ಮಂಗಳವಾರ, ಸೆಪ್ಟೆಂಬರ್ 30, 2025

ನಾಡಹಬ್ಬ ದಸರಾ ಆಚರಣೆ : ಶಾಸಕ ಸಂಗಮೇಶ್ವರ್‌ಗೆ ಗೌರವ ಸನ್ಮಾನ

ಭದ್ರಾವತಿಯಲ್ಲಿ ನಾಡಹಬ್ಬ ದಸರಾ ಅಂಗವಾಗಿ ನಗರಸಭೆಯಿಂದ ಹಳೇನಗರದ ಕನಕಮಂಟಪದಲ್ಲಿ ಮಂಗಳವಾರ ರಾತ್ರಿ ಏರ್ಪಡಿಸಲಾಗಿದ್ದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಶಾಸಕ ಬಿ.ಕೆ ಸಂಗಮೇಶ್ವರ್ ಅವರನ್ನು ವಿಶೇಷವಾಗಿ ಸನ್ಮಾನಿಸಿ ಗೌರವಿಸಲಾಯಿತು.  
    ಭದ್ರಾವತಿ : ನಾಡಹಬ್ಬ ದಸರಾ ಅಂಗವಾಗಿ ನಗರಸಭೆಯಿಂದ ಹಳೇನಗರದ ಕನಕಮಂಟಪದಲ್ಲಿ ಮಂಗಳವಾರ ರಾತ್ರಿ ಏರ್ಪಡಿಸಲಾಗಿದ್ದ ಸಾಂಸ್ಕೃತಿಕ ಕಾರ್ಯಕ್ರಮ ಕರ್ನಾಟಕ ರಾಜ್ಯ ಗ್ರಾಮೀಣ ಮೂಲ ಸೌಕರ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಶಾಸಕ ಬಿ.ಕೆ ಸಂಗಮೇಶ್ವರ್ ಉದ್ಘಾಟಿಸಿರು.
    ಟಿ.ವಿ ವಾಹಿನಿಯ ಕಾಮಿಡಿ ಕಿಲಾಡಿಗಳು ಹಾಗು ಬೆಂಗಳೂರಿನ ಗಾಯಕರಿಂದ ನೃತ್ಯ/ಸಂಗೀತ/ ಕಾಮಿಡಿ ಕಾರ್ಯಕ್ರಮ ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು. ೧೦ ದಿನಗಳ ನಾಡಹಬ್ಬ ದಸರಾ ಆಚರಣೆ ಯಶಸ್ವಿಗೊಳ್ಳಲು ಶ್ರಮಿಸುತ್ತಿರುವ ನಾಡಹಬ್ಬ ದಸರಾ ಆಚರಣೆ ವಿವಿಧ ಸಮಿತಿಗಳ ಅಧ್ಯಕ್ಷರು, ಸದಸ್ಯರು ಹಾಗು ಅಧಿಕಾರಿಗಳು, ಸಿಬ್ಬಂದಿ ವರ್ಗದವರು, ನಗರಸಭೆ ಪೌರ ಸೇವಾ ನೌಕರರ ಸೇವಾ ಸಂಘದ ಅಧ್ಯಕ್ಷರು, ಪದಾಧಿಕಾರಿಗಳು ಮತ್ತು  ನಗರಸಭೆ ಎಲ್ಲಾ ಸದಸ್ಯರನ್ನು ಸನ್ಮಾನಿಸಿ ಅಭಿನಂದಿಸಲಾಯಿತು. ಶಾಸಕ ಬಿ.ಕೆ ಸಂಗಮೇಶ್ವರ್ ಅವರನ್ನು ವಿಶೇಷವಾಗಿ ಸನ್ಮಾನಿಸಿ ಗೌರವಿಸಲಾಯಿತು.  
    ನಗರಸಭೆ ಅಧ್ಯಕ್ಷೆ ಜೆ.ಸಿ ಗೀತಾರಾಜ್‌ಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷ ಎಂ. ಮಣಿ ಎಎನ್‌ಎಸ್, ಸ್ಥಾಯಿ ಸಮಿತಿ ಅಧ್ಯಕ್ಷ ಸೈಯದ್ ರಿಯಾಜ್, ಪೌರಾಯುಕ್ತ ಎನ್.ಕೆ ಹೇಮಂತ್, ನಗರ ಆಶ್ರಯ ಸಮಿತಿ ಅಧ್ಯಕ್ಷ ಬಿ.ಎಸ್ ಗೋಪಾಲ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. 

ಸುನಂದಮ್ಮ ನಿಧನ

ಸುನಂದಮ್ಮ 
    ಭದ್ರಾವತಿ: ಹಳೇನಗರದ ಬ್ರಾಹ್ಮಣರ ಬೀದಿ ನಿವಾಸಿ ಸುನಂದಮ್ಮ (೮೫) ವಯೋ ಸಹಜವಾಗಿ ಸೋಮವಾರ ರಾತ್ರಿ ನಿಧನರಾದವರು. 
    ಮೃತರಿಗೆ ಜಿಲ್ಲಾ ಧಾರ್ಮಿಕ ಪರಿಷತ್ತು ಸದಸ್ಯ ರಮಾಕಾಂತ್(ಪುಟ್ಟಣ್ಣ) ಸೇರಿದಂತೆ ಇಬ್ಬರು ಪುತ್ರರು, ಇಬ್ಬರು ಪುತ್ರಿಯರು ಇದ್ದಾರೆ. ಇವರ ಅಂತ್ಯಸಂಸ್ಕಾರ ಹೊಳೆಹೊನ್ನೂರು ರಸ್ತೆಯ ಹಿಂದೂ ರುದ್ರಭೂಮಿಯಲ್ಲಿ ಮಂಗಳವಾರ ನೆರವೇರಿತು.
ಶಾಸಕ ಬಿ.ಕೆ ಸಂಗಮೇಶ್ವರ್, ನಗರಸಭೆ ಅಧ್ಯಕ್ಷೆ ಜೆ.ಸಿ ಗೀತಾರಾಜಕುಮಾರ್ ಮತ್ತು ಸದಸ್ಯರು, ಧಾರ್ಮಿಕ ಮುಖಂಡ ನರಸಿಂಹಾಚಾರ್, ಸತೀಶ್ ಅಯ್ಯರ್, ಬ್ರಾಹ್ಮಣ ಸಮಾಜದ ಅಧ್ಯಕ್ಷ ರಮೇಶ್ ಪದಾಧಿಕಾರಿಗಳು ಸೇರಿದಂತೆ ಇನ್ನಿತರರು ಸಂತಾಪ ಸೂಚಿಸಿದ್ದಾರೆ.

ಮೇದ ಜನಾಂಗದ ಕೌಲಶ್ಯ ಅಭಿವೃದ್ಧಿಗಾಗಿ ಕರಕುಶಲ ವಸ್ತುಗಳ ತರಬೇತಿ ಶಿಬಿರ : ಜಿ. ಪಲ್ಲವಿ

ಶಿವಮೊಗ್ಗ ಜಿಲ್ಲಾ ಮೇದ ಜನಾಂಗದ ಕ್ಷೇಮಾಭಿವೃದ್ಧಿ ಸಂಘದ ವಾರ್ಷಿಕ ಸಭೆಯಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಅಲೆಮಾರಿಗಳ ನಿಗಮದ ಅಧ್ಯಕ್ಷೆ ಜಿ. ಪಲ್ಲವಿ, ಜಿಲ್ಲಾಧ್ಯಕ್ಷ  ರಾಜಣ್ಣ ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು. 
    ಭದ್ರಾವತಿ: ಶಿವಮೊಗ್ಗ ಜಿಲ್ಲಾ ಮೇದ ಜನಾಂಗದವರ ಏಳಿಗೆಗೆ ಬದ್ಧವಾಗಿದ್ದು, ಜಿಲ್ಲೆಯಲ್ಲಿ ಈ ಜನಾಂಗಕ್ಕೆ ಅನುಕೂಲವಾಗುವಂತೆ ಕೌಶಲ್ಯ ಅಭಿವೃದ್ಧಿಗಾಗಿ ಬಿದಿರು ಬುಟ್ಟಿ ತಯಾರಿಕೆ ಸೇರಿದಂತೆ ಕರಕುಶಲ ವಸ್ತುಗಳ ತರಬೇತಿ ಶಿಬಿರ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಅಲೆಮಾರಿಗಳ ನಿಗಮದ ವತಿಯಿಂದ ಆಯೋಜಿಸಲಾಗುವುದು ಎಂದು ನಿಗಮದ ಅಧ್ಯಕ್ಷೆ ಜಿ. ಪಲ್ಲವಿ ಹೇಳಿದರು. 
    ಅವರು ಶಿವಮೊಗ್ಗ ಜಿಲ್ಲಾ ಮೇದ ಜನಾಂಗದ ಕ್ಷೇಮಾಭಿವೃದ್ಧಿ ಸಂಘದ ವಾರ್ಷಿಕ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದರು. ಮೇದ ಜನಾಂಗದವರು ಇಂದಿಗೂ ತಮ್ಮ ಮೂಲ ಕಸುಬು ಮುಂದುವರೆಸಿಕೊಂಡು ಬರುತ್ತಿದ್ದು, ಆರ್ಥಿಕವಾಗಿ, ಸಾಮಾಜಿಕವಾಗಿ ಮತ್ತು ಶೈಕ್ಷಣಿಕವಾಗಿ ಈ ಜನಾಂಗ ಹೆಚ್ಚು ಅಭಿವೃದ್ಧಿ ಹೊಂದಬೇಕಾಗಿದೆ ಎಂದರು. 
    ಶಿವಶರಣ ಮೇದಾರ ಕೇತೇಶ್ವರರ ಜಯಂತಿ ಸರ್ಕಾರದಿಂದ ಆಚರಿಸುವ ಮೂಲಕ ಆ ದಿನ ಸರ್ಕಾರಿ ರಜೆ ಘೋಷಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯರಿಗೆ ಒತ್ತಾಯಿಸುವುದಾಗಿ ಭರವಸೆ ನೀಡಿದರು. 
    ಹಿಂದುಳಿದ ಆಯೋಗದಿಂದ ನಡೆಸಲಾಗುತ್ತಿರುವ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯಲ್ಲಿ ಜನಾಂಗದವರು ಸೂಕ್ತ ಮಾಹಿತಿ ನೀಡುವ ಮೂಲಕ ಧರ್ಮ-ಹಿಂದೂ, ಜಾತಿ-ಮೇದ(ಎಸ್.ಟಿ ಸಿ-೩೭.೧) ಎಂದು ಬರೆಸುವುದು ಅಥವಾ ಸಮಾನಾರ್ಥಕ ಪದಗಳಾದ ಮೇದಾರಿ(ಎಸ್.ಟಿ ಸಿ-೩೭.೨), ಗೌರಿಗ(ಎಸ್.ಟಿ ಸಿ-೩೭.೩), ಬುರುಡ(ಎಸ್.ಟಿ ಸಿ-೩೭.೪) ಮತ್ತು ಮೇದಾರ(ಎಸ್.ಟಿ ಸಿ-೩೭.೫) ಎಂದು ದಾಖಲಿಸುವಂತೆ ಸೂಚಿಸಲಾಯಿತು. 
    ಜಿಲ್ಲಾಧ್ಯಕ್ಷ ಆಯನೂರು ರಾಜಣ್ಣ ಸಭೆ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷ ಚಂದ್ರಪ್ಪ, ಕಾರ್ಯದರ್ಶಿ ಬಿ. ಶಂಕರ್, ಖಜಾಂಚಿ ಮಲ್ಲೇಶ್, ಶಿವಮೊಗ್ಗ ಜಿಲ್ಲಾ ಮೇದಾರ ಅಲೆಮಾರಿ ಡಿಸಿ ಕಮಿಟಿ ಸದಸ್ಯ ಕೂಡ್ಲಿಗೆರೆ ಎಸ್. ಮಹಾದೇವ,  ಅಲೆಮಾರಿ ಸಂಘಟನೆಗಳ ಒಕ್ಕೂಟದ ಜಂಟಿ ಕಾರ್ಯದರ್ಶಿ ಬಿ.ಎಸ್ ಆನಂದಕುಮಾರ್ ಏಕವಲ್ಯ, sಸೊರಬ ರವಿ, ಶಿಕಾರಿಪುರ ಲಕ್ಷ್ಮಣ್ಣಪ್ಪ, ವೀರಭದ್ರಪ್ಪ, ಬಾರಂದೂರು ಸೋಮಣ್ಣ, ಶಿವಮೊಗ್ಗ ಸೀಮೆಎಣ್ಣೆ ರಾಮಣ್ಣ, ಭದ್ರಾವತಿ ಎಚ್. ವಿಶ್ವನಾಥ್, ರಮೇಶ್, ಚಿಕ್ಕಣ್ಣ ಸೇರಿದಂತೆ ಇನ್ನಿತರರು ಸಭೆಯಲ್ಲಿ ಉಪಸ್ಥಿತರಿದ್ದರು. 

ಯುವಕನೊಬ್ಬನ ಕೊಲೆ ಪ್ರಕರಣ : ೮ ಜನರಿಗೆ ಜೀವಾವಧಿ ಕಾರಗೃಹ ಶಿಕ್ಷೆ

ಕಳೆದ ೫ ವರ್ಷಗಳ ಹಿಂದೆ ಭದ್ರಾವತಿ ನಗರಸಭೆ ವ್ಯಾಪ್ತಿಯ ಹೊಸಮನೆ ಹನುಮಂತ ನಗರದಲ್ಲಿ ಹಣಕಾಸು ಹಾಗು ಹಳೇದ್ವೇಷದ ಹಿನ್ನಲೆಯಲ್ಲಿ ನಡೆದಿದ್ದ ಯುವಕನೊಬ್ಬನ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ೮ ಜನ ಆರೋಪಿಗಳಿಗೆ ಜೀವಾವಧಿ ಕಾರಗೃಹ ಶಿಕ್ಷೆ ವಿಧಿಸಿ ನ್ಯಾಯಾಲಯ ತೀರ್ಪು ನೀಡಿದೆ. 
    ಭದ್ರಾವತಿ: ಕಳೆದ ೫ ವರ್ಷಗಳ ಹಿಂದೆ ನಗರಸಭೆ ವ್ಯಾಪ್ತಿಯ ಹೊಸಮನೆ ಹನುಮಂತ ನಗರದಲ್ಲಿ ಹಣಕಾಸು ಹಾಗು ಹಳೇದ್ವೇಷದ ಹಿನ್ನಲೆಯಲ್ಲಿ ನಡೆದಿದ್ದ ಯುವಕನೊಬ್ಬನ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ೮ ಜನ ಆರೋಪಿಗಳಿಗೆ ಜೀವಾವಧಿ ಕಾರಗೃಹ ಶಿಕ್ಷೆ ವಿಧಿಸಿ ನ್ಯಾಯಾಲಯ ತೀರ್ಪು ನೀಡಿದೆ. 
    ಹನುಮಂತನಗರದ ಯುವಕ ಶಾರುಖ್ ಖಾನ್(೨೬) ಮತ್ತು ಇದೇ ಏರಿಯಾದ ರಮೇಶ ಅಲಿಯಾಸ್ ಹಂದಿ ರಮೇಶ ಮತ್ತಿತರರಿಗೂ ಹಣಕಾಸಿನ ವಿಚಾರ ಹಾಗು ಹಳೇದ್ವೇಷದ ಹಿನ್ನಲೆಯಲ್ಲಿ ಸೆ.೩೦, ೨೦೨೦ರ ರಾತ್ರಿ ಗಲಾಟೆಯಾಗಿತ್ತು. ಮೊದಲು ಶಾರುಖ್ ಖಾನ್‌ಗೆ ಅವರ ಮನೆಯ ಬಳಿ ಬಂದು ಜೀವಬೆದರಿಕೆ ಹಾಕಿ ತೆರಳಿದ್ದ ಗುಂಪು ನಂತರ ಶಾರುಖ್ ಖಾನ್‌ನನ್ನು ಕೊಲೆ ಮಾಡಿತ್ತು. ಈ ಸಂಬಂಧ ಹೊಸಮನೆ ಶಿವಾಜಿ ಸರ್ಕಲ್ ಪೊಲೀಸ್ ಠಾಣೆ ದೂರು ದಾಖಲಾಗಿತ್ತು. 
    ಅಂದಿನ ತನಿಖಾಧಿಕಾರಿಯಾಗಿದ ಪೊಲೀಸ್ ನಗರ ವೃತ್ತ ನಿರೀಕ್ಷಕ ರಾಘವೇಂದ್ರ ಕಾಂಡಿಕೆಯವರು ತನಿಖೆ ಕೈಗೊಂಡು ಆರೋಪಿತರಾದ ರಮೇಶ ಅಲಿಯಾಸ್ ಹಂದಿ ರಮೇಶ (೪೪), .ವೆಂಕಟರಾಮ(೩೫), ಚಂದ್ರ(೩೭), ಕಾರ್ತಿಕ್(೨೪), ಮಧುಸೂದನ್(೨೮), ರಮೇಶ(೩೭), ನಾಗರಾಜ(೨೫) ಮತ್ತು ಸಿದ್ದಪ್ಪ(೪೮) ವಿರುದ್ಧ   ನ್ಯಾಯಾಲಯಕ್ಕೆ ದೋಷಾರೋಪಣಾ ಪತ್ರ ಸಲ್ಲಿಸಿದ್ದರು. 
    ವಿಚಾರಣೆ ನಡೆಸಿದ ೪ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ, ಶಿವಮೊಗ್ಗ(ಪೀಠಾಸೀನ ಭದ್ರಾವತಿ) ನ್ಯಾಯಾಧೀಶರಾದ ಇಂದಿರಾ ಮೈಲಸ್ವಾಮಿ ಚೆಟ್ಟಿಯಾರ್‌ರವರು ಆರೋಪಿತರ ವಿರುದ್ಧ ಆರೋಪ ದೃಡಪಟ್ಟ ಹಿನ್ನೆಲೆಯಲ್ಲಿ  ಸೆ.೨೯ ರಂದು  ಎಲ್ಲಾ ಆರೋಪಿಗಳಿಗೂ ಜೀವಾವಧಿ ಕಾರಾಗೃಹ ಶಿಕ್ಷೆ ವಿಧಿಸಿ ಆದೇಶಿಸಿದ್ದಾರೆ.