Tuesday, May 18, 2021

ಎಚ್.ಸಿ ಸಿದ್ರಾಮಪ್ಪ ನಿಧನ


ಎಚ್.ಸಿ ಸಿದ್ರಾಮಪ್ಪ
   ಭದ್ರಾವತಿ, ಮೇ. ೧೮: ನಗರದ ನ್ಯೂಟೌನ್ ಬಿಪಿಎಲ್ ಸಂಘದ ಪ್ರಧಾನ ಕಾರ್ಯದರ್ಶಿ ಬಿ. ಜಗದೀಶ್ ಅವರ ಚಿಕ್ಕಪ್ಪ ಎಚ್.ಸಿ ಸಿದ್ರಾಮಪ್ಪ(೬೯) ಮಂಗಳವಾರ ಬೆಳಿಗ್ಗೆ ನಿಧನ ಹೊಂದಿದರು.
   ಪತ್ನಿ ಆರ್. ನಾಗರತ್ನಮ್ಮ, ಒಂದು ಗಂಡು, ಒಂದು ಹೆಣ್ಣು ಮಕ್ಕಳು, ಸಹೋದರ ಎಚ್.ಸಿ ಬೇಲೂರಪ್ಪ ಅವರನ್ನು ಹೊಂದಿದ್ದರು. ಇವರ ಅಂತ್ಯಕ್ರಿಯೆ ನಗರದ ಬೈಪಾಸ್ ರಸ್ತೆಯಲ್ಲಿರುವ ಹಿಂದೂ ರುದ್ರಭೂಮಿಯಲ್ಲಿ ನೆರವೇರಿತು. ಇವರ ನಿಧನಕ್ಕೆ ಬಿಪಿಎಲ್ ಸಂಘ ಹಾಗು ಜಯಕರ್ನಾಟಕ ಸಂಘಟನೆ ಸೇರಿದಂತೆ ಸಂಘ-ಸಂಸ್ಥೆಗಳು ಸಂತಾಪ ಸೂಚಿಸಿವೆ.

ಉಕ್ಕಿನ ನಗರದಲ್ಲಿ ೧೬೧ ಸೋಂಕು ಪತ್ತೆ : ೬ ಮಂದಿ ಬಲಿ

ಭದ್ರಾವತಿ, ಮೇ. ೧೮: ತಾಲೂಕಿನಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ಪುನಃ ೧೦೦ರ ಗಡಿ ದಾಟಿದೆ. ಮಂಗಳವಾರ ೧೬೧ ಸೋಂಕು ಪತ್ತೆಯಾಗಿದೆ.
ಒಟ್ಟು ೩೮೪ ಮಂದಿಯ ಮಾದರಿ ಸಂಗ್ರಹಿಸಲಾಗಿದ್ದು, ಈ ಪೈಕಿ ೧೬೧ ಮಂದಿಯಲ್ಲಿ ಸೋಂಕು ದೃಢಪಟ್ಟಿದೆ. ಒಟ್ಟು ೫೦ ಮಂದಿ ಗುಣಮುಖರಾಗಿ ಆಸ್ಪತ್ರೆಗಳಿಂದ ಬಿಡುಗಡೆಗೊಂಡಿದ್ದಾರೆ. ೬ ಮಂದಿ ಬಲಿಯಾಗಿದ್ದು, ಇದುವರೆಗೂ ಒಟ್ಟು ೭೭ ಮಂದಿ ಸಾವನ್ನಪ್ಪಿದ್ದಾರೆ. ೨೦೪ ಮಂದಿ ಚಿಕಿತ್ಸೆ ಪಡೆಯುತ್ತಿದ್ದು, ಸೆಮಿ ಲಾಕ್‌ಡೌನ್ ನಡುವೆಯೂ ಸೋಂಕಿನ ಪ್ರಮಾಣ ಇಳಿಕೆಯಾಗದಿರುವುದು ವಿಪರ್ಯಾಸದ ಸಂಗತಿಯಾಗಿದೆ.

ವೀರಾಪುರ ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿ ಎಂ.ಎಲ್ ಯಶೋಧರಯ್ಯ


ಭದ್ರಾವತಿ ತಾಲೂಕಿನ ವೀರಾಪುರ ಗ್ರಾಮ ಪಂಚಾಯಿತಿಗೆ ಮಂಗಳವಾರ ನಡೆದ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಎಂ.ಎಲ್ ಯಶೋಧರಯ್ಯ, ಉಪಾಧ್ಯಕ್ಷರಾಗಿ ಎಂ. ವೆಂಕಟೇಶ್ ಆಯ್ಕೆಯಾದರು.
   ಭದ್ರಾವತಿ, ಮೇ. ೧೮: ತಾಲೂಕಿನ ವೀರಾಪುರ ಗ್ರಾಮ ಪಂಚಾಯಿತಿಗೆ ಮಂಗಳವಾರ ನಡೆದ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಎಂ.ಎಲ್ ಯಶೋಧರಯ್ಯ ಆಯ್ಕೆಯಾದರು.
  ಉಪಾಧ್ಯಕ್ಷರಾಗಿ ಎಂ. ವೆಂಕಟೇಶ್ ಆಯ್ಕೆಯಾಗಿದ್ದು, ಕ್ಷೇತ್ರ ಶಿಕ್ಷಣಾಧಿಕಾರಿ ಟಿ.ಎನ್ ಸೋಮಶೇಖರಯ್ಯ ಚುನಾವಣಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದರು. ೧೧ ಸದಸ್ಯ ಸ್ಥಾನಗಳನ್ನು ಹೊಂದಿರುವ ವೀರಾಪುರ ಗ್ರಾಮ ಪಂಚಾಯಿತಿಗೆ ಇತ್ತೀಚೆಗೆ ಚುನಾವಣೆ ನಡೆದಿತ್ತು. ರಾಧ ಮಂಗಳಮ್ಮ, ಮಂಜಮ್ಮ ಜಡಿಯಪ್ಪ, ಜಬೀವುಲ್ಲಾ, ರೇಣುಕಮ್ಮ ರಾಜು, ಲೋಲಾಕ್ಷಿ, ಪಿ. ರಂಗಸ್ವಾಮಿ, ಎಂ. ವೆಂಕಟೇಶ್, ಎಂ.ಎಲ್ ಯಶೋಧರಯ್ಯ, ಜ್ಯೋತಿ, ಆಸಿಯಾ ಬಾನು ಮತ್ತು ಸೈಯದ್ ಜಬೀವುಲ್ಲಾ ಆಯ್ಕೆಯಾಗಿದ್ದರು.

ಪತ್ರಕರ್ತರಿಗೆ ಕೋವಿಡ್ ಲಸಿಕೆ


ಭದ್ರಾವತಿ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದಲ್ಲಿ ಮಂಗಳವಾರ ಪತ್ರಕರ್ತರಿಗೆ ಕೋವಿಡ್ ಲಸಿಕೆ ನೀಡಲಾಯಿತು.
    ಭದ್ರಾವತಿ, ಮೇ. ೧೮: ರಾಜ್ಯ ಸರ್ಕಾರ ಪತ್ರಕರ್ತರನ್ನು ಕೋವಿಡ್ ಮುಂಚೂಣಿ ಕಾರ್ಯಕರ್ತರಾಗಿ ಘೋಷಿಸಿದ ಹಿನ್ನಲೆಯಲ್ಲಿ ಆರೋಗ್ಯ ಇಲಾಖೆ ವತಿಯಿಂದ ಆದ್ಯತೆ ಮೇರೆಗೆ ಕೋವಿಡ್ ಲಸಿಕೆಯನ್ನು ಮಂಗಳವಾರ ನೀಡಲಾಯಿತು.
    ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಕೆ.ಎನ್ ಶ್ರೀಹರ್ಷ ನೇತೃತ್ವದಲ್ಲಿ ಹಳೇನಗರದ ಪತ್ರಿಕಾಭವನದಲ್ಲಿ ಹಮ್ಮಿಕೊಳ್ಳಲಾಗಿದ್ದ ಲಸಿಕಾ ಕಾರ್ಯಕ್ರಮದಲ್ಲಿ ಹಿರಿಯ ಪತ್ರಕರ್ತ ಗಣೇಶ್‌ರಾವ್ ಸಿಂಧ್ಯಾ ಅವರಿಗೆ ಲಸಿಕೆ ನೀಡುವ ಮೂಲಕ ಚಾಲನೆ ನೀಡಲಾಯಿತು.
    ತಾಲೂಕು ಆರೋಗ್ಯಾಧಿಕಾರಿ ಡಾ. ಎಂ.ವಿ ಅಶೋಕ್, ಹಿರಿಯ ಪತ್ರಕರ್ತ ಕಣ್ಣಪ್ಪ ಸೇರಿದಂತೆ ಸಂಘದ ಪದಾಧಿಕಾರಿಗಳು, ಸದಸ್ಯರು ಹಾಗು ಆರೋಗ್ಯ ಇಲಾಖೆ ಲಸಿಕಾ ತಂಡದವರು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.


ಬಜರಂಗದಳದಿಂದ ಕೋವಿಡ್ ಮೃತದೇಹಗಳ ಸಾಗಾಣಿಕೆಗೆ ವಾಹನ ವ್ಯವಸ್ಥೆ

    ಭದ್ರಾವತಿ, ಮೇ. ೧೮: ಕೊರೋನಾ ಸೋಂಕಿನಿಂದ ಮೃತಪಟ್ಟವರ ಅಂತ್ಯ ಸಂಸ್ಕಾರದಲ್ಲಿ ಪಾಲ್ಗೊಳ್ಳುವ ಮೂಲಕ ಸೇವಾ ಕಾರ್ಯದಲ್ಲಿ ವಿಶಿಷ್ಟತೆ ಕಾಯ್ದುಕೊಂಡಿರುವ ಬಜರಂಗದಳ ಇದೀಗ ಮೃತ ದೇಹಗಳನ್ನು ಆಸ್ಪತ್ರೆಯಿಂದ ಸಂಬಂಧಪಟ್ಟ ವಾರಸುದಾರರಿಗೆ ತಲುಪಿಸುವ  ಕಾರ್ಯದಲ್ಲೂ ಮುಂದಾಗಿದೆ.
    ಕೊರೋನಾ ಸೋಂಕಿನಿಂದ ಮೃತಪಟ್ಟವರ ದೇಹಗಳನ್ನು ಶಿವಮೊಗ್ಗದಿಂದ ಭದ್ರಾವತಿಗೆ ಸಾಗಿಸಲು ಖಾಸಗಿ ಅಂಬ್ಯುಲೆನ್ಸ್‌ಗಳಲ್ಲಿ ಸುಮಾರು ೧೦ ರಿಂದ ೧೨ ಸಾವಿರ ರು. ಬಾಡಿಗೆ ಪಡೆಯುತ್ತಿದ್ದು, ಇದರಿಂದಾಗಿ ಬಡವರ್ಗದವರು ಸಂಕಷ್ಟಕ್ಕೆ ಒಳಗಾಗುವಂತಾಗಿದೆ. ಈ ವಿಚಾರ ಅರಿತುಕೊಂಡಿರುವ ಬಜರಂಗದಳ ಕಾರ್ಯಕರ್ತರು ಇದೀಗ ಮೃತ ದೇಹಗಳ ಸಾಗಾಣಿಕೆಗೆ ವಾಹನ ವ್ಯವಸ್ಥೇ ಕೈಗೊಂಡಿದೆ.
    ಬಡವರ್ಗದವರು ಇದರ ಸದುಪಯೋಗ ಪಡೆದುಕೊಳ್ಳಬಹುದಾಗಿದೆ. ಹೆಚ್ಚಿನ ಮಾಹಿತಿಗೆ ರಾಘವನ್ ವಡಿವೇಲು ಮೊ: ೭೦೧೯೭೮೮೪೮೫, ದೇವರಾಜ್ ಅರಳಿಹಳ್ಳಿ ಮೊ: ೯೬೩೨೩೧೯೫೫೫, ಸುನಿಲ್ ಮೊ: ೯೪೮೩೪೧೮೨೮೪ ಸಂಖ್ಯೆಗೆ ಕರೆ ಮಾಡಬಹುದಾಗಿದೆ.  

ಕೋವಿಡ್-೧೯ : ಶಂಕರ ಜಯಂತಿ ಸರಳ ಆಚರಣೆ

ಕೋವಿಡ್-೧೯ರ ಹಿನ್ನಲೆಯಲ್ಲಿ ಭದ್ರಾವತಿ ಹಳೇನಗರದ ಶ್ರೀ ರಾಮೇಶ್ವರ ಮತ್ತು ಶ್ರೀ ಸುಬ್ರಮಣ್ಯ ಸ್ವಾಮಿ ದೇವಸ್ಥಾನದಲ್ಲಿ ಸೋಮವಾರ ಶಂಕರ ಜಯಂತಿ ಸರಳವಾಗಿ ಆಚರಿಸಲಾಯಿತು.
    ಭದ್ರಾವತಿ, ಮೇ. ೧೮: ಕೋವಿಡ್-೧೯ರ ಹಿನ್ನಲೆಯಲ್ಲಿ ಹಳೇನಗರದ ಶ್ರೀ ರಾಮೇಶ್ವರ ಮತ್ತು ಶ್ರೀ ಸುಬ್ರಮಣ್ಯ ಸ್ವಾಮಿ ದೇವಸ್ಥಾನದಲ್ಲಿ ಸೋಮವಾರ ಶಂಕರ ಜಯಂತಿ ಸರಳವಾಗಿ ಆಚರಿಸಲಾಯಿತು.
ದೇವಸ್ಥಾನದ ಆವರಣದಲ್ಲಿ ಲೋಕಾಕಲ್ಯಾಣಾರ್ಥವಾಗಿ ಶ್ರೀ ಆದಿ ಶಂಕರಚಾರ್ಯರ ಭಾವಚಿತ್ರದೊಂದಿಗೆ ಉತ್ಸವ ನಡೆಸಿ ಪ್ರಾರ್ಥಿಸಲಾಯಿತು. 
        ಈ ಸಂದರ್ಭದಲ್ಲಿ ಸಮಿತಿ ಅಧ್ಯಕ್ಷರು, ಪದಾಧಿಕಾರಿಗಳು ಹಾಗು ವಿವಿಧ ಸಂಸ್ಥೆಗಳ ಪ್ರಮುಖರು, ಭಕ್ತರು ಪಾಲ್ತೊಂಡಿದ್ದರು.
    ಹೊಸಸೇತುವೆ ರಸ್ತೆಯ ಸಿದ್ದರೂಢನಗರದಲ್ಲಿರುವ ಶ್ರೀ ಶಂಕರ ಮಠದಲ್ಲಿ ಶ್ರೀ ಆದಿ ಶಂಕರಚಾರ್ಯರ ಶಿಲಾಮೂರ್ತಿಗೆ ವಿಶೇಷ ಅಲಂಕಾರದೊಂದಿಗೆ ಪೂಜೆ ನೆರವೇರಿಸಲಾಯಿತು. ಮಠದ ಪ್ರಮುಖರು ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.