Tuesday, March 14, 2023

ವಿಐಎಸ್‌ಎಲ್ ಉಳಿಸಿ : ಮೈಸೂರಿನಲ್ಲಿ ಧರಣಿ

ಭದ್ರಾವತಿ ವಿಐಎಸ್‌ಎಲ್ ಕಾರ್ಖಾನೆ ಉಳಿಸುವಂತೆ ಒತ್ತಾಯಿಸಲು ಹಾಗು ಮೈಸೂರು ಅರಸರ ಮನೆತನಕ್ಕೆ ವಿಷಯ ಮುಟ್ಟಿಸಲು ಪ್ರತಿಭಟನಾ ಧರಣಿ ಹಮ್ಮಿಕೊಂಡಿರುವ ನಗರದ ದಯಾನಂದ್ ಮತ್ತು ಸಂಗಡಿಗರು
    ಭದ್ರಾವತಿ, ಮಾ. ೧೪ : ನಗರದ ಬಿ.ಎಚ್ ರಸ್ತೆ ರೈಲ್ವೆ ನಿಲ್ದಾಣ ರಸ್ತೆಯಲ್ಲಿ ವಿದ್ಯುನ್ಮಾನ ತೂಕ ಮತ್ತು ಅಳತೆ ತಕ್ಕಡಿಗಳ ಸಣ್ಣ ವ್ಯಾಪಾರಿ ದಯಾನಂದ್ ಮತ್ತು ಸ್ನೇಹಿತರು ವಿಐಎಸ್‌ಎಲ್ ಕಾರ್ಖಾನೆ ಉಳಿಸುವಂತೆ ಒತ್ತಾಯಿಸಿ ಮೈಸೂರಿನ ಗಾಂಧಿ ಸ್ಕ್ವಯರ್‌ನ ಗಾಂಧಿ ಪ್ರತಿಮೆ ಬಳಿ ರಾಜ ಮನೆತನದ ಗಮನ ಸೆಳೆದು ಕೇಂದ್ರ ಸರ್ಕಾರಕ್ಕೆ ಎಚ್ಚರಿಸಲು ಮಂಗಳವಾರ ಧರಣಿ ಪ್ರತಿಭಟನೆ ನಡೆಸಿದರು.
  ಮೈಸೂರು ಮಹಾರಾಜ ನಾಲ್ವಡಿ ಕೃಷ್ಣರಾಜ ಒಡೆಯರ್ ಮತ್ತು ಮೋಕ್ಷಗುಡಂ ವಿಶ್ವೇಶ್ವರಾಯರವರು ಸ್ಥಾಪಿಸಿದ ವಿಐಎಸ್‌ಎಲ್ ಕಾರ್ಖಾನೆಗೆ ನೂರು ವರ್ಷ ತುಂಬಿದೆ. ಲಕ್ಷಾಂತರ ಮಂದಿಗೆ ಉದ್ಯೋಗ, ಅನ್ನ, ವಸತಿ ನೀಡಿದ ಕಾರ್ಖಾನೆಯ ಶತಮಾನೋತ್ಸವ ಆಚರಿಸುವ ಬದಲು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಮುಚ್ಚಲು ತೀರ್ಮಾನಿಸಿ ಶೋಕೋತ್ಸವ ಆಚರಿಸುವಂತೆ ಮಾಡಿದೆ ಎಂದು ವಿಷಾದ ವ್ಯಕ್ತಪಡಿಸಿದರು.
    ಕಳೆದೆರೆಡು ತಿಂಗಳಿಂದ ಗುತ್ತಿಗೆ ಕಾರ್ಮಿಕರು ನಿರಂತರ ಹೋರಾಟ ಮಾಡುತ್ತಿದ್ದರು ಪ್ರಯೋಜನವಾಗಿಲ್ಲ. ನಾಡಿನ ಸಂತರು ಮಠಾಧಿಪತಿಗಳು ಸಂಘ ಸಂಸ್ಥೆಗಳ ಮುಖಂಡರು ಹೋರಾಟಕ್ಕೆ ಬೆಂಬಲಿಸಿ ಕೇಂದ್ರ ನರೇಂದ್ರ ಮೋದಿ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದರೂ ಯಾವುದೇ ಕ್ರಮಕೈಗೊಂಡಿಲ್ಲ. ಪ್ರಧಾನಿಗಳು ವಿಮಾನ ನಿಲ್ದಾಣ ಉದ್ಘಾಟಿಸಲು ಶಿವಮೊಗ್ಗಕ್ಕೆ ಆಗಮಿಸಿದ್ದರೂ ಸಹ ಈ ಕುರಿತು ಚಕಾರ ಎತ್ತಿಲ್ಲ. ಮಂಡ್ಯದಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ್ ಮತ್ತು ಸರ್.ಎಂ ವಿಶ್ವೇಶ್ವರಾಯ ಇಬ್ಬರೂ ಕನ್ನಡ ನಾಡಿಗೆ ಸೀಮಿತರಲ್ಲ. ಜಗತ್ತಿಗೆ ಬೆಳಕು ಕೊಟ್ಟ ಅಭಿವೃದ್ದಿಯ ಹರಿಕಾರ ಮಹಾನ್ ವ್ಯಕ್ತಿಗಳೆಂದು ಸ್ವತಃ ಮೋದಿರವರೇ ಹೊಗಳಿ ರಾಜಕೀಯ ಭಾಷಣ ಮಾಡಿದ್ದಾರೆ. ಅವರಿಬ್ಬರ ಮೇಲೆ ಅಂತಹ ಅಭಿಮಾನವಿದ್ದರೆ ಅವರು ಸ್ಥಾಪಿಸಿದ ವಿಐಎಸ್‌ಎಲ್ ಕಾರ್ಖಾನೆ ಉಳಿಸಲಿ ಎಂದು ಆಗ್ರಹಿಸಿದರು.
    ಈಗಾಗಲೇ ಕಾರ್ಖಾನೆ ಉಳಿವಿಗಾಗಿ ಬೆಂಗಳೂರಿಗೆ ಪಾದಯಾತ್ರೆ ಕೈಗೊಂಡು ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದು, ಇದೀಗ ಕಾರ್ಖಾನೆ ಸ್ಥಾಪನೆಗೆ ಕಾರಣಕರ್ತರಾಗಿರುವ ಮೈಸೂರು ಅರಸರ ಮನೆತನಕ್ಕೆ ವಿಷಯ ಮುಟ್ಟಿಸಲು ಹಾಗೂ ಕೇಂದ್ರ ಸರ್ಕಾರಕ್ಕೆ ಎಚ್ಚರಿಸಲು ಪ್ರತಿಭಟಣಾ ಧರಣಿ ಕೈಗೊಳ್ಳಲಾಗಿದೆ ಎಂದರು.

ಕಾಂಗ್ರೆಸ್ ಕಾರ್ಯಕರ್ತರಿಂದ ವಕೀಲರ ಮೇಲೆ ದೌರ್ಜನ್ಯ ಖಂಡಿಸಿ ಪ್ರತಿಭಟನೆ : ಕ್ಷಮೆಯಾಚಿಸಿದ ತಹಸೀಲ್ದಾರ್

ಭದ್ರಾವತಿ ಜೆಎಂಎಫ್‌ಸಿ ಕೋರ್ಟ್ ಮುಂಭಾಗದ ರಸ್ತೆ ಅಗಲೀಕರಣಕ್ಕೆ ವಿರೋಧಿಸಿ ಕಾಂಗ್ರೆಸ್ ಕಾರ್ಯಕರ್ತರು ವಕೀಲರ ಮೇಲೆ ದೌರ್ಜನ್ಯ ನಡೆಸಿರುವುದು ಖಂಡನೀಯ. ಅಲ್ಲದೆ ಹಿನ್ನಲೆ ಅರಿಯದ ನೂತನ ತಹಸೀಲ್ದಾರ್ ಸಹ ವಕೀಲರ ವಿರುದ್ದ ಆರೋಪಿಸಿರುವುದನ್ನು ಖಂಡಿಸಿ ನ್ಯಾಯಾಲಯದ ಕಲಾಪಗಳಿಗೆ ವಕೀಲರು ಹಾಜರಾಗದೆ ಪ್ರತಿಭಟನೆ ನಡೆಸಿದರು.
 ಭದ್ರಾವತಿ, ಮಾ. ೧೪: ನಗರದ ಜೆಎಂಎಫ್‌ಸಿ ಕೋರ್ಟ್ ಮುಂಭಾಗದ ರಸ್ತೆ ಅಗಲೀಕರಣಕ್ಕೆ ವಿರೋಧಿಸಿ ಕಾಂಗ್ರೆಸ್ ಕಾರ್ಯಕರ್ತರು ವಕೀಲರ ಮೇಲೆ ದೌರ್ಜನ್ಯ ನಡೆಸಿರುವುದು ಖಂಡನೀಯ. ಅಲ್ಲದೆ ಹಿನ್ನಲೆ ಅರಿಯದ ನೂತನ ತಹಸೀಲ್ದಾರ್ ಸಹ ವಕೀಲರ ವಿರುದ್ದ ಆರೋಪಿಸಿರುವುದನ್ನು ಖಂಡಿಸಿ ನ್ಯಾಯಾಲಯದ ಕಲಾಪಗಳಿಗೆ ವಕೀಲರು ಹಾಜರಾಗದೆ ಪ್ರತಿಭಟನೆ ನಡೆಸಿದರು.
    ವಕೀಲರ ಸಂಘ ಕಳೆದ ಸುಮಾರು ೩ ವರ್ಷಗಳಿಂದ ಕೋರ್ಟ್ ಮುಂಭಾಗ ಕಟ್ಟಡಗಳ ತೆರವುಗೊಳಿಸಿ ರಸ್ತೆ ಅಗಲೀಕರಣ ಮಾಡಬೇಕೆಂದು ಆಗ್ರಹಿಸಿ ಹೋರಾಟ ನಡೆಸುತ್ತಿದೆ.  ಆದರೆ ಶಾಸಕರ ಆದೇಶದಂತೆ ಅಧಿಕಾರಿಗಳು ಕಟ್ಟಡಗಳ ತೆರವು ಮಾಡದೆ ರಸ್ತೆ ಡಾಂಬರೀಕರಣಕ್ಕೆ ಮುಂದಾಗಿರುವುದು ಖಂಡನೀಯ ಎಂದು ಆರೋಪಿಸಿದರು.
    ಭಾನುವಾರ ರಜಾ ದಿನವಾದ ಹಿನ್ನಲೆಯಲ್ಲಿ ಯಾರು ಪ್ರಶ್ನಿಸುವುದಿಲ್ಲ ಎಂದು ಮನಗಂಡು ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಗುಂಡಿಗಳನ್ನು ಮುಚ್ಚುವ ನೆಪದಲ್ಲಿ ಡಾಂಬರೀಕರಣ ಮಾಡಲು ಬಂದಿದ್ದು ಹೇಯಕೃತ್ಯವಾಗಿದೆ. ಅಲ್ಲದೆ ವಕೀಲರ ಮೇಲೆ ದೌರ್ಜಜ್ಯವೆಸಗಲು ಬಂದ ಪುಡಾರಿಗಳ ಮೇಲೆ ಶಿಸ್ತು ಕ್ರಮಕೈಗೊಳ್ಳಬೇಕೆಂದು ಒತ್ತಾಯಿಸಿದರು.
    ಘಟನೆಯನ್ನು ಖಂಡಿಸಿ ವಕೀಲರು ನ್ಯಾಯಾಲಯದ ಕಲಾಪಗಳಿಂದ ಹೊರಗುಳಿದು ವಕೀಲರ ಸಂಘದ ಅಧ್ಯಕ್ಷ ಕೆ.ಎನ್ ಶ್ರೀಹರ್ಷ ನೇತೃತ್ವದಲ್ಲಿ ತುರ್ತು ಸಭೆ ನಡೆಸಿ ರಂಗಪ್ಪ ವೃತ್ತದಿಂದ ತಾಲೂಕು ಕಚೇರಿಗೆ ಪ್ರತಿಭಟನಾ ಮೆರವಣಿಗೆ ನಡೆಸಿದರು.
    ತಹಸೀಲ್ದಾರ್ ಸ್ಥಳಕ್ಕಾಗಮಿಸಿ ಮಾತನಾಡಿ, ಭಾನುವಾರ ನಾವು ಹಿನ್ನಲೆ ಅರಿಯದೆ ಮಾತನಾಡಿದ್ದು ತಪ್ಪಾಗಿದೆ ವಿಷಾಧಿಸುತ್ತೇನೆಂದು ಹೇಳಿದರು.
ನಂತರ ವಕೀಲರು ಶಿವಮೊಗ್ಗ ಜಿಲ್ಲಾಧಿಕಾರಿಗಳ ಕಚೇರಿಗೆ ತೆರಳಿ ಕಟ್ಟಡ ತೆರವು ಮಾಡದ ಅಧಿಕಾರಿಗಳ ವಿರುದ್ದ ಕ್ರಮಕ್ಕೆ ಒತ್ತಾಯಿಸಿದರು.
    ಪ್ರತಿಭಟನೆಯಲ್ಲಿ ವಕೀಲರ ಸಂಘದ ಪದಾಧಿಕಾರಿಗಳಾದ ವಿಶ್ವನಾಥ್, ಉದಯಕುಮಾರ್, ಮಂಜಪ್ಪ, ವಿಮಲಾ, ಹಿರಿಯ ವಕೀಲರಾದ ಬಿ.ಆರ್.ಪ್ರಭುದೇವ್, ಟಿ. ಚಂದ್ರೇಗೌಡ, ವಿ. ವೆಂಕಟೇಶ್, ಎ.ಟಿ ರವಿ, ಉಮಾಪತಿ, ಸಿದ್ದೇಶ್, ಸುಜಾತ, ಆಶಾ, ಕೆ.ಎಸ್.ಸುದೀಂದ್ರ, ಕೂಡ್ಲಿಗೆರೆ ಮಂಜುನಾಥ್ ಸೇರಿದಂತೆ ಇನ್ನಿತರ ವಕೀಲರು ಭಾಗವಹಿಸಿದ್ದರು.      

ಮಾದಕ ವಸ್ತು ಸೇವನೆ : ಪ್ರಕರಣ ದಾಖಲು


    ಭದ್ರಾವತಿ, ಮೇ. ೧೪ : ಮಾದಕ ವಸ್ತು ಸೇವಿಸಿ ಸಾರ್ವಜನಿಕ ಸ್ಥಳದಲ್ಲಿ ಅಸಭ್ಯವಾಗಿ ವರ್ತಿಸುತ್ತಿದ್ದ ವ್ಯಕ್ತಿಯೊಬ್ಬನ ವಿರುದ್ಧ ನ್ಯೂಟೌನ್ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
    ನಗರಸಭೆ ವ್ಯಾಪ್ತಿಯ ಎನ್‌ಟಿಬಿ ಬಡಾವಣೆಯ ಉದ್ಯಾನವನ ಸಮೀಪ ಖಾಲಿ ಜಾಗದಲ್ಲಿ ಮಾದಕ ವಸ್ತು ಸೇವಿಸಿ ಅವಾಚ್ಯ ಶಬ್ದಗಳಿಂದ ಸಾರ್ವಜನಿಕರ ಶಾಂತಿಗೆ ಭಂಗ ಉಂಟುಮಾಡುತ್ತಿದ್ದು, ಈ ಭಾಗದಲ್ಲಿ ಗಸ್ತಿನಲ್ಲಿದ್ದ ಠಾಣಾಧಿಕಾರಿ ರಂಗನಾಥ ಅಂತರಗಟ್ಟಿಯವರು ಆತನನ್ನು ವಶಕ್ಕೆ ಪಡೆದು ಶಿವಮೊಗ್ಗ ಮೆಗ್ಗಾನ್ ಬೋಧನಾ ಆಸ್ಪತ್ರೆಗೆ ತಪಾಸಣೆಗೆ ಕಳುಹಿಸಿದ್ದಾರೆ. ಈತ ಗಾಂಜಾ ಸೇವನೆ ಮಾಡಿರುವುದು ದೃಢಪಟ್ಟಿರುವ ಹಿನ್ನಲೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.