ನಾಯಕತ್ವ ಎಂಬುದು ಕೇವಲ ಅಧಿಕಾರ ಅನುಭವಿಸುವುದಲ್ಲ, ಬದಲಾವಣೆ, ನೆಮ್ಮದಿಯನ್ನುಂಟು ಮಾಡುವುದು : ಪ್ರಕಾಶ್ ರಾಥೋಡ್
ಲಯನ್ಸ್ ಕ್ಲಬ್ ಅಧ್ಯಕ್ಷರಾಗಿ ಡಿ. ಶಂಕರಮೂರ್ತಿ, ಕಾರ್ಯದರ್ಶಿಯಾಗಿ ವಿನೋದ್ ಗಿರಿ ಪದಗ್ರಹಣ ಭದ್ರಾವತಿ ಲಯನ್ಸ್ ಕ್ಲಬ್ ೨೦೨೬-೨೭ನೇ ಸಾಲಿನ ನೂತನ ಅಧ್ಯಕ್ಷರಾಗಿ ಡಿ. ಶಂಕರಮೂರ್ತಿ ಪದಗ್ರಹಣ ಸ್ವೀಕರಿಸಿದರು. ಭದ್ರಾವತಿ : ಯಾವುದೇ ಸಂಘ-ಸಂಸ್ಥೆಗಳಲ್ಲಿ ಪದವಿ, ನಾಯಕತ್ವ ಎಂಬುದು ಕೇವಲ ಅಧಿಕಾರ ಅನುಭವಿಸುವುದಲ್ಲ. ತಮ್ಮ ಅವಧಿಯಲ್ಲಿ ಜನರ ಬದುಕಿನಲ್ಲಿ ಬದಲಾವಣೆ ತರುವುದು, ನೆಮ್ಮದಿಯನ್ನುಂಟು ಮಾಡುವುದು. ತಮ್ಮ ಕೈಲಾದ ಸೇವೆ ಮಾಡುವುದಾಗಿದೆ ಎಂದು ಪೊಲೀಸ್ ಉಪಾಧೀಕ್ಷಕ ಪ್ರಕಾಶ್ ರಾಥೋಡ್ ಹೇಳಿದರು. ಅವರು ನಗರದ ನ್ಯೂಟೌನ್ ಲಯನ್ಸ್ ಕ್ಲಬ್ ಭವನದಲ್ಲಿ ೨೦೨೬-೨೭ನೇ ಸಾಲಿನ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದರು. ಲಯನ್ಸ್ ಕ್ಲಬ್ ವಿಶ್ವದಾದ್ಯಂತ ಮಾನವೀಯ ಸೇವೆಗೆ ಮುಂದಾಗಿ ಸಮಾಜದ ವಿವಿಧ ಸೇವಾ ಚಟುವಟಿಕೆಗಳ ಮೂಲಕ ಜನರಲ್ಲಿ ನೆಮ್ಮದಿಯ ಆಶಾಕಿರಣ ಮೂಡಿಸುತ್ತಿರುವುದು ಸಂತಸದ ಸಂಗತಿಯಾಗಿದೆ. ಸೇವೆ ಮಾಡಲು ಅಧಿಕಾರ, ಸಮಯ ಅಥವಾ ಯಾರನ್ನೂ ಎದುರು ನೋಡುವುದಲ್ಲ. ಸದಾ ನಮ್ಮ ಕೈಲಾದಷ್ಟು ಸೇವೆಯಲ್ಲಿ ತೊಡಗಿಸಿಕೊಳ್ಳಬೇಕು. ಅಧಿಕಾರ ಎಂಬುದು ನಿಂತ ನೀರಲ್ಲ. ಸೇವೆ ಮಾಡಲು ಹೆಚ್ಚಿನ ಅವಕಾಶ ಲಭಿಸಿದಾಗ ಅದನ್ನು ಸದ್ಬಳಕೆ ಮಾಡಿಕೊಳ್ಳಬೇಕು. ನಾವು ಮಾಡಿರುವ ಸೇವೆಗಳು ನಮ್ಮ ಜೀವನದಲ್ಲಿ ಕೊನೆಯವರೆಗೂ ಉಳಿಯಲಿವೆ ಎಂದರು. ...