Wednesday, September 27, 2023

ಜ್ಞಾನದೀಪಿಕಾ ಶಾಲೆ ವಿದ್ಯಾರ್ಥಿಗಳು ಜಿಲ್ಲಾಮಟ್ಟಕ್ಕೆ ಆಯ್ಕೆ

ಭದ್ರಾವತಿ ತಾಲೂಕಿನ ಯರೇಹಳ್ಳಿ ಜ್ಞಾನದೀಪಿಕಾ ಅನುದಾನಿತ ಕನ್ನಡ ಹಿರಿಯ ಪ್ರಾಥಮಿಕ ಶಾಲೆ ವಿದ್ಯಾರ್ಥಿಗಳು ತಾಲೂಕು ಮಟ್ಟದ ದಸರಾ ಕ್ರೀಡಾಕೂಟದಲ್ಲಿ ಭಾಗವಹಿಸಿ ಪ್ರಶಸ್ತಿಗಳನ್ನು ಪಡೆದುಕೊಂಡು ಜಿಲ್ಲಾಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

    ಭದ್ರಾವತಿ : ತಾಲೂಕಿನ ಯರೇಹಳ್ಳಿ ಜ್ಞಾನದೀಪಿಕಾ ಅನುದಾನಿತ ಕನ್ನಡ ಹಿರಿಯ ಪ್ರಾಥಮಿಕ ಶಾಲೆ ವಿದ್ಯಾರ್ಥಿಗಳು ತಾಲೂಕು ಮಟ್ಟದ ದಸರಾ ಕ್ರೀಡಾಕೂಟದಲ್ಲಿ ಭಾಗವಹಿಸಿ ಪ್ರಶಸ್ತಿಗಳನ್ನು ಪಡೆದುಕೊಂಡು ಜಿಲ್ಲಾಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

    ಬಾಲಕಿಯರ ವಿಭಾಗದಲ್ಲಿ ಖೋ ಖೋ ಪ್ರಥಮ, ಸಿ. ಅರ್ಪಿತ 800 ಮೀಟರ್ ಓಟ, 1500 ಮೀಟರ್ ಓಟದಲ್ಲಿ ಪ್ರಥಮ ಹಾಗು ಸಿ. ಕಾವ್ಯಶ್ರೀ, ಟಿ.ಡಿ ದಿಶಾ, ಸಿ. ದುರ್ಗಾಶ್ರೀ ಮತ್ತು ಸಿ. ಅರ್ಪಿತ ಪ್ರಥಮ ಸ್ಥಾನ ಮತ್ತು 100 ಮೀಟರ್ ಓಟದಲ್ಲಿ ಸಿ. ಕಾವ್ಯಶ್ರೀ ದ್ವಿತೀಯ ಹಾಗು 800 ಮೀಟರ್ ಓಟದಲ್ಲಿ ಟಿ.ಡಿ ದಿಶಾ ತೃತೀಯ ಸ್ಥಾನ ಪಡೆದುಕೊಂಡಿದ್ದಾರೆ.

    ವಿಜೇತ ವಿದ್ಯಾರ್ಥಿಗಳಿಗೆ ವಿದ್ಯಾಸಂಸ್ಥೆ ಆಡಳಿತ ಮಂಡಳಿ ಕಾರ್ಯದರ್ಶಿಗಳು ಹಾಗು ಮುಖ್ಯೋಪಾಧ್ಯಾಯರು, ಶಿಕ್ಷಕರು, ತರಬೇತಿದಾರರು ಹಾಗು ಸಿಬ್ಬಂದಿ ವರ್ಗದವರು ಅಭಿನಂದಿಸಿದ್ದಾರೆ.

ಶ್ರೀ ಭೈರವೇಶ್ವರ ಪತ್ತಿನ ಸಹಕಾರ ಸಂಘ 13,52,378 ರು. ನಿವ್ವಳ ಲಾಭ

ಭದ್ರಾವತಿ ಅಪ್ಪರ್ ಹುತ್ತಾ ಒಕ್ಕಲಿಗರ ಸಂಘದ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಶ್ರೀ ಭೈರವೇಶ್ವರ ಪತ್ತಿನ ಸಹಕಾರ ಸಂಘದ ಸರ್ವ ಸದಸ್ಯರ ಸಭೆಯನ್ನು ಸಂಘದ ಅಧ್ಯಕ್ಷ ಬಿ.ಎಸ್ ಮಲ್ಲೇಶ್ ಸೇರಿದಂತೆ ಇನ್ನಿತರರು ಉದ್ಘಾಟಿಸಿದರು.

    ಭದ್ರಾವತಿ : ಶ್ರೀ ಭೈರವೇಶ್ವರ ಪತ್ತಿನ ಸಹಕಾರ ಸಂಘ ಈ ಬಾರಿ 13,52,378 ರು. ನಿವ್ವಳ ಲಾಭ ಗಳಿಸಿದೆ ಎಂದು ಸಂಘದ ಅಧ್ಯಕ್ಷ ಬಿ.ಎಸ್ ಮಲ್ಲೇಶ್ ಹೇಳಿದರು.

    ಅವರು ನಗರದ ಅಪ್ಪರ್ ಹುತ್ತಾ ಒಕ್ಕಲಿಗರ ಸಂಘದ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಸರ್ವ ಸದಸ್ಯರ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

    ಸಾಲ ಪಡೆದ ಸದಸ್ಯರು ಸಕಾಲದಲ್ಲಿ ಮರು ಪಾವತಿ ಮಾಡುವಂತೆ ವಿನಂತಿಸುವ ಮೂಲಕ ಸದಸ್ಯರ ಸಹಕಾರವೇ ಸಂಘದ ಅಭಿವೃದ್ಧಿಗೆ ಶ್ರೀ ರಕ್ಷೆ ಎಂದರು.

    ಸಭೆಯಲ್ಲಿ ಷೇರುದಾರರಿಗೆ ಶೇ.10ರಷ್ಟು ಡಿವಿಡೆಂಟ್ ನೀಡಲು ತೀರ್ಮಾನಿಸಲಾಯಿತು. ಎಸ್ಎಸ್ಎಲ್ ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ ಅತಿಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು.

    ಸಭೆಯಲ್ಲಿ ಉಪಾಧ್ಯಕ್ಷ ಜಿ. ಶಂಕರ್, ನಿರ್ದೇಶಕರಾದ ತಮ್ಮೇಗೌಡ, ದೇವರಾಜ್, ಪರಮಶಿವ, ಬಿ.ಜೆ ವೀಣಾ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

    ಅನನ್ಯ ಪ್ರಾರ್ಥಿಸಿ, ನಿರ್ದೇಶಕರಾದ ಗೊಂದಿ ಜಯರಾಮ್ ಸ್ವಾಗತಿಸಿದರು. ಸಂಪತ್ ಕುಮಾರ್ ನಿರೂಪಿಸಿ, ಕೆಂಪಯ್ಯ ವಂದಿಸಿದರು.

ಸೆ.29ರಿಂದ 2 ದಿನ ತಾಲೂಕು ಮಟ್ಟದ ಕ್ರೀಡಾಕೂಟ

    ಭದ್ರಾವತಿ, ಸೆ. 27: ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ವತಿಯಿಂದ ಗಾಂಧಿನಗರ ಸ್ವಾಮಿ ವಿವೇಕಾನಂದ ವಿದ್ಯಾಸಂಸ್ಥೆ ಸಹಯೋಗದೊಂದಿಗೆ ಸೆ.29 ಮತ್ತು 30 ಎರಡು ದಿನ ತಾಲೂಕು ಮಟ್ಟದ ಹಿರಿಯ ಪ್ರಾಥಮಿಕ ಶಾಲಾ ಬಾಲಕ-ಬಾಲಕಿಯರ ಕ್ರೀಡಾಕೂಟ ನಡೆಯಲಿದೆ.

    ವಿಐಎಸ್ಎಲ್ ಕ್ರೀಡಾಂಗಣದಲ್ಲಿ ಕ್ರೀಡಾಕೂಟ ನಡೆಯಲಿದ್ದು, ಹಿರಿಯ ಪ್ರಾಥಮಿಕ ಶಾಲಾ ಬಾಲಕ-ಬಾಲಕಿಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಯಶಸ್ವಿಗೊಳಿಸುವಂತೆ ಕೋರಲಾಗಿದೆ. .