Thursday, June 11, 2020

ಎಸ್‌ಎಸ್‌ಎಲ್‌ಸಿ ಪರೀಕ್ಷೆ ಪೂರ್ವ ಸಿದ್ದತೆ : ಉಪಗ್ರಹ ಆಧಾರಿತ ತರಬೇತಿ

ವಿದ್ಯಾರ್ಥಿಗಳಲ್ಲಿ ಸುರಕ್ಷತೆ, ಆತ್ಮವಿಶ್ವಾಸ ಮೂಡಿಸಿ : ಉನ್ನತ ಅಧಿಕಾರಿಗಳಿಂದ ಸಲಹೆ 

ಭದ್ರಾವತಿಯಲ್ಲಿ ಗುರುವಾರ ಎಸ್‌ಎಸ್‌ಎಲ್‌ಸಿ ಪರೀಕ್ಷೆಗೆ ಸಂಬಂಧಿಸಿದಂತೆ ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ವತಿಯಿಂದ ಉಪಗ್ರಹ ಆಧಾರಿತ ತರಬೇತಿ ಕಾರ್ಯಕ್ರಮ ಕ್ಷೇತ್ರ ಸಂಪನ್ಮೂಲ ಸಮನ್ವಯಾಧಿಕಾರಿ ಕಛೇರಿಯಲ್ಲಿ ನಡೆಯಿತು. 
ಭದ್ರಾವತಿ, ಜೂ. ೧೧: ರಾಜ್ಯಾದ್ಯಂತ ಜೂ.೨೫ ರಿಂದ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಆರಂಭವಾಗುತ್ತಿರುವ ಹಿನ್ನಲೆಯಲ್ಲಿ ಕೈಗೊಳ್ಳಬೇಕಾಗಿರುವ ಅಗತ್ಯ ಕ್ರಮಗಳ ಕುರಿತು ಶಿಕ್ಷಣ ಇಲಾಖೆ ನಿರಂತರವಾಗಿ ಕಾರ್ಯ ಯೋಜನೆಯಲ್ಲಿ ತೊಡಗಿಸಿಕೊಂಡಿದೆ. ಈ ನಿಟ್ಟಿನಲ್ಲಿ ಗುರುವಾರ ಎಸ್‌ಎಸ್‌ಎಲ್‌ಸಿ ಪರೀಕ್ಷೆಗೆ ಸಂಬಂಧಿಸಿದಂತೆ ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ವತಿಯಿಂದ ಉಪಗ್ರಹ ಆಧಾರಿತ ತರಬೇತಿ ಕಾರ್ಯಕ್ರಮ ಕ್ಷೇತ್ರ ಸಂಪನ್ಮೂಲ ಸಮನ್ವಯಾಧಿಕಾರಿ ಕಛೇರಿಯಲ್ಲಿ ನಡೆಯಿತು. 
ತಾಲೂಕಿನ ೧೫ ಪರೀಕ್ಷಾ ಕೇಂದ್ರಗಳಿಗೆ ನಿಯೋಜನೆಗೊಂಡಿರುವ ಮುಖ್ಯ ಅಧೀಕ್ಷಕರನ್ನೊಳಗೊಂಡ ವಿವಿಧ ಹಂತದ ಅಧಿಕಾರಿಗಳು ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿಯಿಂದ ಪ್ರತಿಯೊಂದು ಪರೀಕ್ಷಾ ಕೇಂದ್ರಕ್ಕೆ ನಿಯೋಜಿಸಲಾಗಿರುವ ವೀಕ್ಷಕರು ಸೇರಿದಂತೆ ಸುಮಾರು ೫೦ ಮಂದಿ ಪಾಲ್ಗೊಂಡಿದ್ದು, ಇನ್ನೂ ಹೆಚ್ಚಿನವರು ಶಿವಮೊಗ್ಗ ಸಾರ್ವಜನಿಕ ಶಿಕ್ಷಣ ಇಲಾಖೆ ತರಬೇತಿ ಕೇಂದ್ರ(ಡಯಟ್)ದಲ್ಲಿ ಪಾಲ್ಗೊಂಡಿದ್ದರು. 
       ಪ್ರಮುಖವಾಗಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ವಹಿಸಬೇಕಾದ ಸುರಕ್ಷತೆ ಮತ್ತು ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸ ಮೂಡಿಸುವುದು. ಕೈಗೊಳ್ಳಬೇಕಾದ ಮುನ್ನಚ್ಚರಿಕೆ ಕ್ರಮ ಕುರಿತು ಬೆಂಗಳೂರಿನ ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ಅಧಿಕಾರಿಗಳು ಹಾಗೂ ಆರೋಗ್ಯ ನಿರ್ದೇಶನಾಲಯದ ಅಧಿಕಾರಿಗಳು ಮಾಹಿತಿ ನೀಡಿದರು. 
ತರಬೇತಿಯಲ್ಲಿ ಪಾಲ್ಗೊಂಡವರು ಮಾಹಿತಿಯನ್ನು ಶಾಲಾ ಹಂತಕ್ಕೆ ಕೊಂಡೊಯ್ದು ಪೋಷಕರು ಹಾಗೂ ವಿದ್ಯಾರ್ಥಿಗಳಲ್ಲಿ ನೇರವಾಗಿ ಜಾಗೃತಿ ಮೂಡಿಸಿ ಪರೀಕ್ಷೆಯನ್ನು ಸಮರ್ಥವಾಗಿ ಎದುರಿಸಲು ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸ ತುಂಬುವ ಕೆಲಸ ಕೈಗೊಳ್ಳಬೇಕಾಗಿದೆ. 
ಕಾರ್ಯಕ್ರಮದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಟಿ.ಎನ್ ಸೋಮಶೇಖರಯ್ಯ, ಕ್ಷೇತ್ರ ಶಿಕ್ಷಣ ಸಂಪನ್ಮೂಲ ಸಮನ್ವಯಾಧಿಕಾರಿ ಎ.ಜಿ ರಾಜಶೇಖರ್, ಶಿಕ್ಷಣ ಸಂಯೋಜಕ ರವಿಕುಮಾರ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.  
ಜೂ.೨೦ರವರೆಗೆ ಶಾಲೆ ಪುನರ್ ಆರಂಭಿಸುವ ಕುರಿತ ಸಭೆ : 
ಈ ಹಿಂದೆ ಸರ್ಕಾರದ ಸೂಚನೆಯಂತೆ  ಶಾಲೆಗಳನ್ನು ಪುನರ್ ಆರಂಭಿಸಲು ಶಾಲಾ ಹಂತದಲ್ಲಿ ಶಾಲಾಭಿವೃದ್ಧಿ ಸಮಿತಿ, ವಿದ್ಯಾರ್ಥಿಗಳು, ಪೋಷಕರು ಹಾಗೂ ಶಿಕ್ಷಕರ ಅಭಿಪ್ರಾಯಗಳನ್ನು ಸಂಗ್ರಹಿಸುವ ನಿಟ್ಟಿನಲ್ಲಿ ಜೂ.೧೦ ರಿಂದ ೧೨ರವರೆಗೆ ಸಭೆ ನಡೆಸಲು ತಿಳಿಸಲಾಗಿತ್ತು. ಇದೀಗ ಜೂ.೨೦ರವರೆಗೆ ವಿಸ್ತರಿಸಲಾಗಿದೆ. ಸರ್ಕಾರಿ ಹಾಗೂ ಅನುದಾನಿತ ಶಾಲೆಗಳಿಗೆ ಒಂದು ರೀತಿಯ ಮಾದರಿ ಹಾಗೂ ಖಾಸಗಿ ಶಾಲೆಗಳಿಗೆ ಮತ್ತೊಂದು ರೀತಿಯ ಮಾದರಿ ಸಿದ್ದಪಡಿಸಲಾಗಿದ್ದು, ಆಯಾ ಶಾಲೆಗಳು ನೇರವಾಗಿ ಸಭೆಯ ವರದಿಯನ್ನು ಶಾಲೆಯ ಲಾಗಿನ್ ಮೂಲಕ ಸ್ಯಾಟ್ಸ್ ತಂತ್ರಾಂಶದಲ್ಲಿ ಸಲ್ಲಿಸಬೇಕಾಗಿದೆ. ಉಳಿದಂತೆ ಸರ್ಕಾರದ ಮುಂದಿನ ಆದೇಶ ಬರುವವರೆಗೂ ಯಾವುದೇ ಕಾರಣಕ್ಕೂ ಶಾಲಾ ದಾಖಲಾತಿ ಪ್ರಕ್ರಿಯೆ ಆರಂಭಿಸುವಂತಿಲ್ಲ. ಈ ಕುರಿತು ಈಗಾಗಲೇ ಎಲ್ಲಾ ಶಾಲೆಗಳಿಗೂ ಎಚ್ಚರಿಸಲಾಗಿದೆ. 
ನೇರ ಪೋನ್ ಇನ್ ಕಾರ್ಯಕ್ರಮ: 
ಎಸ್‌ಎಸ್‌ಎಲ್‌ಸಿ ಪರೀಕ್ಷೆಗೆ ಸಂಬಂಧಿಸಿದಂತೆ ವಿದ್ಯಾರ್ಥಿಗಳು, ಪೋಷಕರು ಹಾಗೂ ಶಿಕ್ಷಕರೊಂದಿಗೆ ಜೂ.೧೭ರಂದು ಮಧ್ಯಾಹ್ನ ೧೨ ಗಂಟೆಯಿಂದ ೧ ಗಂಟೆ ವರೆಗೆ ನೇರ ಪೋನ್ ಇನ್ ಕಾರ್ಯಕ್ರಮ ಆಯೋಜಿಸಲಾಗಿದೆ. 
ಪರೀಕ್ಷೆಗೆ ಸಂಬಂಧಿಸಿದ ಸಮಸ್ಯೆಗಳಿಗೆ ಕರ್ನಾಟಕ ಪ್ರೌಢ ಶಿಕ್ಷಣ ಮಂಡಳಿ ಅಧಿಕಾರಿಗಳು ಉತ್ತರಿಸಲಿದ್ದಾರೆ. ಇದರ ಸದುಪಯೋಗಪಡೆದುಕೊಳ್ಳುವಂತೆ ಕ್ಷೇತ್ರ ಶಿಕ್ಷಣಾಧಿಕಾರಿಗಳು ಕೋರಿದ್ದಾರೆ.

ಉಕ್ಕಿನ ನಗರದ ಹೃದಯ ಭಾಗಕ್ಕೂ ವಕ್ಕರಿಸಿದ ಕೊರೋನಾ

ರಂಗಪ್ಪ ವೃತ್ತದಿಂದ ಹೊಳೆಹೊನ್ನೂರು ವೃತ್ತದವರೆಗೆ ಸೀಲ್ ಡೌನ್ 

ಭದ್ರಾವತಿಯಲ್ಲಿ ಗುರುವಾರ ಬೆಂಗಳೂರಿನ ಬಂದಿದ್ದ ಮಹಿಳೆಯೊಬ್ಬರಲ್ಲಿ ಕೊರೋನಾ ಪತ್ತೆಯಾದ ಹಿನ್ನಲೆಯಲ್ಲಿ ರಂಗಪ್ಪ ವೃತ್ತದಿಂದ ಹೊಳೆಹೊನ್ನೂರು ವೃತ್ತದ ವರೆಗೆ ಸೀಲ್ ಡೌನ್ ಜಾರಿಗೊಳಿಸಲಾಗಿದೆ. 
ಭದ್ರಾವತಿ, ಜೂ. ೧೧: ಜನದಟ್ಟಣೆ ಅಧಿಕವಿರುವ ನಗರದ ಹೃದಯ ಭಾಗದಲ್ಲಿ ಗುರುವಾರ ಮಹಿಳೆಯೊಬ್ಬರಲ್ಲಿ ಕೊರೋನಾ ವೈರಸ್ ಪತ್ತೆಯಾಗಿದ್ದು, ಈ ಹಿನ್ನಲೆಯಲ್ಲಿ ಮಹಿಳೆ ವಾಸವಿದ್ದ ವ್ಯಾಪ್ತಿಯ ೧೦೦ ಮೀಟರ್ ವರೆಗೆ ಸೀಲ್ ಡೌನ್ ಜಾರಿಗೊಳಿಸಲಾಗಿದೆ. 
ನಗರದ ಚನ್ನಗಿರಿ ರಸ್ತೆಯ ಸತ್ಯ ಚಿತ್ರ ಮಂದಿರದ ಬಳಿ ಕುಟುಂಬ ವಾಸವಿದ್ದು, ಕಳೆದ ೪ ದಿನಗಳ ಹಿಂದೆ ಬೆಂಗಳೂರಿನಿಂದ ಬಂದಿದ್ದ ಮಹಿಳೆಯಲ್ಲಿ ಕೊರೋನಾ ವೈರಸ್ ಪತ್ತೆಯಾಗಿದೆ. ಪ್ರಯೋಗಾಲಯದಿಂದ ವರದಿ ಬಂದ ತಕ್ಷಣ ರಂಗಪ್ಪ ವೃತ್ತದಿಂದ ಹೊಳೆಹೊನ್ನೂರು ವೃತ್ತದ ವರೆಗೆ ಸೀಲ್ ಡೌನ್ ಜಾರಿಗೊಳಿಸಲಾಗಿದೆ. 
ರಸ್ತೆಯ ಎರಡು ಬದಿಯಲ್ಲೂ ಪೊಲೀಸರು ಬ್ಯಾರಿಗೇಡ್ ಅಳವಡಿಸಿದ್ದು, ಸಂಚಾರವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಸ್ಥಳಕ್ಕೆ ತಹಸೀಲ್ದಾರ್ ಶಿವಕುಮಾರ್, ತಾಲೂಕು ಆರೋಗ್ಯಾಧಿಕಾರಿ ಡಾ. ಎಂ.ಆರ್ ಗಾಯತ್ರಿ,  ನಗರಸಭೆ ಪೌರಾಯುಕ್ತ ಮನೋಹರ್, ಪೊಲೀಸ್ ಉಪಾಧೀಕ್ಷಕ ಸುಧಾಕರ ನಾಯ್ಕ್ ಸೇರಿದಂತೆ ಇನ್ನಿತರರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಮಹಿಳೆ ವಾಸವಿದ್ದ ಸ್ಥಳದ ಸುತ್ತಮುತ್ತ ಪೌರಕಾರ್ಮಿಕರು ಸ್ವಚ್ಛತಾ ಕಾರ್ಯ ಕೈಗೊಂಡಿದ್ದು, ಸ್ಯಾನಿಟೈಸರ್ ಮಾಡಿಸಲಾಗಿದೆ. 
ಭದ್ರಾವತಿಯಲ್ಲಿ ಗುರುವಾರ ಬೆಂಗಳೂರಿನ ಬಂದಿದ್ದ ಮಹಿಳೆಯೊಬ್ಬರಲ್ಲಿ ಕೊರೋನಾ ಪತ್ತೆಯಾದ ಹಿನ್ನಲೆಯಲ್ಲಿ ಮಹಿಳೆ ವಾಸವಿದ್ದ ಸ್ಥಳದ ಸುತ್ತಮುತ್ತ ಪೌರಕಾರ್ಮಿಕರು ಸ್ವಚ್ಛತಾ ಕೈಗೊಂಡು ಸ್ಯಾನಿಟೈಸರ್ ಮಾಡಿದರು. 
ಜನದಟ್ಟಣೆ ಪ್ರದೇಶ : 
ಮಹಿಳೆ ವಾಸವಿದ್ದ ಸ್ಥಳ ಪ್ರಮುಖ ವಾಣಿಜ್ಯ ರಸ್ತೆಯಾಗಿದ್ದು, ಚಿತ್ರಮಂದಿರ, ಪ್ರಾಥಮಿಕ ಸಹಕಾರ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕ್(ಪಿಎಲ್‌ಡಿ), ಉಪನೊಂದಾಣಿಕಾರಿಗಳ ಕಛೇರಿ, ಡಿ. ದೇವರಾಜ ಅರಸು ಹಿಂದುಳಿದ ಕಲ್ಯಾಣ ಇಲಾಖೆಯ ವಿಸ್ತರಣಾಧಿಕಾರಿಗಳ ಕಛೇರಿ, ಕ್ಲಿನಿಕ್, ಹೋಟೆಲ್ ಸೇರಿದಂತೆ ಅಂಗಡಿಮುಂಗಟ್ಟುಗಳಿದ್ದು, ಸದಾ ಜನದಟ್ಟಣೆಯಿಂದ ಕೂಡಿದೆ. ಈ ಹಿನ್ನಲೆಯಲ್ಲಿ ಈ ಭಾಗದ ನಿವಾಸಿಗಳಲ್ಲಿ ಹೆಚ್ಚಿನ ಆತಂಕ ಮನೆ ಮಾಡಿದೆ. 
ತಹಸೀಲ್ದಾರ್ ಶಿವಕುಮಾರ್ ಪತ್ರಿಕೆಯೊಂದಿಗೆ ಮಾತನಾಡಿ, ಮಹಿಳೆ ಸೋಮವಾರ ಬೆಂಗಳೂರಿನಿಂದ ಬಂದಿದ್ದು, ಬಂದ ತಕ್ಷಣ ಗಂಟಲು ದ್ರವ ಮಾದರಿ ಸಂಗ್ರಹಿಸಿ ಪ್ರಯೋಗಾಲಯಕ್ಕೆ ಕಳುಹಿಸಿ ಕೊಡಲಾಗಿತ್ತು. ಇದೀಗ ವರದಿ ಬಂದಿದ್ದು, ಕೊರೋನಾ ವೈರಸ್ ಪತ್ತೆಯಾಗಿದೆ. ಈ ಹಿನ್ನಲೆಯಲ್ಲಿ ಮಹಿಳೆಯನ್ನು ಶಿವಮೊಗ್ಗ ಮೆಗ್ಗಾನ್ ಕೋವಿಡ್-೧೯ ಆಸ್ಪತ್ರೆಗೆ ದಾಖಲಿಸಲಾಗಿದೆ. ತಕ್ಷಣದಿಂದ ಜಾರಿ ಬರುವಂತೆ ಸೀಲ್‌ಡೌನ್ ಮಾಡಲಾಗಿದೆ. ಮಹಿಳೆ ಜೊತೆಯಲ್ಲಿ ವಾಸವಿದ್ದ ತಂದೆ-ತಾಯಿ ಇಬ್ಬರನ್ನು ಬೇರಡೆ ಪತ್ಯೇಕವಾಗಿ ಇರಿಸಲಾಗಿದೆ ಎಂದರು. 
ಪೌರಾಯುಕ್ತ ಮನೋಹರ್ ಮಾತನಾಡಿ, ಮಹಿಳೆಯೊಬ್ಬರಲ್ಲಿ ಕೊರೋನಾ ವೈರಸ್ ಪತ್ತೆಯಾಗಿದೆ. ಯಾವುದೇ ಕಾರಣಕ್ಕೂ ಸಾರ್ವಜನಿಕರು ಆತಂಕಪಡಬಾರದು. ನಗರಸಭೆ ವತಿಯಿಂದ ಎಲ್ಲಾ ರೀತಿಯ ಮುಂಜಾಗ್ರತೆ ಕ್ರಮಗಳನ್ನು ಕೈಗೊಳ್ಳಲಾಗಿದ್ದು, ಸಾರ್ವಜನಿಕರು ಇನ್ನೂ ಹೆಚ್ಚಿನ ಎಚ್ಚರವಹಿಸಬೇಕೆಂದು ಮನವಿ ಮಾಡಿದರು.