Tuesday, September 27, 2022

7ನೇ ಆಲ್ ಇಂಡಿಯನ್ ನ್ಯಾಷನಲ್-2022 ಷಟಲ್ ಬ್ಯಾಡ್ಮಿಂಟನ್ ಪಂದ್ಯಾವಳಿಯಲ್ಲಿ ಬಹುಮಾನ

 ಕೆ. ಪವನ್ ಕುಮಾರ್ ಅಂತರಾಷ್ಟ್ರೀಯ ಮಟ್ಟಕ್ಕೆ  ಆಯ್ಕೆ

ಕೆ. ಪವನ್ ಕುಮಾರ್
    ಭದ್ರಾವತಿ, ಸೆ. 28: ಮೂಲತಃ ಕಾಗದ ನಗರದ 6ನೇ ವಾರ್ಡ್ ನಿವಾಸಿ  ಕೆ. ಪವನ್ ಕುಮಾರ್  7ನೇ ಆಲ್ ಇಂಡಿಯನ್ ನ್ಯಾಷನಲ್-2022 ಷಟಲ್ ಬ್ಯಾಡ್ಮಿಂಟನ್   ಪಂದ್ಯಾವಳಿಯಲ್ಲಿ ಭಾಗವಹಿಸಿ ಬಹುಮಾನಗಳನ್ನು ತಮ್ಮದಾಗಿಸಿಕೊಂಡಿದ್ದಾರೆ.   
     ಸಿಂಗಲ್ಸ್  ಮತ್ತು ಡಬಲ್ಸ್ ನಲ್ಲಿ ಪ್ರಥಮ ಸ್ಥಾನದೊಂದಿಗೆ ಚಿನ್ನ ಹಾಗೂ ಮಿಕ್ಸೆಡ್ ಡಬಲ್ಸ್ ನಲ್ಲಿ ಬೆಳ್ಳಿ ಪದಕ ಪಡೆಯುವ ಮೂಲಕ ಕೀರ್ತಿ ತಂದಿದ್ದಾರೆ.  ಅಲ್ಲದೆ ಅಂತರಾಷ್ಟ್ರೀಯ ಮಟ್ಟಕ್ಕೆ  ಆಯ್ಕೆಯಾಗಿದ್ದಾರೆ.
      ಕೆ. ಪವನ್ ಕುಮಾರ್ ಅವರನ್ನು ಕ್ರೀಡಾಭಿಮಾನಿಗಳು, ವಿವಿಧ ಸಂಘ ಸಂಸ್ಥೆಗಳ ಪ್ರಮುಖರು, ಸಾರ್ವಜನಿಕರು ಅಭಿನಂದಿಸಿದ್ದಾರೆ.

ನಗರ ಬ್ಲಾಕ್ ಕಾಂಗ್ರೆಸ್ ಹಿಂದುಳಿದ ವರ್ಗಗಳ ವಿಭಾಗಕ್ಕೆ ೪ ಮಂದಿ ನೇಮಕ


ಭದ್ರಾವತಿ ನಗರ ಬ್ಲಾಕ್ ಕಾಂಗ್ರೆಸ್ ಹಿಂದುಳಿದ ವರ್ಗಗಳ ವಿಭಾಗಕ್ಕೆ ಹೊಸದಾಗಿ ನೇಮಕಗೊಂಡ ನೂತನ ಪದಾಧಿಕಾರಿಗಳಿಗೆ ನೇಮಕ ಆದೇಶ ಪ್ರತಿ ವಿತರಿಸಿ ಶಾಸಕ ಬಿ.ಕೆ ಸಂಗಮೇಶ್ವರ್ ಅಭಿನಂದಿಸಿದರು.
    ಭದ್ರಾವತಿ, ಸೆ. ೨೭: ನಗರ ಬ್ಲಾಕ್ ಕಾಂಗ್ರೆಸ್ ಹಿಂದುಳಿದ ವರ್ಗಗಳ ವಿಭಾಗಕ್ಕೆ ಹೊಸದಾಗಿ ೪ ಮಂದಿ ಪದಾಧಿಕಾರಿಗಳನ್ನು ನೇಮಕಗೊಳಿಸಿ ನಗರ ಬ್ಲಾಕ್ ಕಾಂಗ್ರೆಸ್ ಹಿಂದುಳಿದ ವರ್ಗಗಳ ವಿಭಾಗದ ಅಧ್ಯಕ್ಷ ಬಿ.  ಗಂಗಾಧರ್ ಆದೇಶ ಹೊರಡಿಸಿದ್ದಾರೆ.
    ಶಾಸಕ ಬಿ.ಕೆ ಸಂಗಮೇಶ್ವರ್‌ರವರ ನಿರ್ದೇಶನದ ಮೇರೆಗೆ ಪ್ರಧಾನ ಸಂಚಾಲಕರಾಗಿ ಎಚ್. ಮಂಜಪ್ಪ, ಪ್ರಧಾನ ಕಾರ್ಯದರ್ಶಿಯಾಗಿ ಎಂ. ಬಸವರಾಜ್, ಸಂಘಟನಾ ಕಾರ್ಯದರ್ಶಿಗಳಾಗಿ ಸಂತೋಷ್ ಮತ್ತು ಜಿ. ಹರೀಶ್ ಅವರನ್ನು ನೇಮಕಗೊಳಿಸಿ ಆದೇಶ ಹೊರಡಿಸಲಾಗಿದೆ.
    ನೂತನ ಪದಾಧಿಕಾರಿಗಳಿಗೆ ನೇಮಕ ಆದೇಶ ಪ್ರತಿ ವಿತರಿಸಿ ಶಾಸಕ ಬಿ.ಕೆ ಸಂಗಮೇಶ್ವರ್ ಅಭಿನಂದಿಸಿದರು. ಪ್ರಮುಖರಾದ ಬಲ್ಕೀಶ್ ಬಾನು, ಸಿ.ಎಂ ಖಾದರ್, ಟಿ.ವಿ ಗೋವಿಂದಸ್ವಾಮಿ, ವೈ. ರೇಣುಕಮ್ಮ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಎಚ್.ಎಸ್ ಸುಂದರೇಶ್, ಬ್ಲಾಕ್ ಕಾಂಗ್ರೆಸ್ ನಗರ ಘಟಕದ ಅಧ್ಯಕ್ಷ ಟಿ. ಚಂದ್ರೇಗೌಡ, ಮಹಿಳಾ ಘಟಕದ ಅಧ್ಯಕ್ಷೆ ಹೇಮಾವತಿ, ಯುವ ಕಾಂಗ್ರೆಸ್ ಗ್ರಾಮಾಂತರ ಅಧ್ಯಕ್ಷ ಅಫ್ತಾಬ್ ಅಹಮದ್, ಅಮೀರ್‌ಜಾನ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ದಸರಾ ಕ್ರೀಡಾಕೂಟದ ರಾಜ್ಯಮಟ್ಟದ ಕರಾಟೆ ಸ್ಪರ್ಧೆ : ಇಬ್ಬರು ವಿದ್ಯಾರ್ಥಿನಿಯರಿಗೆ ಚಿನ್ನದ ಪದಕ

ಶಿವಮೊಗ್ಗದಲ್ಲಿ ನಡೆದ ಮಕ್ಕಳ ದಸರಾ ಕ್ರೀಡಾಕೂಟದ ರಾಜ್ಯಮಟ್ಟದ ಕರಾಟೆ ಸ್ಪರ್ಧೆಯಲ್ಲಿ ಭದ್ರಾವತಿ ಸೆಂಟ್ ಜೋಸೆಫ್ ಕಾಲೇಜಿನ ವಿದ್ಯಾರ್ಥಿಗಳಾದ  ಸಿಂಚನ ಎಂ ಪಾಟೀಲ್ ಹಾಗೂ ಪ್ರಕೃತಿ ಆರ್ ಗೌಡ ಪ್ರಥಮ ಸ್ಥಾನದೊಂದಿಗೆ ಚಿನ್ನದ ಪದಕ ತಮ್ಮದಾಗಿಸಿಕೊಂಡಿದ್ದಾರೆ.
    ಭದ್ರಾವತಿ, ಸೆ. ೨೭: ಶಿವಮೊಗ್ಗದಲ್ಲಿ ನಡೆದ ಮಕ್ಕಳ ದಸರಾ ಕ್ರೀಡಾಕೂಟದ ರಾಜ್ಯಮಟ್ಟದ ಕರಾಟೆ ಸ್ಪರ್ಧೆಯಲ್ಲಿ ನಗರದ ಸೆಂಟ್ ಜೋಸೆಫ್ ಕಾಲೇಜಿನ ವಿದ್ಯಾರ್ಥಿಗಳಾದ  ಸಿಂಚನ ಎಂ ಪಾಟೀಲ್ ಹಾಗೂ ಪ್ರಕೃತಿ ಆರ್ ಗೌಡ ಪ್ರಥಮ ಸ್ಥಾನದೊಂದಿಗೆ ಚಿನ್ನದ ಪದಕ ತಮ್ಮದಾಗಿಸಿಕೊಂಡಿದ್ದಾರೆ.
    ಸಿಂಚನ ಎಂ. ಪಾಟೀಲ್ ಹಾಗು ಪ್ರಕೃತಿ ಆರ್. ಗೌಡ ಅವರು ಈಗಾಗಲೇ ತಾಲೂಕು, ಜಿಲ್ಲಾಮಟ್ಟದ ಕರಾಟೆ ಸ್ಪರ್ಧೆಗಳಲ್ಲಿ ಭಾಗವಹಿಸಿ ಬಹುಮಾನಗಳನ್ನು ಪಡೆದುಕೊಂಡಿದ್ದು, ರಾಜ್ಯಮಟ್ಟಕ್ಕೂ ಸಹ ಆಯ್ಕೆಯಾಗಿ ಕೀರ್ತಿ ತಂದಿದ್ದಾರೆ.
    ಇದೀಗ ದಸರಾ ಕ್ರೀಡಾಕೂಟದ ರಾಜ್ಯಮಟ್ಟದ ಕರಾಟೆ ಸ್ಪರ್ಧೆಯಲ್ಲಿ ಭಾಗವಹಿಸಿ ಚಿನ್ನದ ಪದಕ ಪಡೆದುಕೊಂಡಿದ್ದಾರೆ. ಈ ಇಬ್ಬರು ವಿದ್ಯಾರ್ಥಿಗಳನ್ನು  ಬಾರಂದೂರು ಮಂಜುನಾಥ್ ಸೇರಿದಂತೆ ಇನ್ನಿತರರು ಅಭಿನಂದಿಸಿದ್ದಾರೆ.  

ಉಕ್ಕಿನ ನಗರದ ಮೂವರು ಪಿಎಫ್‌ಐ ಕಾರ್ಯಕರ್ತರು ಪೊಲೀಸರ ವಶಕ್ಕೆ

ಭದ್ರಾವತಿ ಖಾಜಿ ಮೊಹಲ್ಲಾ ಕೋಟೆ ಏರಿಯಾದ ಇಬ್ಬರು ಹಾಗೂ ಅನ್ವರ್ ಕಾಲೋನಿಯ ಒಬ್ಬನನ್ನು ಬಂಧಿಸಿ, ಮಂಗಳವಾರ ತಹಸೀಲ್ದಾರ್ ಮುಂದೆ ಹಾಜರುಪಡಿಸಲಾಯಿತು. 
    ಭದ್ರಾವತಿ, ಸೆ. ೨೭:  ಹಳೇನಗರ ಠಾಣೆ ಪೊಲೀಸರು ಮಂಗಳ ಬೆಳಿಗ್ಗೆ ನಡೆಸಿದ ದಾಳಿಯಲ್ಲಿ ಬಂಧನಕ್ಕೆ ಒಳಗಾಗಿರುವ ಮೂವರು ಪಿಎಫ್'ಐ ಕಾರ್ಯಕರ್ತರನ್ನು ಒಂದು ವಾರಗಳ ಕಾಲ ಪೊಲೀಸರ ವಶಕ್ಕೆ ವಹಿಸಲಾಗಿದೆ ಎಂಬ ತಿಳಿದು ಬಂದಿದೆ.
    ರಾಜ್ಯದಾದ್ಯಂತ ಬೆಳಗ್ಗಿನ ಜಾವ ಪಿಎಫ್‌ಐ ಹಾಗೂ ಎಸ್‌ಡಿಪಿಐ ಕಾರ್ಯಕರ್ತರುಗಳ ನಿವಾಸಗಳ ಮೇಲೆ ಪೊಲೀಸರು ದಾಳಿ ನಡೆಸಿರುವಂತೆಯೇ ನಗರದಲ್ಲೂ ಸಹ ದಾಳಿ ನಡೆಸಲಾಗಿದ್ದು, ಹಳೇನಗರ ಪೊಲೀಸರು ಮೂವರನ್ನು ಬಂಧಿಸಿದ್ದಾರೆ.
    ಖಾಜಿ ಮೊಹಲ್ಲಾ ಕೋಟೆ ಏರಿಯಾದ ಇಬ್ಬರು ಹಾಗೂ ಅನ್ವರ್ ಕಾಲೋನಿಯ ಒಬ್ಬನನ್ನು ಬಂಧಿಸಿ, ತಹಸೀಲ್ದಾರ್ ಮುಂದೆ ಹಾಜರುಪಡಿಸಲಾಯಿತು. ಈ ಮೂವರನ್ನು ಒಂದು ವಾರಗಳ ಕಾಲ ಪೊಲೀಸ್ ವಶಕ್ಕೆ ವಹಿಸಿ ತಹಸೀಲ್ದಾರ್‌ರವರು ಆದೇಶಿಸಿದ್ದಾರೆಂಬ ಮಾಹಿತಿ ತಿಳಿದು ಬಂದಿದೆ.
    ಬಂಧಿತರನ್ನು ತಾಹಿರ್, ಸಾಧಿಕ್ ಹಾಗೂ ಖುರೇಷಿ ಎಂದು ಗುರುತಿಸಲಾಗಿದ್ದು, ಬೆಳಗ್ಗಿನ ಜಾವ ಸುಮಾರು ೩ ಗಂಟೆ ಸಮಯದಲ್ಲಿ ಈ ಮೂವರ ನಿವಾಸಗಳ ಮೇಲೆ ದಾಳಿ ನಡೆಸಿ ಬಂಧಿಸಲಾಗಿದೆ ಎನ್ನಲಾಗಿದೆ.
    ಶಾಂತಿ, ಸುವ್ಯವಸ್ಥೆ ಕದಡುವ ಸಾಧ್ಯತೆ ಹಿನ್ನೆಲೆ ಮುನ್ನೆಚ್ಚರಿಕೆ ಕ್ರಮವಾಗಿ ಕಾರ್ಯಕರ್ತರನ್ನು ಬಂಧಿಸಿ, ಸೆಕ್ಷನ್ ೧೦೭, ೧೫೧ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.



ಕಾಗವಾಡ ವಿಧಾಸಭಾ ಕ್ಷೇತ್ರದ ಶಾಸಕ ಶ್ರೀಮಂತ ಪಾಟೀಲ್‌ಗೆ ಪುನಃ ಸಚಿವ ಸ್ಥಾನ ನೀಡಿ

ಶ್ರೀ ಛತ್ರಪತಿ ಶಿವಾಜಿ ಸೇವಾ ಸಂಘ ಸರ್ಕಾರಕ್ಕೆ ಆಗ್ರಹ

ಭದ್ರಾವತಿ ಶ್ರೀ ಛತ್ರಪತಿ ಶಿವಾಜಿ ಸೇವಾ ಸಂಘದ ಅಧ್ಯಕ್ಷ ಸಚಿನ್ ಎಸ್ ಸಿಂಧ್ಯಾ ಕಾಗವಾಡ ವಿಧಾಸಭಾ ಕ್ಷೇತ್ರದ ಶಾಸಕ ಶ್ರೀಮಂತ ಪಾಟೀಲ್ ಅವರನ್ನು ಭೇಟಿ ಮಾಡಿ ಸಚಿವ ಸ್ಥಾನ ನೀಡಲು ಸರ್ಕಾರಕ್ಕೆ ಆಗ್ರಹಿಸಿದರು.
    ಭದ್ರಾವತಿ, ಸೆ. ೨೭ : ಕ್ಷತ್ರಿಯ ಮರಾಠ ಸಮುದಾಯದ ನಾಯಕರಲ್ಲಿ ಒಬ್ಬರಾಗಿರುವ ಕಾಗವಾಡ ವಿಧಾನಸಭಾ ಕ್ಷೇತ್ರದ ಶಾಸಕ ಶ್ರೀಮಂತ್ ಪಾಟೀಲ್‌ರವರಿಗೆ ಪುನಃ  ಸಚಿವ ಸ್ಥಾನ ನೀಡಬೇಕೆಂದು ಶ್ರೀ ಛತ್ರಪತಿ ಶಿವಾಜಿ ಸೇವಾ ಸಂಘದ ಅಧ್ಯಕ್ಷ ಸಚಿನ್ ಎಸ್ ಸಿಂಧ್ಯಾ ಅಗ್ರಹಿಸಿದ್ದಾರೆ.
    ಶ್ರೀಮಂತ್ ಪಾಟೀಲ್‌ರವರನ್ನು ಸಂಪುಟದಿಂದ ಕೈ ಬಿಡುವ ಮೂಲಕ ಮರಾಠ ಸಮುದಾಯವನ್ನು ಕಡೆಗಣಿಸಲಾಗಿದೆ. ತಕ್ಷಣ ಅವರಿಗೆ ಸಚಿವ ಸ್ಥಾನ ನೀಡುವ ಮೂಲಕ ಸೂಕ್ತ ಸ್ಥಾನಮಾನ ನೀಡಬೇಕು. ಮರಾಠ ಸಮುದಾಯದ ಏಳಿಗೆಗೆ ಮುಂದಾಗಬೇಕೆಂದು ಒತ್ತಾಯಿಸಲಾಗಿದೆ.
    ಸಂಘದ ಮಾಜಿ ಅಧ್ಯಕ್ಷ ಯಸವಂತರಾವ್ ಘೋರ್ಪಡೆ, ಉಪಾಧ್ಯಕ್ಷ ವಿಶ್ವನಾಥ್‌ರಾವ್ ಸಿಂಧೆ, ಪ್ರಧಾನ ಕಾರ್ಯದರ್ಶಿ ವಿಶ್ವೇಶ್ವರ ರಾವ್ ಗಾಯಕ್ವಾಡ್, ಸಹ ಕಾರ್ಯದರ್ಶಿ ಮೋಹನ್ ರಾವ್, ಖಜಾಂಚಿ ರಮೇಶ್ ಪಟತಾರೆ, ನಿರ್ದೇಶಕರಾದ ಮಲ್ಲೇಶ್ ರಾವ್, ಪರಶುರಾಮ್ ರಾವ್, ಜಗನ್ನಾಥ ರಾವ್, ಕೃಷ್ಣೋಜಿರಾವ್, ರಾಮಚಂದ್ರ ರಾವ್, ಚಂದ್ರೋಜಿರಾವ್, ಶಂಕರ್‌ರಾವ್ ಸೇರಿದಂತೆ ಇನ್ನಿತರರು ಶ್ರೀಮಂತ್ ಪಾಟೀಲ್ ಅವರನ್ನು ಭೇಟಿ ಮಾಡಿ ಸರ್ಕಾರಕ್ಕೆ ಆಗ್ರಹಿಸಲಾಗಿದೆ.
    ಅ.೧೧ರಂದು ವಾರ್ಷಿಕ ಮಹಾಸಭೆ: 
ಶ್ರೀ ಛತ್ರಪತಿ ಶಿವಾಜಿ ಸೇವಾ ಸಂಘದ ವಾರ್ಷಿಕ ಮಹಾಸಭೆ ಅ.೧೧ರಂದು ಬೆಳಿಗ್ಗೆ ೧೧ ಗಂಟೆಗೆ ನಡೆಯಲಿದ್ದು, ಸದಸ್ಯರು ತಪ್ಪದೇ ಭಾಗವಹಿಸಿ ಯಶಸ್ವಿಗೊಳಿಸುವಂತೆ ಸಚಿನ್ ಎಸ್. ಸಿಂಧ್ಯಾ ಕೋರಿದ್ದಾರೆ.