Friday, December 6, 2024

ಡಿ.೭ರಂದು ಶಾಲಾ ವಾರ್ಷಿಕೋತ್ಸವ ಸಂಭ್ರಮ




    ಭದ್ರಾವತಿ: ನಗರದ ನ್ಯೂಟೌನ್  ಈಶ್ವರಮ್ಮ ಪ್ರೌಢಶಾಲೆ ಮತ್ತು ಪ್ರಶಾಂತಿ ಹಿರಿಯ ಪ್ರಾಥಮಿಕ ಶಾಲೆ (ಕನ್ನಡ ಮತ್ತು ಆಂಗ್ಲ ಮಾಧ್ಯಮ) ವಾರ್ಷಿಕೋತ್ಸವ ಸಂಭ್ರಮ ಡಿ.೭ರಂದು ಶಾಲಾ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದೆ. 
    ಸಂಜೆ ೬ ಗಂಟೆಗೆ ಆರಂಭಗೊಳ್ಳಲಿರುವ ಕಾರ್ಯಕ್ರಮದಲ್ಲಿ ಕರ್ನಾಟಕ ಗ್ರಾಮೀಣ ಮೂಲ ಸೌಕರ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಶಾಸಕ ಬಿ.ಕೆ ಸಂಗಮೇಶ್ವರ್, ಎಮೆರಿಟಸ್ ಪ್ರಾಧ್ಯಾಪಕಿ ಡಾ. ವಿಜಯಾದೇವಿ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದು, ಶ್ರೀ ಸತ್ಯ ಸಾಯಿ ಸಮಗ್ರ ಶಿಕ್ಷಣ ಸಂಸ್ಥೆ ರಾಜ್ಯ ಸಂಯೋಜಕ ಡಾ. ಡಿ. ಪ್ರಭಾಕರ ಬೀರಯ್ಯ ಅಧ್ಯಕ್ಷತೆ ವಹಿಸಲಿದ್ದಾರೆ. 
    ಪ್ರಮುಖರಾದ ಸೌಮ್ಯ ರೂಪ ಕೆ., ಎಂ. ದೇವೇಂದ್ರಪ್ಪ, ಶಾಮರಾಯ ಆಚಾರ್, ಟಿ.ವಿ ಸುಜಾತ ಮತ್ತು ಜಿ.ಪಿ ಪರಮೇಶ್ವರಪ್ಪ ಉಪಸ್ಥಿತರಿರುವರು. ನಂತರ ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ. ಶಾಲಾ ಮಕ್ಕಳು, ಪೋಷಕರು ಸೇರಿದಂತೆ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ವಾರ್ಷಿಕೋತ್ಸವ ಸಂಭ್ರಮ ಯಶಸ್ವಿಗೊಳಿಸುವಂತೆ ಕೋರಲಾಗಿದೆ. 

ವಿವಿಧ ಬೇಡಿಕೆಗಳನ್ನು ಈಡೇರಿಸಲು ಒತ್ತಾಯಿಸಿ ನಗರಸಭೆಗೆ ಮನವಿ

 

ಭದ್ರಾವತಿ: ಜನ್ನಾಪುರ ಮತ್ತು ಹುತ್ತಾ ಕಾಲೋನಿ ವ್ಯಾಪ್ತಿಯಲ್ಲಿನ ನಾಗರಿಕರ ಬೇಡಿಕೆಗಳನ್ನು ಈಡೇರಿಸಿ ಕೊಡುವಂತೆ ಒತ್ತಾಯಿಸಿ ಜನ್ನಾಪುರ-ಹುತ್ತಾ ತೆರಿಗೆದಾರರ ಸಂಘದ ವತಿಯಿಂದ ನಗರಸಭೆ ಅಧ್ಯಕ್ಷರಿಗೆ ಮನವಿ ಸಲ್ಲಿಸಲಾಗಿದೆ. 
    ಯು.ಜಿ.ಡಿ ಕಾಮಗಾರಿ ಅರ್ಧಕ್ಕೆ ಸ್ಥಗಿತಗೊಂಡಿದ್ದು, ಟಾಯ್ಲೆಟ್ ಪಿಟ್‌ಗಳು (ಶೌಚಾಲಯ ಗುಂಡಿಗಳು) ತುಂಬಿ ತುಳುಕುತ್ತಿವೆ. ತಕ್ಷಣವೇ ಸ್ಥಗಿತಗೊಂಡಿರುವ ಕಾಮಗಾರಿ ಆರಂಭಿಸಿ ಪೂರ್ಣಗೊಳಿಸುವುದು. ಮೀಟರ್ ಅಳವಡಿಕೆಯಿಂದ ಪೂರೈಕೆಯಾಗುತ್ತಿರುವ ಕುಡಿಯುವ ನೀರು ಸರಿಯಾಗಿ ಬಾರದೆ ತೊಂದರೆಯುಂಟಾಗಿದೆ ತಕ್ಷಣ ಸರಿಪಡಿಸುವುದು. ಜನ್ನಾಪುರ ಕೆರೆ ಶುದ್ದೀಕರಣ ಕಾರ್ಯ ತ್ವರಿತವಾಗಿ ಕೈಗೊಳ್ಳುವುದು. ಈ ವ್ಯಾಪ್ತಿಯಲ್ಲಿ ನಿರಂತರವಾಗಿ ಬೀದಿ ನಾಯಿಗಳ ಹಾವಳಿ, ಸೊಳ್ಳೆಕಾಟ, ಬಿಡಾಡಿ ದನಗಳ ಕಾಟ ಹೆಚ್ಚಾಗಿವೆ ನಿಯಂತ್ರಿಸಲು ಕ್ರಮ ಕೈಗೊಳ್ಳುವಂತೆ ಕೋರಲಾಗಿದೆ. 
    ಕಂದಾಯ ಪಾವತಿಸಲು ಜನ್ನಾಪುರ ಎನ್‌ಟಿಬಿ ಕಛೇರಿಯಲ್ಲಿ ಕಂಪ್ಯೂಟರ್ ವಿಭಾಗ ತೆರೆಯುವುದು. ಕಸ ತೆಗೆಯುವಾಗ ವಯೋವೃದ್ಧರಿಗೆ, ಮಹಿಳೆಯರಿಗೆ, ಮಕ್ಕಳಿಗೆ, ಆದ್ಯತೆ ನೀಡಿ ತಂದಿಟ್ಟ ಕಸವನ್ನು ತೆಗೆಯಲು ಸಹಕರಿಸುವುದು ಹಾಗು ಕಳಪೆ ಕಾಮಗಾರಿಗಳನ್ನು ತಕ್ಷಣ ನಿಲ್ಲಿಸುವಂತೆ ಒತ್ತಾಯಿಸಲಾಗಿದೆ.