Tuesday, August 11, 2020

ವೃದ್ಧಾಪ್ಯ ವೇತನ ಮಂಜೂರಾತಿಗೆ ಎಎಪಿ ಆಗ್ರಹ

ಸುಮಾರು ೭-೮ ತಿಂಗಳುಗಳಿಂದ ಹಿರಿಯ ನಾಗರೀಕರಿಗೆ ವೃದ್ಧಾಪ್ಯ ವೇತನ ಸಿಗದೆ ಸಂಕಷ್ಟಕ್ಕೆ ಒಳಗಾಗಿದ್ದು, ತಕ್ಷಣ ವೇತನ ಮಂಜೂರಾತಿ ಮಾಡುವಂತೆ ಆಗ್ರಹಿಸಿ ಆಮ್ ಆದ್ಮಿ ಪಾರ್ಟಿ ವತಿಯಿಂದ ತಾಲೂಕು ಕಛೇರಿ ಮುಂಭಾಗ ಪ್ರತಿಭಟನೆ ನಡೆಸಲಾಯಿತು.

ತಾಲೂಕು ಕಛೇರಿ ಮುಂಭಾಗ ಪ್ರತಿಭಟನೆ

ಭದ್ರಾವತಿ, ಆ. ೧೧: ಸುಮಾರು ೭-೮ ತಿಂಗಳುಗಳಿಂದ ಹಿರಿಯ ನಾಗರೀಕರಿಗೆ ವೃದ್ಧಾಪ್ಯ ವೇತನ ಸಿಗದೆ ಸಂಕಷ್ಟಕ್ಕೆ ಒಳಗಾಗಿದ್ದು, ತಕ್ಷಣ ವೇತನ ಮಂಜೂರಾತಿ ಮಾಡುವಂತೆ ಆಗ್ರಹಿಸಿ ಆಮ್ ಆದ್ಮಿ ಪಾರ್ಟಿ ವತಿಯಿಂದ ತಾಲೂಕು ಕಛೇರಿ ಮುಂಭಾಗ ಪ್ರತಿಭಟನೆ ನಡೆಸಲಾಯಿತು.
ಪ್ರಸ್ತುತ ಎಲ್ಲೆಡೆ ಕೊರೋನಾ ಸೋಂಕು ವ್ಯಾಪಕವಾಗಿ ಹರಡುತ್ತಿದ್ದು, ಸರಿಯಾಗಿ ಯಾವುದೇ ಉದ್ಯೋಗ, ವಹಿವಾಟುಗಳಿಲ್ಲದೆ ಶ್ರೀಸಾಮಾನ್ಯರು ಸಂಕಷ್ಟಕ್ಕೆ ಒಳಗಾಗಿದ್ದಾರೆ. ಮತ್ತೊಂದೆಡೆ ವೃದ್ದಾಪ್ಯ ವೇತನವಿಲ್ಲದೆ ಹಿರಿಯ ನಾಗರೀಕರು ತೊಂದರೆ ಅನುಭವಿಸುವಂತಾಗಿದೆ. ತಕ್ಷಣ ಹಿರಿಯ ನಾಗರೀಕರ ಸಂಕಷ್ಟಕ್ಕೆ ಸ್ಪಂದಿಸಬೇಕೆಂದು ಆಗ್ರಹಿಸಲಾಯಿತು.
ತಾಲೂಕು ಕಛೇರಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸುಮಾರು ೧೦ ಮಂದಿಗೆ ಸೋಂಕು ತಗುಲಿರುವ ಹಿನ್ನಲೆಯಲ್ಲಿ ಕಳೆದ ೪ ದಿನಗಳಿಂದ ಸೀಲ್‌ಡೌನ್ ಮಾಡಲಾಗಿದ್ದು, ಈ ಹಿನ್ನಲೆಯಲ್ಲಿ ಶಿರಸ್ತೇದಾರ್ ಮಂಜಾನಾಯ್ಕರವರು ಮೊಬೈಲ್ ಮೂಲಕ ಪ್ರತಿಭಟನಾಕಾರರ ಮನವಿಯನ್ನು ಆಲಿಸಿ ಜಿಲ್ಲಾಧಿಕಾರಿಗಳಿಗೆ ವರದಿ ಸಲ್ಲಿಸುವುದಾಗಿ ಭರವಸೆ ನೀಡಿದ್ದಾರೆ ಎಂದು ಪ್ರತಿಭಟನಾಕಾರರು ಪತ್ರಿಕೆಗೆ ಮಾಹಿತಿ ನೀಡಿದರು.
ಆಮ್ ಆದ್ಮಿ ಪಾರ್ಟಿ ಜಿಲ್ಲಾಧ್ಯಕ್ಷ ಎಚ್. ರವಿಕುಮಾರ್ ಪ್ರತಿಭಟನೆ ನೇತೃತ್ವ ವಹಿಸಿದ್ದರು. ತಾಲೂಕು ಉಪಾಧ್ಯಕ್ಷ ಇಬ್ರಾಹಿಂ ಖಾನ್, ಕರ್ನಾಟಕ ರಕ್ಷಣಾ ವೇದಿಕೆ(ಪ್ರವೀಣ್ ಶೆಟ್ಟಿ ಬಣ) ತಾಲೂಕು ಅಧ್ಯಕ್ಷ ಬಿ.ವಿ ಗಿರೀಶ್, ಮುಖಂಡ ರಾಜೇಂದ್ರ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.  

ಶಿವಾಜಿ ಮಹಾರಾಜರ ಪುತ್ಥಳಿ ತೆರವು : ಖಂಡನೆ

ಭದ್ರಾವತಿ, ಆ. ೧೧: ಬೆಳಗಾವಿ ಜಿಲ್ಲೆ ಹುಕ್ಕೇರಿ ತಾಲೂಕಿನ ಮಣಗುತ್ತಿ ಗ್ರಾಮದಲ್ಲಿ ಪ್ರತಿಷ್ಠಾಪಿಸಲಾಗಿದ್ದ ಶಿವಾಜಿ ಮಹಾರಾಜರ ಪುತ್ಥಳಿ ತೆರವುಗೊಳಿಸಿರುವುದನ್ನು ನಗರದ ಶ್ರೀ ಛತ್ರಪತಿ ಶಿವಾಜಿ ಸೇವಾ ಸಂಘ ಖಂಡಿಸಿದೆ.
    ಮಣಗುತ್ತಿ ಗ್ರಾಮದಲ್ಲಿ ಶ್ರೀ ಛತ್ರಪತಿ ಶಿವಾಜಿ ಬ್ರಿಗೇಡ್ ಯುವಕರ ಸಂಘದ ವತಿಯಿಂದ ಪ್ರತಿಷ್ಠಾಪಿಸಲಾಗಿದ್ದ ಶಿವಾಜಿ ಮಹಾರಾಜರ ಪುತ್ಥಳಿಯನ್ನು ತೆರವುಗೊಳಿಸಿರುವುದು ಒಬ್ಬ ದಕ್ಷ ಆಡಳಿತಗಾರ, ಸಮಾಜ ಸುಧಾರಕ, ಆದರ್ಶ ವ್ಯಕ್ತಿಗೆ ಮಾಡಿರುವ ಅವಮಾನವಾಗಿದೆ.
      ಶಿವಾಜಿ ಮಹಾರಾಜರು ಕೇವಲ ಮರಾಠ ಸಮಾಜಕ್ಕೆ ಸೀಮಿತವಲ್ಲ. ಇಡೀ ಭರತ ಖಂಡದ ಒಬ್ಬ ಮಹಾನ್ ಪುರುಷ, ವಿಶ್ವದಲ್ಲೇ ಅತ್ಯಂತ ದಕ್ಷ ಆಡಳಿತಗಾರ, ಎಲ್ಲಾ ಧರ್ಮದವರನ್ನು ಪ್ರೀತಿಸುವ ಆದರ್ಶ ವ್ಯಕ್ತಿಯಾಗಿ ಗುರುತಿಸಲ್ಪಟ್ಟಿದ್ದಾರೆ. ಇವರ ಪುತ್ಥಳಿಯನ್ನು ತೆರವುಗೊಳಿಸಿರುವುದು ಖಂಡನೀಯ ತಕ್ಷಣ ಅದೇ ಸ್ಥಳದಲ್ಲಿ ಪುಸ್ಥಳಿಯನ್ನು ಪ್ರತಿಷ್ಠಾಪಿಸಬೇಕು ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಜಿಲ್ಲಾದ್ಯಂತ ಉಗ್ರ ಹೋರಾಟ ನಡೆಸಬೇಕಾಗುತ್ತದೆ ಎಂದು ಸಂಘದ ಅಧ್ಯಕ್ಷ ಯಶವಂತರಾವ್ ಘೋರ್ಪಡೆ ಎಚ್ಚರಿಸಿದ್ದಾರೆ.


ಎಸ್‌ಎಸ್‌ಎಲ್‌ಸಿ : ಭದ್ರಾವತಿ ವಿವಿಧ ಶಾಲೆಗಳ ಫಲಿತಾಂಶ ಬುಟ್ಟಿ ಹೆಣೆಯುವ ಮಗನಿಗೆ ೬೦೫ ಅಂಕ

ಬುಟ್ಟಿ ಹೆಣೆಯುವ ಕಾಯಕದಲ್ಲಿ ತೊಡಗಿಸಿಕೊಂಡಿರುವ ಷಣ್ಮುಖ ಎಂಬುವರ ಪುತ್ರ ಎಸ್. ತರುಣ್

ಭದ್ರಾವತಿ, ಆ. ೧೧: ಈ ಬಾರಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಕಾಗದನಗರ ಆಂಗ್ಲ ಶಾಲೆಗೆ ಶೇ.೭೬.೪೭ ಫಲಿತಾಂಶ ಲಭಿಸಿದ್ದು, ಒಟ್ಟು ಪರೀಕ್ಷೆ ಬರೆದ ೩೪ ವಿದ್ಯಾರ್ಥಿಗಳಲ್ಲಿ ೨೬ ಮಂದಿ ಉತ್ತೀರ್ಣರಾಗಿದ್ದಾರೆ.
ಚೇತನ್‌ಕುಮಾರ್ .ಎಚ್-೫೬೫, ಹರ್ಷಿತ .ಕೆ-೫೩೦, ಅಮೃತ್ ಎಂ.ಆರ್-೫೧೫, ಮಾನನಿ ಸಿ.ಎಚ್-೫೦೫, ದೀಕ್ಷಿತಾ ಕೆ.ಜಿ-೫೦೧, ರೋಹನ್ .ಜೆ-೪೯೧ ಮತ್ತು ಪವನ್ ಎ.ಎಸ್-೪೯೧ ಅತಿ ಹೆಚ್ಚು ಅಂಕಗಳನ್ನು ಪಡೆದುಕೊಂಡಿದ್ದಾರೆ.
    ಆಡಳಿತ ಮಂಡಳಿ, ಪ್ರಾಂಶುಪಾಲರು, ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗಳು ಉತ್ತೀರ್ಣರಾದ ವಿದ್ಯಾರ್ಥಿಗಳನ್ನು ಅಭಿನಂದಿಸಿದ್ದಾರೆ.
        ಕನಕ ವಿದ್ಯಾಸಂಸ್ಥೆ ಕನ್ನಡ ವಿಭಾಗ ಶೇ.೭೧, ಆಂಗ್ಲ ವಿಭಾಗ ಶೇ.೮೫ ಫಲಿತಾಂಶ:
     ಹಳೇನಗರದ ಕನಕ ವಿದ್ಯಾಸಂಸ್ಥೆ ಈ ಬಾರಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ  ಕನ್ನಡ ವಿಭಾಗದಲ್ಲಿ ಶೇ.೭೧ ಹಾಗೂ ಆಂಗ್ಲ ವಿಭಾಗದಲ್ಲಿ ಶೇ.೮೫ ಫಲಿತಾಂಶ ಪಡೆದುಕೊಂಡಿದೆ.
    ಕನ್ನಡ ವಿಭಾಗದಲ್ಲಿ ಇಂಚರ ಕೆ.ಆರ್-೫೭೦ ಅತಿ ಹೆಚ್ಚು ಅಂಕಗಳನ್ನು ಪಡೆದುಕೊಂಡಿದ್ದು, ಈ ವಿಭಾಗದಲ್ಲಿ ೯ ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ, ೯ ವಿದ್ಯಾರ್ಥಿಗಳು ದ್ವಿತೀಯ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ.
  ಆಂಗ್ಲ ವಿಭಾಗದಲ್ಲಿ ಸುಹಾಸ್ ಬಿ.ಎಸ್-೫೭೪, ದೀಕ್ಷಿತ ಕುಮಾರಿ .ಎ-೫೭೦, ದೀಕ್ಷಾ ಎಸ್. ಗಾಣಿಗ-೫೫೭, ನಯನ .ಆರ್. ಮಿರಜ್‌ಕರ್-೫೩೫, ಹಿತೇಶ್-೫೧೭, ಕಾರ್ತಿಕ್ .ಸಿ-೫೦೦ ಅತಿ ಹೆಚ್ಚು ಅಂಕಗಳನ್ನು ಪಡೆದ ವಿದ್ಯಾರ್ಥಿಗಳಾಗಿದ್ದು, ಈ ವಿಭಾಗದಲ್ಲಿ ೨೦ ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ, ೮ ವಿದ್ಯಾರ್ಥಿಗಳು ದ್ವಿತೀಯ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ.
      ಉತ್ತೀರ್ಣರಾದ ವಿದ್ಯಾರ್ಥಿಗಳನ್ನು ವಿದ್ಯಾಸಂಸ್ಥೆ ಆಡಳಿತ ಮಂಡಳಿ ಅಧ್ಯಕ್ಷರು, ಪದಾಧಿಕಾರಿಗಳು, ಮುಖ್ಯೋಪಾಧ್ಯಾಯರು, ಶಿಕ್ಷಕರು, ಸಿಬ್ಬಂದಿ ವರ್ಗದವರು ಅಭಿನಂದಿಸಿದ್ದಾರೆ.
      ಎಚ್.ಎನ್ ಲಿಖಿತ್ ಪಟೇಲ್ ಶೇ.೯೪.೫ ಫಲಿತಾಂಶ:
     ನಗರದ ಲೋಯರ್ ಹುತ್ತಾ ಪೂರ್ಣಪ್ರಜ್ಞ ಶಾಲೆ ವಿದ್ಯಾರ್ಥಿ ಎಚ್.ಎನ್ ಲಿಖಿತ್ ಪಟೇಲ್ ಈ ಬಾರಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಒಟ್ಟು ೫೯೦ ಅಂಕಗಳೊಂದಿಗೆ ಶೇ.೯೪.೫ ಫಲಿತಾಂಶ ಪಡೆದುಕೊಂಡಿದ್ದಾನೆ.
    ಈ ವಿದ್ಯಾರ್ಥಿ ಲಯನ್ಸ್ ಹೆಬ್ಬಂಡಿ ನಾಗರಾಜ್‌ರವರ ಪುತ್ರನಾಗಿದ್ದು, ಲಯನ್ಸ್ ಕ್ಲಬ್ ಸೇರಿದಂತೆ ವಿವಿಧ ಸಂಘಟನೆಗಳ ಪ್ರಮುಖರು ಈ ವಿದ್ಯಾರ್ಥಿಯನ್ನು ಅಭಿನಂದಿಸಿದ್ದಾರೆ.
     ಸುಷ್ಮ ಶೇ.೯೭.೨೮ ಫಲಿತಾಂಶ:
   ನಗರ ನ್ಯೂಟೌನ್ ಸೇಂಟ್ ಚಾರ್ಲ್ಸ್ ಪ್ರೌಢ ಶಾಲೆ ವಿದ್ಯಾರ್ಥಿನಿ ಸುಷ್ಮ ಈ ಬಾರಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಒಟ್ಟು ೬೦೮ ಅಂಕಗಳೊಂದಿಗೆ ಶೇ.೯೭.೨೮ ಫಲಿತಾಂಶು ಪಡೆದುಕೊಂಡಿದ್ದಾಳೆ.
ಈ ವಿದ್ಯಾರ್ಥಿನಿ ಸಿದ್ಧರೂಢನಗರದ ನಿವಾಸಿ ನಾಗರಾಜ್ ಮತ್ತು ಮಧುಮತಿ ದಂಪತಿ ಪುತ್ರಿಯಾಗಿದ್ದು, ಈ ವಿದ್ಯಾರ್ಥಿನಿ ಸಾಧ್ಯನೆಯನ್ನು ನಗರದ ಪ್ರಮುಖರು ಅಭಿನಂದಿಸಿದ್ದಾರೆ.
     ಬಿ.ವಿ ಇಳಾ ಕೌಲ್ ೬೧೮ ಅಂಕ:
  ನಗರದ ಲೋಯರ್ ಹುತ್ತಾ ಪೂರ್ಣಪ್ರಜ್ಞ ಶಾಲೆ ವಿದ್ಯಾರ್ಥಿನಿ ಬಿ.ವಿ ಇಳಾ ಕೌಲ್ ಈ ಬಾರಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ೬೨೫ಕ್ಕೆ ೬೧೮ ಅಂಕಗಳನ್ನು ಪಡೆದುಕೊಂಡಿದ್ದಾಳೆ.
ಈಕೆ ಕೆ. ವೀರಭದ್ರಸ್ವಾಮಿ ಮತ್ತು ಸವಿತಾ ಆಚಾರ್ ದಂಪಿತಿ ಪುತ್ರಿಯಾಗಿದ್ದು, ಈ ವಿದ್ಯಾರ್ಥಿನಿ ಸಾಧ್ಯನೆಯನ್ನು ನಗರದ ಪ್ರಮುಖರು ಅಭಿನಂದಿಸಿದ್ದಾರೆ.
     ಬುಟ್ಟಿ ಹೆಣೆಯುವವರ ಮಗನಿಗೆ ೬೦೫ ಅಂಕ:
   ಕಾಗದನಗರದ ಪೇಪರ್‌ಟೌನ್ ಪ್ರೌಢಶಾಲೆ ವಿದ್ಯಾರ್ಥಿ ಎಸ. ತರುಣ್ ಈ ಬಾರಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ೬೨೫ಕ್ಕೆ ೬೦೫ ಅಂಕಗಳನ್ನು ಪಡೆಯುವ ಮೂಲಕ ಶಾಲೆಗೆ ಕೀರ್ತಿ ತಂದಿದ್ದಾನೆ.
   ಈ ವಿದ್ಯಾರ್ಥಿಯ ತಂದೆ ಷಣ್ಮುಖ ಬುಟ್ಟಿ ಹೆಣೆಯುವ ಕಾಯಕದಲ್ಲಿ ತೊಡಗಿಸಿಕೊಂಡಿದ್ದು, ಬಡ ವಿದ್ಯಾರ್ಥಿಯ ಸಾಧನೆಗೆ ಶಾಲೆಯ ಆಡಳಿತ ಮಂಡಳಿ, ಮುಖ್ಯೋಪಾಧ್ಯಾಯರು, ಶಿಕ್ಷಕ ಹಾಗೂ ಸಿಬ್ಬಂದಿ ವರ್ಗದವರು ಅಭಿನಂದನೆ ಸಲ್ಲಿಸಿದ್ದಾರೆ.

ಗ್ರಾ.ಪಂ. ಚುನಾವಣೆ : ಮತದಾರರ ಪಟ್ಟಿ ಆಕ್ಷೇಪಣೆ ಸಲ್ಲಿಸಲು ಆ.೧೪ರವರೆಗೆ ಅವಕಾಶ


ಭದ್ರಾವತಿ, ಆ. ೧೧: ಗ್ರಾಮ ಪಂಚಾಯಿತಿ ಚುನಾವಣೆ ಹಿನ್ನಲೆಯಲ್ಲಿ ತಾಲೂಕಿನ ೧೧೨-ಭದ್ರಾವತಿ ವಿಧಾನಸಭಾ ಕ್ಷೇತ್ರ ಹಾಗೂ ೧೧೧-ಶಿವಮೊಗ್ಗ ಗ್ರಾಮಾಂತರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಕರಡು ಮತದಾರರ ಪಟ್ಟಿ ಪ್ರಕಟಿಸಲಾಗಿದ್ದು, ಹೆಸರು ಸೇರ್ಪಡೆ ಅಥವಾ ಇತರೆ ಯಾವುದೇ ಆಕ್ಷೇಪಣೆಗಳಿದ್ದಲ್ಲಿ ಆ.೧೪ರೊಳಗೆ ಆಕ್ಷೇಪಣೆ ಸಲ್ಲಿಸಬಹುದಾಗಿದೆ.
ಎರಡು ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯ ಫೆ.೭ರಂದು ಪ್ರಕಟಿಸಲಾಗಿದ್ದ ಮತದಾರರ ಪಟ್ಟಿಯ ಡಾಟಾ ಅಳವಡಿಸಿಕೊಂಡು ಗ್ರಾಮ ಪಂಚಾಯಿತಿ ಚುನಾವಣಾ ಕ್ಷೇತ್ರದ ಕರಡು ಮತದಾರರ ಪಟ್ಟಿ ಸಿದ್ದಪಡಿಸಲಾಗಿದೆ. ಆ.೭ರಂದು ತಾಲೂಕು ಕಛೇರಿ, ತಾಲೂಕು ಪಂಚಾಯಿತಿ, ಗ್ರಾಮ ಪಂಚಾಯಿತಿ ಹಾಗೂ ಮತಗಟ್ಟೆ ಕೇಂದ್ರಗಳಲ್ಲಿ ಪಟ್ಟಿ ಪ್ರಕಟಿಸಲಾಗಿದೆ. ಆಕ್ಷೇಪಣೆಗಳಿದ್ದಲ್ಲಿ ತಹಸೀಲ್ದಾರ್ ಅಥವಾ ಗ್ರಾಮ ಪಂಚಾಯಿತಿ ಮತದಾರರ ಪಟ್ಟಿ ತಯಾರಿಕೆ ಅಧಿಕಾರಿಗಳ ಬಳಿ ಲಿಖಿತವಾಗಿ ಆಕ್ಷೇಪಣೆ ಸಲ್ಲಿಸಬಹುದಾಗಿದೆ ಎಂದು ತಹಸೀಲ್ದಾರ್ ಎಚ್.ಸಿ ಶಿವಕುಮಾರ್ ತಿಳಿಸಿದ್ದಾರೆ.