Wednesday, December 22, 2021

ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಅಧ್ಯಕ್ಷರಾಗಿ ಹೊಳೆಹೊನ್ನೂರಿನ ಸತೀಶ್ ಅವಿರೋಧ ಆಯ್ಕೆ

ಭದ್ರಾವತಿ, ಡಿ. ೨೩ : ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಅಧ್ಯಕ್ಷರಾಗಿ ಹೊಳೆಹೊನ್ನೂರಿನ ಸತೀಶ್ ಗುರುವಾರ ನಡೆದ ಚುನಾವಣೆಯಲ್ಲಿ ಅವಿರೋಧವಾಗಿ ಆಯ್ಕೆಯಾದರು.    ಒಟ್ಟು ೧೭ ಸ್ಥಾನಗಳನ್ನು ಹೊಂದಿರುವ ಸಮಿತಿಯಲ್ಲಿ ಹೊಂದಾಣಿಕೆ ಯಂತೆ ಹಿಂದೆ ಲವೇಶ್ ಗೌಡ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು. ಇದೀಗ ನೂತನ ಅಧ್ಯಕ್ಷರಾಗಿ ಸತೀಶ್ ಅವರು ಅವಿರೋಧವಾಗಿ ಆಯ್ಕೆಯಾಗಿದ್ದು, ಚುನಾವಣಾಧಿಕಾರಿಯಾಗಿ ತಾಲೂಕು ದಂಡಾಧಿಕಾರಿ ತಹಸಿಲ್ದಾರ್ ಆರ್. ಪ್ರದೀಪ್ ಕರ್ತವ್ಯ ನಿರ್ವಹಿಸಿದರು.  ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಜಿಲ್ಲಾ ಉಪನಿರ್ದೇಶಕ ಜಯಕುಮಾರ್, ಕಾರ್ಯದರ್ಶಿ ಸತೀಶ್ ಉಪಸ್ಥಿತರಿದ್ದರು.  ಸದಸ್ಯರಾದ ಕುಬೇಂದ್ರಪ್ಪ, ಎಂ.ಎಸ್ ಚಂದ್ರಶೇಖರ್, ಎಂ.ಎಸ್ ಬಸವರಾಜಪ್ಪ, ಟಿ.ಎಂ ರತ್ನಮ್ಮ, ಟಿ.ವಿ ಸುಜಾತ, ಲವೇಶ್‌ಗೌಡ, ರಾಜಾನಾಯ್ಕ, ಜಯರಾಂ, ಖಾಸಿಂ ಸಾಬ್, ಲಕ್ಷ್ಮಣಪ್ಪ ಮತ್ತು ಡಾ. ಎಚ್. ನಾಗೇಶ್ ಸೇರಿದಂತೆ ಒಟ್ಟು ೧೨ ಮಂದಿ ಚುನಾವಣೆ ಪ್ರಕ್ರಿಯೆಯಲ್ಲಿ ಪಾಲ್ಗೊಂಡಿದ್ದರು.  ಅಧ್ಯಕ್ಷ ಸ್ಥಾನಕ್ಕೆ ಕೇವಲ ಒಂದೇ ಒಂದು ನಾಮಪತ್ರ ಸಲ್ಲಿಕ್ಕೆಯಾದ ಹಿನ್ನೆಲೆಯಲ್ಲಿ  ಅವಿರೋಧ ಆಯ್ಕೆ ಘೋಷಿಸಲಾಯಿತು. ನೂತನ ಅಧ್ಯಕ್ಷರನ್ನು ಜೆಡಿಎಸ್ ಮುಖಂಡರಾದ ಶಾರದ ಅಪ್ಪಾಜಿ, ಜೆಡಿಎಸ್ ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಗೀತಾ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಎಸ್ ಕುಮಾರ್, ತಾಲೂಕು ಕ್ಷತ್ರಿಯ ಮರಾಠ ಸಮಾಜದ ಅಧ್ಯಕ್ಷ ಯಶವಂತರಾವ್ ಘೋರ್ಪಡೆ ಸೇರಿದಂತೆ ಇನ್ನಿತರರು ಅಭಿನಂದಿಸಿದರು.

ಕಾರ್ಯಾಧ್ಯಕ್ಷರಾಗಿ ಡಾ. ಸಿ. ರಾಮಚಾರಿ ನೇಮಕ

ಡಾ. ಸಿ. ರಾಮಚಾರಿ
    ಭದ್ರಾವತಿ, ಡಿ. ೨೨: ಅಖಿಲ ಭಾರತ ವಿಶ್ವಕರ್ಮ ಪರಿಷತ್ತಿನ ರಾಷ್ಟ್ರೀಯ ಅಧ್ಯಕ್ಷ ಎಚ್.ವಿ ಸತೀಶ್‌ಕುಮಾರ್‌ರವರು ತಾಲೂಕಿನ ಬಾರಂದೂರು ನಿವಾಸಿ ಡಾ. ಸಿ. ರಾಮಚಾರಿ ಅವರನ್ನು ರಾಜ್ಯ ಘಟಕದ ಕಾರ್ಯಾಧ್ಯಕ್ಷರನ್ನಾಗಿ ನೇಮಕಗೊಳಿಸಿ ಆದೇಶ ಹೊರಡಿಸಿದ್ದಾರೆ.
    ನೂತನ ಕಾರ್ಯಾಧ್ಯಕ್ಷರಾಗಿ ನೇಮಕಗೊಂಡಿರುವ ಡಾ. ಸಿ. ರಾಮಚಾರಿಯವರಿಗೆ ತುಮಕೂರು, ಹಾಸನ, ಚಿಕ್ಕಮಗಳೂರು, ಮೈಸೂರು ಮತ್ತು ಶಿವಮೊಗ್ಗ ಸೇರಿದಂತೆ ಒಟ್ಟು ೫ ಜಿಲ್ಲೆಗಳ ಉಸ್ತುವಾರಿಗಳಾಗಿ ಕಾರ್ಯನಿರ್ವಹಿಸುವಂತೆ ಪರಿಷತ್ತಿನ ರಾಜ್ಯಾಧ್ಯಕ್ಷ ಆರ್. ಪ್ರಸನ್ನಕುಮಾರ್ ಸೂಚಿಸಿದ್ದಾರೆ.
    ಸಿ. ರಾಮಚಾರಿಯವರು ಹಲವಾರು ವರ್ಷಗಳಿಂದ ವಿಶ್ವಕರ್ಮ ಸಮುದಾಯ ಸಂಘಟಿಸುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಿದ್ದು, ಇದೀಗ ಕಾರ್ಯಾಧ್ಯಕ್ಷರಾಗಿ ನೇಮಕಗೊಂಡಿರುವುದು ಸಮುದಾಯವನ್ನು ಮತ್ತಷ್ಟು ಸಂಘಟಿಸಲು ಸಹಕಾರಿಯಾಗಿದೆ.

ಡಿ.೨೪ರಂದು ಸರ್ವಸದಸ್ಯರ ವಾರ್ಷಿಕ ಮಹಾಸಭೆ

ಭದ್ರಾವತಿ, ಡಿ. ೨೨: ರಾಜ್ಯ ಸರ್ಕಾರಿ ಸ್ವಾಮ್ಯದ ನಗರದ ಮೈಸೂರು ಕಾಗದ ಕಾರ್ಖಾನೆಯ ಕಾರ್ಮಿಕರು ತಮ್ಮ ಮುಂದಿನ ಭವಿಷ್ಯಕ್ಕಾಗಿ ರೂಪಿಸಿಕೊಂಡಿರುವ ಮೈಸೂರು ಕಾಗದ ಕಾರ್ಖಾನೆ ನೌಕರರ ಗೃಹ ನಿರ್ಮಾಣ ಸಹಕಾರ ಸಂಘಕ್ಕೆ ಇದೀಗ ಹಲವು ಸಮಸ್ಯೆಗಳು ಎದುರಾಗಿದ್ದು,  ಸಂಘ ತನ್ನ ಅಸ್ತಿತ್ವ ಉಳಿಸಿಕೊಳ್ಳಲು ಹೆಣಗಾಡುತ್ತಿದೆ. ಈ ನಡುವೆ ಡಿ.೨೪ರಂದು ಬೆಳಿಗ್ಗೆ ೧೦ ಗಂಟೆಗೆ ಕಾಗದನಗರದ ಸೀತಾರಾಮ ಸಮುದಾಯ ಭವನದಲ್ಲಿ ೩೨ನೇ ಸರ್ವಸದಸ್ಯರ ವಾರ್ಷಿಕ ಮಹಾಸಭೆ ಹಮ್ಮಿಕೊಂಡಿದೆ.
    ಸರ್ಕಾರ ಪ್ರಸ್ತುತ ಖಾಲಿ ನಿವೇಶನಗಳಿಗೆ ಸುಮಾರು ೬ ರಿಂದ ೭ ಪಟ್ಟು ಕಂದಾಯ ಹೆಚ್ಚಳ ಮಾಡಿದೆ. ಅಲ್ಲದೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಹಾಗು ನಗರಸಭೆ ಆಡಳಿತ ಅಭಿವೃದ್ಧಿ ಕಾರ್ಯಗಳಿಗೆ ಪೂರಕವಾಗಿ ಸ್ಪಂದಿಸುತ್ತಿಲ್ಲ. ಸಂಘಕ್ಕೆ ಪ್ರಸ್ತುತ ಹೋರಾಟ ನಡೆಸುವುದು ಅನಿವಾರ್ಯವಾಗಿದೆ. ಈ ಎಲ್ಲಾ ಬೆಳವಣಿಗೆಗಳ ಕುರಿತು ಸಭೆಯಲ್ಲಿ ಚರ್ಚಿಸಿ ಸೂಕ್ತ ತೀರ್ಮಾನ ಕೈಗೊಳ್ಳಬೇಕಾಗಿದೆ. ಈ ಹಿನ್ನಲೆಯಲ್ಲಿ ಸದಸ್ಯರು ತಪ್ಪದೇ ಭಾಗವಹಿಸುವಂತೆ ಸಂಘದ ಅಧ್ಯಕ್ಷ ಟಿ.ಜಿ ಬಸವರಾಜಯ್ಯ ಕೋರಿದ್ದಾರೆ.

ಎಂ.ಇ.ಎಸ್ ಸಂಘಟನೆ ನಿಷೇಧಿಸಿ : ಬಂಧಿತ ೨೭ ಮಂದಿ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಿ

ಜಯಕರ್ನಾಟಕ ಸಂಘಟನೆ ವತಿಯಿಂದ ತಹಸೀಲ್ದಾರ್‌ಗೆ ಮನವಿ


ಬೆಳಗಾವಿಯಲ್ಲಿ ಎಂ.ಇ.ಎಸ್ ಪುಂಡರ ಹಾವಳಿ ಮಿತಿ ಮೀರಿದ್ದು, ಸ್ವಾತಂತ್ರ್ಯ ಹೋರಾಟಗಾರ, ದೇಶಭಕ್ತ ಸಂಗೊಳ್ಳಿ ರಾಯಣ್ಣನವರ ಪ್ರತಿಮೆಯನ್ನು ಉರುಳಿಸಿ ಧ್ವಂಸಗೊಳಿಸಿರುವ ಪ್ರಕರಣದಲ್ಲಿ ಬಂಧಿತರಾಗಿರುವ ೨೭ ಮಂದಿ ಎಂ.ಇ.ಎಸ್ ಪುಂಡರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಬೇಕು ಹಾಗು ಈ ಸಂಘಟನೆಯನ್ನು ರಾಜ್ಯದಲ್ಲಿ ನಿಷೇಧಿಸಬೇಕೆಂದು ಆಗ್ರಹಿಸಿ ಬುಧವಾರ ಭದ್ರಾವತಿಯಲ್ಲಿ ಜಯಕರ್ನಾಟಕ ಸಂಘಟನೆ ವತಿಯಿಂದ ಪ್ರತಿಭಟನೆ ನಡೆಸಲಾಯಿತು.
    ಭದ್ರಾವತಿ, ಡಿ. ೨೨: ಬೆಳಗಾವಿಯಲ್ಲಿ ಎಂ.ಇ.ಎಸ್ ಪುಂಡರ ಹಾವಳಿ ಮಿತಿ ಮೀರಿದ್ದು, ಸ್ವಾತಂತ್ರ್ಯ ಹೋರಾಟಗಾರ, ದೇಶಭಕ್ತ ಸಂಗೊಳ್ಳಿ ರಾಯಣ್ಣನವರ ಪ್ರತಿಮೆಯನ್ನು ಉರುಳಿಸಿ ಧ್ವಂಸಗೊಳಿಸಿರುವ ಪ್ರಕರಣದಲ್ಲಿ ಬಂಧಿತರಾಗಿರುವ ೨೭ ಮಂದಿ ಎಂ.ಇ.ಎಸ್ ಪುಂಡರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಬೇಕು ಹಾಗು ಈ ಸಂಘಟನೆಯನ್ನು ರಾಜ್ಯದಲ್ಲಿ ನಿಷೇಧಿಸಬೇಕೆಂದು ಆಗ್ರಹಿಸಿ ಬುಧವಾರ ಜಯ ಕರ್ನಾಟಕ ಸಂಘಟನೆ ವತಿಯಿಂದ ತಹಸೀಲ್ದಾರ್‌ಗೆ ಮನವಿ ಸಲ್ಲಿಸಲಾಯಿತು.
    ಬಿ.ಎಚ್ ರಸ್ತೆ ಅಂಡರ್‌ಬ್ರಿಡ್ಜ್ ಬಳಿ ಡಾ. ಬಾಬಾಸಾಹೇಬ್ ಅಂಬೇಡ್ಕರ್‌ರವರ ಪ್ರತಿಮೆಗೆ ಯುವ ಮುಖಂಡ ಬಿ.ಎಸ್ ಗಣೇಶ್ ಹಾಗು ಸಂಘಟನೆ ಜಿಲ್ಲಾಧ್ಯಕ್ಷ ಡಾ. ಜೆ.ಆರ್ ದೀಪಕ್ ಮತ್ತು ತಾಲೂಕು ಅಧ್ಯಕ್ಷ ಆರ್. ಅರುಣ್ ನೇತೃತ್ವದಲ್ಲಿ ಮಾಲಾರ್ಪಣೆ ಮಾಡಿದ ಕಾರ್ಯಕರ್ತರು ಎಂ.ಇ.ಎಸ್ ಪುಂಡರ ಪುಂಡರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ನೆಲ, ಜಲ, ಭಾಷೆಗಾಗಿ ಕನ್ನಡಿಗರು ಯಾವುದೇ ರೀತಿಯ ಹೋರಾಟಕ್ಕೂ ಸಿದ್ದರಿದ್ದು, ರಾಜ್ಯದಲ್ಲಿ ಎಂ.ಇ.ಎಸ್ ಪುಂಡರು ಪೊಲೀಸ್ ವಾಹನಗಳಿಗೆ ಬೆಂಕಿ ಇಡುವ ಜೊತೆಗೆ ಸರ್ಕಾರ ವಾಹನಗಳ ಮೇಲೆ ಮನಸೋ ಇಚ್ಛೆ ಕಲ್ಲು ತೂರಾಟ ನಡೆಸಿ ದೇಶಭಕ್ತ ಸಂಗೊಳ್ಳಿ ರಾಯಣ್ಣನವರ ಪ್ರತಿಮೆಯನ್ನು ಧ್ವಂಸಗೊಳಿಸಿರುವುದು ಕನ್ನಡಿಗರಿಗೆ ಹಾಗು ಸ್ವಾತಂತ್ರ್ಯ ಹೋರಾಟಗಾರರಿಗೆ ಮಾಡಿರುವ ಅಪಮಾನವಾಗಿದೆ. ಈ ಹಿನ್ನಲೆ ಸರ್ಕಾರ ತಕ್ಷಣ ಎಂ.ಇ.ಎಸ್ ಪುಂಡರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.
    ನಂತರ ತಾಲೂಕು ಕಛೇರಿ ಮಿನಿವಿಧಾನಸೌಧದವರೆಗೂ ಬೈಕ್ ರ್‍ಯಾಲಿ ನಡೆಸಿ ತಹಸೀಲ್ದಾರ್‌ಗೆ ಮನವಿ ಸಲ್ಲಿಸಿದರು. ಜಿಲ್ಲಾ ಕಾರ್ಯಾಧ್ಯಕ್ಷ ಅಬ್ದುಲ್ ರಹೀಮ್, ತಾಲೂಕು ಗೌರವಾಧ್ಯಕ್ಷ ಪಿ. ಶರವಣ, ತಾಲೂಕು ಉಸ್ತುವಾರಿ ದಿವ್ಯರಾಜ್, ಶಂಕರಘಟ್ಟ ಘಟಕದ ಅಧ್ಯಕ್ಷ ಡಿ.ಟಿ ಶಶಿಕುಮಾರ್, ಮಹಿಳಾ ಘಟಕದ ಅಧ್ಯಕ್ಷೆ ಆರ್. ವರಲಕ್ಷ್ಮಿ, ಆಟೋ ಶಂಕರ್ ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.

ವಿಐಎಸ್‌ಎಲ್ ಕ್ರೀಡಾಂಗಣದಲ್ಲಿ ಡಿ.೨೪ರಿಂದ ಅಂಧರ ಕ್ರಿಕೆಟ್ ತರಬೇತಿ, ರಾಜ್ಯಮಟ್ಟದ ಪಂದ್ಯಾವಳಿ

ಭದ್ರಾವತಿಯಲ್ಲಿ ಬುಧವಾರ ಏರ್ಪಡಿಸಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಸಿದ್ದಾರ್ಥ ಅಂಧರ ಕೇಂದ್ರದ ಅಧ್ಯಕ್ಷ ಶಿವಬಸಪ್ಪ ಮಾತನಾಡಿದರು.
    ಭದ್ರಾವತಿ, ಡಿ. ೨೨: ನಗರದ ನ್ಯೂಟೌನ್ ಸಿದ್ದಾರ್ಥ ಟ್ರಸ್ಟ್‌ನ ಸಿದ್ದಾರ್ಥ ಅಂಧರ ಕೇಂದ್ರ ವತಿಯಿಂದ ವತಿಯಿಂದ ಬೆಂಗಳೂರಿನ ಶೇಖರ್‌ನಾಯ್ಕ್ ಫೌಂಡೇಷನ್ ಸಹಯೋಗದೊಂದಿಗೆ ಕ್ರಿಕೆಟ್ ತರಬೇತಿ ಶಿಬಿರ ಹಾಗೂ ರಾಜ್ಯಮಟ್ಟದ ತ್ರಿಕೋನ ಅಂಧರ ಕ್ರಿಕೆಟ್ ಪಂದ್ಯಾವಳಿ ಹಮ್ಮಿಕೊಳ್ಳಲಾಗಿದೆ ಎಂದು ಸಿದ್ದಾರ್ಥ ಅಂಧರ ಕೇಂದ್ರದ ಅಧ್ಯಕ್ಷ ಶಿವಬಸಪ್ಪ ಹೇಳಿದರು.
    ಅವರು ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ನ್ಯೂಟೌನ್ ವಿಐಎಸ್‌ಎಲ್ ಕ್ರೀಡಾಂಗಣದಲ್ಲಿ ಡಿ.೨೪ ಮತ್ತು ೨೫ರಂದು ಎರಡು ದಿನ ಕ್ರಿಕೆಟ್ ತರಬೇತಿ ಶಿಬಿರ ಹಾಗು ೨೬ರಂದು ರಾಜ್ಯಮಟ್ಟದ ತ್ರಿಕೋನ ಅಂಧರ ಕ್ರಿಕೆಟ್ ಪಂದ್ಯಾವಳಿ ನಡೆಯಲಿದೆ.
    ಶಿಬಿರವನ್ನು ಡಿ.೨೪ರ ಬೆಳಿಗ್ಗೆ ೯.೩೦ಕ್ಕೆ ಶಾಸಕ ಬಿ.ಕೆ ಸಂಗಮಮೇಶ್ವರ್ ಉದ್ಘಾಟಿಸಲಿದ್ದು, ರಾಷ್ಟ್ರೀಯ ಅಂಧರ ಕ್ರಿಕೆಟ್ ಭಾರತ ತಂಡದ ಮಾಜಿ ನಾಯಕ, ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಶೇಖರ್‌ನಾಯ್ಕ್,  ಎಸ್‌ಎಲ್‌ಎನ್ ಡೇ ಕೇರ್ ಮತ್ತು ಡಯಗ್ನೋಸ್ಟಿಕ್ ಡಾ. ಸುಶಿತ್ ಶೆಟ್ಟಿ, ತಾ.ಪಂ. ಕಾರ್ಯನಿರ್ವಹಣಾಧಿಕಾರಿ ರಮೇಶ್ ಮತ್ತು ಉದ್ಯಮಿ ಎ. ಮಾದಣ್ಣ, ಆರ್. ಬಾಲಾಜಿ, ಎಂ. ಶಿವಕುಮಾರ್, ಶ್ರೀನಿವಾಸ್ ಪೂಜಾರಿ ಮತ್ತು ಮೈಕೆಲ್ ಹಾಗು ಬಾಬು ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದು,  ಡಿ.೨೬ರಂದು ರಾಜ್ಯಮಟ್ಟದ ತ್ರಿಕೋನ ಅಂಧರ ಕ್ರಿಕೆಟ್ ಪಂದ್ಯಾವಳಿಯನ್ನು ಪೊಲೀಸ್ ಉಪಾಧೀಕ್ಷಕ ಜೀತೇಂದ್ರ ಕುಮಾರ್ ದಯಾಮ ಉದ್ಘಾಟಿಸಲಿದ್ದು, ತಹಸೀಲ್ದಾರ್ ಆರ್. ಪ್ರದೀಪ್ ಮತ್ತು ಚಿಕ್ಕಮಗಳೂರು ನಗರ ಯೋಜನಾ ನಿರ್ದೇಶಕ ಮನೋಹರ್ ಸೇರಿದಂತೆ ಇನ್ನಿತರರು ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ ಎಂದರು.
       ವಿಜೇತ ತಂಡಗಳಿಗೆ ಪ್ರಥಮ ಬಹುಮಾನ ರು.೧೦ ಸಾವಿರ ನಗದು, ಟ್ರೋಫಿ ಹಾಗು ಪ್ರಶಸ್ತಿ ಪತ್ರ, ದ್ವಿತೀಯ ಬಹುಮಾನ ರು.೮ ಸಾವಿರ ನಗದು, ಟ್ರೋಫಿ ಹಾಗು ಪ್ರಶಸ್ತಿ ಪತ್ರ,  ತೃತೀಯ ಬಹುಮಾನ ರು.೬ ನಗದು, ಟ್ರೋಫಿ ಹಾಗು ಪ್ರಶಸ್ತಿ ಪತ್ರ ನೀಡಲಾಗುವುದು. ಬಹುಮಾನ ವಿತರಣೆ ಸಮಾರಂಭದಲ್ಲಿ ವಿಐಎಸ್‌ಎಲ್ ಕಾರ್ಯಪಾಲಕ ನಿರ್ದೇಶಕ ಸುರಜಿತ್ ಮಿಶ್ರಾ, ನಗರಸಭೆ ಪೌರಾಯುಕ್ತ ಕೆ. ಪರಮೇಶ್ ಮತ್ತು ಸೂಡಾ ಸದಸ್ಯ ರಾಮಲಿಂಗಯ್ಯ ಸೇರಿದಂತೆ ಇನ್ನಿತರರು ಪಾಲ್ಗೊಳ್ಳಲಿದ್ದಾರೆ ಎಂದರು.
    ಸೃಷ್ಠಿ, ಭಾಗ್ಯಶ್ರೀ, ಮಾರುತಿ, ನಾಗರತ್ನ, ರಂಜನ್ ಸೇರಿದಂತೆ ಇನ್ನಿತರರು ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.