ಬುಧವಾರ, ಮಾರ್ಚ್ 19, 2025

ಮದ್ಯದಂಗಡಿ ಗೋಡೆ ಕನ್ನ ಕೊರೆದು ಲಕ್ಷಾಂತರ ರು. ನಗದು, ಮದ್ಯ ದರೋಡೆ

    

ಭದ್ರಾವತಿ: ಮದ್ಯದಂಗಡಿ ಗೋಡೆ ಕನ್ನ ಕೊರೆದು ಲಕ್ಷಾಂತರ ರು. ನಗದು ಹಾಗು ಬೆಲೆ ಬಾಳುವ ಮದ್ಯ ದರೋಡೆ ಮಾಡಿರುವ ಘಟನೆ ತಾಲೂಕಿನ ಬಾರಂದೂರು ಗ್ರಾಮದಲ್ಲಿ ನಡೆದಿದೆ. 
    ಶಿವಮೊಗ್ಗ ವಿನೋಬನಗರ ನಿವಾಸಿ ಎಚ್.ಆರ್ ಪಂದೇಶ್ ಬಾರಂದೂರು ಗ್ರಾಮದಲ್ಲಿರುವ ಶ್ರೀ ವೆಂಕಟೇಶ್ವರ ವೈನ್ ಶಾಪ್ ಮಾಲೀಕರಾಗಿದ್ದು, ವೈನ್ ಶಾಪ್ ಕ್ಯಾಷಿಯರ್ ಸಚಿನ್ ಮಾ.೧೬ರಂದು ದಿನದ ವ್ಯಾಪಾರ ಮುಗಿಸಿಕೊಂಡು ರಾತ್ರಿ ೧೦.೨೦ರ ಸಮಯದಲ್ಲಿ ಬೀಗ ಹಾಕಿಕೊಂಡು ಮನೆಗೆ ಹೋಗಿದ್ದಾರೆ. ಬೆಳಿಗ್ಗೆ ಬಂದು ನೋಡಿದಾಗ ವೈನ್‌ಶಾಪ್‌ಗೆ ಹೊಂದಿಕೊಂಡಂತೆ ಇರುವ ರೆಸ್ಟ್ ರೂಂ ಕಬ್ಬಿಣದ ಬಾಗಿಲಿಗೆ ಹಾಕಿದ್ದ ಬೀಗ ಮುರಿದು ಒಳಗೆ ಪ್ರವೇಶಿಸಿ ರೆಸ್ಟ್ ರೂಂ ಒಳಗಿನ ಗೋಡೆ ಒಬ್ಬ ವ್ಯಕ್ತಿ ಒಳಗೆ ನುಸುಳ ಬಹುದಾದಷ್ಟು ದೊಡ್ಡದಾದ ಕನ್ನ ಕೊರೆದು ದರೋಡೆ ಮಾಡಿರುವುದು ಕಂಡು ಬಂದಿರುತ್ತದೆ. 
    ಬ್ಯಾಂಕ್ ಖಾತೆಗೆ ಜಮಾ ಮಾಡಲು ಇಡಲಾಗಿದ್ದ ೧,೦೦,೦೦೦ ರು. ನಗದು ಹಣ ಮತ್ತು ಮಾ. ೧೫ ಹಾಗು ೧೬ ಶನಿವಾರ ಮತ್ತು ಭಾನುವಾರ ಎರಡು ದಿನದ ವ್ಯಾಪಾರದ ಹಣ ೨,೫೬,೫೦೦ ರು. ಮತ್ತು ವೈನ್ ಶಾಪ್ ಕ್ಯಾಶ್ ಡ್ರಾನಲ್ಲಿದ್ದ ಚಿಲ್ಲರೆ ಹಣ ಒಟ್ಟು ೪,೦೦೦g ರು. ಹಾಗೂ ವೈನ್ ಶಾಪ್ ಶೋಕೇಸ್‌ನಲ್ಲಿದ್ದ ಬ್ಲಾಕ್ & ವ್ಹೈಟ್ ೧೮೦ ಎಂ.ಎಲ್ ಒಟ್ಟು ಸುಮಾರು ೪೬೮೦ ರು. ಮೌಲ್ಯದ ೮ ಬಾಟಲ್‌ಗಳು ಮತ್ತು ವೋಡ್ಕಾ ೧೮೦ ಎಂ.ಎಲ್ ಒಟ್ಟು ಸುಮಾರು ೮೯೦ ರು. ಮೌಲ್ಯದ ೨ ಕ್ವಾಟರ್‌ಗಳನ್ನು ಕಳವು ಮಾಡಲಾಗಿದೆ. ಒಟ್ಟು ನಗದು ಹಣ ೩,೬೦,೫೦೦ ರು. ಮತ್ತು ೫೫೭೦ ರು. ಬೆಲೆಬಾಳುವ ಮಧ್ಯದ ಬಾಟಲ್‌ಗಳನ್ನು ದರೋಡೆ ಮಾಡಲಾಗಿದೆ ಎಂದು ಪೇಪರ್‌ಟೌನ್ ಪೊಲೀಸ್ ಠಾಣೆಗೆ ನೀಡಿರುವ ದೂರಿನಲ್ಲಿ ತಿಳಿಸಲಾಗಿದೆ. ಘಟನಾ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿರುವ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ. 

ಡಾ. ಪುನೀತ್ ರಾಜ್‌ಕುಮಾರ್ ಒಬ್ಬ ಶ್ರೇಷ್ಠ ಮಾನವೀಯ ಮೌಲ್ಯಗಳನ್ನು ಹೊಂದಿದ ಧೀಮಂತ ನಾಯಕ : ಆರ್.ಎಸ್ ಮಾಧುರಿ

ಭದ್ರಾವತಿ ನ್ಯೂಟೌನ್ ಸಿದ್ದಾರ್ಥ ಅಂಧರ ಕೇಂದ್ರದಲ್ಲಿ ಡಾ. ಪುನೀತ್ ರಾಜಕುಮಾರ್‌ರವರ ೫೦ನೇ ವರ್ಷದ ಹುಟ್ಟುಹಬ್ಬ ಹಮ್ಮಿಕೊಳ್ಳಲಾಗಿತ್ತು. 
    ಭದ್ರಾವತಿ : ಪುನೀತ್‌ರಾಜ್‌ಕುಮಾರ್‌ರವರು ಬಡ ವಿದ್ಯಾರ್ಥಿಗಳು, ವಿಕಲಚೇತನರು ಹಾಗು ಅನಾಥರಿಗಾಗಿ ಶಿಕ್ಷಣ ಸಂಸ್ಥೆ ಮತ್ತು ವಸತಿ ನಿಲಯಗಳನ್ನು ತೆರೆದು ಅವರ ಏಳಿಗೆಗಾಗಿ, ಅವರನ್ನು ಸಮಾಜದ ಮುಖ್ಯವಾಹಿನಿಗೆ ತರಲು ಶ್ರಮಿಸಿದ ಒಬ್ಬ ಶ್ರೇಷ್ಠ ಮಾನವೀಯ ಮೌಲ್ಯಗಳನ್ನು ಹೊಂದಿದ ಧೀಮಂತ ನಾಯಕ ಎಂದು ತಾಲೂಕಿನ ಬಾರಂದೂರು ಜನತಾ ಸಹಕಾರ ಸಂಘದ ಗ್ರಾಹಕರ ಸಂಪರ್ಕ ಅಧಿಕಾರಿ ಆರ್.ಎಸ್ ಮಾಧುರಿ ಬಣ್ಣಿಸಿದರು. 
    ಅವರು ನಗರದ ನ್ಯೂಟೌನ್ ಸಿದ್ದಾರ್ಥ ಅಂಧರ ಕೇಂದ್ರದಲ್ಲಿ ಹಮ್ಮಿಕೊಳ್ಳಲಾಗಿದ್ದ ಡಾ. ಪುನೀತ್ ರಾಜಕುಮಾರ್‌ರವರ ೫೦ನೇ ವರ್ಷದ ಹುಟ್ಟುಹಬ್ಬ ಉದ್ಘಾಟಿಸಿ ಮಾತನಾಡಿದರು.   
  ಪುನೀತ್ ರಾಜಕುಮಾರ್ ಒಬ್ಬ ಶ್ರೇಷ್ಠ ಚಿತ್ರನಟ ಮಾತ್ರವಲ್ಲದೆ ಮಾನವೀಯ ಮೌಲ್ಯ ಹೊಂದಿದ್ದ ಒಬ್ಬ ಸಮಾಜ ಸೇವಕರಾಗಿದ್ದರು. ಅವರ ಆದರ್ಶತನ ನಮಗೆ ಮಾದರಿಯಾಗಿವೆ ಎಂದರು. 
ಜನತಾ ಸಹಕಾರ ಸಂಘದ ಅಧಿಕಾರಿಗಳಾದ ಶಮಂತ, ಚೈತ್ರ ಹಾಗೂ ವಿದ್ಯಾ ಉಪಸ್ಥಿತರಿದ್ದರು. ಸಿದ್ದಾರ್ಥ ಅಂಧರ ಕೇಂದ್ರದ ಅಧ್ಯಕ್ಷ ಶಿವಬಸಪ್ಪ ಅಧ್ಯಕ್ಷತೆ ವಹಿಸಿದ್ದರು. ಅಂಧರ ಕೇಂದ್ರದ ವಿಕಲಚೇತನರು ಪುನೀತ್ ರಾಜಕುಮಾರ್ ಅಭಿನಯದ ಚಲನ ಚಿತ್ರಗೀತೆಗಳನ್ನು ಹಾಡುವ ಮೂಲಕ ಸಂಭ್ರಮಿಸಿದರು. 

ಜಿಲ್ಲಾಧ್ಯಕ್ಷರಾಗಿ ಎಂ.ಆರ್ ಸುರೇಶ್ ನಾಯಕ್ ನೇಮಕ

ಎಂ.ಆರ್ ಸುರೇಶ್ ನಾಯಕ್ 
    ಭದ್ರಾವತಿ : ಅಖಿಲ ಭಾರತ ಕ್ರೈಸ್ತ ಮಹಾಸಭಾ ಜಿಲ್ಲಾಧ್ಯಕ್ಷರಾಗಿ ಶಿವಮೊಗ್ಗ ಅಂಜನಾಪುರ ಗ್ರಾಮದ ಎಂ.ಆರ್ ಸುರೇಶ್ ನಾಯಕ್ ಅವರನ್ನು ನೇಮಕಗೊಳಿಸಿ ಆದೇಶಿಸಲಾಗಿದೆ. 
    ಮಹಾಸಭಾ ಸಂಸ್ಥಾಪಕ ಅಧ್ಯಕ್ಷರಾದ ಎಸ್. ಪ್ರಜ್ವಲ್ ಸ್ವಾಮಿರವರ ಆದೇಶದ ಮೇರೆಗೆ ಎಂ.ಆರ್ ಸುರೇಶ್ ನಾಯಕ್ ಅವರನ್ನು ಒಂದು ವರ್ಷದ ಅವಧಿಗೆ ಜಿಲ್ಲಾಧ್ಯಕ್ಷರನ್ನಾಗಿ ನೇಮಿಸಲಾಗಿದೆ. ಮಹಾಸಭಾ ಮತ್ತಷ್ಟು ಸಂಘಟಿಸುವ ಮೂಲಕ ಸಮುದಾಯ ಏಳಿಗೆಗೆ ಶ್ರಮಿಸುವಂತೆ ಆದೇಶ ಪತ್ರದಲ್ಲಿ ಸೂಚಿಸಲಾಗಿದೆ. 

ಮಾ.೨೦ರಂದು ಸ್ಮಾರ್ಟ್ ಕಾರ್ಡ್ ವಿತರಣಾ ಕಾರ್ಯಕ್ರಮ




    ಭದ್ರಾವತಿ : ಆಯುಷ್ಮಾನ್ ಭಾರತ್ ಯೋಜನೆಯಡಿ ೭೦ ವರ್ಷ ಮೇಲ್ಪಟ್ಟವರಿಗೆ ಸ್ಮಾರ್ಟ್ ಕಾರ್ಡ್ ವಿತರಣಾ ಕಾರ್ಯಕ್ರಮ ಮಾ.೨೦ರ ಗುರುವಾರ ಸಂಜೆ ೬ ಗಂಟೆಗೆ   ತಾಲೂಕು ಕಚೇರಿ ರಸ್ತೆಯಲ್ಲಿರುವ ಶ್ರೀ ವೀರಭದ್ರೇಶ್ವರ ಸಮುದಾಯದ ಭವನದಲ್ಲಿ ಹಮ್ಮಿಕೊಳ್ಳಲಾಗಿದೆ. 
    ಪಕ್ಷದ ಯುವ ಮುಖಂಡರಾದ ಜಿ. ಆನಂದ ಕುಮಾರ್ ಮತ್ತು ಮಂಗೋಟೆ ರುದ್ರೇಶ್ ನೇತೃತ್ವದಲ್ಲಿ ಆಯೋಜಿಸಲಾಗಿರುವ ಕಾರ್ಯಕ್ರಮದಲ್ಲಿ ಸಂಸದ ಬಿ.ವೈ ರಾಘವೇಂದ್ರ, ಬಿಜೆಪಿ ಜಿಲ್ಲಾಧ್ಯಕ್ಷ ಜಗದೀಶ್, ತಾಲೂಕು ಮಂಡಲ ಅಧ್ಯಕ್ಷ ಜಿ. ಧರ್ಮಪ್ರಸಾದ್ ಸೇರಿದಂತೆ ಇನ್ನಿತರರು ಉಪಸ್ಥಿತರಿರುವರು. 
    ಕ್ಯಾಲೆಂಡರ್ ಬಿಡುಗಡೆ : 
    ಪ್ರತಿವರ್ಷದಂತೆ ಈ ಬಾರಿ ಸಹ ಆನಂದ ಸಾಮಾಜಿ ಸೇವಾ ಸಂಸ್ಥೆ ವತಿಯಿಂದ ಕ್ಯಾಲೆಂಡರ್ ಬಿಡುಗಡೆ ಮಾಡಲಾಗುತ್ತಿದ್ದು, ಕಾರ್ಯಕ್ರಮ ಯಶಸ್ವಿಗೊಳಿಸುವಂತೆ ಕೋರಲಾಗಿದೆ.