Saturday, September 26, 2020

ಮಹಿಳಾ ಕಾಂಗ್ರೆಸ್‌ನಿಂದ ಮಹಿಳೆಯರಿಗಾಗಿ ‘ಘನತೆ’ ಜಾಗೃತಿ ಕಾರ್ಯಕ್ರಮ

ಜಿಲ್ಲಾ ಮಹಿಳಾ ಕಾಂಗ್ರೆಸ್ ಸಮಿತಿ ವತಿಯಿಂದ ಮುಟ್ಟಿನಿಂದಲೇ ನಮ್ಮೆಲ್ಲರ ಹುಟ್ಟು ಎಂಬ ಘೋಷ ವ್ಯಾಕ್ಯದೊಂದಿಗೆ ಹೆಣ್ಣು ಮಕ್ಕಳಿಗೆ ಋತುಸ್ರಾವದ ಮಾಸದಲ್ಲಿ ಆರೋಗ್ಯದ ಕಾಳಜಿ ಹಾಗು ಕೊರೋನ ಬಗ್ಗೆ ಜಾಗೃತಿ ಮತ್ತು ಸ್ವಚ್ಛತೆ ಕುರಿತು ಅರಿವು ಮೂಡಿಸುವ "ಘನತೆ " ಕಾರ್ಯಕ್ರಮ ಭದ್ರಾವತಿ ಹಳೇನಗರದ ನಿರ್ಮಲ ಆಸ್ಪತ್ರೆ ಹಿಂಭಾಗದ ಹನುಮಂತ ನಗರ ಶ್ರೀ ಚೌಡೇಶ್ವರ ದೇವಸ್ಥಾನ ಆವರಣದಲ್ಲಿ ಹಮ್ಮಿಕೊಳ್ಳಲಾಗಿತ್ತು.
ಭದ್ರಾವತಿ, ಸೆ. ೨೫: ಜಿಲ್ಲಾ ಮಹಿಳಾ ಕಾಂಗ್ರೆಸ್ ಸಮಿತಿ ವತಿಯಿಂದ ಮುಟ್ಟಿನಿಂದಲೇ ನಮ್ಮೆಲ್ಲರ ಹುಟ್ಟು ಎಂಬ ಘೋಷ ವ್ಯಾಕ್ಯದೊಂದಿಗೆ ಹೆಣ್ಣು ಮಕ್ಕಳಿಗೆ ಋತುಸ್ರಾವದ ಮಾಸದಲ್ಲಿ ಆರೋಗ್ಯದ ಕಾಳಜಿ ಹಾಗು ಕೊರೋನ ಬಗ್ಗೆ ಜಾಗೃತಿ ಮತ್ತು ಸ್ವಚ್ಛತೆ ಕುರಿತು ಅರಿವು ಮೂಡಿಸುವ "ಘನತೆ " ಕಾರ್ಯಕ್ರಮ ಹಳೇನಗರದ ನಿರ್ಮಲ ಆಸ್ಪತ್ರೆ ಹಿಂಭಾಗದ ಹನುಮಂತ ನಗರ ಶ್ರೀ ಚೌಡೇಶ್ವರ ದೇವಸ್ಥಾನ ಆವರಣದಲ್ಲಿ ಹಮ್ಮಿಕೊಳ್ಳಲಾಗಿತ್ತು.
     ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಅನಿತಾ ಕುಮಾರಿ ಕಾರ್ಯಕ್ರಮದ ಅಧ್ಯಕ್ಷತೆವಹಿಸಿದ್ದರು. ಬದಲಾದ ಕಾಲಘಟ್ಟದಲ್ಲಿ ಮತ್ತಷ್ಟು ಜಾಗೃತಗೊಳ್ಳುವ ಜೊತೆಗೆ ವೈಯಕ್ತಿಕ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕೆಂದು ಕರೆ ನೀಡಲಾಯಿತು. ಇದೆ ಸಂದರ್ಭದಲ್ಲಿ ಮಹಿಳೆಯರಿಗೆ ಬಾಗಿನ ನೀಡಲಾಯಿತು.
      ಮಹಿಳಾ ಕಾಂಗ್ರೆಸ್ ತಾಲೂಕು ಅಧ್ಯಕ್ಷೆ ಮಂಜುಳ ರಾಮಚಂದ್ರ, ಕೆಪಿಸಿಸಿ ಕಾರ್ಮಿಕ ರಾಜ್ಯ ಕಾರ್ಯದರ್ಶಿ ನಳಿನಾ ದಾಮೋದರ್, ತಾಲ್ಲೂಕು ಮಹಿಳಾ ಕಾರ್ಮಿಕ ವಿಭಾಗ ಅಧ್ಯಕ್ಷೆ ರೂಪ ನಾರಾಯಣ್, ಉಪಾಧ್ಯಕ್ಷೆ ಗೀತಾ, ಪದ್ಮಮ್ಮ, ಮಾಜಿ ನಗರಸಭಾ ಸದಸ್ಯರಾದ ಶೋಭಾ ರವಿಕುಮಾರ್, ಗೌರಮ್ಮ ಸೇರಿದಂತೆ ಮಹಿಳಾ ಘಟಕದ ಪದಾಧಿಕಾರಿಗಳು ಇನ್ನಿತರರು ಉಪಸ್ಥಿತರಿದ್ದರು.

ಮನೆಯ ಬೀಗ ಮುರಿದು ಲಕ್ಷಾಂತರ ರು. ಮೌಲ್ಯದ ಚಿನ್ನಾಭರಣ ಕಳವು

ಭದ್ರಾವತಿ, ಸೆ. ೨೬: ಮನೆಯಲ್ಲಿ ಯಾರು ಇಲ್ಲದಿರುವಾಗ ಮನೆಯ ಬೀಗ ಮುರಿದು ಲಕ್ಷಾಂತರ ರು. ಮೌಲ್ಯದ ಚಿನ್ನಾಭರಣ ಕಳವು ಮಾಡಿರುವ ಘಟನೆ ಹೊಸ ಸೀಗೆಬಾಗಿಯಲ್ಲಿ ನಡೆದಿದೆ.
     ಬೋರೇಗೌಡ ಎಂಬುವರ ಮನೆಯಲ್ಲಿ ಕಳವು ಪ್ರಕರಣ ನಡೆದಿದ್ದು, ಕುಟುಂಬ ಸಮೇತ ಸೆ.೧೯ರಂದು ಮನೆಗೆ ಬೀಗ ಹಾಕಿಕೊಂಡು ಕೆ.ಆರ್ ಪೇಟೆ ತಾಲೂಕಿನ ಇಕ್ಕೇರಿ, ದಬ್ಬಗಟ್ಟೆ ಗ್ರಾಮಕ್ಕೆ ತೆರಳಿದ್ದು, ಸುಮಾರು ೬ ದಿನಗಳ ನಂತರ ಸೆ.೨೪ರಂದು ಹಿಂದಿರುಗಿ ಬಂದಿದ್ದಾರೆ. ಈ ಸಂದರ್ಭದಲ್ಲಿ ಮನೆ ಬಾಗಿಲು ಬೀಗ ಮುರಿದಿರುವುದು ಕಂಡು ಬಂದಿದ್ದು, ಒಳ ಹೋಗಿ ಪರಿಶೀಲಿಸಿದಾಗ ಬೀರುವಿನಲ್ಲಿದ್ದ ೩ ಮತ್ತು ೪ ಗ್ರಾಂ. ತೂಕದ ತಲಾ ಎರಡು ಜೊತೆ ಕಿವಿಯೋಲೆ, ೬ ಗ್ರಾಂ. ತೂಕದ ಒಂದು ಜೊತೆ ಕಿವಿಯೋಲೆ, ೩ ಗ್ರಾಂ. ತೂಕದ ಒಂದು ಜೊತೆ ಕಿವಿಯ ಮಾಟಿ, ೬ ಗ್ರಾಂ. ತೂಕ ಕಿವಿ ಹ್ಯಾಂಗಿಂಗ್, ೫ ಗ್ರಾಂ. ತೂಕದ ಉಂಗುರ, ೩ ಗ್ರಾಂ. ತೂಕದ ಗುಂಡು ಡ್ರಾಪ್ಸ್ ಮತ್ತು ೩೫ ಗ್ರಾಂ. ತೂಕದ ಆಭರಣ ಸೇರಿದಂತೆ ಒಟ್ಟು ೧.೫೭ ಲಕ್ಷ ರು. ಮೌಲ್ಯದ ೭೧ ಗ್ರಾಂ. ತೂಕದ ಚಿನ್ನಾಭರಣಗಳನ್ನು ಹಾಗು ೧೫೦ ಗ್ರಾಂ. ತೂಕದ ೨ ಬೆಳ್ಳಿಯ ಲಕ್ಷ್ಮಿ ಮುಖವಾಡಗಳು, ೧೦೦ ಗ್ರಾಂ. ತೂಕ ಕಾಲುಚೈನ್, ೩೦ ಗ್ರಾಂ. ತೂಕದ ಒಂದು ಬೆಳ್ಳಿ ಕಡಗ ಮತ್ತು ೨೦ ಗ್ರಾಂ. ತೂಕದ ಬೆಳ್ಳಿಯ ಆಭರಣಗಳನ್ನು ಕಳವು ಮಾಡಲಾಗಿದೆ.
    ಈ ಸಂಬಂಧ ಹಳೇನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

ಸೆ.೨೮ರ ಕರ್ನಾಟಕ ಬಂದ್‌ಗೆ ಕರಾವೇ ಬೆಂಬಲ

ಬಿ.ವಿ ಗಿರೀಶ್
ಭದ್ರಾವತಿ, ಸೆ. ೨೬: ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಜಾರಿಗೆ ತರಲು ಮುಂದಾಗಿರುವ ಜನ ವಿರೋಧಿ ಹಾಗು ರೈತ ವಿರೋಧಿ ಕಾಯ್ದೆಗಳನ್ನು ಹಿಂಪಡೆಯುವಂತೆ ಆಗ್ರಹಿಸಿ ಸೆ.೨೮ರಂದು ಹಮ್ಮಿಕೊಳ್ಳಲಾಗಿರುವ 'ಕರ್ನಾಟಕ ಬಂದ್'ಗೆ ಕರ್ನಾಟಕ ರಕ್ಷಣಾ ವೇದಿಕೆ(ಪ್ರವೀಣ್‌ಶೆಟ್ಟಿ ಬಣ) ಬೆಂಬಲ ನೀಡಲಿದೆ ಎಂದು ತಾಲೂಕು ಅಧ್ಯಕ್ಷ ಬಿ.ವಿ ಗಿರೀಶ್ ತಿಳಿಸಿದ್ದಾರೆ.
          ಭೂ ಸುಧಾರಣೆ ಕಾಯ್ದೆ ತಿದ್ದುಪಡಿ, ಎಪಿಎಂಸಿ ಕಾಯ್ದೆ ತಿದ್ದುಪಡಿ ಸೇರಿದಂತೆ ಇನ್ನಿತರ ತಿದ್ದುಪಡಿ ಕಾಯ್ದೆಗಳು ರೈತರು, ಬಡವರು, ಕೂಲಿ ಕಾರ್ಮಿಕರನ್ನು ಸಂಕಷ್ಟಕ್ಕೆ ತಳ್ಳಲಿವೆ. ಈ ಹಿನ್ನಲೆಯಲ್ಲಿ ರಾಜ್ಯಾದ್ಯಂತ ಬಹುತೇಕ ಸಂಘಟನೆಗಳು ಕರ್ನಾಟಕ ಬಂದ್‌ಗೆ ಕರೆ ನೀಡಿವೆ. ಇದಕ್ಕೆ ಪೂರಕವಾಗಿ ವೇದಿಕೆ ಸಹ ಬೆಂಬಲ ಸೂಚಿಸಲಿದೆ.
       ಕಾಯ್ದೆಗಳನ್ನು ವಿರೋಧಿಸಿ ಸೆ.೨೮ರಂದು ಬೆಳಿಗ್ಗೆ ೧೧ ಗಂಟೆಗೆ ನಗರದ ಬಿ.ಎಚ್ ರಸ್ತೆ ಅಂಡರ್ ಬ್ರಿಡ್ಜ್ ಬಳಿ ಬಿ.ಆರ್ ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪನೆ ಮಾಡಿ ನಂತರ ಕಾಲ್ನಡಿಗೆ ಮೂಲಕ ತಾಲೂಕು ಕಛೇರಿ ತಲುಪಿ ತಹಸೀಲ್ದಾರ್ ಮೂಲಕ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಲಾಗುವುದು. ವಿವಿಧ ಸಂಘ-ಸಂಸ್ಥೆಗಳು, ರೈತರು, ಕಾರ್ಮಿಕರು, ಮಹಿಳಾ ಸಂಘಟನೆಗಳು, ವಿವಿಧ ರಾಜಕೀಯ ಪಕ್ಷಗಳು, ಸಾರ್ವಜನಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸಬೇಕೆಂದು ಗಿರೀಶ್ ಕೋರಿದ್ದಾರೆ.