Wednesday, March 31, 2021

ಸರ್ಕಾರಿ ಅಧಿಕಾರಿಗಳು, ನೌಕರರು ತಮ್ಮದಲ್ಲದ ತಪ್ಪುಗಳಿಗೆ ಸಿಕ್ಕಿಹಾಕಿಕೊಳ್ಳದಿರಿ : ದೂದ್‌ಪೀರ್

ಭದ್ರಾವತಿ ತಾಲೂಕು ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ದೂದ್‌ಪೀರ್‌ರವರು ಪದೋನ್ನತ್ತಿಹೊಂದಿ ಉಡುಪಿಗೆ ವರ್ಗಾವಣೆಗೊಂಡ ಹಿನ್ನಲೆಯಲ್ಲಿ ಬುಧವಾರ ಅವರಿಗೆ ಬೀಳ್ಕೊಡುಗೆ ನೀಡಲಾಯಿತು.
   ಭದ್ರಾವತಿ, ಮಾ. ೩೧: ಸರ್ಕಾರಿ ಅಧಿಕಾರಿಗಳು, ನೌಕರರು ಬಹಳ ಎಚ್ಚರಿಕೆಯಿಂದ ತಮ್ಮ ಜವಾಬ್ದಾರಿಗಳನ್ನು ನಿರ್ವಹಿಸಬೇಕು. ತಮ್ಮದಲ್ಲದ ತಪ್ಪುಗಳಿಗೆ ಸಿಕ್ಕಿಹಾಕಿಕೊಳ್ಳುವ ಪರಿಸ್ಥಿತಿಗೆ ಎಡೆ ಮಾಡಿಕೊಡಬಾರದು ಎಂದು ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ದೂದ್‌ಪೀರ್ ಹೇಳಿದರು.
   ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಬೀಳ್ಕೊಡುಗೆ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದರು. ಬಹಳಷ್ಟು ಸಮಯದಲ್ಲಿ ಅಧಿಕಾರಿಗಳು ಮತ್ತು ನೌಕರರು ಬಲಿಪಶುಗಳಾಗುತ್ತಿರುವುದು ವಿಷಾದನೀಯ ಬೆಳವಣಿಗೆಯಾಗಿದೆ. ಇಂತಹ ಸಂದರ್ಭದಲ್ಲಿ ಬಹಳಷ್ಟು ಎಚ್ಚರಿಕೆ ವಹಿಸಬೇಕೆಂದರು.
    ಕನ್ನಡದಲ್ಲಿ ಸ್ನಾತಕೋತ್ತರ ಪರೀಕ್ಷೆ ಬರೆದು ಉತ್ತೀರ್ಣಗೊಂಡ ನಂತರ ಹಲವಾರು ಬಾರಿ ಕೆಪಿಎಸ್‌ಸಿ ಪರೀಕ್ಷೆ ಎದುರಿಸಿ ಕೊನೆಯ ಹಂತದಲ್ಲಿ ಆಯ್ಕೆಯಾದಾಗ ಸಮಾಜ ಕಲ್ಯಾಣ ಇಲಾಖೆಯಲ್ಲಿ ಹುದ್ದೆ ಲಭಿಸಿತು. ಆ ನಂತರ ಈ ಇಲಾಖೆಯ ಕಾರ್ಯ ಚಟುವಟಿಕೆಗಳು ತಿಳಿಯಿತು. ಅಲ್ಲಿಯವರೆಗೂ ಇಲಾಖೆ ಕುರಿತು ಯಾವುದೇ ರೀತಿ ಮಾಹಿತಿ ಇರಲ್ಲಿಲ್ಲ ಎಂದು ಕರ್ತವ್ಯಕ್ಕೆ ಸೇರ್ಪಡೆಗೊಳ್ಳುವ ಮೊದಲಿನ ಘಟನೆಗಳನ್ನು ನೆನಪು ಮಾಡಿಕೊಂಡರು.  
    ಸಮಾಜ ಕಲ್ಯಾಣ ಇಲಾಖೆ ಇತರೆ ಇಲಾಖೆಗಳಿಗಿಂತ ವಿಭಿನ್ನವಾಗಿದೆ. ಈ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುವವರು ಬಹಳಷ್ಟು ಎಚ್ಚರಿಕೆಯಿಂದ ಇರಬೇಕು. ಇಲ್ಲವಾದಲ್ಲಿ ಅನಾಹುತಗಳು ತಪ್ಪಿದ್ದಲ್ಲ. ಇಲ್ಲಿ ಕರ್ತವ್ಯ ನಿರ್ವಹಿಸುವ ಮೊದಲು ಭದ್ರಾವತಿ ಕುರಿತು ತಪ್ಪು ಅಭಿಪ್ರಾಯಗಳು ಕೇಳಿ ಬರುತ್ತಿದ್ದವು. ಆದರೆ ವಾಸ್ತವ್ಯವಾಗಿ ಇಲ್ಲಿನ ಜನರು ಬಹಳಷ್ಟು ಮಾನವೀಯತೆ ಹೊಂದಿದ್ದಾರೆ. ಈ ಹಿನ್ನಲೆಯಲ್ಲಿ ಕಳೆದ ೫ ವರ್ಷಗಳಿಂದ ಉತ್ತಮವಾಗಿ ಕರ್ತವ್ಯ ನಿರ್ವಹಿಸಲು ಸಾಧ್ಯವಾಯಿತು ಎಂದರು.
   ವ್ಯವಸ್ಥಾಪಕ ಎನ್. ಕೃಷ್ಣಪ್ಪ ಮಾತನಾಡಿ, ದೂದ್‌ಪೀರ್‌ರವರು ಓರ್ವ ಪ್ರಾಮಾಣಿಕತೆ, ಮಾನವೀಯತೆಯುಳ್ಳ ಅಧಿಕಾರಿಯಾಗಿದ್ದಾರೆ. ಈ ಕಾರಣಕ್ಕಾಗಿ ಅವರನ್ನು ಎಲ್ಲರೂ ಪ್ರೀತಿಯಿಂದ, ಗೌರವದಿಂದ ಕಾಣುವಂತಾಗಿದೆ. ಅವರು ಸಹಾಯಕ ನಿರ್ದೇಶಕರಾಗಿ ಅಧಿಕಾರ ವಹಿಸಿಕೊಂಡ ನಂತರ ನಿರೀಕ್ಷಿಸಲಾರದಷ್ಟು ಮಟ್ಟಿಕ್ಕೆ ಇಲಾಖೆಯ ಚಿತ್ರಣವೇ ಬದಲಾಗಿದೆ. ಸ್ವಂತ ಕಟ್ಟಡದೊಂದಿಗೆ ಕಛೇರಿ, ಅಂಬೇಡ್ಕರ್ ಭವನ ನಿರ್ಮಾಣ ಸೇರಿದಂತೆ ಹಲವು ಪ್ರಮುಖ ಕಾರ್ಯಗಳು ನಡೆದಿವೆ. ಈ ಹಿನ್ನಲೆಯಲ್ಲಿ ಅವರು ಶಾಶ್ವತವಾಗಿ ಉಳಿದುಕೊಂಡಿದ್ದಾರೆ. ಅವರು ಪದೋನ್ನತ್ತಿ ಹೊಂದಿರುವುದು ಸಂತೋಷದ ವಿಷಯವಾಗಿದೆ. ಇನ್ನೂ ಉನ್ನತ ಸ್ಥಾನಕ್ಕೇರುವ ಮೂಲಕ ಉತ್ತಮ ಭವಿಷ್ಯ ಹೊಂದಲಿ ಎಂದು ಹಾರೈಸಿದರು.  
   ಪ್ರಮುಖರಾದ ಮಾನವ ಹಕ್ಕುಗಳ ಹೋರಾಟ ಸಮಿತಿ ಅಧ್ಯಕ್ಷ ಬಿ.ಎನ್ ರಾಜು, ಡಿಎಸ್‌ಎಸ್ ತಾಲೂಕು ಸಂಚಾಲಕ ರಂಗನಾಥ್, ಶಿಕ್ಷಕರಾದ ಜುಂಜ್ಯಾನಾಯ್ಕ, ಸಿ. ಜಯಪ್ಪ ಹಾಗು ಇಲಾಖೆ ಅಧಿಕಾರಿಗಳು, ಸಿಬ್ಬಂದಿಗಳು ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು.

ಕೋಮಾರನಹಳ್ಳಿ, ವೀರಾಪುರ ಗ್ರಾಮ ಪಂಚಾಯಿತಿ ಫಲಿತಾಂಶ ಪ್ರಕಟ

ಭದ್ರಾವತಿ, ಮಾ. ೩೧: ತಾಲೂಕಿನ ಕೋಮಾರನಹಳ್ಳಿ ಮತ್ತು ವೀರಾಪುರ ಎರಡು ಗ್ರಾಮ ಪಂಚಾಯಿತಿಗಳ ಚುನಾವಣೆಯ ಮತ ಎಣಿಕೆ ಬುಧವಾರ ನಡೆದಿದ್ದು, ಅಭ್ಯರ್ಥಿಗಳ ಭವಿಷ್ಯ ಹೊರ ಬಿದ್ದಿದೆ.
ಕೋಮಾರನಹಳ್ಳಿ ಗ್ರಾಮ ಪಂಚಾಯಿತಿಯಲ್ಲಿ ಒಟ್ಟು ೧೩ ಸ್ವಾನಗಳಿದ್ದು, ಮಂಜುನಾಥನಾಯ್ಕ, ಕೆ. ರವಿಕುಮಾರ್, ದೇವಮ್ಮ, ಸಿ.ಎಲ್ ನೇತ್ರಾವತಿ, ಎ. ಷಣ್ಮುಗ, ಸರಸ್ವತಿ ವಿಜಯಕುಮಾರ್, ರುದ್ರಮ್ಮ ಕೃಷ್ಣಮೂರ್ತಿ, ಸುನೀತ ಸತೀಶ್, ಆರ್. ಮಾಧುರಾವ್, ನಂದಿನಿಬಾಯಿ, ಮಂಜುಳ ಮತ್ತು ಆರ್. ಮಂಜುನಾಥ್ ಆಯ್ಕೆಯಾಗಿದ್ದಾರೆ.
ವೀರಾಪುರ ಗ್ರಾಮ ಪಂಚಾಯಿತಿಯಲ್ಲಿ ಒಟ್ಟು ೧೧ ಸ್ಥಾನಗಳಿದ್ದು, ರಾಧ ಮಂಗಳಮ್ಮ, ಮಂಜಮ್ಮ ಜಡಿಯಪ್ಪ, ಜಬೀವುಲ್ಲಾ, ರೇಣುಕಮ್ಮ ರಾಜು, ಲೋಲಾಕ್ಷಿ, ಪಿ. ರಂಗಸ್ವಾಮಿ, ಎಂ. ವೆಂಕಟೇಶ್, ಎಂ.ಎಲ್ ಯಶೋಧರಯ್ಯ, ಜ್ಯೋತಿ, ಅಸಿಯಾಬಾನು ಮತ್ತು ಸೈಯದ್ ಜಬೀವುಲ್ಲಾ ಆಯ್ಕೆಯಾಗಿದ್ದಾರೆಂದು ತಹಸೀಲ್ದಾರ್ ಜಿ. ಸಂತೋಷ್‌ಕುಮಾರ್ ತಿಳಿಸಿದ್ದಾರೆ.  

ಕಟ್ಟಡ ಕಾರ್ಮಿಕರಿಗೆ ಸರ್ಕಾರದ ಸೌಲಭ್ಯಗಳು ಸಮರ್ಪಕವಾಗಿ ತಲುಪಲಿ : ಪದ್ಮಾವತಿ ಸಂಜೀವ್‌ಕುಮಾರ್

ಇಲ್ಲಿಗೆ ಸಮೀಪದ ಶ್ರೀಕ್ಷೇತ್ರ ಭದ್ರಗಿರಿ ಶ್ರೀ ಶಿವಸುಬ್ರಮಣ್ಯ ಸ್ವಾಮಿ ದೇವಸ್ಥಾನದಲ್ಲಿ ಬುಧವಾರ ಹಮ್ಮಿಕೊಳ್ಳಲಾಗಿದ್ದ ಕನ್‌ಸ್ಟ್ರಕ್ಷನ್ ವರ್ಕರ್‍ಸ್ ಸೆಂಟ್ರಲ್ ಯೂನಿಯನ್ ಭದ್ರಾವತಿ ತಾಲೂಕು ಶಾಖೆಯ ಸದಸ್ಯರಿಗೆ ಗುರುತಿನ ಚೀಟಿ ವಿತರಣೆ, ಪೈಂಟ್‌ರ್ ಸಂಘದ ಉದ್ಘಾಟನೆ, ಕೋವಿಡ್-೧೯ ಕುರಿತು ಆರೋಗ್ಯ ಜಾಗೃತಿ ಮತ್ತು ಮಹಿಳಾ ಸದಸ್ಯರಿಗೆ ಸನ್ಮಾನ ಕಾರ್ಯಕ್ರಮವನ್ನು ತರೀಕೆರೆ ತಾಲೂಕು ಪಂಚಾಯಿತಿ ಅಧ್ಯಕ್ಷೆ ಪದ್ಮಾವತಿ ಸಂಜೀವ್‌ಕುಮಾರ್ ಉದ್ಘಾಟಿಸಿದರು.
    ಭದ್ರವತಿ, ಮಾ. ೩೧: ಕಟ್ಟಡ ಕಾರ್ಮಿಕರಿಗೆ ಸರ್ಕಾರದ ಎಲ್ಲಾ ಸೌಲಭ್ಯಗಳು ಸಮರ್ಪಕವಾಗಿ ತಲುಪಬೇಕು. ಈ ನಿಟ್ಟಿನಲ್ಲಿ ಸಂಘಟನೆ ಹೆಚ್ಚು ಕ್ರಿಯಾಶೀಲವಾಗಬೇಕೆಂದು ತರೀಕೆರೆ ತಾಲೂಕು ಪಂಚಾಯಿತಿ ಅಧ್ಯಕ್ಷೆ ಪದ್ಮಾವತಿ ಸಂಜೀವ್‌ಕುಮಾರ್ ಹೇಳಿದರು.
   ಅವರು ಬುಧವಾರ ಇಲ್ಲಿಗೆ ಸಮೀಪದ ಶ್ರೀಕ್ಷೇತ್ರ ಭದ್ರಗಿರಿ ಶ್ರೀ ಶಿವಸುಬ್ರಮಣ್ಯ ಸ್ವಾಮಿ ದೇವಸ್ಥಾನದಲ್ಲಿ ಕನ್‌ಸ್ಟ್ರಕ್ಷನ್ ವರ್ಕರ್‍ಸ್ ಸೆಂಟ್ರಲ್ ಯೂನಿಯನ್ ಭದ್ರಾವತಿ ತಾಲೂಕು ಶಾಖೆಯ ಸದಸ್ಯರಿಗೆ ಗುರುತಿನ ಚೀಟಿ ವಿತರಣೆ, ಪೈಂಟ್‌ರ್ ಸಂಘದ ಉದ್ಘಾಟನೆ, ಕೋವಿಡ್-೧೯ ಕುರಿತು ಆರೋಗ್ಯ ಜಾಗೃತಿ ಮತ್ತು ಮಹಿಳಾ ಸದಸ್ಯರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
   ಕಟ್ಟಡ ಕಾರ್ಮಿಕರು ಇಂದಿಗೂ ಬಡತನ ರೇಖೆಯಿಂದ ಹೊರಬಂದಿಲ್ಲ. ಸಂಕಷ್ಟದಲ್ಲಿ ಬದುಕು ಸಾಗಿಸುತ್ತಿದ್ದಾರೆ. ಸರ್ಕಾರ ಕಟ್ಟಡ ಕಾರ್ಮಿಕರಿಗೆ ಹಲವು ಯೋಜನೆಗಳನ್ನು ರೂಪಿಸಿದೆ. ಆದರೂ ಸಹ ಯೋಜನೆಗಳು ಸಮರ್ಪಕವಾಗಿ ತಲುಪುದಿಲ್ಲ ಎಂದು ವಿಷಾದ ವ್ಯಕ್ತಪಡಿಸಿದರು.
    ವಿಶೇಷವಾಗಿ ಮಹಿಳಾ ಕಾರ್ಮಿಕರಿಗೆ ಸಿಗಬೇಕಾದ ಸೌಲಭ್ಯಗಳ ಬಗ್ಗೆ ಹೆಚ್ಚು ಗಮನ ಹರಿಸಬೇಕಾಗಿದೆ. ಮಹಿಳೆಯರು ಸಹ ಸಂಘಟನೆಯಲ್ಲಿ ತೊಡಗಿಸಿಕೊಂಡು ತಮ್ಮ ಬೇಡಿಕೆಗಳನ್ನು ಈಡೇರಿಸಿಕೊಳ್ಳಲು ಮುಂದಾಗಿರುವುದು ಒಳ್ಳೆಯ ಬೆಳವಣಿಗೆಯಾಗಿದೆ ಎಂದರು.
    ಶ್ರೀ ಕ್ಷೇತ್ರದ ಮುರುಗೇಶ್ ಸ್ವಾಮೀಜಿ ದಿವ್ಯ ಸಾನಿಧ್ಯ ವಹಿಸಿದ್ದರು. ಸಂಘಟನೆ ಜಿಲ್ಲಾ ಕಾರ್ಯಾಧ್ಯಕ್ಷ ಸುಂದರ್‌ಬಾಬು ಪ್ರಾಸ್ತಾವಿಕವಾಗಿ ಮಾತನಾಡಿ, ಕಟ್ಟಡ ಕಾರ್ಮಿಕರಿಗಾಗಿ ಸರ್ಕಾರ ರೂಪಿಸಿರುವ ಯೋಜನೆಗಳನ್ನು ವಿವರಿಸಿದರು.
    ಜಿಲ್ಲಾಧ್ಯಕ್ಷ ಸುಬ್ರಮಣಿ, ಜಿಲ್ಲಾ ಗ್ರಾಮಾಂತರ ಅಧ್ಯಕ್ಷ ಸಂಜಯ್‌ಕುಮಾರ್, ತಾಲೂಕು ಗೌರವಾಧ್ಯಕ್ಷ ಅಂತೋಣಿ ಕ್ರೂಸ್, ತಾಲೂಕು ಅಧ್ಯಕ್ಷ ನಾಗರಾಜ್, ಪೈಂಟರ್ ಸಂಘದ ಅಧ್ಯಕ್ಷ ಶಿವಣ್ಣ, ಮಹಿಳಾ ಘಟಕದ ಪದಾಧಿಕಾರಿಗಳಾದ ವಿಜಿಯಮ್ಮ, ಇಂಚರ, ಪ್ರಮುಖರಾದ ನಾರಾಯಣಸ್ವಾಮಿ, ಚಂದ್ರಶೇಖರ್, ಶಿವಣ್ಣ, ಶ್ರೀನಿವಾಸ್, ಷಣ್ಮುಖಂ, ಸಂಪತ್, ಅಭಿಲಾಶ್, ಮನೋಹರ್, ಸುಬ್ಬು, ಮಂಜುನಾಥ್, ರಘು, ಮಾರಸ್ವಾಮಿ, ಆರ್‍ಮುಗಂ, ಮಣಿಕಂಠ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.