Saturday, November 5, 2022

ಎನ್. ಗೋವಿಂದಪ್ಪ ನಿಧನ

ಎನ್. ಗೋವಿಂದಪ್ಪ
    ಭದ್ರಾವತಿ, ನ. ೫: ಯಾದವ ಸಮಾಜದ ಪ್ರಮುಖರು, ತಾಲೂಕು ಮಂಡಲ ಅಧ್ಯಕ್ಷ ಜಿ. ಧರ್ಮಪ್ರಸಾದ್ ಅವರ ತಂದೆ ಎನ್. ಗೋವಿಂದಪ್ಪ(೮೨) ನಿಧನ ಹೊಂದಿದರು.
    ಓರ್ವ ಪುತ್ರಿ, ಇಬ್ಬರು ಪುತ್ರರು ಹಾಗು ಮೊಮ್ಮಕ್ಕಳನ್ನು ಹೊಂದಿದ್ದರು. ಗೋವಿಂದಪ್ಪರವರು ಯಾದವ ಸಮಾಜದ ಸಂಸ್ಥಾಪಕ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು. ಇವರ ಅಂತ್ಯಕ್ರಿಯೆ ಚಿತ್ರದುರ್ಗ ಜಿಲ್ಲೆ ಹೊಳಲ್ಕೆರೆ ತಾಲೂಕಿನ ರಾಮಗಿರಿ ಹೋಬಳಿ ಗೌಡಿಹಳ್ಳಿಯಲ್ಲಿ ಭಾನುವಾರ ನಡೆಯಲಿದೆ. 
    ಗೋವಿಂದಪ್ಪನವರ ನಿಧನಕ್ಕೆ ಬಿಜೆಪಿ ಪ್ರಮುಖರು, ಯಾದವ ಸಮಾಜ ಸೇರಿದಂತೆ ವಿವಿಧ ಸಮಾಜಗಳ ಅಧ್ಯಕ್ಷರು, ಪದಾಧಿಕಾರಿಗಳು, ಗಣ್ಯರು ಸಂತಾಪ ಸೂಚಿಸಿದ್ದಾರೆ.

ರಸ್ತೆ ಅಪಘಾತ : ಗೃಹಿಣಿ ಸ್ಥಳದಲ್ಲಿಯೇ ಸಾವು

ಭದ್ರಾವತಿ ಬೈಪಾಸ್ ರಸ್ತೆ ಹಳೇಕಡದಕಟ್ಟೆ ಬಳಿ ಶನಿವಾರ ಮಧ್ಯಾಹ್ನ ನಡೆದ ಅಪಘಾತದಲ್ಲಿ ಲಾರಿಯ ಕೆಳಗೆ ದ್ವಿಚಕ್ರವಾಹನ ಸಿಕ್ಕಿ ಹಾಕಿಕೊಂಡಿರುವುದು.
    ಭದ್ರಾವತಿ, ನ. ೫ : ರಸ್ತೆ ಅಪಘಾತದಲ್ಲಿ ಗೃಹಿಣಿಯೊಬ್ಬರು ಸಾವನ್ನಪ್ಪಿರುವ ಘಟನೆ ಶನಿವಾರ ಮಧ್ಯಾಹ್ನ ನಗರದ ಬೈಪಾಸ್ ರಸ್ತೆ ಹಳೇಕಡದಕಟ್ಟೆ ಬಳಿ ನಡೆದಿದೆ. ಮೃತಪಟ್ಟ ಗೃಹಿಣಿಯನ್ನು ತಾಲೂಕಿನ ತಾರೀಕಟ್ಟೆ ನಿವಾಸಿ ಪ್ರೀತಿ ಅಲಿಯಾಸ್ ಜ್ಞಾನೇಶ್ವರಿ(೨೬) ಎಂದು ಗುರುತಿಸಲಾಗಿದೆ.  ಅನಾರೋಗ್ಯದಿಂದ ಶಿವಮೊಗ್ಗ ಮೆಗ್ಗಾನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಪತಿಯನ್ನು ನೋಡಿಕೊಂಡು ಬರಲು ಮೈದುನ ಪ್ರೇಮ್‌ಸಾಗರ್ ಜೊತೆ ದ್ವಿಚಕ್ರ ವಾಹನದಲ್ಲಿ ತೆರಳುತ್ತಿದ್ದಾಗ ಈ ದುರ್ಘಟನೆ ನಡೆದಿದೆ.
    ಅಪಘಾತದಲ್ಲಿ ಲಾರಿಯ ಕೆಳಗೆ ದ್ವಿಚಕ್ರ ವಾಹನ ಸಿಕ್ಕಿ ಹಾಕಿಕೊಂಡಿದ್ದು, ಲಾರಿ ಮೈಮೇಲೆ ಹರಿದ ಪರಿಣಾಮ ಪ್ರೀತಿ ತೀವ್ರ ಗಾಯಗೊಂಡು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಪ್ರೇಮ್‌ಸಾಗರ್ ತೀವ್ರ ಗಾಯಗೊಂಡಿದ್ದು, ಶಿವಮೊಗ್ಗ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ.

ಆಹಾರ ನಿಗಮಕ್ಕೆ ಸೇರಿದ ಗೋಧಿ ಅಕ್ರಮ ದಾಸ್ತಾನಿಗೆ ಯತ್ನ

೪.೯೫ ಲಕ್ಷ ರು. ಮೌಲ್ಯದ ಒಟ್ಟು ೨೩೪ ಚೀಲ ಗೋಧಿ ವಶ

ಕರ್ನಾಟಕ ಆಹಾರ ಮತ್ತು ನಾಗರೀಕ ಸರಬರಾಜು ನಿಗಮ ನಿಯಮಿತ(ಕೆಎಫ್‌ಸಿಎಸ್‌ಸಿ)ಕ್ಕೆ ಸೇರಿದ ಕಡೂರು-೧ ಗೋದಾಮಿಗೆ ಸರಬರಾಜು ಮಾಡಬೇಕಿದ್ದ ಗೋಧಿಯನ್ನು ಅಕ್ರಮವಾಗಿ ಬೇರೆಡೆ ದಾಸ್ತಾನು ಮಾಡಲು ಯತ್ನಿಸಿ ಸಿಕ್ಕಿಬಿದ್ದಿರುವ ಘಟನೆ ಕಳೆದ ೩ ದಿನಗಳ ಹಿಂದೆ ಭದ್ರಾವತಿಯಲ್ಲಿ ನಡೆದಿದೆ.
ಭದ್ರಾವತಿ, ನ. ೫ : ಕರ್ನಾಟಕ ಆಹಾರ ಮತ್ತು ನಾಗರೀಕ ಸರಬರಾಜು ನಿಗಮ ನಿಯಮಿತ(ಕೆಎಫ್‌ಸಿಎಸ್‌ಸಿ)ಕ್ಕೆ ಸೇರಿದ ಕಡೂರು-೧ ಗೋದಾಮಿಗೆ ಸರಬರಾಜು ಮಾಡಬೇಕಿದ್ದ ಗೋಧಿಯನ್ನು ಅಕ್ರಮವಾಗಿ ಬೇರೆಡೆ ದಾಸ್ತಾನು ಮಾಡಲು ಯತ್ನಿಸಿ ಸಿಕ್ಕಿಬಿದ್ದಿರುವ ಘಟನೆ ಕಳೆದ ೩ ದಿನಗಳ ಹಿಂದೆ ನಡೆದಿದೆ.
ಒಟ್ಟು ಸುಮಾರು ೪,೯೫,೦೦೦ ರು. ಮೌಲ್ಯದ ಒಟ್ಟು ೫೦ ಕೆ.ಜಿ ತೂಕದ ಒಟ್ಟು ೨೩೪ ಚೀಲ ಗೋಧಿಯನ್ನು ವಶಪಡಿಸಿಕೊಳ್ಳಲಾಗಿದೆ. ಕಾರ್ಯಾಚರಣೆ ವೇಳೆ ವಶಪಡಿಸಿಕೊಳ್ಳಲಾಗಿರುವ ಲಾರಿ ಚಿಕ್ಕಮಗಳೂರು ಜಿಲ್ಲೆಯ ಸಗಟು ಸಾಗಾಣಿಕೆ ಗುತ್ತಿಗೆದಾರರೊಬ್ಬರಿಗೆ ಸೇರಿದೆ ಎನ್ನಲಾಗಿದೆ.
ಈ ಲಾರಿಯಲ್ಲಿ ನಗರದ ಬಿ.ಎಚ್ ರಸ್ತೆ ಉಪ ಅರಣ್ಯ ಸಂರಕ್ಷಣಾಧಿಕಾರಿ ಕಛೇರಿ ಸಮೀಪದಲ್ಲಿರುವ ಭಾರತೀಯ ಆಹಾರ ನಿಗಮ ಗೋದಾಮಿನಿಂದ ಪಡೆದ ಗೋಧಿಯನ್ನು ಮಾಚೇನಹಳ್ಳಿ ಕೈಗಾರಿಕಾ ಪ್ರದೇಶದಲ್ಲಿರುವ ಪ್ಲೋರ್ ಮಿಲ್ ಒಂದರಲ್ಲಿ ಅಕ್ರಮವಾಗಿ ಸಂಗ್ರಹಿಸಿಡಲು ಯತ್ನಿಸಲಾಗಿತ್ತು. ಖಚಿತ ಮಾಹಿತಿ ಆಧಾರದ ಮೇರೆಗೆ ಆಹಾರ ಇಲಾಖೆ ಅಧಿಕಾರಿ ಸುನೀತ ಹಾಗು ನಗರ ಪೊಲೀಸ್ ವೃತ್ತ ನಿರೀಕ್ಷಕ ರಾಘವೇಂದ್ರ ಕಾಂಡಿಕೆ ನೇತೃತ್ವದ ತಂಡ ಕಾರ್ಯಾಚರಣೆ ನಡೆಸಿದೆ.
ವಶಪಡಿಸಿಕೊಳ್ಳಲಾಗಿರುವ ಗೋಧಿ ಸರ್ಕಾರಿ ಶಾಲಾ ಮಕ್ಕಳಿಗೆ ನೀಡುವ ಮಧ್ಯಾಹ್ನದ ಬಿಸಿಯೂಟಕ್ಕೆ ಬಳಸುವುದಾಗಿದ್ದು, ಹೆಚ್ಚಿನ ಬೆಲೆಗೆ ಖಾಸಗಿಯವರಿಗೆ ಮಾರಾಟ ಮಾಡಲು ಯತ್ನಿಸಲಾಗುತ್ತಿತ್ತು ಎನ್ನಲಾಗಿದೆ. ಲಾರಿ ಚಾಲಕ ಪರಾರಿಯಾಗಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸ್ ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ.
ಈ ನಡುವೆ ಕರ್ನಾಟಕ ರಕ್ಷಣಾ ವೇದಿಕೆ(ನಾರಾಯಣಗೌಡ) ಮುಖಂಡರಾದ ಎನ್. ಸಂತೋಷ್ ಮತ್ತು ಎ. ಶರತ್‌ಕುಮಾರ್‌ರವರು ಕಾರ್ಯಾಚರಣೆಯಲ್ಲಿ ವಶಪಡಿಸಲಾಗಿರುವ ಗೋಧಿ ತುಂಬಿದ ಲಾರಿ ಚಿಕ್ಕಮಗಳೂರು ಜಿಲ್ಲೆಯ ಸಗಟು ಸಾಗಾಣಿಕೆ ಗುತ್ತಿಗೆದಾರರಾದ ಬೇಲೂರು ಎಂ.ಕೆ ರೋಡ್ ಲೈನ್ಸ್ ಮಾಲೀಕ ಡಿ.ಪಿ ನಾಗೇಶ್ ಎಂಬುವರಿಗೆ ಸೇರಿದ್ದಾಗಿದೆ. ಇವರ ವಿರುದ್ಧ ಕಾನೂನು ಕ್ರಮ ಜರುಗಿಸುವಂತೆ ಪೊಲೀಸರಿಗೆ ದೂರು ನೀಡಿ ಒತ್ತಾಯಿಸಿದ್ದಾರೆ. ಕರ್ನಾಟಕ ರಕ್ಷಣಾ ವೇದಿಕೆ ಚಿಕ್ಕಮಗಳೂರು ಜಿಲ್ಲಾಧ್ಯಕ್ಷರ ಮಾಹಿತಿ ಮೇರೆಗೆ ಕಾರ್ಯಾಚರಣೆಯಲ್ಲಿ ಪೊಲೀಸರಿಗೆ ನೆರವಾಗಿದ್ದು, ಯಶಸ್ವಿ ಕಾರ್ಯಚರಣೆ ನಡೆಸಿರುವ ತಂಡಕ್ಕೆ  ಕೃತಜ್ಞತೆ ಸಲ್ಲಿಸಿದ್ದಾರೆ.

ಹಿರಿಯ ಪತ್ರಕರ್ತರಾದ ಶಾಂತಿ ಕಣ್ಣಪ್ಪ ದಂಪತಿಗೆ ಸನ್ಮಾನ

ಭದ್ರಾವತಿ ಪೀಪಲ್ ಲಿಬರೇಷನ್ ಸಂಘ ಮತ್ತು ಪ್ರತಿಕ್ಷಣ ಚಾರಿಟಬಲ್ ಟ್ರಸ್ ವತಿಯಿಂದ ಹಿರಿಯ ಪತ್ರಕರ್ತರಾದ ಶಾಂತಿಕಣ್ಣಪ್ಪ ದಂಪತಿಯನ್ನು ಸನ್ಮಾನಿಸಿ ಗೌರವಿಸಲಾಯಿತು.
    ಭದ್ರಾವತಿ, ನ. ೫ : ಭದ್ರಾವತಿ ಪೀಪಲ್ ಲಿಬರೇಷನ್ ಸಂಘ ಮತ್ತು ಪ್ರತಿಕ್ಷಣ ಚಾರಿಟಬಲ್ ಟ್ರಸ್ ವತಿಯಿಂದ ಹಿರಿಯ ಪತ್ರಕರ್ತರಾದ ಶಾಂತಿಕಣ್ಣಪ್ಪ ದಂಪತಿಯನ್ನು ಸನ್ಮಾನಿಸಿ ಗೌರವಿಸಲಾಯಿತು.
ನ್ಯೂಟೌನ್ ವಿಐಎಸ್‌ಎಲ್ ಆಸ್ಪತ್ರೆ ಸಮೀಪದಲ್ಲಿರುವ ಟ್ರಸ್ಟ್ ಕಛೇರಿಯಲ್ಲಿ ಹಮ್ಮಿಕೊಳ್ಳಲಾಗಿದ್ದ ಲಕ್ಷ್ಮೀ ಪೂಜೆ ಹಾಗು ಬೆಟ್ಟದ ನೆಲ್ಲಿಕಾಯಿ ಸಸಿ ವಿತರಣೆ ಕಾರ್ಯಕ್ರಮದಲ್ಲಿ ಶಾಂತಿಕಣ್ಣಪ್ಪ ಅವರನ್ನು ಸನ್ಮಾನಿಸಲಾಯಿತು.
    ಭದ್ರಾವತಿ ಪೀಪಲ್ ಲಿಬರೇಷನ್ ಸಂಘದ ಅಧ್ಯಕ್ಷ ಜಗದೀಶ್, ಮುರಳಿಕೃಷ್ಣ, ಗ್ರಾಮ ಪಂಚಾಯಿತಿ ಸದಸ್ಯ ಶಿವರಾಮ್, ಸಾಮಾಜಿಕ ಹೋರಾಟಗಾರ ಶಿವಕುಮಾರ್, ಪತ್ರಕರ್ತರಾದ ಬದರಿನಾರಾಯಣ ಶ್ರೇಷ್ಠಿ, ಫಿಲೋಮಿನಾ, ಅನಂತಕುಮಾರ್, ಪ್ರಮುಖರಾದ ಜಯಲಕ್ಷ್ಮೀ, ಎಚ್.ಆರ್ ಮಮತ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.