Sunday, December 12, 2021

ಇಬ್ಬರು ಯುವಕರ ಮೇಲೆ ಗುಂಪೊಂದು ಗಾಂಜಾ ಅಮಲಿನಲ್ಲಿ ಹಲ್ಲೆ ಆರೋಪ : ಪ್ರತಿಭಟನೆ

ನ್ಯೂಟೌನ್ ಪೊಲೀಸರಿಂದ ಕಠಿಣ ಕ್ರಮ ಕೈಗೊಳ್ಳುವ ಭರವಸೆ


ಭದ್ರಾವತಿ ಗರದ ಬೈಪಾಸ್ ರಸ್ತೆಯ ನಗರಸಭೆ ವ್ಯಾಪ್ತಿಯ ಹೊಸಸಿದ್ದಾಪುರ ಗ್ರಾಮದಲ್ಲಿ ಭಾನುವಾರ ರಾತ್ರಿ ಯುವಕರ ಗುಂಪೊಂದು ಏಕಾಏಕಿ ಇಬ್ಬರು ಯುವಕರ ಮೇಲೆ ಹಲ್ಲೆ ನಡೆಸಿದ್ದು, ಹಲ್ಲೆಗೆ ಗಾಂಜಾ ಅಮಲು ಕಾರಣವಾಗಿದೆ. ತಕ್ಷಣ ಹಲ್ಲೆ ನಡೆಸಿರುವವರನ್ನು ಬಂಧಿಸುವಂತೆ ಒತ್ತಾಯಿಸಿ ನಗರಸಭೆ ಮಾಜಿ ಸದಸ್ಯ ಅನಿಲ್‌ಕುಮಾರ್ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು.
    ಭದ್ರಾವತಿ, ಡಿ. ೧೨:  ನಗರದ ಬೈಪಾಸ್ ರಸ್ತೆಯ ನಗರಸಭೆ ವ್ಯಾಪ್ತಿಯ ಹೊಸಸಿದ್ದಾಪುರ ಗ್ರಾಮದಲ್ಲಿ ಭಾನುವಾರ ರಾತ್ರಿ ಯುವಕರ ಗುಂಪೊಂದು ಏಕಾಏಕಿ ಇಬ್ಬರು ಯುವಕರ ಮೇಲೆ ಹಲ್ಲೆ ನಡೆಸಿರುವ ಘಟನೆ ನಡೆದಿದೆ.
    ಹಳೇನಂಜಾಪುರ ಗ್ರಾಮದ ನಿವಾಸಿಗಳಾದ ವಿನೋದ್ ಮತ್ತು ರಾಜೇಶ್ ಗಂಭೀರವಾಗಿ ಹಲ್ಲೆಗೊಳಗಾಗಿದ್ದು, ಈ ಇಬ್ಬರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ವಿನೋದ್ ಮತ್ತು ರಾಜೇಶ್ ಹೊಸಸಿದ್ದಾಪುರದ ಕಟಿಂಗ್‌ಶಾಪ್ ಬಳಿ ನಿಂತುಕೊಂಡಿದ್ದಾಗ ಯುವಕರ ಗುಂಪೊಂದು ಏಕಾಏಕಿ ಹಲ್ಲೆ ನಡೆಸಿದ್ದು, ಈ ಸಂದರ್ಭದಲ್ಲಿ ಹಲ್ಲೆ ತಪ್ಪಿಸಲು ಹೋದ ನಗರಸಭಾ ಮಾಜಿ ಸದಸ್ಯ ಅನಿಲ್‌ಕುಮಾರ್‌ರವರ ತಂದೆಯ ಮೇಲೆ ಸಹ ಹಲ್ಲೆ ನಡೆಸಲಾಗಿದೆ. ಗಾಂಜಾ ಅಮಲಿನಲ್ಲಿ ಹಲ್ಲೆ ನಡೆಸಲಾಗಿದೆ ಎನ್ನಲಾಗಿದ್ದು, ಇದರಿಂದಾಗಿ ಗ್ರಾಮಸ್ಥರು ಆಕ್ರೋಶಗೊಂಡಿದ್ದಾರೆ.
        ರಸ್ತೆ ತಡೆ ನಡೆಸಿ ಪ್ರತಿಭಟನೆ :
   ಈ ಭಾಗದಲ್ಲಿ ಗಾಂಜಾ ಸೇರಿದಂತೆ ಮಾದಕ ವಸ್ತುಗಳ ಸೇವನೆ ಹೆಚ್ಚಾಗುತ್ತಿದ್ದು, ಇದಕ್ಕೆ ಯುವ ಸಮುದಾಯ ಬಲಿಯಾಗುತ್ತಿದೆ. ಇದನ್ನು ಪ್ರಶ್ನಿಸಲು ಮುಂದಾದವರ ಮೇಲೆ ಹಲ್ಲೆ ನಡೆಸಲಾಗುತ್ತಿದೆ. ಅಲ್ಲದೆ ಸಾಮಾಜಿಕ ಜಾಲತಾಣಗಳಲ್ಲಿ ತೇಜೋವಧೆ ಮಾಡಲಾಗುತ್ತಿದೆ. ಪುಂಡ ಪೋಕರಿಗಳ ಹಾವಳಿ ಹೆಚ್ಚಾಗಿದೆ. ಗ್ರಾಮಸ್ಥರು ಪ್ರತಿ ದಿನ ಆತಂಕದಲ್ಲಿ ಕಾಲ ಕಳೆಯುವಂತಾಗಿದೆ. ಪೊಲೀಸರು ಯಾವುದೇ ಕ್ರಮ ಕೈಗೊಳ್ಳದೆ ನಿರ್ಲಕ್ಷ್ಯ ವಹಿಸಿದ್ದಾರೆಂದು ಆರೋಪಿಸಿ ಸ್ಥಳೀಯರು ನಗರಸಭೆ ಮಾಜಿ ಸದಸ್ಯ ಅನಿಲ್‌ಕುಮಾರ್ ನೇತೃತ್ವದಲ್ಲಿ ರಸ್ತೆ ತಡೆ ನಡೆಸಿ ಪ್ರತಿಭಟನೆ ನಡೆಸಿದರು.
    ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿದ ನ್ಯೂಟೌನ್ ಠಾಣೆ ಪೊಲೀಸರು ಹಲ್ಲೆ ನಡೆಸಿರುವ ಯುವಕರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವ ಭರವಸೆ ನೀಡಿದರು.


ಅನುಭವಿ ಕಲಾವಿದರಿಂದ ಮಾತ್ರ ಬೀದಿ ನಾಟಕ ಯಶಸ್ವಿಗೊಳಿಸಲು ಸಾಧ್ಯ : ಹೊನ್ನಾಳಿ ಚಂದ್ರಶೇಖರ್


ಭದ್ರಾವತಿ ಹಳೇನಗರದ ಬಸವೇಶ್ವರ ವೃತ್ತದಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರ, ಬೆಂಗಳೂರು ಸಹಯೋಗದೊಂದಿಗೆ ನಗರದ ಜನ್ನಾಪುರ ಅಪರಂಜಿ ಅಭಿನಯ ಶಾಲೆ ವತಿಯಿಂದ ಹಮ್ಮಿಕೊಳ್ಳಲಾಗಿದ್ದ  'ಬಾರಿಸು ಕನ್ನಡ ಡಿಂಡಿಮವ' ವಿಶೇಷ ಬೀದಿ ನಾಟಕಕ್ಕೆ ಹಿರಿಯ ಪತ್ರಕರ್ತ ಹೊನ್ನಾಳಿ ಚಂದ್ರಶೇಖರ್ ಚಾಲನೆ ನೀಡಿದರು.
    ಭದ್ರಾವತಿ, ಡಿ. ೧೨: ಬೀದಿನಾಟಕಗಳ ಮೂಲಕ ಜನರನ್ನು ಆಕರ್ಷಿಸುವುದು ಸವಾಲಿನ ಕೆಲಸವಾಗಿದ್ದು, ಅನುಭವಿ ಕಲಾವಿದರಿಂದ ಮಾತ್ರ ಬೀದಿ ನಾಟಕಗಳನ್ನು ಯಶಸ್ವಿಗೊಳಿಸಲು ಸಾಧ್ಯ ಎಂದು ಹಿರಿಯ ಪತ್ರಕರ್ತ ಹೊನ್ನಾಳಿ ಚಂದ್ರಶೇಖರ್ ಹೇಳಿದರು.
    ಅವರು ಭಾನುವಾರ ಹಳೇನಗರದ ಬಸವೇಶ್ವರ ವೃತ್ತದಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರ, ಬೆಂಗಳೂರು ಸಹಯೋಗದೊಂದಿಗೆ ನಗರದ ಜನ್ನಾಪುರ ಅಪರಂಜಿ ಅಭಿನಯ ಶಾಲೆ ವತಿಯಿಂದ ಹಮ್ಮಿಕೊಳ್ಳಲಾಗಿದ್ದ  'ಬಾರಿಸು ಕನ್ನಡ ಡಿಂಡಿಮವ' ವಿಶೇಷ ಬೀದಿ ನಾಟಕಕ್ಕೆ ಚಾಲನೆ ನೀಡಿ ಮಾತನಾಡಿದರು.
    ವಿಭಿನ್ನ ಮನಸ್ಥಿತಿಯ ಜನರ ಗಮನವನ್ನು ಒಂದೆಡೆ ಸೆಳೆದು ಆ ನಂತರ ನಾಟಕದಲ್ಲಿನ ವಿಚಾರಧಾರೆಗಳನ್ನು ತಿಳಿಸುವ ಕೆಲಸ ನಿಜಕ್ಕೂ ಸವಾಲಾಗಿದೆ. ಬೀದಿ ನಾಟಕಗಳು ತನ್ನದೇ ವಿಶಿಷ್ಟತೆಯನ್ನು ಹೊಂದಿವೆ. ಬೀದಿ ನಾಟಕಗಳು ಜನರನ್ನು ಹೋರಾಟಗಳಲ್ಲಿ, ಚಳುವಳಿಗಳಲ್ಲಿ ತೊಡಗಿಸಿಕೊಳ್ಳಲು ಪ್ರೇರಣೆ ನೀಡುವ ಜೊತೆಗೆ ಸಾಮಾಜಿಕ ಕಾಳಜಿ, ಜಾಗೃತಿ ಮೂಡಿಸಲು ಸಹಕಾರಿಯಾಗಿವೆ. ಇಂತಹ ಬೀದಿ ನಾಟಕಗಳು ಇಂದಿನ ಸಮಾಜಕ್ಕೆ ಅವಶ್ಯಕವಾಗಿವೆ. ಬೀದಿ ನಾಟಕ ಉಳಿಸಿಕೊಳ್ಳುವ ನಿಟ್ಟಿನಲ್ಲಿ ಈ ರೀತಿಯ ಕಾರ್ಯಕ್ರಮಗಳು ಹೆಚ್ಚಾಗಿ ನಡೆಯುವಂತಾಗಬೇಕೆಂದರು.
    ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಕೆ.ಎನ್ ಶ್ರೀಹರ್ಷ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದರು.
    ರಂಗಕರ್ಮಿ, ಕಿರುತೆರೆ ನಟ ಅಪರಂಜಿ ಶಿವರಾಜ್ ರಚನೆ, ನಿರ್ದೇಶನದ 'ಬಾರಿಸು ಕನ್ನಡ ಡಿಂಡಿಮವ' ವಿಶೇಷ ಬೀದಿ ನಾಟಕ ಪ್ರದರ್ಶನ ಅಪರಂಜಿ ಅಭಿನಯ ಶಾಲೆಯ ಕಲಾವಿದರು ನಡೆಸಿಕೊಟ್ಟರು.  

ಅಬ್ಬರದಿಂದ ನಡೆದ ಒಕ್ಕಲಿಗರ ಸಂಘದ ನಿರ್ದೇಶಕರ ಚುನಾವಣೆ


ಭದ್ರಾವತಿ ನ್ಯೂಟೌನ್ ಎಸ್‌ಎವಿ ಶಾಲೆಯಲ್ಲಿ ಭಾನುವಾರ ನಡೆದ ಒಕ್ಕಲಿಗರ ಸಂಘದ ನಿರ್ದೇಶಕ ಸ್ಥಾನದ ಚುನಾವಣೆಯ ಮತದಾನದಲ್ಲಿ ಅಭ್ಯರ್ಥಿ ಎಸ್. ಕುಮಾರ್ ಪರವಾಗಿ ತಾಲೂಕು ಒಕ್ಕಲಿಗರ ಸಂಘದ ಅಧ್ಯಕ್ಷ ಎ.ಟಿ ರವಿ ಹಾಗು ಪದಾಧಿಕಾರಿಗಳು ಮತಯಾಚನೆ ನಡೆಸಿದರು.
    ಭದ್ರಾವತಿ, ಡಿ. ೧೨: ರಾಜ್ಯ ಒಕ್ಕಲಿಗರ ಸಂಘ ಶಿವಮೊಗ್ಗ-ಉತ್ತರ ಕನ್ನಡ ನಿರ್ದೇಶಕ ಸ್ಥಾನದ ಚುನಾವಣೆಯ ಮತದಾನ ಭಾನುವಾರ ಯಶಸ್ವಿಯಾಗಿ ನಡೆದಿದ್ದು,  ಸಾರ್ವತ್ರಿಕ ಚುನಾವಣೆಗಳನ್ನು ಮೀರಿಸುವಂತಹ ವಾತಾವರಣ ಕಂಡು ಬಂದಿತು.


ಭದ್ರಾವತಿ ನ್ಯೂಟೌನ್ ಎಸ್‌ಎವಿ ಶಾಲೆಯಲ್ಲಿ ಭಾನುವಾರ ನಡೆದ ಒಕ್ಕಲಿಗರ ಸಂಘದ ನಿರ್ದೇಶಕ ಸ್ಥಾನದ ಚುನಾವಣೆಯ ಮತದಾನದಲ್ಲಿ ಅಭ್ಯರ್ಥಿ ಧರ್ಮೇಶ್ ಸಿರಿಬೈಲು ಪರವಾಗಿ ಬೆಂಬಲಿಗರು ಮತಯಾಚನೆ ನಡೆಸಿದರು.
    ನ್ಯೂಟೌನ್ ಶ್ರೀ ಆದಿಚುಂಚನಗಿರಿ ವಿದ್ಯಾಸಂಸ್ಥೆ ಆಂಗ್ಲ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಬೆಳಿಗ್ಗೆ ೭ ಗಂಟೆಯಿಂದ ಆರಂಭಗೊಂಡ ಮತದಾನ ಮಧ್ಯಾಹ್ನ ೨ ಗಂಟೆವರೆಗೆ ಬಿರುಸಿನಿಂದ ನಡೆದಿದ್ದು, ಶೇ.೭೦ರಷ್ಟು ಮತದಾನ ನಡೆಯಿತು. ಒಟ್ಟು ೯ ಅಭ್ಯರ್ಥಿಗಳು ಕಣದಲ್ಲಿದ್ದು, ೧೩,೪೩೬ ಮಂದಿ ಮತದಾನದ ಹಕ್ಕು ಹೊಂದಿದ್ದು, ಈ ಪೈಕಿ  ತೀರ್ಥಹಳ್ಳಿ ಮತ್ತು ಭದ್ರಾವತಿ ತಾಲೂಕುಗಳಲ್ಲಿ ಮತದಾರರ ಸಂಖ್ಯೆ ಅಧಿಕವಾಗಿದೆ. ಭದ್ರಾವತಿಯಲ್ಲಿ ಒಟ್ಟು ೪೦೫೪ ಮಂದಿ ಮತದಾನದ ಹಕ್ಕು ಹೊಂದಿದ್ದು,  ಸಂಜೆ ೪ರ ವೇಳೆಗೆ ಬಹುತೇಕ ಮಂದಿ ಮತಚಲಾಯಿಸಿದರು. ಅಭ್ಯರ್ಥಿಗಳ ಫಲಿತಾಂಶದಲ್ಲಿ ನಿರ್ಣಾಯಕ ಪಾತ್ರ ವಹಿಸಿದ್ದಾರೆ.
    ಈ ಬಾರಿ ಚುನಾವಣೆಯಲ್ಲಿ ತಾಲೂಕು ಒಕ್ಕಲಿಗರ ಸಂಘ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಎಸ್. ಕುಮಾರ್‌ರವರನ್ನು ಒಮ್ಮತದ ಅಭ್ಯರ್ಥಿಯಾಗಿ ಕಣಕ್ಕಿಳಿಸಿದ್ದ ಪರಿಣಾಮ ತೀವ್ರ ಪೈಪೋಟಿ ಕಂಡು ಬಂದಿತು. ಕುಮಾರ್ ಪರವಾಗಿ ಸಂಘದ ಪದಾಧಿಕಾರಿಗಳು, ಬೆಂಬಲಿಗರು, ಹಿತೈಷಿಗಳು ಮತಗಟ್ಟೆ ಬಳಿ ಅಬ್ಬರದ ಮತಯಾಚನೆ ನಡೆಸಿದರು.
    ಈ ನಡುವೆ ತಾಲೂಕು ಒಕ್ಕಲಿಗರ ಸಂಘಕ್ಕೆ ಸೆಡ್ಡು ಹೊಡೆದು ಕಣಕ್ಕಿಳಿದಿದ್ದ  ಅಭ್ಯರ್ಥಿಗಳು ತಮಗೆ ಮತ ಹಾಕುವಂತೆ ಮನವಿ ಮಾಡಿದರು. ಮತ್ತೊಂದೆಡೆ ಬೇರೆ ತಾಲೂಕಿನ ಅಭ್ಯರ್ಥಿಯನ್ನು ಬೆಂಬಲಿಸಲು ಕೆಲವರು ಮುಂದಾಗಿರುವುದು ಕಂಡು ಬಂದಿತು. ತೀರ್ಥಹಳ್ಳಿಯ ಧರ್ಮೇಶ್ ಸಿರಿಬೈಲು ಪರವಾಗಿ ವ್ಯಾಪಕವಾಗಿ ಮತಯಾಚನೆ ನಡೆಸುತ್ತಿರುವುದು ಕಂಡು ಬಂದಿತು.


ಭದ್ರಾವತಿ ನ್ಯೂಟೌನ್ ಎಸ್‌ಎವಿ ಶಾಲೆಯಲ್ಲಿ ಭಾನುವಾರ ನಡೆದ ಒಕ್ಕಲಿಗರ ಸಂಘದ ನಿರ್ದೇಶಕ ಸ್ಥಾನದ ಚುನಾವಣೆಯಲ್ಲಿ ಜೆಡಿಎಸ್ ಮುಖಂಡರಾದ ಶಾರದ ಅಪ್ಪಾಜಿ ಕುಟುಂಬ ಸದಸ್ಯರೊಂದಿಗೆ ಆಗಮಿಸಿ ಮತ ಚಲಾಯಿಸಿದರು.
    ಮತದಾರರನ್ನು ಸೆಳೆಯಲು ಅಭ್ಯರ್ಥಿಗಳಿಂದ ಹಲವು ರೀತಿಯ ಕಸರತ್ತುಗಳು ನಡೆದಿರುವುದು ಕಂಡು ಬಂದಿದ್ದು, ಅಲ್ಲದೆ ಹಣ, ಹೆಂಡ ಸೇರಿದಂತೆ ಇನ್ನಿತರ ಅಮಿಷಗಳ ಮೂಲಕ ಮತದಾರರನ್ನು ಸೆಳೆದಿರುವುದು ಮೇಲ್ನೋಟಕ್ಕೆ ತಿಳಿದು ಬಂದಿದೆ. ಮತಗಟ್ಟೆ ಬಳಿ ಬೆಳಿಗ್ಗೆ ಉಪಹಾರ ವ್ಯವಸ್ಥೆ ಮತ್ತು ಮಧ್ಯಾಹ್ನ ಊಟದ ವ್ಯವಸ್ಥೆ ಅದರಲ್ಲೂ ಬಾಡೂಟ ವ್ಯವಸ್ಥೆ ಕೈಗೊಳ್ಳಲಾಗಿತ್ತು. ಮತಗಟ್ಟೆ ಬಳಿ ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿತ್ತು.
    ಪತ್ರಿಕೆ ಜೊತೆ ಮಾತನಾಡಿದ ಅಭ್ಯರ್ಥಿ ಧರ್ಮೇಶ್ ಸಿರಿಬೈಲು, ಈ ಬಾರಿ ಚುನಾವಣೆ ಯಶಸ್ವಿಯಾಗಿ ನಡೆಯುವ ಮೂಲಕ ಎಲ್ಲಾ ಮತಗಟ್ಟೆಗಳಲ್ಲೂ ಮಧ್ಯಾಹ್ನದ ವೇಳೆಗೆ ಹೆಚ್ಚಿನ ಮತದಾನವಾಗಿದೆ. ಈ ಮೂಲಕ ತಮ್ಮ ನೆಚ್ಚಿನ ನಿರ್ದೇಶಕನ ಆಯ್ಕೆಯಲ್ಲಿ ಸಮುದಾಯದವರು ಒಲವು ತೋರಿಸಿರುವುದು ಹೆಮ್ಮೆಯ ವಿಚಾರವಾಗಿದ್ದು, ಎಲ್ಲರಿಗೂ ಕೃತಜ್ಞತೆ ಸಲ್ಲಿಸುತ್ತೇನೆ ಎಂದರು.