Thursday, November 3, 2022

ವಿಐಎಸ್‌ಎಲ್ ನಿವೃತ್ತ ಕಾರ್ಮಿಕ ವೀರಪ್ಪ ನಿಧನ

ವೀರಪ್ಪ
    ಭದ್ರಾವತಿ, ನ. ೩ : ಕೇಂದ್ರ ಉಕ್ಕು ಪ್ರಾಧಿಕಾರದ ನಗರದ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ ನಿವೃತ್ತ ಕಾರ್ಮಿಕ ವೀರಪ್ಪ(೭೨) ಬುಧವಾರ ನಿಧನ ಹೊಂದಿದರು.
    ಓರ್ವ ಪುತ್ರ, ಓರ್ವ ಪುತ್ರಿ ಇದ್ದರು. ಹುತ್ತಾಕಾಲೋನಿ ಆಂಜನೇಯ ಸ್ವಾಮಿ ದೇವಸ್ಥಾನ ಸಮೀಪದ ಕಾರ್ಖಾನೆಯ ವಸತಿ ಗೃಹದಲ್ಲಿ ವಾಸವಾಗಿದ್ದರು. ಅನಾರೋಗ್ಯಕ್ಕೆ ಒಳಗಾಗಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಇವರ ಅಂತ್ಯಕ್ರಿಯೆ ಹುತ್ತಾಕಾಲೋನಿ ಹಿಂದೂ ರುದ್ರಭೂಮಿಯಲ್ಲಿ ಗುರುವಾರ ಮಧ್ಯಾಹ್ನ ನೆರವೇರಿತು.
    ಇವರ ನಿಧನಕ್ಕೆ ವಿಐಎಸ್‌ಎಲ್ ನಿವೃತ್ತ ಕಾರ್ಮಿಕರ ಕಲ್ಯಾಣ ಕೇಂದ್ರದ ಅಧ್ಯಕ್ಷರು, ಪದಾಧಿಕಾರಿಗಳು ಸೇರಿದಂತೆ ನಿವೃತ್ತ ಕಾರ್ಮಿಕರು, ನಗರದ ಗಣ್ಯರು ಸಂತಾಪ ಸೂಚಿಸಿದ್ದಾರೆ.


ಕೃಷ್ಣಮೂರ್ತಿ ನಿಧನ


ಕೃಷ್ಣಮೂರ್ತಿ
    ಭದ್ರಾವತಿ, ನ. ೩ : ನಗರದ ಸುರಗಿತೋಪು ೨ನೇ ಕ್ರಾಸ್ ನಿವಾಸಿ ಕೃಷ್ಣಮೂರ್ತಿ(ಬೆಣ್ಣೆ)(೩೮) ಗುರುವಾರ ಬೆಳಿಗ್ಗೆ ಹೃದಯಾಘಾತದಿಂದ ನಿಧನ ಹೊಂದಿದರು.
    ತಾಯಿ, ಇಬ್ಬರು ಸಹೋದರರು, ಇಬ್ಬರು ಸಹೋದರಿಯರು ಇದ್ದರು. ಇವರ ಅಂತ್ಯಕ್ರಿಯೆ ಶುಕ್ರವಾರ ಬೆಳಿಗ್ಗೆ ಬೈಪಾಸ್ ರಸ್ತೆ, ಬುಳ್ಳಾಪುರ ಶಂಕರಪ್ಪ ಕಟ್ಟೆ ಸಮೀಪದ ಶ್ರೀ ಸತ್ಯಹರಶ್ಚಂದ್ರ ಹಿಂದೂ ರುದ್ರಭೂಮಿಯಲ್ಲಿ ನೆರವೇರಲಿದೆ.
    ಇವರ ನಿಧನಕ್ಕೆ ನಗರಸಭೆ ಸದಸ್ಯರಾದ ಬಿ.ಕೆ ಮೋಹನ್, ಜಯಶೀಲ ಸುರೇಶ್,  ಕಾಂಗ್ರೆಸ್ ಮುಖಂಡರಾದ ಜಯರಾಜ್, ಮಹೇಶ್, ಬಿಜೆಪಿ ಮುಖಂಡರಾದ ಛಲವಾದಿ ಕೃಷ್ಣ ಸೇರಿದಂತೆ ಸ್ಥಳೀಯ ಮುಖಂಡರು ಸಂತಾಪ ಸೂಚಿಸಿದ್ದಾರೆ.

ಕರ್ನಾಟಕರತ್ನ ಪುರಸ್ಕೃತರಿಗೆ ದೇವಾಲಯ : ಶೀಘ್ರದಲ್ಲಿಯೇ ಲೋಕಾರ್ಪಣೆ

ಡಾ. ರಾಜ್‌ಕುಮಾರ್ ಅಭಿಮಾನಿಗಳು, ಕರ್ನಾಟಕರತ್ನ ಪುನೀತ್‌ರಾಜ್‌ಕುಮಾರ್ ಅಭಿಮಾನಿಗಳ ಸಂಘದ ವತಿಯಿಂದ ಭದ್ರಾವತಿ ಬಿ.ಎಚ್ ರಸ್ತೆ, ರೈಲ್ವೆ ನಿಲ್ದಾಣ ಮುಂಭಾಗ ನಗರಸಭೆ ಮಾರುಕಟ್ಟೆ ಸಮೀಪ ಕರ್ನಾಟಕ ರತ್ನ ಪುನೀತ್‌ರಾಜ್‌ಕುಮಾರ್‌ರವರ ದೇವಾಲಯ ನಿರ್ಮಾಣ ಕಾರ್ಯ ಭರದಿಂದ ಸಾಗುತ್ತಿದ್ದು, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಎಸ್. ಕುಮಾರ್, ಸಂಘದ ಅಧ್ಯಕ್ಷ ಅಪ್ಪು(ಬಾಳೆಮಂಡಿ), ವಾರ್ಡ್ ನಗರಸಭಾ ಸದಸ್ಯ ಜಾರ್ಜ್ ಹಾಗು ಅಭಿಮಾನಿಗಳು ಉಪಸ್ಥಿತರಿದ್ದರು.
    ಭದ್ರಾವತಿ, ನ. ೨ : ನಗರದ ಪ್ರಮುಖ ವಾಣಿಜ್ಯ ರಸ್ತೆಯಾಗಿರುವ ಬಿ.ಎಚ್ ರಸ್ತೆ ರೈಲ್ವೆ ನಿಲ್ದಾಣ ಮುಂಭಾಗ ನಗರಸಭೆ ಮಾರುಕಟ್ಟೆ ಸಮೀಪ ಕರ್ನಾಟಕ ರತ್ನ ಪುನೀತ್‌ರಾಜ್‌ಕುಮಾರ್‌ರವರ ದೇವಾಲಯ ನಿರ್ಮಾಣ ಕಾರ್ಯ ಭರದಿಂದ ಸಾಗುತ್ತಿದ್ದು, ಶೀಘ್ರದಲ್ಲಿಯೇ ಮುಕ್ತಾಯಗೊಳ್ಳಲಿದೆ.  
      ನಗರಸಭೆ ೩ನೇ ವಾರ್ಡ್ ವ್ಯಾಪ್ತಿಯ ಚಾಮೇಗೌಡ ಏರಿಯಾದಲ್ಲಿರುವ ಡಾ. ರಾಜ್‌ಕುಮಾರ್ ಅಭಿಮಾನಿಗಳು, ಕರ್ನಾಟಕರತ್ನ ಪುನೀತ್‌ರಾಜ್‌ಕುಮಾರ್ ಅಭಿಮಾನಿಗಳ ಸಂಘದ ವತಿಯಿಂದ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ, ರಾಜ್‌ಕುಮಾರ್ ಅಭಿಮಾನಿ ಎಸ್. ಕುಮಾರ್ ನೇತೃತ್ವದಲ್ಲಿ ದೇವಾಲಯ ನಿರ್ಮಾಣಗೊಳ್ಳುತ್ತಿದೆ.
      ದೇವಾಲಯ ನಿರ್ಮಾಣಕ್ಕೆ ನಗರಸಭೆ ವತಿಯಿಂದ ಸ್ಥಳ ಕಲ್ಪಿಸಲಾಗಿದ್ದು, ಸುಮಾರು ೪೦ ಲಕ್ಷ ರು. ವೆಚ್ಚದಲ್ಲಿ ದೇವಾಲಯ ನಿರ್ಮಾಣಗೊಳ್ಳುತ್ತಿದೆ. ದೇವಾಲಯದಲ್ಲಿ ಡಾ. ರಾಜ್‌ಕುಮಾರ್ ಮತ್ತು ಡಾ. ಪುನೀತ್‌ರಾಜ್‌ಕುಮಾರ್‌ರವರ ಕಂಚಿನ ಪ್ರತಿಮೆಗಳ ಪ್ರತಿಷ್ಠಾಪನೆ ನಡೆಯಲಿದೆ. ದೇವಾಲಯ ನಿರ್ಮಾಣ
ಕಾರ್ಯಕ್ಕೆ  ಸುಮಾರು ೯ ತಿಂಗಳ ಹಿಂದೆ ಸಂಸದ ಬಿ.ವೈ ರಾಘವೇಂದ್ರರವರು ಭೂಮಿ ಪೂಜೆ ನೆರವೇರಿಸುವ ಮೂಲಕ ವೈಯಕ್ತಿಕವಾಗಿ ಆರ್ಥಿಕ ನೆರವು ಸಹ ನೀಡಿದ್ದರು. ದೇವಾಲಯ ನಿರ್ಮಾಣಕ್ಕೆ ಸರ್ಕಾರದಿಂದ ಇದುವರೆಗೂ ಯಾವುದೇ ಆರ್ಥಿಕ ನೆರವು ಲಭಿಸಿಲ್ಲ. ಆದರೂ ದಾನಿಗಳು, ಅಭಿಮಾನಿಗಳ ಸಹಕಾರದಿಂದ ದೇವಾಲಯ ನಿರ್ಮಾಣ ಕಾರ್ಯ ಒಂದು ಹಂತಕ್ಕೆ ಬಂದು ತಲುಪಿದೆ.
      ಡಾ. ರಾಜ್‌ಕುಮಾರ್ ಮತ್ತು ಡಾ. ಪುನೀತ್‌ರಾಜ್‌ಕುಮಾರ್‌ರವರ ಈ ಎರಡು ಕಂಚಿನ ಪ್ರತಿಮೆಗಳ ಒಟ್ಟು ವೆಚ್ಚ ರು. ೭ ಲಕ್ಷಗಳಾಗಿದ್ದು, ಈಗಾಗಲೇ ಈ ಎರಡು ಪ್ರತಿಮೆಗಳು ಸಹ ಬಹುತೇಕ ಪೂರ್ಣಗೊಂಡಿವೆ. ದೇವಾಲಯದ ಕಟ್ಟಡ ಕಾಮಗಾರಿ ಮುಂದಿನ ೨-೩ ತಿಂಗಳಿನಲ್ಲಿ ಮುಕ್ತಾಯಗೊಳ್ಳಲಿದ್ದು, ಬೃಹತ್ ಸಮಾರಂಭ ಆಯೋಜಿಸುವ ಮೂಲಕ ದೇವಾಲಯ ಲೋಕಾರ್ಪಣೆಗೂ ಈಗಾಗಲೇ ರೂಪುರೇಷೆಗಳು ಸಿದ್ದಗೊಂಡಿವೆ.
      ಕಳೆದ ಕೆಲವು ದಿನಗಳ ಹಿಂದೆ ಡಾ. ಪುನೀತ್‌ರಾಜ್‌ಕುಮಾರ್‌ರವರ ಅಭಿನಯದ ಗಂಧದಗುಡಿ ಚಲನಚಿತ್ರ ಬಿಡುಗಡೆಗೊಂಡ ಸಂದರ್ಭದಲ್ಲಿ ನಗರದಲ್ಲಿ ಸಂಭ್ರಮಾಚರಣೆ ನಡೆಸಿದ್ದ ಅಭಿಮಾನಿಗಳು ಇದೀಗ ದೇವಾಲಯ ಪೂರ್ಣಗೊಳ್ಳುವುದನ್ನು ಜಾತಕ ಪಕ್ಷಿಯಂತೆ ಎದುರು ನೋಡುತ್ತಿದ್ದಾರೆ. ಅಭಿಮಾನಿ ದೇವರುಗಳ ಮನಗೆದ್ದ ಕರ್ನಾಟಕ ರತ್ನ ಪುರಸ್ಕೃತರಿಗೆ ದೇವಾಲಯ ನಿರ್ಮಿಸುವ ಮೂಲಕ ಉಕ್ಕಿನ ನಗರದ ಹಿರಿಮೆ ಮತ್ತಷ್ಟು ಹೆಚ್ಚಿಸುತ್ತಿರುವುದು ನಿಜಕ್ಕೂ ಹೆಮ್ಮೆಯ ಸಂಗತಿಯಾಗಿದೆ.