಂದು ತಮ್ಮ ಆಟೋಗೆ ಸಾವಿರಾರು ರು. ವೆಚ್ಚ ಮಾಡಿ ವಿಶಿಷ್ಟ ಅಲಂಕಾರ ಕೈಗೊಳ್ಳುತ್ತಿದ್ದಾರೆ. ಇವರ ಕನ್ನಡಾಭಿಮಾನಕ್ಕೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗುತ್ತಿದೆ.
ಭದ್ರಾವತಿ : ಆಟೋ ಚಾಲಕರೊಬ್ಬರು ಈ ಬಾರಿ ಸಹ ತಮ್ಮ ಆಟೋಗೆ ಕನ್ನಡ ರಾಜ್ಯೋತ್ಸವದ ಅಂಗವಾಗಿ ವಿಶಿಷ್ಟವಾಗಿ ಅಲಂಕಾರ ಮಾಡುವ ಮೂಲಕ ಕನ್ನಡಾಭಿಮಾನ ಪ್ರದರ್ಶಿಸಿದ್ದಾರೆ.
ಜನ್ನಾಪುರ ನಿವಾಸಿ, ಆಟೋ ಶಂಕರ್ ಎಂದೇ ಗುರುತಿಸಿಕೊಂಡಿರುವ, ಆಟೋ ನಂಬಿ ಬದುಕು ಸಾಗಿಸುತ್ತಿರುವ ಚಾಲಕ ಶಂಕರಮೂರ್ತಿ ಪ್ರತಿ ವರ್ಷ ಕನ್ನಡ ರಾಜ್ಯೋತ್ಸವದಂದು ತಮ್ಮ ಆಟೋಗೆ ಸಾವಿರಾರು ರು. ವೆಚ್ಚ ಮಾಡಿ ವಿಶಿಷ್ಟ ಅಲಂಕಾರ ಕೈಗೊಳ್ಳುತ್ತಿದ್ದಾರೆ. ಆ ಮೂಲಕ ತಮ್ಮದೇ ಆದ ಕನ್ನಡಾಭಿಮಾನವನ್ನು ಪ್ರದರ್ಶಿಸುತ್ತಾ ಗಮನ ಸೆಳೆಯುತ್ತಿದ್ದಾರೆ.
ಕಳೆದ ಬಾರಿ ಕರ್ನಾಟಕ ರತ್ನ, ಚಲನಚಿತ್ರ ನಟ, ಸಮಾಜ ಸೇವಕ, ಪವರ್ ಸ್ಟಾರ್ ಪುನೀತ್ ರಾಜಕುಮಾರ್ರವರ ಪ್ರತಿಮೆಯನ್ನು ಆಟೋ ಮೇಲ್ಭಾಗದಲ್ಲಿರಿಸಿ, ಅದರ ಹಿಂಬದಿಯಲ್ಲಿ ಕರ್ನಾಟಕ ಭೂಪಟ ಇರಿಸುವ ಜೊತೆಗೆ ಬಣ್ಣ ಬಣ್ಣದ ಹೂವುಗಳಿಂದ, ಕೆಂಪು ಮತ್ತು ಹಳದಿ ನಾಡದ್ವಜದಿಂದ ಅಲಂಕರಿಸಲಾಗಿತ್ತು. ಈ ಬಾರಿ ದಾದಾ ಸಾಹೇಬ್ ಪಾಲ್ಕೆ ಪ್ರಶಸ್ತಿ ಪುರಸ್ಕೃತ, ಕರ್ನಾಟಕರತ್ನ ಡಾ. ರಾಜಕುಮಾರ್ರವರ ಮಯೂರ ಚಲನಚಿತ್ರದ ಭಾವಚಿತ್ರವನ್ನು ಕರ್ನಾಟಕ ಭೂಪಟದ ಮಧ್ಯದಲ್ಲಿ ವೃತ್ತಾಕಾರದೊಳಗಿರಿಸಿ ನಂತರ ಅದರ ಕೆಳಗಡೆ ಪುನಃ ದೊಡ್ಡದಾಗಿ ಕರ್ನಾಟಕ ಭೂಪಟ ಇರಿಸಲಾಗಿದೆ. ಅಲ್ಲದೆ ಆಟೋ ಮುಂಭಾಗದಲ್ಲಿ ಬೃಹತ್ ಗಾತ್ರದ ಕೆಂಪು ಮತ್ತು ಹಳದಿ ಬಣ್ಣದ ಮಾಲೆಯನ್ನು ಹಾಕಲಾಗಿದೆ. ಆಟೋ ತುಂಬಾ ಆಕರ್ಷಕವಾಗಿ ಕಂಗೊಳಿಸುತ್ತಿದ್ದು, ಸ್ನೇಹಿತರು, ಬಂಧು-ಬಳಗದವರು, ಪ್ರಯಾಣಿಕರು, ರಸ್ತೆಯಲ್ಲಿ ಸಂಚರಿಸುವವರು ಆಟೋ ಮುಂಭಾಗ ನಿಂತುಕೊಂಡು ತಮ್ಮ ಮೊಬೈಲ್ಗಳಲ್ಲಿ ಪೋಟೋ ಕ್ಲಿಕ್ಕಿಸಿಕೊಂಡು ಹೋಗುತ್ತಿದ್ದಾರೆ.
ಈ ಬಾರಿ ವಿಶೇಷ ಎಂದರೆ ಶಂಕರ್ ಅವರ ಈ ಕಾರ್ಯಕ್ಕೆ ಮೆಚ್ಚುಗೆ ಸೂಚಿಸಿ ಇವರೊಂದಿಗಿನ ಆಟೋ ಚಾಲಕರು ನಗರಾದ್ಯಂತ ತಮ್ಮ ತಮ್ಮ ಆಟೋಗಳಿಗೆ ಕನ್ನಡದ ಧ್ವಜ ಕಟ್ಟಿಕೊಂಡು ಜಾಥಾ ನಡೆಸಿ ಗಮನ ಸೆಳೆದರು. ಕನ್ನಡಿಗರು, ಕನ್ನಡಾಭಿಮಾನ, ನೆಲ, ಜಲ, ಭಾಷೆಗಾಗಿ ಎಲ್ಲರೂ ಒಂದೇ ಎಂಬ ಸಂದೇಶ ಸಾರಿದರು.
ಜನ್ನಾಪುರ ಹಾಗು ಸುತ್ತಮುತ್ತಲಿನ ವ್ಯಾಪ್ತಿಯಲ್ಲಿ ದಿನವಿಡೀ ಶಂಕರ್ ಅವರ ಆಟೋ ಸಂಚಾರ ಬಹುತೇಕ ಜನರಲ್ಲಿ ತಮ್ಮಲ್ಲಿನ ಕನ್ನಡದ ಅಸ್ಮಿತೆಯನ್ನು ಪ್ರಶ್ನಿಸಿಕೊಳ್ಳುವಂತೆ ಮಾಡಿದೆ. ಸಾಮಾನ್ಯ ಆಟೋ ಚಾಲಕನ ಕನ್ನಡಾಭಿಮಾನಕ್ಕೆ ಒಂದು ನಮನವಿರಲಿ.
ಶಂಕರ್ ಅವರ ಕಾರ್ಯಕ್ಕೆ ಮೆಚ್ಚುಗೆ ಸೂಚಿಸಿ ಇವರೊಂದಿಗಿನ ಆಟೋ ಚಾಲಕರು ನಗರಾದ್ಯಂತ ತಮ್ಮ ತಮ್ಮ ಆಟೋಗಳಿಗೆ ಕನ್ನಡದ ಧ್ವಜ ಕಟ್ಟಿಕೊಂಡು ಜಾಥಾ ನಡೆಸಿ ಗಮನ ಸೆಳೆದರು. ಕನ್ನಡಿಗರು, ಕನ್ನಡಾಭಿಮಾನ, ನೆಲ, ಜಲ, ಭಾಷೆಗಾಗಿ ಎಲ್ಲರೂ ಒಂದೇ ಎಂಬ ಸಂದೇಶ ಸಾರಿದರು.

.jpeg)