Friday, January 7, 2022

ಸಾಮಿಲ್‌ನಲ್ಲಿ ಅಗ್ನಿ ಅವಘಡ : ಹಾನಿಗೊಳಗಾದ ಮಳಿಗೆ, ಮನೆಗಳ ಮಾಲೀಕರಿಗೆ ಪರಿಹಾರದ ಚೆಕ್ ವಿತರಣೆ

ಭದ್ರಾವತಿ ಹೊಸಸೇತುವೆ ರಸ್ತೆಯಲ್ಲಿರುವ ಶ್ರೀ ಮಂಜುನಾಥಸ್ವಾಮಿ ಸಾಮಿಲ್‌ನಲ್ಲಿ ಸಂಭವಿಸಿದ ಅಗ್ನಿ ಅವಘಡದಲ್ಲಿ ಹಾನಿಯಾದ ವಾಣಿಜ್ಯ ಮಳಿಗೆಗಳ ಹಾಗು ಮನೆಗಳ ಮಾಲೀಕರಿಗೆ ಶುಕ್ರವಾರ ಶಾಸಕ ಬಿ.ಕೆ ಸಂಗಮೇಶ್ವರ್ ನೇತೃತ್ವದಲ್ಲಿ ಸಾಮಿಲ್ ಮಾಲೀಕ ನಾಗರಾಜ್ ಪರಿಹಾರದ ಚೆಕ್ ವಿತರಿಸಿದರು.
    ಭದ್ರಾವತಿ, ಜ. ೭: ನಗರದ ಹೊಸಸೇತುವೆ ರಸ್ತೆಯಲ್ಲಿರುವ ಶ್ರೀ ಮಂಜುನಾಥಸ್ವಾಮಿ ಸಾಮಿಲ್‌ನಲ್ಲಿ ಸಂಭವಿಸಿದ ಅಗ್ನಿ ಅವಘಡದಲ್ಲಿ ಹಾನಿಯಾದ ವಾಣಿಜ್ಯ ಮಳಿಗೆಗಳ ಹಾಗು ಮನೆಗಳ ಮಾಲೀಕರಿಗೆ ಶುಕ್ರವಾರ ಶಾಸಕ ಬಿ.ಕೆ ಸಂಗಮೇಶ್ವರ್ ನೇತೃತ್ವದಲ್ಲಿ ಸಾಮಿಲ್ ಮಾಲೀಕ ನಾಗರಾಜ್ ಪರಿಹಾರದ ಚೆಕ್ ವಿತರಿಸಿದರು.
    ಸಾಮಿಲ್‌ನಲ್ಲಿ ಬುಧವಾರ ರಾತ್ರಿ ಬೃಹತ್ ಪ್ರಮಾಣದ ಅಗ್ನಿ ಅವಘಡ ಸಂಭವಿಸಿದ ಪರಿಣಾಮ ಒಟ್ಟು ೫ ಮಳಿಗೆಗಳು ಹಾಗು ೩ ಮನೆಗಳು ಹಾನಿಯಾಗಿದ್ದವು. ಈ ಪೈಕಿ ಜಿ.ಎಸ್ ಆಟೋ ಮೊಬೈಲ್ಸ್ ಮತ್ತು  ಸ್ಕಂದ ಸ್ಯಾನಿಟರ್ ಮಳಿಗೆಗಳು  ಸಂಪೂರ್ಣವಾಗಿ ಬೆಂಕಿಗಾಹುತಿಯಾಗಿದ್ದವು.  ಈ ಎರಡು ಮಳಿಗೆಗಳ ಮಾಲೀಕರಿಗೆ ತಲಾ ರು. ೧೦ ಲಕ್ಷ, ಉಳಿದಂತೆ ಫ್ಲೆಕ್ಸ್ ಅಂಗಡಿ ಮಾಲೀಕರಿಗೆ ರು. ೧೦ ಲಕ್ಷ, ಪ್ಲೈವುಡ್ ಮತ್ತು ಬ್ಯಾಟರಿ ಅಂಗಡಿ ಮಾಲೀಕರಿಗೆ ತಲಾ ರು. ೩ ಲಕ್ಷ, ಕಟ್ಟಡ ಹಾನಿಯಾದ ಹಿನ್ನಲೆಯಲ್ಲಿ ಮಾಲೀಕರಿಗೆ ರು. ೨ ಲಕ್ಷ, ಒಂದು ಮನೆ ಮಾಲೀಕರಿಗೆ ರು. ೩ ಲಕ್ಷ, ಉಳಿದ ೨ ಮನೆಗಳ ಪೈಕಿ ಒಂದು ಮನೆ ಮಾಲೀಕರಲ್ಲಿ ರು.೨ ಲಕ್ಷ, ಇನ್ನೊಂದು ಮಾಲೀಕರಿಗೆ ರು. ೧ ಲಕ್ಷ ಪರಿಹಾರದ ಚೆಕ್ ವಿತರಿಸಲಾಯಿತು.
    ಇದಕ್ಕೂ ಮೊದಲು ಶಾಸಕರ ನೇತೃತ್ವದಲ್ಲಿ ಪರಿಹಾರ ನೀಡುವ ಸಂಬಂಧ ಸಾಮಿಲ್ ಮಾಲೀಕರು ಹಾಗು ಹಾನಿಗೊಳಗಾದ ಮಳಿಗೆಗಳ ಹಾಗು ಮನೆಗಳ ಮಾಲೀಕರೊಂದಿಗೆ ಮಾತುಕತೆ ನಡೆಸಲಾಯಿತು.
    ತಹಸೀಲ್ದಾರ್ ಆರ್. ಪ್ರದೀಪ್ ನಿಕ್ಕಮ್, ಮುಖಂಡರಾದ ಬಾಲಕೃಷ್ಣ, ಮೆಸ್ಕಾಂ ನಿವೃತ್ತ ಇಂಜಿನಿಯರ್ ಕೃಷ್ಣಮೂರ್ತಿ, ನಗರಸಭಾ ಸದಸ್ಯ ಆರ್. ಶ್ರೇಯಸ್(ಚಿಟ್ಟೆ), ಕಟ್ಟಡ ಕಾರ್ಮಿಕರ ಸಂಘದ ಕಾರ್ಯಾಧ್ಯಕ್ಷ ಅಭಿಲಾಷ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ನಗರಸಭೆ ವ್ಯಾಪ್ತಿಯಲ್ಲಿ ಅಗತ್ಯ ವಸ್ತುಗಳ ಮಾರಾಟಕ್ಕೆ ಮಾತ್ರ ಅವಕಾಶ

ಕೋವಿಡ್-೧೯, ಕರ್ಪ್ಯೂ ನಿಯಮ ಉಲ್ಲಂಘಿಸುವವರಿಗೆ ದಂಡ : ಪ್ರಭಾಕರ್


ಪ್ರಭಾಕರ್
    ಭದ್ರಾವತಿ, ಜ. ೭: ಕೋವಿಡ್-೧೯ ನಿಯಂತ್ರಿಸುವ ಸಂಬಂಧ ಸರ್ಕಾರ ಜಾರಿಗೊಳಿಸಿರುವ ವಾರಾಂತ್ಯ ಕರ್ಪ್ಯೂ ಯಶಸ್ವಿಗೊಳಿಸಲು ಸಾರ್ವಜನಿಕರು ಸಹಕರಿಸುವಂತೆ ನಗರಸಭೆ ಪರಿಸರ ಅಭಿಯಂತರ ಪ್ರಭಾಕರ್ ಮನವಿ ಮಾಡಿದ್ದಾರೆ.
    ಪತ್ರಿಕೆಗೆ ಮಾಹಿತಿ ನೀಡಿದ ಪ್ರಭಾಕರ್‌ರವರು, ನಗರಸಭೆ ವ್ಯಾಪ್ತಿಯಲ್ಲಿ ಸಾರ್ವಜನಿಕರ ಅನಗತ್ಯ ಸಂಚಾರ ನಿರ್ಬಂಧಿಸಲಾಗಿದ್ದು, ಅಗತ್ಯ ಸೇವೆಗಳಿಗೆ ಮಾತ್ರ ಅವಕಾಶ ಕಲ್ಪಿಸಿಕೊಡಲಾಗಿದೆ. ದಿನ ಬಳಕೆಯ ಅಗತ್ಯ ವಸ್ತುಗಳಾದ ಹಾಲು, ಹಣ್ಣು, ತರಕಾರಿ, ದಿನಸಿ ಸಾಮಗ್ರಿಗಳು ಹಾಗು ಕೋಳಿ, ಕುರಿ ಹಾಗು ಮೀನು ಮಾಂಸ ಮಾರಾಟಕ್ಕೆ ಅವಕಾಶ ಕಲ್ಪಿಸಿಕೊಡಲಾಗಿದ್ದು, ಮಾರಾಟಕ್ಕೆ ಯಾವುದೇ ಸಮಯ ನಿಗದಿ ಮಾಡಿಲ್ಲ. ಆಸ್ಪತ್ರೆ ಮತ್ತು ಔಷಧಿ ಅಂಗಡಿಗಳು ಎಂದಿನಂತೆ ಕಾರ್ಯನಿರ್ವಹಿಸಲಿವೆ. ಜೊತೆಗೆ ಗೊಬ್ಬರ ಮಾರಾಟ ಅಂಗಡಿಗಳಿಗೂ ಅವಕಾಶ ಕಲ್ಪಿಸಲಾಗಿದೆ ಎಂದರು.
    ಉಳಿದಂತೆ ಬಟ್ಟೆ, ಕಬ್ಬಿಣ, ಪ್ಲೈವುಡ್, ಚಿನ್ನಾಬೆಳ್ಳಿ, ಫ್ಯಾನ್ಸಿ ಅಂಗಡಿಗಳು, ಮಾಲ್‌ಗಳು ಸೇರಿದಂತೆ ವಾಣಿಜ್ಯ ಮಳಿಗೆಗಳು, ಗೋಡನ್, ವರ್ಕ್ ಶಾಪ್, ಚಿತ್ರಮಂದಿರಗಳು ಸೇರಿದಂತೆ ಸರ್ಕಾರ ಸೂಚಿಸಿರುವ ಅಂಗಡಿಮುಂಗಟ್ಟುಗಳು ತೆರೆಯುವಂತಿಲ್ಲ. ಹೋಟೆಲ್ ಹಾಗು ರೆಸ್ಟೋರೆಂಟ್‌ಗಳಲ್ಲಿ ಪಾರ್ಸಲ್‌ಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ. ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್ ಬಳಸದ ಹಾಗು ಕರ್ಪ್ಯೂ ನಿಯಮಗಳನ್ನು ಉಲ್ಲಂಘಿಸುವವರಿಗೆ ದಂಡ ವಿಧಿಸಲಾಗುವುದು ಎಂದರು.
    ಸಾರ್ವಜನಿಕರು ಅನಗತ್ಯವಾಗಿ ಮನೆಯಿಂದ ಹೊರಬರದೆ ಸಹರಿಸುವ ಮೂಲಕ ಕೋವಿಡ್-೧೯ ನಿರ್ಮೂಲನೆಗೆ ಕೈಜೋಡಿಸುವಂತೆ ಮನವಿ ಮಾಡಿದ್ದಾರೆ.


ಕೋವಿಡ್-೧೯ ನಿಯಂತ್ರಣಕ್ಕೆ ಆರೋಗ್ಯ ಇಲಾಖೆಯಿಂದ ಹೆಚ್ಚಿನ ಮುಂಜಾಗ್ರತೆ ಕ್ರಮ

ತಮಿಳುನಾಡಿಗೆ ಹೋಗಿ ಬಂದ ಓಂ ಶಕ್ತಿ ಭಕ್ತರಲ್ಲಿ ೪ ಮಂದಿಗೆ ಕೋವಿಡ್ ಸೋಂಕು

ಡಾ. ಎಂ.ವಿ ಅಶೋಕ್
    ಭದ್ರಾವತಿ, ಜ. ೭: ಕೋವಿಡ್-೧೯ ನಿಯಂತ್ರಣದಲ್ಲಿ ಆರೋಗ್ಯ ಇಲಾಖೆ ಪಾತ್ರ ಅತಿ ಮುಖ್ಯವಾಗಿದ್ದು, ಈ ಹಿನ್ನಲೆಯಲ್ಲಿ ಆರೋಗ್ಯ ಇಲಾಖೆ ಹೆಚ್ಚಿನ ಜಾಗೃತಿ ವಹಿಸಬೇಕಾಗಿದೆ.
    ಸರ್ಕಾರ ಕೋವಿಡ್-೧೯ ನಿಯಂತ್ರಣಕ್ಕೆ ಅಗತ್ಯವಿರುವ ಮುನ್ನಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲು ಈಗಾಗಲೇ ಸರ್ಕಾರದ ಎಲ್ಲಾ ಇಲಾಖೆಗಳಿಗೂ ಸೂಚಿಸಿದೆ. ಅದರಂತೆ ತಾಲೂಕಿನಾದ್ಯಂತ ಆರೋಗ್ಯ ಇಲಾಖೆ ವಹಿಸಿರುವ ಎಚ್ಚರಿಕೆ ಕ್ರಮಗಳ ಕುರಿತು ತಾಲೂಕು ಆರೋಗ್ಯಾಧಿಕಾರಿ ಡಾ. ಎಂ.ವಿ ಅಶೋಕ್ ಪತ್ರಿಕೆಗೆ ಮಾಹಿತಿ ನೀಡಿ, ಕೋವಿಡ್-೧೯ ನಿಯಂತ್ರಿಸುವ ಸಂಬಂಧ ಪ್ರಸುತ ಕೋವಿಡ್ ಪರೀಕ್ಷೆಗೆ ಹೆಚ್ಚಿನ ಗಮನ ಹರಿಸಲಾಗುತ್ತಿದೆ. ಹೊರದೇಶ ಹಾಗು ಹೊರರಾಜ್ಯಗಳಿಂದ ಬಂದವರ ಮಾಹಿತಿ ಸಂಗ್ರಹಿಸಿ ಪರೀಕ್ಷೆ ನಡೆಸಲಾಗುತ್ತಿದೆ ಎಂದರು.
    ಹೊರದೇಶದಿಂದ ಬಂದವರ ಮಾಹಿತಿ ಇಲಾಖೆಗೆ ಮುಂಚಿತವಾಗಿ ಲಭ್ಯವಾಗುತ್ತಿದೆ. ಇದುವರೆಗೂ ೪೦ ಮಂದಿಯನ್ನು ಪರೀಕ್ಷೆಗೆ ಒಳಪಡಿಸಲಾಗಿದೆ. ಯಾರಲ್ಲೂ ಸೋಂಕು ಕಂಡು ಬಂದಿಲ್ಲ. ಉಳಿದಂತೆ ತಮಿಳುನಾಡು ಮೇಲ್ ಮರುವತ್ತೂರು ಓಂ ಶಕ್ತಿ ದೇವಾಲಯಕ್ಕೆ ನಗರದಿಂದ ತೆರಲಿದ್ದ ಭಕ್ತರು ಮರಳಿ ಬಂದಿದ್ದು, ಒಟ್ಟು ೪ ಬಸ್‌ಗಳು ಬಂದಿದ್ದು, ಈ ಪೈಕಿ ಕಳೆದ ೩ ದಿನಗಳಿಂದ ಮೊದಲ ದಿನ ೬೦, ಎರಡನೇ ದಿನ  ೧೫೦ ಹಾಗು ಮೂರನೇ ದಿನ ೧೮೦ ಭಕ್ತರನ್ನು ಪರೀಕ್ಷೆ ನಡೆಸಲಾಗಿದ್ದು, ಈ ಪೈಕಿ ೪ ಮಂದಿಯಲ್ಲಿ ಕೋವಿಡ್ ಸೋಂಕು ದೃಢಪಟ್ಟಿದೆ. ಇವರಿಗೆ ಪ್ರತ್ಯೇಕ ಚಿಕಿತ್ಸೆ ನೀಡಲಾಗುತ್ತಿದೆ. ಇನ್ನೂ ೨ ಬಸ್‌ಗಳು ಬರಬೇಕಾಗಿದ್ದು, ಬಂದ ನಂತರ ಪರೀಕ್ಷೆ ನಡೆಸಲಾಗುವುದು ಎಂದರು.
    ಸರ್ಕಾರ ಜಾರಿಗೊಳಿಸಿರುವ ೨ ದಿನಗಳ ವಾರಾಂತ್ಯದ ಕರ್ಪ್ಯೂ ಸಂದರ್ಭದಲ್ಲಿ ವಹಿಸಬೇಕಾದ ಕ್ರಮಗಳ ಕುರಿತು ಸಹ ಇಲಾಖೆ ಗಮನ ಹರಿಸಿದೆ. ಸಾರ್ವಜನಿಕರು ಕರ್ಪ್ಯೂ ಯಶಸ್ವಿಗೆ ಸಹಕರಿಸುವಂತೆ ಮನವಿ ಮಾಡಿದರು.

ಕೋವಿಡ್-೧೯ ನಿಯಂತ್ರಣಕ್ಕೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಿ : ವಾರಾಂತ್ಯದ ಕರ್ಪ್ಯೂ ಯಶಸ್ವಿಗೊಳಿಸಿ

ತಾಲೂಕು ಮಟ್ಟದ ಅಧಿಕಾರಿಗಳ ಸಭೆಯಲ್ಲಿ ತಹಸೀಲ್ದಾರ್ ಆರ್. ಪ್ರದೀಪ್ ನಿಕ್ಕಮ್ ಸೂಚನೆ

ಭದ್ರಾವತಿ ತಾಲೂಕು ಕಛೇರಿ ಸಭಾಂಗಣದಲ್ಲಿ ಕೋವಿಡ್-೧೯ ನಿಯಂತ್ರಣ ಸಂಬಂಧ ಶುಕ್ರವಾರ ಸಭೆ ನಡೆಸಲಾಯಿತು.
ಭದ್ರಾವತಿ, ಜ. ೭: ತಾಲೂಕಿನಾದ್ಯಂತ ಕೋವಿಡ್-೧೯ ನಿಯಂತ್ರಣಕ್ಕೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ತಹಸೀಲ್ದಾರ್ ಆರ್. ಪ್ರದೀಪ್ ನಿಕ್ಕಮ್ ವಿವಿಧ ಇಲಾಖೆಗಳ ತಾಲೂಕು ಮಟ್ಟದ ಅಧಿಕಾರಿಗಳಿಗೆ ಸೂಚಿಸಿದರು.
ಶುಕ್ರವಾರ ತಾಲೂಕು ಕಛೇರಿ ಸಭಾಂಗಣದಲ್ಲಿ ಕೋವಿಡ್-೧೯ ನಿಯಂತ್ರಣ ಸಂಬಂಧ ನಡೆದ ಸಭೆಯಲ್ಲಿ ಮಾತನಾಡಿ, ಸರ್ಕಾರ ಜಾರಿಗೊಳಿಸಿರುವ ವಾರಾಂತ್ಯದ ಕರ್ಪ್ಯೂ ಯಶಸ್ವಿಗೊಳಿಸಲು ಎಲ್ಲಾ ಇಲಾಖೆಗಳು ಹೆಚ್ಚಿನ ಗಮನ ಹರಿಸಬೇಕು. ಸಾರ್ವಜನಿಕರ ಅನಗತ್ಯ ಸಂಚಾರಕ್ಕೆ ಕಡಿವಾಣ ಹಾಕಬೇಕು. ಅಗತ್ಯ ಸೇವೆಗಳಿಗೆ ಮಾತ್ರ ಅವಕಾಶ ಕಲ್ಪಿಸಿಕೊಟ್ಟು. ಎಲ್ಲಾ ಅಂಗಡಿಮುಂಗಟ್ಟುಗಳನ್ನು ಬಂದ್ ಮಾಡುವಂತೆ ಸೂಚಿಸಿದರು.
ಉಳಿದಂತೆ ಸರ್ಕಾರದ ಮಾರ್ಗ ಸೂಚಿಯಂತೆ ಉದ್ಯಾನವನ, ವ್ಯಾಯಾಮ ಶಾಲೆ ಸಂಪೂರ್ಣವಾಗಿ ಬಂದ್ ಮಾಡುವುದು. ಹೋಟೆಲ್ ಹಾಗು ರೆಸ್ಟೋರೆಂಟ್‌ಗಳಲ್ಲಿ ಕೇವಲ ಪಾರ್ಸಲ್ ವ್ಯವಸ್ಥೆ ಕಲ್ಪಿಸಿಕೊಡುವುದು. ಮದುವೆ ಸಮಾರಂಭಗಳಲ್ಲಿ ಕೇವಲ ೨೦೦ ಜನಕ್ಕೆ ಮಾತ್ರ ಅವಕಾಶ ಕಲ್ಪಿಸಿಕೊಡುವುದು ಸೇರಿದಂತೆ ಇನ್ನಿತರ ಕ್ರಮಗಳನ್ನು ಕಡ್ಡಾಯವಾಗಿ ಕೈಗೊಳ್ಳಬೇಕೆಂದು ಸೂಚಿಸಿದರು.
ಸಭೆಯಲ್ಲಿ ತಹಸೀಲ್ದಾರ್ ಗ್ರೇಡ್-೨ ರಂಗಮ್ಮ, ಪೊಲೀಸ್ ನಗರ ವೃತ್ತ ನಿರೀಕ್ಷಕ ರಾಘವೇಂದ್ರ ಕಾಂಡಿಕೆ, ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ರಮೇಶ್, ತಾಲೂಕು ಆರೋಗ್ಯಾಧಿಕಾರಿ ಡಾ. ಎಂ.ವಿ ಅಶೋಕ್, ಕ್ಷೇತ್ರ ಶಿಕ್ಷಣಾಧಿಕಾರಿ ಟಿ.ಎನ್ ಸೋಮಶೇಖರಯ್ಯ, ನಗರಸಭೆ ಪರಿಸರ ಅಭಿಯಂತರ ಪ್ರಭಾಕರ್, ಸಹಾಯಕ ಕೃಷಿ ನಿರ್ದೇಶಕ ಶಶಿಧರ್ ಸೇರಿದಂತೆ ವಿವಿಧ ಇಲಾಖೆಗಳ ತಾಲೂಕು ಮಟ್ಟದ ಅಧಿಕಾರಿಗಳು ಪಾಲ್ಗೊಂಡಿದ್ದರು.