Tuesday, April 26, 2022

ದಲಿತ ಮುಖಂಡ ಪಿ. ಮೂರ್ತಿ ಬಿಎಸ್‌ಪಿ ಪಕ್ಷಕ್ಕೆ ಸೇರ್ಪಡೆ

ಭದ್ರಾವತಿ ನಗರಸಭೆ ವ್ಯಾಪ್ತಿಯ ಬುಳ್ಳಾಪುರ ನಿವಾಸಿ, ದಲಿತ ಮುಖಂಡ ಪಿ. ಮೂರ್ತಿ ಮಂಗಳವಾರ ಬಹುಜನ ಸಮಾಜ ಪಾರ್ಟಿಗೆ ಸೇರ್ಪಡೆಗೊಂಡರು.
    ಭದ್ರಾವತಿ, ಏ. ೨೬: ನಗರಸಭೆ ವ್ಯಾಪ್ತಿಯ ಬುಳ್ಳಾಪುರ ನಿವಾಸಿ, ದಲಿತ ಮುಖಂಡ ಪಿ. ಮೂರ್ತಿ ಮಂಗಳವಾರ ಬಹುಜನ ಸಮಾಜ ಪಾರ್ಟಿಗೆ ಸೇರ್ಪಡೆಗೊಂಡರು.
    ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಮಾಯವತಿಯವರ ಸಾಧನೆ ಹಾಗು ಪಕ್ಷದ ತತ್ವ ಸಿದ್ಧಾಂತಗಳನ್ನು ಮೆಚ್ಚಿ ಪಿ. ಮೂರ್ತಿ ಬಿಎಸ್‌ಪಿ ಪಕ್ಷಕ್ಕೆ ಸೇರ್ಪಡೆಗೊಂಡಿದ್ದಾರೆ. ಪಕ್ಷದ ಕಛೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ತಾಲೂಕು ಅಧ್ಯಕ್ಷ ರಹಮತ್ ಉಲ್ಲಾ ಖಾನ್ ಪಕ್ಷದ ಬಾವುಟ ನೀಡುವುದರ ಮೂಲಕ ಸ್ವಾಗತಿಸಿದರು.
    ತಾಲೂಕು ಸಂಯೋಜಕ ಎಂ. ರಾಜೇಂದ್ರ, ಪ್ರಚಾರ ಸಮಿತಿ ಅಧ್ಯಕ್ಷ ಗುಲಾಮ್ ಹುಸೇನ್, ಉಪಾಧ್ಯಕ್ಷ ಮಾಹಿನ್ ಹಾಗೂ ಪಕ್ಷದ ಸಂಘಟನಾ ಕಾರ್ಯದರ್ಶಿ ಶೌಕತ್ ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.

ಕೂಡ್ಲಿಗೆರೆ ಗ್ರಾಮದಲ್ಲಿ ನೂತನ ನಾಡಕಛೇರಿಗೆ ಶಾಸಕ ಬಿ.ಕೆ ಸಂಗಮೇಶ್ವರ್ ಭೂಮಿ ಪೂಜೆ

ಭದ್ರಾವತಿ ತಾಲೂಕಿನ ಕೂಡ್ಲಿಗೆರೆ ಗ್ರಾಮದಲ್ಲಿ ಸುಮಾರು ೧೮.೫ ಲಕ್ಷ ರು. ವೆಚ್ಚದಲ್ಲಿ ನೂತನ ನಾಡಕಛೇರಿ ನಿರ್ಮಾಣಕ್ಕೆ ಮಂಗಳವಾರ ಶಾಸಕ ಬಿ.ಕೆ ಸಂಗಮೇಶ್ವರ್ ಭೂಮಿ ಪೂಜೆ ನೆರವೇರಿಸಿದರು.
    ಭದ್ರಾವತಿ, ಏ. ೨೬: ತಾಲೂಕಿನ ಕೂಡ್ಲಿಗೆರೆ ಗ್ರಾಮದಲ್ಲಿ ಸುಮಾರು ೧೮.೫ ಲಕ್ಷ ರು. ವೆಚ್ಚದಲ್ಲಿ ನೂತನ ನಾಡಕಛೇರಿ ನಿರ್ಮಾಣಕ್ಕೆ ಮಂಗಳವಾರ ಶಾಸಕ ಬಿ.ಕೆ ಸಂಗಮೇಶ್ವರ್ ಭೂಮಿ ಪೂಜೆ ನೆರವೇರಿಸಿದರು.
    ಕೂಡ್ಲಿಗೆರೆಯಲ್ಲಿ ಬಹಳ ವರ್ಷಗಳಿಂದ ನಾಡಕಛೇರಿ ಕರ್ತವ್ಯ ನಿರ್ವಹಿಸುತ್ತಿದ್ದರೂ ಸಹ ಸ್ವಂತ ಕಟ್ಟಡ ಹೊಂದಿರಲಿಲ್ಲ. ಈ ಹಿನ್ನಲೆಯಲ್ಲಿ ಹೊಸ ಕಟ್ಟಡಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿತ್ತು.
    ಉಪತಹಸೀಲ್ದಾರ್ ನಾರಾಯಣಗೌಡ, ಕೂಡ್ಲಿಗೆರೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಉಮಾದೇವಿ ತಿಪ್ಪೇಶ್, ಉಪಾಧ್ಯಕ್ಷ ಕುಬೇರ್‌ನಾಯ್ಕ್, ಸುಗ್ರಾಮ ಅಧ್ಯಕ್ಷೆ ಗೌರಮ್ಮ, ಹಾಗು ಗ್ರಾ.ಪಂ. ಸದಸ್ಯರು, ರೈತರ ವ್ಯವಸಾಯೋತ್ಪನ್ನ ಸಹಕಾರ ಸಂಘದ ಅಧ್ಯಕ್ಷ ಎನ್.ಎಚ್ ಮಹೇಶ್, ಪ್ರಮುಖರಾದ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಎಚ್.ಎಲ್ ಷಡಾಕ್ಷರಿ, ದಶರಥಗಿರಿ, ಎಸ್ ಮಹಾದೇವ, ಜಯಣ್ಣ, ಪ್ರವೀಣ್‌ನಾಯ್ಕ್ ಹಾಗು ಗ್ರಾಮದ ಪ್ರಮುಖರು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ವಿಐಎಸ್.ಎಲ್ ಅಧಿಕಾರಿ ಉನ್ನಿಕೃಷ್ಣನ್‌ಗೆ ಸಿಎಂಎ ಯುವ ಸಾಧಕ ಪ್ರಶಸ್ತಿ

ಏ.೨೦ರಂದು ನವದೆಹಲಿಯ ಕಾನ್ಸ್ಟಿಟ್ಯೂಷನ್ ಕ್ಲಬ್ ಆಫ್ ಇಂಡಿಯಾದಲ್ಲಿ ನಡೆದ ಸಮಾರಂಭದಲ್ಲಿ ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕೆ, ಜವಳಿ, ಗ್ರಾಹಕ ವ್ಯವಹಾರಗಳು ಮತ್ತು ಆಹಾರ ಮತ್ತು ಸಾರ್ವಜನಿಕ ವಿತರಣಾ ಸಚಿವ ಪಿಯೂಷ್ ಗೋಯಲ್ ೨೦೧೭ನೇ ಸಾಲಿನ ಸಿಎಂಎ ಯುವ ಸಾಧಕ ಪ್ರಶಸ್ತಿಯನ್ನು ಭದ್ರಾವತಿ ವಿಐಎಸ್‌ಎಲ್ ಕಾರ್ಖಾನೆಯ ಹಣಕಾಸು ವಿಭಾಗದ ಹಿರಿಯ ವ್ಯವಸ್ಥಾಪಕ ವಿ.ಎಂ ಉನ್ನಿಕೃಷ್ಣನ್‌ರವರಿಗೆ ವಿತರಿಸಿದರು.
    ಭದ್ರಾವತಿ, ಏ. ೨೬: ಕೇಂದ್ರ ಉಕ್ಕು ಪ್ರಾಧಿಕಾರದ ನಗರದ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆಯ ಹಣಕಾಸು ವಿಭಾಗದ ಹಿರಿಯ ವ್ಯವಸ್ಥಾಪಕ ವಿ.ಎಂ ಉನ್ನಿಕೃಷ್ಣನ್‌ರವರು ಇನ್ಸ್‌ಟಿಟ್ಯೂಟ್ ಆಫ್ ಕಾಸ್ಟ್ ಅಕೌಂಟ್ಸ್ ಆಫ್ ಇಂಡಿಯಾ ವತಿಯಿಂದ ನೀಡಲಾಗುವ ೨೦೧೭ನೇ ಸಾಲಿನ ಸಿಎಂಎ ಯುವ ಸಾಧಕ ಪ್ರಶಸ್ತಿ ಪಡೆದುಕೊಂಡಿದ್ದಾರೆ.
    ಬೃಹತ್ ಸಾರ್ವಜನಿಕ ಸಂಸ್ಥೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಯುವ ಸಾಧಕರನ್ನು ಗುರುತಿಸಿ ನೀಡಲಾಗುವ ಈ ಪ್ರಶಸ್ತಿ ಸರ್ಟಿಫಿಕೇಟ್ಸ್ ಆಫ್ ಮೆರಿಟ್ ಒಳಗೊಂಡಿದೆ. ಏ.೨೦ರಂದು ನವದೆಹಲಿಯ ಕಾನ್ಸ್ಟಿಟ್ಯೂಷನ್ ಕ್ಲಬ್ ಆಫ್ ಇಂಡಿಯಾದಲ್ಲಿ ನಡೆದ ಸಮಾರಂಭದಲ್ಲಿ ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕೆ, ಜವಳಿ, ಗ್ರಾಹಕ ವ್ಯವಹಾರಗಳು ಮತ್ತು ಆಹಾರ ಮತ್ತು ಸಾರ್ವಜನಿಕ ವಿತರಣಾ ಸಚಿವ ಪಿಯೂಷ್ ಗೋಯಲ್ ಪ್ರಶಸ್ತಿಯನ್ನು ಉನ್ನಿಕೃಷ್ಣನ್‌ರವರಿಗೆ ವಿತರಿಸಿದರು.
    ಉನ್ನಿಕೃಷ್ಣನ್‌ರವರು ಎಂ.ಕಾಂ., ಐಸಿಡಬ್ಲ್ಯೂಎ ಮತ್ತು ಸಿಎಸ್ ಪದವಿಯನ್ನು ಪಡೆದುಕೊಂಡಿದ್ದಾರೆ. ಹಣಕಾಸು ಅಧಿಕಾರಿಯಾಗಿ ಕಳೆದ ೧೧ ವರ್ಷಗಳಿಂದ ಕಾರ್ಖಾನೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಇವರು ಬಹುಮುಖ ಪ್ರತಿಮೆಯಾಗಿದ್ದು, ಗಾಯಕರಾಗಿದ್ದಾರೆ. ಇವರ ಸಾಧನೆಗೆ ಕಾರ್ಖಾನೆ ಆಡಳಿತ ಮಂಡಳಿ ಅಭಿನಂದಿಸಿದೆ.

ಶ್ರೀ ಮಾರಿಯಮ್ಮ ದೇವಸ್ಥಾನದ ೬೦ನೇ ವರ್ಷದ ಕರಗ ಮಹೋತ್ಸವ

ಭದ್ರಾವತಿ ಹಳೇ ಸಂತೆಮೈದಾನ ರಸ್ತೆಯಲ್ಲಿರುವ ಶ್ರೀ ಮಾರಿಯಮ್ಮ ದೇವಸ್ಥಾನದ ೬೦ನೇ ವರ್ಷದ 'ಕರಗ ಮಹೋತ್ಸವ' ಕಳೆದ ೩ ದಿನಗಳಿಂದ ವಿಜೃಂಭಣೆಯಿಂದ ಜರುಗುತ್ತಿದ್ದು, ಮಂಗಳವಾರ ಅಮ್ಮನವರಿಗೆ ವಿಶೇಷ ಅಲಂಕಾರ ಕೈಗೊಳ್ಳಲಾಗಿತ್ತು.
    ಭದ್ರಾವತಿ, ಏ. ೨೬: ಹಳೇ ಸಂತೆಮೈದಾನ ರಸ್ತೆಯಲ್ಲಿರುವ ಶ್ರೀ ಮಾರಿಯಮ್ಮ ದೇವಸ್ಥಾನದ ೬೦ನೇ ವರ್ಷದ 'ಕರಗ ಮಹೋತ್ಸವ' ಕಳೆದ ೩ ದಿನಗಳಿಂದ ವಿಜೃಂಭಣೆಯಿಂದ ಜರುಗುತ್ತಿದ್ದು, ಮಂಗಳವಾರ ಕರಗ ಪ್ರತಿಷ್ಠಾಪನೆಯೊಂದಿಗೆ ಅಂಬಲಿ ಉಯ್ಯುವ ಧಾರ್ಮಿಕ ಆಚರಣೆ ನಡೆಯಿತು.
    ಬೆಳಿಗ್ಗೆ ೬ ಗಂಟೆಗೆ ಅಮ್ಮನವರಿಗೆ ವಿಶೇಷ ಅಭಿಷೇಕ, ಅಲಂಕಾರ ನೆರವೇರಿತು. ೧೧ ಗಂಟೆಗೆ ಹೊಸಸೇತುವೆ ಬಳಿ ಭದ್ರಾನದಿ ದಡದಲ್ಲಿ ಕರಗ ಜೋಡಣೆಯೊಂದಿಗೆ ರಾಜಬೀದಿಗಳಲ್ಲಿ ತಾರೈತಮ್ಮಟೆ, ಪಂಬೆ ವಾದ್ಯಗಳೊಂದಿಗೆ ದೇವಸ್ಥಾನಕ್ಕೆ ತರಲಾಯಿತು. ನಂತರ ಮಧ್ಯಾಹ್ನ ೧ ಗಂಟೆಗೆ ಅಂಬಲಿ ಉಯ್ಯುವ ಆಚರಣೆ, ಸಂಜೆ ದೀಪಾರಾಧನೆ, ನಂತರ ವಾದ್ಯಮೇಳದೊಂದಿಗೆ ರಾಜಬೀದಿ ಉತ್ಸವ ನಡೆಯಿತು.
    ಬುಧವಾರ ಬೆಳಿಗ್ಗೆ ಅಮ್ಮನವರಿಗೆ ಅರಿಶಿನದ ಅಭಿಷೇಕ, ಸಂಜೆ ಅನ್ನದಾನ, ನೃತ್ಯ ಕಾರ್ಯಕ್ರಮಗಳು ಜರುಗಲಿವೆ. ಕೇಶವಪುರ, ಗಾಂಧಿನಗರ, ಮಾಧವನಗರ, ಎನ್‌ಎಂಸಿ ಬಡಾವಣೆ, ಭೂತನಗುಡಿ, ಹಳೇನಗರ ಸೇರಿದಂತೆ ವಿವಿಧೆಡೆಗಳಿಂದ ಭಕ್ತಾಧಿಗಳು ಆಗಮಿಸಿ ಅಮ್ಮನವರ ದರ್ಶನ ಪಡೆದು ಕೃಪೆಗೆ ಪಾತ್ರರಾದರು.

ಶ್ರೀ ಪ್ರಸನ್ನ ಗಣಪತಿ ದೇವಸ್ಥಾನದಲ್ಲಿ ವಿವಿಧ ಧಾರ್ಮಿಕ ಆಚರಣೆಗಳು

ಭದ್ರಾವತಿ ಹಳೇಸಂತೆಮೈದಾನ ಚಾನಲ್ ಏರಿಯಾ ಶ್ರೀ ಪ್ರಸನ್ನ ಗಣಪತಿ ದೇವಸ್ಥಾನದಲ್ಲಿ ಮಂಗಳವಾರ ವಿವಿಧ ಧಾರ್ಮಿಕ ಆಚರಣೆಗಳು ಜರುಗಿದವು.
    ಭದ್ರಾವತಿ, ಏ. ೨೬: ನಗರದ ಹಳೇಸಂತೆಮೈದಾನ ಚಾನಲ್ ಏರಿಯಾ ಶ್ರೀ ಪ್ರಸನ್ನ ಗಣಪತಿ ದೇವಸ್ಥಾನದಲ್ಲಿ ಮಂಗಳವಾರ ವಿವಿಧ ಧಾರ್ಮಿಕ ಆಚರಣೆಗಳು ಜರುಗಿದವು.
    ಶ್ರೀ ಮಹಾಗಣಪತಿಗೆ ಪಂಚಾಮೃತ ಅಭಿಷೇಕ, ಕಲಾವೃದ್ದಿ ಹೋಮ, ಅಷ್ಟದ್ರವ್ಯ ಸಹಿತ ಮಹಾಗಣಪತಿ ಹೋಮ, ಮಹಾಮಂಗಳಾರತಿ, ತೀರ್ಥಪ್ರಸಾದ ವಿನಿಯೋಗ ಸೇರಿದಂತೆ ಇನ್ನಿತರ ಧಾರ್ಮಿಕ ಆಚರಣೆಗಳು ಜರುಗಿದವು.
    ಈ ದೇವಸ್ಥಾನವನ್ನು ಮಹಿಳೆಯರು ಮುನ್ನಡೆಸಿಕೊಂಡು ಹೋಗುತ್ತಿರುವುದು ವಿಶೇಷವಾಗಿದೆ. ದೇವಸ್ಥಾನ ಕಮಿಟಿ ಪ್ರಮುಖರಾದ ಗೌರವಾಧ್ಯಕ್ಷೆ ಪ್ರಿಯಾಂಕ ಗಣೇಶ್, ಅಧ್ಯಕ್ಷೆ ಜಯಲಕ್ಷ್ಮೀ ಎಸ್. ನಾಗರಾಜ್‌ರಾವ್, ಉಪಾಧ್ಯಕ್ಷೆ ಶ್ವೇತ ಟಿ.ಎಸ್ ಯತೀಶ್ ರಾಜ್ .ಬಿ, ಕಾರ್ಯದರ್ಶಿ ವರಲಕ್ಷ್ಮೀ ಎಂ. ನಾಗರಾಜ್ .ಡಿ, ಸಹಕಾರ್ಯದರ್ಶಿ ಲತಾ ಎಂ.ಎಚ್ ತಿಪ್ಪೇಸ್ವಾಮಿ, ಖಜಾಂಚಿ ವಾಣಿ ವಿ.ಎಂ ಕುಮಾರಸ್ವಾಮಿ, ಕಾರ್ಯಕಾರಿಣಿ ಸದಸ್ಯೆಯರಾದ ಶಿವಕುಮಾರಿ ಡಿ.ಎನ್ ರಂಗಪ್ಪ, ವಿಜಯಲಕ್ಷ್ಮಿ ಆರ್. ಸುಬ್ರಮಣಿ, ಕೌಶಲ್ಯ ಡಿ. ಮೂರ್ತಿ, ರೂಪ ರಾಘವೇಂದ್ರ, ಆಶಾ ರವಿರಾಯ್ಕರ್ ಇನ್ನಿತರರು ಉಪಸ್ಥಿತರಿದ್ದರು.
    ನಗರಸಭೆ ಮಾಜಿ ಅಧ್ಯಕ್ಷೆ ವಿಶಾಲಾಕ್ಷ್ಮಿ, ಮುಖಂಡರಾದ ಚೌಡಪ್ಪ, ಎಚ್.ಆರ್ ರಂಗನಾಥ್, ಜಂಬೂಸ್ವಾಮಿ, ಕಮಲಕುಮಾರಿ ಸೇರಿದಂತೆ ಹೊಸಮನೆ, ಕೇಶವಪುರ, ಗಾಂಧಿನಗರ, ಭೂತನಗುಡಿ ಸೇರಿದಂತೆ ವಿವಿಧೆಡೆಗಳಿಂದ ಭಕ್ತಾಧಿಗಳು ಪಾಲ್ಗೊಂಡಿದ್ದರು.