![](https://blogger.googleusercontent.com/img/a/AVvXsEgCLHGm7U0cjBpVZp1s-h9qWfC2Yg4m8u993qEeILH-bNVfQfhKatPAwilnSWT88HOnybX_M1XJgVFqF_brB208ID2rsmHLHJghk-OfIqB2KfgITTHgZ3zcsGuq_7tRv1inz1D6pFgFnUGeoW9742Sl1e24RqnczeCthQA3N3d1S_lON8FK_ZZTp9Au4E2f=w400-h198-rw)
ಭದ್ರಾವತಿ ನಗರಸಭೆ ವತಿಯಿಂದ ಭಾನುವಾರ `ನನ್ನ ಮಣ್ಣು ನನ್ನ ದೇಶ'(ಮೇರಿ ಮಾಟಿ ಮೇರಾ ದೇಶ್) ಅಭಿಯಾನ ನಗರಸಭೆ ಮುಂಭಾಗದಲ್ಲಿರುವ ವಿನೋಬಭಾವೆ ಉದ್ಯಾನವನದಲ್ಲಿ ಸೈನಿಕರ ಫಲಕ ಅನಾವರಣಗೊಳಿಸಿ ಗೌರವ ಸಲ್ಲಿಸಲಾಯಿತು.
ಭದ್ರಾವತಿ, ಆ. ೨೦ : ಮಾಜಿ ಮುಖ್ಯಮಂತ್ರಿ ಡಿ. ದೇವರಾಜ ಅರಸು ಅವರ ಆಡಳಿತ ಇಂದಿನವರಿಗೆ ಮಾದರಿಯಾಗಿದೆ ಎಂದು ನಗರಸಭೆ ಅಧ್ಯಕ್ಷೆ ಶೃತಿ ವಸಂತಕುಮಾರ್ ಹೇಳಿದರು.
ಅವರು ಭಾನುವಾರ ನಗರಸಭೆ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಡಿ. ದೇವರಾಜ ಅರಸು ಜನ್ಮದಿನಾಚರಣೆ ಹಾಗು `ನನ್ನ ಮಣ್ಣು ನನ್ನ ದೇಶ'(ಮೇರಿ ಮಾಟಿ ಮೇರಾ ದೇಶ್) ಅಭಿಯಾನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಡಿ. ದೇವರಾಜ ಅರಸು ಅವರು ಹೊಂದಿದ್ದ ಜನಪರ ಕಾಳಜಿ ಹಾಗೂ ಆ ನಿಟ್ಟಿನಲ್ಲಿ ಜಾರಿಗೆ ತಂದ ಯೋಜನೆಗಳು ಸಮಾಜಕ್ಕೆ ಇಂದಿಗೂ ಮಾದರಿಯಾಗಿವೆ. ಅರಸು ಅವರು ಶೋಷಿತರ ಧ್ವನಿಯಾಗಿ ಸಮಾಜದ ಎಲ್ಲಾ ವರ್ಗದವರ ಏಳಿಗೆಗಾಗಿ ಶ್ರಮಿಸಿದ ಮಹಾನ್ ವ್ಯಕ್ತಿಯಾಗಿದ್ದು, ಇವರ ಆದರ್ಶಗಳನ್ನು ನಾವೆಲ್ಲರೂ ಪಾಲಿಸಬೇಕಾಗಿದೆ ಎಂದರು.
ಪೌರಾಯುಕ್ತ ಎಚ್.ಎಂ ಮನುಕುಮಾರ್ ಮಾತನಾಡಿ, ಡಿ.ದೇವರಾಜ ಅರಸು ಅವರು ತಮ್ಮ ಆಡಳಿತಾವಧಿಯಲ್ಲಿ ಸಾಕಷ್ಟು ಜನಪರ ಯೋಜನೆಗಳನ್ನು ಜಾರಿಗೆ ತಂದರು. ಅಂದಿನ ಸಮಾಜದಲ್ಲಿನ ಅನಿಷ್ಟ ಪದ್ದತಿಗಳನ್ನು ಹೋಗಲಾಡಿಸಿ ಹಿಂದುಳಿದ ವರ್ಗದವರನ್ನು ಗುರುತಿಸಿ ಶೋಷಿತ ವರ್ಗಕ್ಕೆ ಧ್ವನಿಯಾಗಿ ದಲಿತರ ಏಳಿಗೆಗೆ ಬುನಾದಿ ಹಾಕಿಕೊಟ್ಟವರು ಎಂದರು.
ಯೋಧರು ಎಂದರೆ ಶಿಸ್ತು, ಸಂಯಮಕ್ಕೆ ಹೆಸರಾದವರು. ದೇಶಕ್ಕಾಗಿ ತ್ಯಾಗ, ಬಲಿದಾನಗಳನ್ನು ಮಾಡಿದ ಸೈನಿಕರನ್ನು ಗುರುತಿಸಿ ಗೌರವಿಸಬೇಕಾಗಿರುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದರು.
ಭದ್ರಾವತಿಯಲ್ಲಿ ಭಾನುವಾರ ನಗರಸಭೆ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಡಿ. ದೇವರಾಜ ಅರಸು ಜನ್ಮದಿನಾಚರಣೆ ಹಾಗು `ನನ್ನ ಮಣ್ಣು ನನ್ನ ದೇಶ'(ಮೇರಿ ಮಾಟಿ ಮೇರಾ ದೇಶ್) ಅಭಿಯಾನ ಕಾರ್ಯಕ್ರಮದಲ್ಲಿ ಮಾಜಿ ಸೈನಿಕರನ್ನು ಸನ್ಮಾನಿಸಿ ಗೌರವಿಸಲಾಯಿತು.
ಮೇಜರ್ ಡಾ. ವಿಕ್ರಂ ಕೆದಿಲಾಯ ಮಾತನಾಡಿ, ಸೈನಿಕರಾಗಿ ದೇಶ ಸೇವೆ ಮಾಡುವುದು ಸುಲಭವಲ್ಲ. ಬದ್ಧತೆ, ದೇಶ ಭಕ್ತಿ, ಸದೃಢ ಮನಸ್ಸು ಬಹಳ ಮುಖ್ಯವಾಗಿದೆ. ಕುಟುಂಬದಿಂದ ದೂರು ಉಳಿದು ಪ್ರಾಮಾಣಿಕವಾಗಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ ಸೈನಿಕರನ್ನು ಸಮಾಜದಲ್ಲಿ ಗುರುತಿಸಿ ಗೌರವಿಸುವವರು ಬಹಳ ವಿರಳ. ನಗರಸಭೆವತಿಯಿಂದ ಸೈನಿಕರನ್ನು ಗುರುತಿಸಿ ಗೌರವಿಸುವ ಕೆಲಸ ನಡೆಯುತ್ತಿರುವುದು ನಿಜಕ್ಕೂ ಹೆಮ್ಮೆಯ ಸಂಗತಿಯಾಗಿದೆ ಎಂದರು.
`ನನ್ನ ಮಣ್ಣು ನನ್ನ ದೇಶ'(ಮೇರಿ ಮಾಟಿ ಮೇರಾ ದೇಶ್) ಅಭಿಯಾನ ಪ್ರಯುಕ್ತ ನಗರಸಭೆ ಮುಂಭಾಗದಲ್ಲಿರುವ ವಿನೋಬಭಾವೆ ಉದ್ಯಾನವನದಲ್ಲಿ ಸಸಿ ನೆಡುವ ಮೂಲಕ ಸೈನಿಕರ ಫಲಕ ಉದ್ಘಾಟಿಸಲಾಯಿತು. ಮಾಜಿ ಸೈನಿಕರನ್ನು ಸನ್ಮಾನಿಸಿ ಗೌರವಿಸಲಾಯಿತು.
ನಗರಸಭೆ ಉಪಾಧ್ಯಕ್ಷೆ ಸರ್ವಮಂಗಳ ಭೈರಪ್ಪ, ಮಾಜಿ ಉಪಾಧ್ಯಕ್ಷ ಚನ್ನಪ್ಪ, ಸದಸ್ಯ ಬಸವರಾಜ ಬಿ. ಆನೆಕೊಪ್ಪ, ಸಮುದಾಯ ಸಂಘಟನಾ ಅಧಿಕಾರಿ ಸುಹಾಸಿನಿ, ಪರಿಸರ ಅಭಿಯಂತರ ಪ್ರಭಾಕರ್, ವ್ಯವಸ್ಥಾಪಕಿ ಎಂ. ಸುನಿತ ಕುಮಾರಿ, ಸಹಾಯಕ ಕಾರ್ಯಪಾಲಕ ಅಭಿಯಂತರ ಬಿ.ಬಿ ಶಿವಪ್ರಸಾದ್, ಮಾಜಿ ಸೈನಿಕರ ಸಂಘದ ಅಧ್ಯಕ್ಷ ಅಶೋಕ್, ಪ್ರಧಾನ ಕಾರ್ಯದರ್ಶಿ ವೆಂಕಟ ಗಿರಿ, ಉಪಾಧ್ಯಕ್ಷ ಬಿ.ಆರ್ ದಿನೇಶ್ ಕುಮಾರ್, ಖಜಾಂಚಿ ಬೋರೇಗೌಡ, ಮುದುಗಲ ರಾಮರೆಡ್ಡಿ, ಗೋವಿಂದಪ್ಪ, ಅಶೋಕ್ ಸೇರಿದಂತೆ ನಗರಸಭೆ ಅಧಿಕಾರಿಗಳು, ಸಿಬ್ಬಂದಿಗಳು, ಮಾಜಿ ಸೈನಿಕರು ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.