Thursday, April 3, 2025

ಸರೋಜಮ್ಮ ನಿಧನ

ಸರೋಜಮ್ಮ
ಭದ್ರಾವತಿ: ಜನ್ನಾಪುರ ನಿವಾಸಿ ದಿವಂಗತ ಮಲ್ಲೇಶಪ್ಪನವರ ಧರ್ಮಪತ್ನಿ, ೧೯೮೩ರಲ್ಲಿ ವಿಧಾನಸಭಾ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಸರೋಜಮ್ಮ(೮೦) ಗುರುವಾರ ಮಧ್ಯಾಹ್ನ ನಿಧನ ಹೊಂದಿದರು. 
    ಪುತ್ರ ಆಟೋ ಚಾಲಕ ಶಂಕರ ಮೂರ್ತಿ ಹಾಗು ಪುತ್ರಿ ಮತ್ತು ಮೊಮ್ಮಕ್ಕಳು ಇದ್ದಾರೆ. ಸರೋಜಮ್ಮ ವಯೋ ಸಹಜವಾಗಿ ನಿಧನರಾಗಿದ್ದು, ಆಟೋ ಚಾಲಕರು, ಸ್ಥಳೀಯ ಮುಖಂಡರು ಹಾಗು ಗಣ್ಯರು ಸಂತಾಪ ಸೂಚಿಸಿದ್ದಾರೆ. ಇವರ ಅಂತ್ಯಕ್ರಿಯೆ ಶುಕ್ರವಾರ ಬಿ.ಎಚ್ ರಸ್ತೆ, ಅಪ್ಪರ್‌ಹುತ್ತಾ (ಕವಲಗುಂದಿ) ಹಿಂದೂ ರುದ್ರಭೂಮಿಯಲ್ಲಿ ನೆರವೇರಲಿದೆ. 

ಲಂಚ ಸ್ವೀಕರಿಸುತ್ತಿದ್ದಾಗ ಗ್ರಾಮಪಂಚಾಯಿತಿ ಪಿಡಿಓ, ಕಾರ್ಯದರ್ಶಿ ಲೋಕಾಯುಕ್ತ ಬಲೆಗೆ


ಭದ್ರಾವತಿ ಕಂಬದಾಳು ಹೊಸೂರು ಗ್ರಾಮ ಪಂಚಾಯಿತಿ ಪಿಡಿಓ ಮಹಮದ್ ಆಲಿ 
    ಭದ್ರಾವತಿ ತಾಲೂಕಿನ ಕಂಬದಾಳು ಹೊಸೂರು ಗ್ರಾಮ ಪಂಚಾಯಿತಿ ಪ್ರಭಾರ ಅಭಿವೃದ್ಧಿ ಅಧಿಕಾರಿ(ಪಿಡಿಓ) ಮತ್ತು ಕಾರ್ಯದರ್ಶಿ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. ಲಂಚದ ಆರೋಪದ ಅಡಿ ಇಬ್ಬರನ್ನೂ ಲೋಕಾಯುಕ್ತ ಪೊಲೀಸರು ವಶಕ್ಕೆ ಪಡೆದಿರುವ ಘಟನೆ ಗುರುವಾರ ನಡೆದಿದೆ. 
    ತಾಲೂಕಿನ ಕಾಳನಕಟ್ಟೆ ಗ್ರಾಮದಲ್ಲಿನ ಸರ್ವೆ ನಂಬರ್ ೧೪೪ರ ೩೦*೪೦ ಖಾಲಿ ಜಾಗದ ಚಕ್ಕು ಬಂದಿ ನಿಗದಿಪಡಿಸುವಂತೆ ಕೋರಿ ಶಾಲಾವಾಹನ ಕೆಲಸ ಮಾಡಿಕೊಂಡಿದ್ದ ದಿನೇಶ್ ಎಂಬುವರು ಅರ್ಜಿ ಸಲ್ಲಿಸಿ ಇದನ್ನ ಇ-ಸ್ವತ್ತು ಮಾಡಿಕೊಡಲು ಕೋರಿದ್ದರು. 
    ಈ ಕೆಲಸಕ್ಕೆ ಪ್ರಭಾರ ಪಿಡಿಓ ಮಹಮದ್ ಆಲಿ ಮತ್ತು  ಕಾರ್ಯದರ್ಶಿ ಪಿ.ಎಚ್ ಸುರೇಶ್ ೩೦ ಸಾವಿರ ರು. ಬೇಡಿಕೆ ಇಟ್ಟಿದ್ದರು. ದಿನೇಶ್ ಸಂಜೆ ೪.೧೫ರ ಸಮಯದಲ್ಲಿ ೧೫ ಸಾವಿರ ರು. ಹಣ ಗ್ರಾಮ ಪಂಚಾಯಿತಿ ಎದುರು ಲಂಚವಾಗಿ ನೀಡುವಾಗ ಲೋಕಾಯುಕ್ತರ ಬಲೆಗೆ ಬಿದ್ದಿದ್ದಾರೆ. ಇಬ್ವರನ್ನೂ ಲೋಕಾ ಪೊಲೀಸರು ವಶಕ್ಕೆ ಪಡೆದಿದ್ದಾರೆ. 
ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ಶಿವಮೊಗ್ಗ ಲೋಕಾಯುಕ್ತ ಪೊಲೀಸ್ ಠಾಣೆಯ ಪೊಲೀಸ್ ಉಪಾಧೀಕ್ಷಕ ಬಿ.ಪಿ. ಚಂದ್ರಶೇಖರ್ ತನಿಖೆ ಕೈಗೊಂಡಿರುತ್ತಾರೆ.


ಭದ್ರಾವತಿ ಕಂಬದಾಳು ಹೊಸೂರು ಗ್ರಾಮ ಪಂಚಾಯಿತಿ ಕಾರ್ಯದರ್ಶಿ ಪಿ.ಎಚ್ ಸುರೇಶ್. 
    ಶಿವಮೊಗ್ಗ ಲೋಕಾಯುಕ್ತ ಪೊಲೀಸ್ ಅಧೀಕ್ಷಕ ಎಂ.ಎಚ್ .ಮಂಜುನಾಥ ಚೌದರಿ  ಮಾರ್ಗದರ್ಶನದಲ್ಲಿ ಕಾರ್ಯಾಚರಣೆ ನಡೆಸಲಾಗಿದ್ದು, ಪೊಲೀಸ್ ಉಪಾಧೀಕ್ಷಕ ಬಿ.ಪಿ ಚಂದ್ರಶೇಖರ್, ಪೊಲೀಸ್ ಠಾಣೆ ನಿರೀಕ್ಷಕ ವೀರಬಸಪ್ಪ ಎಲ್ ಕುಸಲಾಪುರ, ಪೊಲೀಸ್ ಸಿಬ್ಬಂದಿಗಳಾದ ಯೋಗೇಶ್,  ಟೀಕಪ್ಪ, ಸುರೇಂದ್ರ, ಬಿ.ಟಿ ಚೆನ್ನೇಶ್, ದೇವರಾಜ್, ಪ್ರಕಾಶ್ ಬಾರಿಮರದ, ಅಂಜಲಿ, ಚಂದ್ರಿಬಾಯಿ, ಗೋಪಿ ಮತ್ತು ಪ್ರದೀಪ್ ಪಾಲ್ಗೊಂಡಿದ್ದರು. 

ಸಂಗೀತ ತರಬೇತಿ ಶಿಬಿರ ಉದ್ಘಾಟನೆ

ಭದ್ರಾವತಿ ಹಳೇ ನಗರದ ಮಹಿಳಾ ಸೇವಾ ಸಮಾಜದಲ್ಲಿ ಏರ್ಪಡಿಸಿದ್ದ ಸಂಗೀತ ತರಬೇತಿ ಶಿಬಿರವನ್ನು ಆಕಾಶವಾಣಿಯ ನಿವೃತ್ತ ಸಂಗೀತ ನಿರ್ದೇಶಕ ಸಂಜೀವ ಆರ್. ನಾಮಣ್ಣನವರ್ ಉದ್ಘಾಟಿಸಿದರು.
    ಭದ್ರಾವತಿ: ನಗರದ ಭದ್ರಾ ಸುಗಮ ಸಂಗೀತ ವೇದಿಕೆಯವತಿಯಿಂದ ಹಳೇನಗರದ ಮಹಿಳಾ ಸೇವಾ ಸಮಾಜದಲ್ಲಿ ಆಯೋಜಿಸಲಾಗಿರುವ ಸಂಗೀತ ತರಬೇತಿ ಶಿಬಿರ ಆಕಾಶವಾಣಿ ನಿವೃತ್ತ ಸಂಗೀತ ನಿರ್ದೇಶಕ ಸಂಜೀವ ಆರ್. ನಾಮಣ್ಣನವರ್ ಉದ್ಘಾಟಿಸಿದರು.
    ತಾಲೂಕು ಜಂಗಮ ಸಂಘದ ಅಧ್ಯಕ್ಷ ಎಸ್. ಅಡವೀಶಯ್ಯ ಅಧ್ಯಕ್ಷತೆ ವಹಿಸಿದ್ದರು.  ಕಲಾವಿದ ಬಿ.ಕೆ ಮೋಹನ್ ಕುಮಾರ್ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಜೀ ಟಿವಿ ಸರಿಗಮಪ ಸಂಗೀತ ಸ್ಪರ್ಧೆಯ ನರಹರಿ ದೀಕ್ಷಿತ್ ಮಂಚಾಲೆ ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ್ದರು.
    ವೇದಿಕೆಯಲ್ಲಿ ಸೀಮಾ ಮಂಗೋಟೆ ರುದ್ರೇಶ್, ಶೋಭಾ, ಸುನಂದ, ಜ್ಯೋತಿ, ಡಾ. ವೀಣಾಭಟ್, ಎಚ್.ಮಲ್ಲಿಕಾರ್ಜುನ್, ಜಿ.ವಿ ಸದಾಶಿವಪ್ಪ, ಲೋಲಾಕ್ಷಿ, ಶಾಮಾಚಾರ್ ಸೇರಿದಂತೆ ಇತರರು ಉಪಸ್ಥಿತರಿದ್ದರು. 

೩.೮೦ ಕೋ. ವೆಚ್ಚದಲ್ಲಿ ಕನ್ನಡ ಸಾಹಿತ್ಯ ಭವನ ನಿರ್ಮಾಣದ ಗುರಿ : ಡಾ. ವಿಜಯದೇವಿ

ಆರ್ಥಿಕ ನೆರವಿನೊಂದಿಗೆ ಎಲ್ಲಾ ರೀತಿಯ ಸಹಕಾರ ನೀಡಲು ಪತ್ರಿಕಾಗೋಷ್ಠಿಯಲ್ಲಿ ಮನವಿ 

ಭದ್ರಾವತಿ ತಾಲೂಕು ಕನ್ನಡ ಸಾಹಿತ್ಯ ಭವನ ನಿರ್ಮಾಣ ಸಮಿತಿ ವತಿಯಿಂದ ಗುರುವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಆರ್ಥಿಕ ಸಹಾಯ ಹಸ್ತದ ಕರಪತ್ರಗಳನ್ನು ಬಿಡುಗಡೆಗೊಳಿಸಲಾಯಿತು. 
    ಭದ್ರಾವತಿ: ತಾಲೂಕಿನಲ್ಲಿ ಸಾಹಿತ್ಯ, ಕನ್ನಡಾಭಿಮಾನಿಗಳು ಹಾಗು ಸಮಸ್ತ ನಾಗರಿಕರ ಬಹುಬೇಡಿಕೆಯಾಗಿರುವ ಕನ್ನಡ ಸಾಹಿತ್ಯ ಭವನ ನಿರ್ಮಾಣ ಮಾಡುವ ಆಶಯ ಇದೀಗ ಈಡೇರುತ್ತಿದ್ದು, ಸುಮಾರು ೩.೮೦ ಕೋ. ರು. ವೆಚ್ಚದಲ್ಲಿ ಮಾದರಿ ಭವನ ನಿರ್ಮಿಸುವ ಗುರಿ ಹೊಂದಲಾಗಿದೆ. ಈ ನಿಟ್ಟಿನಲ್ಲಿ ಆರ್ಥಿಕ ನೆರವಿನೊಂದಿಗೆ ಎಲ್ಲಾ ರೀತಿಯ ಸಹಕಾರ ನೀಡುವಂತೆ ಕನ್ನಡ ಸಾಹಿತ್ಯ ಭವನ ನಿರ್ಮಾಣ ಸಮಿತಿ ಅಧ್ಯಕ್ಷೆ ಎಮೆರಿಟಸ್ ಪ್ರಾಧ್ಯಾಪಕಿ ಡಾ. ವಿಜಯದೇವಿ ಮನವಿ ಮಾಡಿದರು. 
    ಅವರು ಈ ಸಂಬಂಧ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ,  ನಮ್ಮ ಮಾತೃಭಾಷೆ ಕನ್ನಡಕ್ಕೆ ಸುಮಾರು ೨೦೦೦ ವರ್ಷಗಳಿಗೂ ಮಿಗಿಲಾದ ಇತಿಹಾಸವಿದೆ. ಭಾರತದಲ್ಲಿ ಶಾಸ್ತ್ರೀಯ ಸ್ಥಾನಮಾನವನ್ನು ಪಡೆದ ಕೆಲವೇ ಭಾಷೆಗಳಲ್ಲಿ ಕನ್ನಡವು ಒಂದಾಗಿದ್ದು, ವಿಶ್ವಭಾಷಾ ಪರಂಪರೆಯಲ್ಲಿ ತನ್ನದೇ ಆದ ವೈಶಿಷ್ಟ್ಯವನ್ನು ಹೊಂದಿದೆ. ಕನ್ನಡದ ಶ್ರೇಷ್ಠತೆಗೆ ಹಾಗೂ ಅದರ ಭವ್ಯ ಪರಂಪರೆಗೆ ಅನೇಕರ ಕೊಡುಗೆ ಅಪಾರವಾಗಿದೆ. ೮ ಜ್ಞಾನಪೀಠ ಪ್ರಶಸ್ತಿಗಳನ್ನು ಕನ್ನಡಕ್ಕೆ ತಂದುಕೊಟ್ಟವರಲ್ಲಿ ಮೊಟ್ಟ ಮೊದಲಿಗರು ನಮ್ಮ ಶಿವಮೊಗ್ಗ ಜಿಲ್ಲೆಯ ಡಾ. ಕುವೆಂಪು ಮತ್ತು ಡಾ. ಯು.ಆರ್. ಅನಂತಮೂರ್ತಿಯವರು. ರಾಷ್ಟ್ರಕವಿಗಳಾದ ಡಾ. ಕುವೆಂಪು ಮತ್ತು ಜಿ.ಎಸ್. ಶಿವರುದ್ರಪ್ಪನವರು ನಮ್ಮ ಜಿಲ್ಲೆಯವರು, ಖ್ಯಾತ ಕವಿಗಳಾದ ಲಕ್ಷ್ಮೀನಾರಾಯಣ ಭಟ್ ಮತ್ತು ಎಸ್.ವಿ ಪರಮೇಶ್ವರ ಭಟ್, ಶ್ರೇಷ್ಠ ನಾಟಕಕಾರರು ಹಾಗೂ ಪತ್ರಕರ್ತರಾದ ಪಿ. ಲಂಕೇಶ್, ಕಾದಂಬರಿಕಾರರಾದ ಪೂರ್ಣಚಂದ್ರ ತೇಜಸ್ವಿ, ನಾ. ಡಿಸೋಜಾ ಮತ್ತು ಎಂ.ಕೆ. ಇಂದಿರಾ, ಖ್ಯಾತ ಸಂಶೋಧಕರಾದ ಡಾ. ಎಂ. ಚಿದಾನಂದಮೂರ್ತಿ ಹಾಗೂ ರಂಗ ನಿರ್ದೇಶಕರಾದ ಕೆ.ವಿ. ಸುಬ್ಬಣ್ಣ ಇವರುಗಳೂ ಸಹ ನಮ್ಮ ಜಿಲ್ಲೆಯವರೆ. ಹೀಗೆ ಕನ್ನಡ ಭಾಷೆ ಸಾಹಿತ್ಯ ಸಂಸ್ಕೃತಿಗೆ ಅತ್ಯಮೂಲ್ಯವಾದ ಕೊಡುಗೆಗಳನ್ನು ಕೊಟ್ಟ ಮಹನೀಯರು ಜನ್ಮತಾಳಿದ ಹೆಗ್ಗಳಿಕೆ ನಮ್ಮ ಜಿಲ್ಲೆಗಿದೆ ಎಂದರು. 
  ಕನ್ನಡಿಗರ ನಾಡು-ನುಡಿ, ನೆಲ-ಜಲ, ಸಂಸ್ಕೃತಿ-ಸಾಹಿತ್ಯಗಳ ಅಭಿವೃದ್ಧಿ ಹಾಗೂ ಸಂರಕ್ಷಣೆಗಾಗಿ ದುಡಿಯುವ ಸಂಸ್ಥೆ ಬೆಂಗಳೂರಿನ ಕನ್ನಡ ಸಾಹಿತ್ಯ ಪರಿಷತ್ತು. ಇದು ಪ್ರತಿ ಜಿಲ್ಲೆ ಮತ್ತು ತಾಲೂಕುಗಳಲ್ಲಿ ಶಾಖೆಗಳನ್ನು ಸ್ಥಾಪಿಸಿ ಕನ್ನಡ ಜನತೆಯ ಸಾಂಸ್ಕೃತಿಕ ಬದುಕನ್ನು ಸಂರಕ್ಷಿಸುತ್ತಾ ಬಂದಿದೆ. ಇದರಲ್ಲಿ ನಮ್ಮ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಸಂಸ್ಥೆ ಅಸ್ತಿತ್ವದಲ್ಲಿದ್ದು, ಕನ್ನಡ ಭಾಷೆ, ಸಾಹಿತ್ಯ, ಸಂಸ್ಕೃತಿ, ಕಲೆ. ಸಂಗೀತ ಮೊದಲಾದವುಗಳಿಗೆ ಸಂಬಂಧಪಟ್ಟ ಕಾರ್ಯಕ್ರಮಗಳನ್ನು ಆಯೋಜಿಸುತ್ತಾ ಬಂದಿದೆ. ಕನ್ನಡ ಸಾಹಿತ್ಯಕ್ಕೆ ಸಂಬಂಧಪಟ್ಟಂತೆ ದತ್ತಿ ಕಾರ್ಯಕ್ರಮ, ವಿಶೇಷ ಉಪನ್ಯಾಸ, ಕಮ್ಮಟಗಳು, ಸಾಹಿತ್ಯ ಸಮ್ಮೇಳನಗಳನ್ನು ನಡೆಸುತ್ತಾ ಬಂದಿದ್ದು, ಜನರಲ್ಲಿ ಕನ್ನಡದ ಬಗ್ಗೆ ಅರಿವು ಮತ್ತು ಅಭಿಮಾನಗಳನ್ನು ಬೆಳೆಸುತ್ತಾ ಬಂದಿದೆ. ಕನ್ನಡದ ಸೇವೆಗಾಗಿ ಹಲವು ವರ್ಷಗಳಿಂದ ಸಕ್ರಿಯವಾಗಿ ದುಡಿಯುತ್ತಿರುವುದು ಶ್ಲಾಘನೀಯ ಎಂದರು. 
    ಇಂತಹ ತಾಲೂಕು ಪರಿಷತ್ ಯಾವುದೇ ಕಾರ್ಯಕ್ರಮ ಮಾಡಬೇಕಾದರೆ ಬಾಡಿಗೆಗೆ ಭವನವನ್ನು ತೆಗೆದುಕೊಂಡು ಆರ್ಥಿಕ ಹೊರೆಯನ್ನು ಅನುಭವಿಸುತ್ತಿದೆ. ಈ ಕೊರತೆಯನ್ನು ನಿವಾರಿಸಲು, ಕನ್ನಡಿಗರಿಗೆ ಉತ್ತಮ ಕಾರ್ಯಕ್ರಮಗಳನ್ನು ನೀಡಲು ಪರಿಷತ್ತಿಗೆ ಸ್ವತಂತ್ರ ಕಟ್ಟಡದ ಅನಿವಾರ್ಯತೆ ಇದೆ. ಪರಿಷತ್ ೧೦ ವರ್ಷಗಳ ಹಿಂದೆಯೇ ೧೦೦*೭೯ ಅಡಿಗಳ ನಿವೇಶನ ವಾರ್ಡ್ ನಂ.೨೮ ಹೊಸ ಸಿದ್ದಾಪುರದಲ್ಲಿ ಹೊಂದಿದೆ. ಈಗ ಇಲ್ಲಿ `ಕನ್ನಡ ಸಾಹಿತ್ಯ ಭವನ' ನಿರ್ಮಾಣ ಮಾಡಬೇಕೆಂದು ನಿರ್ಣಯ ಕೈಗೊಂಡು ಸಮಿತಿಯನ್ನು ರಚಿಸಲಾಗಿದೆ. ಸುಮಾರು ೩.೮೦ ಕೋಟಿಗಳ ವೆಚ್ಚದಲ್ಲಿ ಕನ್ನಡ ಸಾಹಿತ್ಯ ಭವನವನ್ನು ನಿರ್ಮಿಸಲು ಮುಂದಾಗಿದ್ದು, ಮೊದಲ ಹಂತದಲ್ಲಿ ಒಂದು ಕೋಟಿ ರೂ.ಗಳ ವೆಚ್ಚದಲ್ಲಿ ನೆಲ ಕಟ್ಟಡವನ್ನು ನಿರ್ಮಿಸಲು ತೀರ್ಮಾನಿಸಲಾಗಿದೆ ಎಂದರು. 
     ತಾಲೂಕಿನ ಸಮಸ್ತ ನಾಗರಿಕರು, ಕನ್ನಡ ಹಾಗು ಸಾಹಿತ್ಯಾಭಿಮಾನಿಗಳು ಕನ್ನಡ ನಾಡಿನ ಜಲ, ಭಾಷೆ ಮತ್ತು ಭೂಮಿಯ ಋಣ ತೀರಿಸಲು ಕನ್ನಡ ಸಾಹಿತ್ಯ ಭವನದ ನಿರ್ಮಾಣಕ್ಕೆ ಆರ್ಥಿಕ ಸಹಾಯದೊಂದಿಗೆ ಎಲ್ಲಾ ರೀತಿಯ ಸಹಕಾರ ನೀಡುವಂತೆ ಕೋರಿದರು. 
    ಹೆಚ್ಚಿನ ಮಾಹಿತಿಗೆ  ೯೪೪೮೯೩೯೪೯೦/೯೯೦೨೨೧೦೧೫೦  ೯೧೧೩೨೧೪೩೪೬/೯೮೮೦೦೭೦೯೮೯ ಮೊಬೈಲ್ ಸಂಖ್ಯೆಗೆ ಕರೆ ಮಾಡಬಹುದಾಗಿದೆ ಎಂದರು. 
    ಡಾ. ಡಿ. ಪ್ರಭಾಕರ್ ಬೀರಯ್ಯ ಮಾತನಾಡಿ, ಸಾಹಿತ್ಯ ಭವನ ನಿರ್ಮಾಣ ಸಮಿತಿಯ ಪ್ರತಿಯೊಬ್ಬರು ತಮಗೆ ವಹಿಸಿರುವ ಜವಾಬ್ದಾರಿಗಳನ್ನು ಹೆಚ್ಚಿನ ಪಾರದರ್ಶಕವಾಗಿ ನಿರ್ವಹಿಸಲು ಕಟ್ಟಿಬದ್ಧರಾಗಿದ್ದೇವೆ. ಇದಕ್ಕೆ ತಕ್ಕಂತೆ ರೂಪುರೇಷೆಗಳನ್ನು ಸಿದ್ದಪಡಿಸಿಕೊಳ್ಳಲಾಗಿದೆ. ಯಾವುದೇ ರೀತಿಯ ಗೊಂದಲಗಳಿಗೆ ಆಸ್ಪದವಿಲ್ಲದ ರೀತಿಯಲ್ಲಿ ಭವನ ನಿರ್ಮಾಣ ಮಾಡುವ ಗುರಿ ಹೊಂದಲಾಗಿದೆ. ಆರ್ಥಿಕ ವರ್ಷದ ಕೊನೆಯಲ್ಲಿ ಲೆಕ್ಕಪತ್ರ ಮಂಡಿಸಲಾಗುವುದು ಎಂದರು. 
    ಭವನ ಪರಿಷತ್ತಿನ ಕಾರ್ಯಚಟುವಟಿಕೆಗಳಿಗೆ ಮಾತ್ರ ಸೀಮಿತವಾಗಿದ್ದರೂ ಸಹ ಇದರ ನಿರ್ವಹಣೆ ವೆಚ್ಚ ಭರಿಸುವ ನಿಟ್ಟಿನಲ್ಲಿ ಶಾಲಾ-ಕಾಲೇಜು ಸೇರಿದಂತೆ ಸಂಘ-ಸಂಸ್ಥೆಗಳಿಗೆ ಸಣ್ಣಪುಟ್ಟ ಕಾರ್ಯಕ್ರಮಗಳನ್ನು ಆಯೋಜಿಸಲು ಬಾಡಿಗೆಗೆ ನೀಡಲಾಗುವುದು. ಇದನ್ನು ಬಿಟ್ಟರೇ ಭವನವನ್ನು ಆರ್ಥಿಕ ಲಾಭ ಅಥವಾ ಬಾಡಿಗೆ ನೀಡುವ ಉದ್ದೇಶದಿಂದ ಬಳಸಿಕೊಳ್ಳುವುದಿಲ್ಲ ಎಂದು ಸ್ಪಷ್ಟಪಡಿಸಿದರು. 
    ಪತ್ರಿಕಾಗೋಷ್ಠಿಯಲ್ಲಿ ಎಂ.ಈ ಜಗದೀಶ್, ಎಂ.ಎಸ್. ಸುಧಾಮಣಿ ವೆಂಕಟೇಶ್, ಡಿ. ನಾಗೋಜಿರಾವ್, ಬಿ.ಎಲ್. ಮೋಹನಕುಮಾರ್, ಕೋಡ್ಲು ಯಜ್ಞಯ್ಯ, ಟಿ. ತಿಮ್ಮಪ್ಪ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.