Sunday, May 28, 2023

ಪರಿಸರ ಉಳಿವಿನ ಜಾಗೃತಿಗಾಗಿ ಯುವಕನಿಂದ ೫೦ ಸಾವಿರ ಕಿ.ಮೀ ಸೈಕಲ್ ಜಾಥಾ ಅಭಿಯಾನ

ಭದ್ರಾವತಿ ಶ್ರೀ ವಾಸವಾಂಬ ದೇವಾಲಯದಲ್ಲಿ ಗುರ್ರಂ ಚೈತನ್ಯರಿಗೆ ಅಭಿನಂದನೆ

ಪರಿಸರ ಉಳಿಸುವ ನಿಟ್ಟಿನಲ್ಲಿ ಜಾಗೃತಿ ಮೂಡಿಸಲು ಆಂಧ್ರ ಪ್ರದೇಶದ ನೆಲ್ಲೂರಿನ ಯುವಕ ಗುರ್ರಂ ಚೈತನ್ಯರವರು ಸುಮಾರು ೫೦ ಸಾವಿರ ಕಿ.ಮೀ ಸೈಕಲ್ ಜಾಥಾ ಮೂಲಕ ಅಭಿಯಾನ ಕೈಗೊಂಡಿದ್ದು, ಭಾನುವಾರ ಭದ್ರಾವತಿಗೆ ಆಗಮಿಸಿದ ಇವರನ್ನು ಅಭಿನಂದಿಸಲಾಯಿತು.
    ಭದ್ರಾವತಿ, ಮೇ. ೨೮ : ಪರಿಸರ ಉಳಿಸುವ ನಿಟ್ಟಿನಲ್ಲಿ ಜಾಗೃತಿ ಮೂಡಿಸಲು ಆಂಧ್ರ ಪ್ರದೇಶದ ನೆಲ್ಲೂರಿನ ಯುವಕ ಗುರ್ರಂ ಚೈತನ್ಯರವರು ಸುಮಾರು ೫೦ ಸಾವಿರ ಕಿ.ಮೀ ಸೈಕಲ್ ಜಾಥಾ ಮೂಲಕ ಅಭಿಯಾನ ಕೈಗೊಂಡಿದ್ದಾರೆ.
    ನೆಲ್ಲೂರಿನಿಂದ ಆರಂಭಗೊಂಡಿರುವ ಸೈಕಲ್ ಜಾಥಾ ಅಭಿಯಾನ ೧೫೦ ದಿನಗಳನ್ನು ಪೂರೈಸಿದ್ದು, ಇದುವರೆಗೂ ಸುಮಾರು ೧೦ ಸಾವಿರ ಕಿ.ಮೀ ಕ್ರಮಿಸಿದ್ದಾರೆ. ಭಾನುವಾರ ನಗರಕ್ಕೆ ಆಗಮಿಸಿದ ಚೈತನ್ಯರನ್ನು ಹಳೇನಗರದ ಬಸವೇಶ್ವರ ವೃತ್ತದಲ್ಲಿರುವ ಶ್ರೀ ವಾಸವಾಂಬ ದೇವಾಲಯದಲ್ಲಿ ಸ್ವಾಗತಿಸಿ ಅಭಿನಂದಿಸಲಾಯಿತು.
    ಆರ್ಯವೈಶ್ಯ ಮಂಡಳಿ ಅಧ್ಯಕ್ಷ ಬದರಿನಾರಾಯಣ ಶ್ರೇಷ್ಠಿ, ಶ್ರೀ ಕನ್ಯಕಾಪರಮೇಶ್ವರಿ ವಿವಿಧೋದ್ದೇಶ ಸಹಕಾರ ಸಂಘದ ಅಧ್ಯಕ್ಷ ಸಿ.ಎನ್ ಗಿರೀಶ್, ವಾಸವಿ ಮಹಿಳಾ ಮಂಡಳಿ ಅಧ್ಯಕ್ಷೆ ಸತ್ಯಲಕ್ಷ್ಮಿ, ಉಪಾಧ್ಯಕ್ಷೆ ಲತಾ ಬದರೀಶ್, ವಾಸವಿ ಯುವಜನ ಸಂಘದ ಸುಬ್ಬರಾಜ್, ವಾಸವಿ ವನಿತಾ ಸಂಘದ ಅಧ್ಯಕ್ಷೆ ಶ್ರೀಲಕ್ಷ್ಮಿ, ಕಾ.ರಾ ನಾಗರಾಜ್, ವಿಶಾಲಾಕ್ಷಿ, ನಾಗೇಶ್, ಗೋವಿಂದ, ಎಂ.ಎಲ್ ಶ್ರೀಧರಮೂರ್ತಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ಸರ್ಕಾರಿ ಐಟಿಐ ವಿದ್ಯಾರ್ಥಿಗಳಿಗೆ ಕಾನೂನು ಅರಿವು, ಜಾಗೃತಿ ಕಾರ್ಯಕ್ರಮ

ಭದ್ರಾವತಿ ನ್ಯೂಟೌನ್ ಪೊಲೀಸ್ ಠಾಣೆ ವತಿಯಿಂದ ಬಿ.ಎಚ್ ರಸ್ತೆ, ಕಡದಕಟ್ಟೆ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ವಿದ್ಯಾರ್ಥಿಗಳಿಗೆ ಕಾನೂನು ಅರಿವು ಹಾಗು ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.  
    ಭದ್ರಾವತಿ, ಮೇ. ೨೮ : ನಗರದ ನ್ಯೂಟೌನ್ ಪೊಲೀಸ್ ಠಾಣೆ ವತಿಯಿಂದ ಬಿ.ಎಚ್ ರಸ್ತೆ, ಕಡದಕಟ್ಟೆ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ವಿದ್ಯಾರ್ಥಿಗಳಿಗೆ ಕಾನೂನು ಅರಿವು ಹಾಗು ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.  
    ಪ್ರೊಬೆಷನರಿ ಐಪಿಎಸ್ ಅಧಿಕಾರಿ ಬಿಂದುಮಣಿ ನೇತೃತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾದಕ ದ್ರವ್ಯ, ಸಂಚಾರಿ ನಿಯಮ ಪಾಲನೆ ಮತ್ತು ರಸ್ತೆ ಸುರಕ್ಷತೆ, ಇಆರ್‌ಎಸ್‌ಎಸ್-೧೧೨ ಸಹಾಯವಾಣಿ ಮತ್ತು ಪೋಕ್ಸೋ ಕಾಯ್ದೆ ಕುರಿತು ಮಾಹಿತಿ ನೀಡಲಾಯಿತು.
    ನಗರ ಪೊಲೀಸ್ ವೃತ್ತ ನಿರೀಕ್ಷಕ ಬಿ.ಪಿ ಶಾಂತಿನಾಥ್, ಸಂಚಾರಿ ಪೊಲೀಸ್ ಠಾಣಾಧಿಕಾರಿ ಭಾರತಿ ಅನಿಲ್, ಕೈಗಾರಿಕಾ ತರಬೇತಿ ಸಂಸ್ಥೆ ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗಳು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.  

ವಿಜೃಂಭಣೆಯಿಂದ ಜರುಗಿದ ಶ್ರೀ ಕರುಮಾರಿಯಮ್ಮ ೪೩ನೇ ವರ್ಷದ ಕರಗ ಮಹೋತ್ಸವ

ಭದ್ರಾವತಿ ನ್ಯೂಟೌನ್ ವಿಐಎಸ್‌ಎಲ್ ಆಸ್ಪತ್ರೆ ಸಮೀಪದ ಶ್ರೀ ಕರುಮಾರಿಯಮ್ಮ ದೇವಸ್ಥಾನದ ೪೩ನೇ ವರ್ಷದ ಕರಗ ಮಹೋತ್ಸವ ಭಾನುವಾರ ವಿಜೃಂಭಣೆಯಿಂದ ನೆರವೇರಿತು.
    ಭದ್ರಾವತಿ, ಮೇ. ೨೮: ನ್ಯೂಟೌನ್ ವಿಐಎಸ್‌ಎಲ್ ಆಸ್ಪತ್ರೆ ಸಮೀಪದ ಶ್ರೀ ಕರುಮಾರಿಯಮ್ಮ ದೇವಸ್ಥಾನದ ೪೩ನೇ ವರ್ಷದ ಕರಗ ಮಹೋತ್ಸವ ಭಾನುವಾರ ವಿಜೃಂಭಣೆಯಿಂದ ನೆರವೇರಿತು.
    ಬೆಳಿಗ್ಗೆ ಅಮ್ಮನವರಿಗೆ ಎಳನೀರು ಅಭಿಷೇಕ, ನಂತರ ಪಂಚಾಮೃತ ಮತ್ತು ತೀರ್ಥ ಪ್ರಸಾದ ವಿನಿಯೋಗ ನಡೆಯಿತು. ಬುಳ್ಳಾಪುರ ಚಾನಲ್ ಬಳಿ ಶಕ್ತಿ ಕರಗ ಸ್ಥಾಪನೆ ಮಾಡಿ ನಾದಸ್ವರ ಸೇರಿದಂತೆ ವಿವಿಧ ಕಲಾತಂಡಗಳೊಂದಿಗೆ ಮೆರವಣಿಗೆ ಮೂಲಕ ಮಧ್ಯಾಹ್ನ ೩ ಗಂಟೆಗೆ ಅಮ್ಮನವರ ದೇವಸ್ಥಾನಕ್ಕೆ ತರಲಾಯಿತು. ನಂತರ ಮಹಾಮಂಗಳಾರತಿಯೊಂದಿಗೆ ತೀರ್ಥಪ್ರಸಾದ ವಿನಿಯೊಗ ಹಾಗು ಶ್ರಿ ದೇವಿಗೆ ಅಂಬಲಿ ಮತ್ತು ಅನ್ನದಾನ ಸಂತರ್ಪಣೆ ನಡೆಯಿತು.
    ಪ್ರತಿ ವರ್ಷದಂತೆ ಈ ಬಾರಿ ಸಹ ವಿಜಯ್‌ಕುಮಾರ್ ಶಕ್ತಿ ಕರಗ ಹೊತ್ತು ತರುವ ಮೂಲಕ ಸೇವೆ ಸಮರ್ಪಿಸಿದರು. ನ್ಯೂಟೌನ್, ನ್ಯೂಕಾಲೋನಿ, ಕೂಲಿಬ್ಲಾಕ್ ಶೆಡ್ ಆಂಜನೇಯ ಅಗ್ರಹಾರ, ವಿದ್ಯಾಮಂದಿರ, ಜನ್ನಾಪುರ ಸೇರಿದಂತೆ ನಗರದ ವಿವಿಧೆಡೆಗಳಿಂದ ಭಕ್ತರು ಆಗಮಿಸಿದ್ದರು.
    ದೇವಸ್ಥಾನ ಸಮಿತಿ ಅಧ್ಯಕ್ಷ ಕುಪ್ಪಸ್ವಾಮಿ ನೇತೃತ್ವವಹಿಸಿದ್ದರು. ಪದಾಧಿಕಾರಿಗಳು, ಕಾರ್ಯಕಾರಿ ಸಮಿತಿ ಸದಸ್ಯರು, ಸೇವಾಕರ್ತರು, ದೇವಸ್ಥಾನದ ಪ್ರಧಾನ ಅರ್ಚಕ ಕಾಶಿನಾಥ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.