Thursday, November 23, 2023

ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ಕೊನೆಗೊಳಿಸಿಕೊಳ್ಳಲು ಅವಕಾಶ


    ಭದ್ರಾವತಿ : ಶಿವಮೊಗ್ಗ ಜಿಲ್ಲಾ ಸ್ಮಾರ್ಟ್ ಸಿಟಿ ಹಾಗೂ ಜಿಲ್ಲಾ ಪೋಲಿಸ್ ಇಲಾಖೆ ವತಿಯಿಂದ ಶಿವಮೊಗ್ಗ ನಗರದಲ್ಲಿ ಸಂಚಾರ ನಿಯಮ ಉಲ್ಲಂಘಿಸಿದ ವಾಹನ ಸವಾರರಿಗೆ ಕಳುಹಿಸಿದ ನೋಟಿಸ್ ಪ್ರಕರಣಗಳನ್ನು ಇಲ್ಲಿನ ಸಂಚಾರಿ ಪೊಲೀಸ್ ಠಾಣೆಯಲ್ಲೂ ಪ್ರಕರಣ ಕೊನೆಗೊಳಿಸಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ.
    ವಾಹನ ಸವಾರರು ನಗರದ ನ್ಯೂಟೌನ್ ಸಂಚಾರಿ ಠಾಣೆಗೆ ಭೇಟಿ ನೀಡಿ ಹಣ ಪಾವತಿಸಿ ಪ್ರಕರಣ ಮುಕ್ತಾಯ ಮಾಡಿಕೊಳ್ಳಬಹುದಾಗಿರುತ್ತದೆ. ಇದರ ಸದುಪಯೋಗ ಪಡೆದುಕೊಳ್ಳುವಂತೆ ಠಾಣಾಧಿಕಾರಿ ಶಾಂತಲ ಕೋರಿದ್ದಾರೆ.  

ವಿವಿಧ ಸೇವಾ ಕಾರ್ಯಗಳು, ಧಾರ್ಮಿಕ ಆಚರಣೆಗಳೊಂದಿಗೆ ವಿಜೃಂಭಣೆಯಿಂದ ಜರುಗಿದ ಶ್ರೀ ಸತ್ಯಸಾಯಿಬಾಬಾ ಜನ್ಮದಿನ

ಭದ್ರಾವತಿಯಲ್ಲಿ ಶ್ರೀ ಸತ್ಯ ಸಾಯಿ ಸೇವಾ ಸಂಸ್ಥೆಗಳು, ಪ್ರಶಾಂತಿ ಸೇವಾ ಟ್ರಸ್ಟ್ ಹಾಗು ಶ್ರೀ ಸತ್ಯ ಸಾಯಿ ಸಮಗ್ರ ಶಿಕ್ಷಣ ಸಂಸ್ಥೆ ವತಿಯಿಂದ ಗುರುವಾರ ಭಗವಾನ್ ಶ್ರೀ ಸತ್ಯಸಾಯಿ ಬಾಬಾರವರ ೯೮ನೇ ಜನ್ಮದಿನೋತ್ಸವ ಆಚರಿಸಲಾಯಿತು. ನ್ಯೂಟೌನ್ ಭಾಗದ ಪ್ರಮುಖ ರಸ್ತೆಗಳಲ್ಲಿ ಶ್ರೀ ಸತ್ಯ ಸಾಯಿ ಬಾಬಾರವರ ಪಲ್ಲಕ್ಕಿ ಉತ್ಸವ ನಡೆಯಿತು.
    ಭದ್ರಾವತಿ: ಶ್ರೀ ಸತ್ಯ ಸಾಯಿ ಸೇವಾ ಸಂಸ್ಥೆಗಳು, ಪ್ರಶಾಂತಿ ಸೇವಾ ಟ್ರಸ್ಟ್ ಹಾಗು ಶ್ರೀ ಸತ್ಯ ಸಾಯಿ ಸಮಗ್ರ ಶಿಕ್ಷಣ ಸಂಸ್ಥೆ ವತಿಯಿಂದ ಗುರುವಾರ ಭಗವಾನ್ ಶ್ರೀ ಸತ್ಯಸಾಯಿ ಬಾಬಾರವರ ೯೮ನೇ ಜನ್ಮದಿನೋತ್ಸವ ಆಚರಿಸಲಾಯಿತು.
    ನ್ಯೂಟೌನ್ ಶ್ರೀ ಸತ್ಯ ಸಾಯಿ ಸೇವಾ ಕ್ಷೇತ್ರದಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಓಂಕಾರ, ಜ್ಯೋತಿರ್ಧಾನ, ಸುಪ್ರಭಾತ, ನಗರಸಂಕೀರ್ತನೆ, ಪ್ರಶಾಂತಿ ಧ್ವಜಾರೋಹಣ, ಉಚಿತ ಪಶು ಚಿಕಿತ್ಸಾ ಶಿಬಿರ , ಶ್ರೀ ಸಾಯಿ ಸತ್ಯನಾರಾಯಣ ಪೂಜೆ, ಉಚಿತ ರಕ್ತದಾನ ಶಿಬಿರ, ಶ್ರೀ ಸತ್ಯ ಸಾಯಿ ಬಾಬಾರವರ ಪಲ್ಲಕ್ಕಿ ಉತ್ಸವ, ಶಾಲಾ ಮಕ್ಕಳಿಗೆ ಮಹಾಪ್ರಸಾದ ವಿನಿಯೋಗ (ನಾರಾಯಣ ಸೇವೆ), ಶ್ರೀ ಸತ್ಯ ಸಾಯಿ ಸಹಸ್ರನಾಮಾರ್ಚನೆ, ಮಹಾಮಂಗಳಾರತಿ, ನಾರಾಯಣರಿಗೆ ವಸ್ತ್ರದಾನ ಮತ್ತು ನಾರಾಯಣ ಸೇವೆ ಹಾಗೂ ಭಕ್ತಾಧಿಗಳಿಗೆ ಮಹಾಪ್ರಸಾದ ವಿನಿಯೋಗ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು.
    ಪ್ರಶಾಂತಿ ಸೇವಾ ಟ್ರಸ್ಟ್ ಅಧ್ಯಕ್ಷ ಪ್ರಭಾಕರ ಬೀರಯ್ಯ, ಶ್ರೀ ಸತ್ಯ ಸಾಯಿ ಸೇವಾ ಸಂಸ್ಥೆಗಳ ಸಂಚಾಲಕರು, ಪದಾಧಿಕಾರಿಗಳು, ಮುಖ್ಯೋಪಾಧ್ಯಾಯರುಗಳು ಮತ್ತು ಬೋಧಕ, ಬೋಧಕೇತರವರ್ಗ ಹಾಗೂ ವಿದ್ಯಾರ್ಥಿವೃಂದ ಪಾಲ್ಗೊಂಡಿದ್ದರು.

ಪದವೀಧರ-ಶಿಕ್ಷಕರ ಮತದಾರರ ಪಟ್ಟಿ ಪರಿಷ್ಕರಣೆ ಆರಂಭ : ತಹಶೀಲ್ದಾರ್ ಕೆ.ಆರ್.ನಾಗರಾಜ್

ಭದ್ರಾವತಿ ತಾಲೂಕು ಕಚೇರಿ ಸಭಾಂಗಣದಲ್ಲಿ ನೈರುತ್ಯ ಪದವೀಧರ ಹಾಗು ಶಿಕ್ಷಕರ ಕರಡು ಮತದಾರರ ಪಟ್ಟಿ ಕುರಿತು ತಹಸೀಲ್ದಾರ್ ಕೆ.ಆರ್ ನಾಗರಾಜ್ ಗುರುವಾರ ಮಾಹಿತಿ ನೀಡಿದರು.
    ಭದ್ರಾವತಿ: ನೈರುತ್ಯ ಪದವೀಧರ ಹಾಗು ಶಿಕ್ಷಕರ ಕ್ಷೇತ್ರದ ಕರಡು ಮತದಾರರ ಪಟ್ಟಿ ಪರಿಷ್ಕರಣೆ ಆರಂಭಗೊಂಡಿದ್ದು, ಮತದಾರರ ಪಟ್ಟಿಯಲ್ಲಿ ಹೆಸರು ಸೇರಿಸಲು ಹಾಗು ಆಕ್ಷೇಪಣೆಗಳಿದ್ದಲ್ಲಿ ಡಿ.೯ರೊಳಗಾಗಿ ಸಲ್ಲಿಸುವಂತೆ ತಹಶೀಲ್ದಾರ್ ಕೆ.ಆರ್ ನಾಗರಾಜ್ ತಿಳಿಸಿದರು.
    ಗುರುವಾರ ತಾಲೂಕು ಕಚೇರಿ ಸಭಾಂಗಣದಲ್ಲಿ ನೈರುತ್ಯ ಪದವೀಧರ ಹಾಗು ಶಿಕ್ಷಕರ ಕರಡು ಮತದಾರರ ಪಟ್ಟಿ ಕುರಿತು ಮಾಹಿತಿ ನೀಡಿದರು.
    ಶಿಕ್ಷಕರ ಕ್ಷೇತ್ರದ ಮತದಾನಕ್ಕಾಗಿ ಕಡ್ಡಾಯವಾಗಿ ೩ ವರ್ಷ ಸೇವೆ ಸಲ್ಲಿಸಿರಬೇಕು. ಪ್ರಸ್ತುತ ಮತಕ್ಷೇತ್ರದಲ್ಲಿ ೨೨೫ ಪುರುಷ ಹಾಗು ೧೮೫ ಮಹಿಳಾ ಮತದಾರರು ಸೇರಿದಂತೆ ಒಟ್ಟು ೪೧೦ ಮತದಾರರಿದ್ದಾರೆ. ಪದವೀಧರ ಕ್ಷೇತ್ರದಲ್ಲಿ ೧,೫೦೫ ಪುರುಷ ಹಾಗು ೧,೩೦೭ ಮಹಿಳಾ ಮತದಾರರು, ಇತರೆ ೧ ಸೇರಿದಂತೆ ಒಟ್ಟು ೨೮೧೩ ಮತದಾರರಿದ್ದಾರೆ.  ಕ್ಷೇತ್ರದಲ್ಲಿ ೫ ಮತಗಟ್ಟೆಗಳನ್ನು ಸ್ಥಾಪಿಸಲಾಗುವುದು. ಹೊಳೆಹೊನ್ನೂರಿನಲ್ಲಿ ೧, ಬಿ.ಆರ್.ಪಿ ೧ ಹಾಗು  ನಗರ ವ್ಯಾಪ್ತಿಯಲ್ಲಿ ಮೂರು ಮತಗಟ್ಟೆಗಳನ್ನು ಸ್ಥಾಪಿಸಲಾಗುವುದು ಎಂದರು.
    ಚುನಾವಣೆ ಸಂಬಂಧ ಈಗಾಗಲೇ ರಾಜಕೀಯ ಪಕ್ಷಗಳ ಮುಖಂಡರಿಗೆ ಮಾಹಿತಿ ನೀಡಲಾಗಿದೆ. ಇದೀಗ ಮತದಾರರಿಗೆ ಗುರುತಿನ ಚೀಟಿಗಳನ್ನು ಅಂಚೆ ಮೂಲಕ ರವಾನಿಸಲಾಗುತ್ತಿದೆ. ಡಿ. ೯ರವರೆಗೆ ಮತದಾರರ ಪಟ್ಟಿಯಲ್ಲಿ ಹೆಸರು ಸೇರಿಸಲು ಹಾಗು ಆಕ್ಷೇಪಣೆ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ ಎಂದರು.  
    ಉಪ ತಹಶೀಲ್ದಾರ್ ರಾಧಕೃಷ್ಣ ಭಟ್, ಚುನಾವಣಾ ಶಿರಸ್ತೇದಾರ್ ಎನ್.ಎಂ ಬಸವರಾಜ್, ಚುನಾವಣಾ ಶಾಖೆ ಸಿಬ್ಬಂದಿ ರವಿ, ಸೌಜನ್ಯ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.