Sunday, June 26, 2022

ಮಾದಕ ವಸ್ತುಗಳ ಕಳ್ಳಸಾಗಣೆ : ದೇಶದ ಯುವ ಶಕ್ತಿಗೆ ಮಾರಕ

ಭದ್ರಾವತಿ ಕಾಗದನಗರದ ಆಂಗ್ಲ ಶಾಲೆಯಲ್ಲಿ ಹಮ್ಮಿಕೊಳ್ಳಲಾಗಿದ್ದ ಮಾದಕ ವ್ಯಸನ ಮತ್ತು ಕಳ್ಳ ಸಾಗಣೆ ವಿರುದ್ಧ ಜಾಗೃತಿ ಮಾಸಾಚರಣೆ ಕಾರ್ಯಕ್ರಮವನ್ನು ಪೇಪರ್‌ಟೌನ್ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್‌ಪೆಕ್ಟರ್ ಇ.ಓ ಮಂಜುನಾಥ್  ಉದ್ಘಾಟಿಸಿ ಮಾತನಾಡಿದರು.
    ಭದ್ರಾವತಿ, ಜೂ. ೨೬: ಮಾದಕ ವಸ್ತುಗಳ ಸೇವನೆಯಿಂದಾಗಿ ಸಮಾಜದಲ್ಲಿ ಕಾನೂನು ಬಾಹಿರ ಕೃತ್ಯಗಳು ಹೆಚ್ಚಾಗುತ್ತಿವೆ. ಇದರಿಂದಾಗಿ ಯುವ ಸಮೂಹ ದಾರಿ ತಪ್ಪುವಂತಾಗಿದೆ ಎಂದು ಪೇಪರ್‌ಟೌನ್ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್‌ಪೆಕ್ಟರ್ ಇ.ಓ ಮಂಜುನಾಥ್ ಆತಂಕ ವ್ಯಕ್ತಪಡಿಸಿದರು.
    ಅವರು ಕಾಗದನಗರದ ಆಂಗ್ಲ ಶಾಲೆಯಲ್ಲಿ ಹಮ್ಮಿಕೊಳ್ಳಲಾಗಿದ್ದ ಮಾದಕ ವ್ಯಸನ ಮತ್ತು ಕಳ್ಳ ಸಾಗಣೆ ವಿರುದ್ಧ ಜಾಗೃತಿ ಮಾಸಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
    ಮಾದಕ ವಸ್ತುಗಳ ಸೇವನೆ ಚಟಕ್ಕೆ ಒಳಗಾದವರನ್ನು ಗುರಿಯಾಗಿಸಿಕೊಂಡು ಕಳ್ಳ ಸಾಗಣೆದಾರರು ಅಕ್ರಮವಾಗಿ ಮಾದಕ ವಸ್ತುಗಳನ್ನು ದೇಶಕ್ಕೆ ಸಾಗಾಣೆ ಮಾಡಿಕೊಳ್ಳುವ ಮೂಲಕ ದೇಶದ ಯುವ ಶಕ್ತಿಗೆ ಮಾರಕವಾಗುತ್ತಿದ್ದಾರೆ. ಮಾದಕ ವಸ್ತುಗಳ ಬಳಕೆ ಮತ್ತು ಅವುಗಳ ಕಳ್ಳ ಸಾಗಣೆ ಜಾಗತಿಕ ಸಮಸ್ಯೆಯಾಗಿದ್ದು, ಯುವಕರು ಜಾಗೃತರಾಗಿ ಇದರ ವಿರುದ್ಧ  ಹೋರಾಟ ನಡೆಸಬೇಕೆಂದು ಕರೆ ನೀಡಿದರು.
    ಎಂಪಿಎಂ ಶಿಕ್ಷಣ ಸಂಸ್ಥೆ ಖಜಾಂಚಿ ರವಿಕುಮಾರ್ ಮಾತನಾಡಿ, ಮಾದಕ ವಸ್ತುಗಳ ಸೇವನೆಯಿಂದಾಗಿ ಯುವ ಸಮುದಾಯ ಹಲವು ಕಾಯಿಲೆಗಳಿಗೆ ತುತ್ತಾಗುವ ಜೊತೆಗೆ ಸಮಾಜದಲ್ಲಿ ದಾರಿ ತಪ್ಪುವಂತಾಗುತ್ತದೆ. ಈ ಹಿನ್ನಲೆಯಲ್ಲಿ ಎಚ್ಚರ ವಹಿಸುವ ಮೂಲಕ ಮಾದಕ ವಸ್ತುಗಳಿಂದ ದೂರವಿರಬೇಕೆಂದರು.
    ಪ್ರಾಂಶುಪಾಲ ಆರ್. ಸತೀಶ್ ಅಧ್ಯಕ್ಷತೆ ವಹಿಸಿದ್ದರು. ಉಪ ಪ್ರಾಂಶುಪಾಲ ಡಿ. ನಾಗರಾಜ್ ನಿರೂಪಿಸಿದರು. ಕಾರ್ಯಕ್ರಮದ ಅಂಗವಾಗಿ ವಿದ್ಯಾರ್ಥಿಗಳಿಗೆ ಪ್ರಬಂಧ ಹಾಗು ಚಿತ್ರಕಲಾ ಸ್ಪರ್ಧೆಗಳನ್ನು ನಡೆಸಿ ವಿಜೇತರಿಗೆ ಬಹುಮಾನಗಳನ್ನು ವಿತರಿಸಲಾಯಿತು. ಶಿಕ್ಷಕರಾದ ಹೆನ್ರಿ, ಅನುರಾಧ, ದಿವ್ಯ, ವರಲಕ್ಷ್ಮಿ ಹಾಗು ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

ಸ್ನೇಹಜೀವಿ ಬಳಗದಿಂದ ನಾಡಪ್ರಭು ಕೆಂಪೇಗೌಡರ ಜಯಂತಿ

ಪೊಲೀಸ್ ಉಮೇಶ್
    ಭದ್ರಾವತಿ, ಜೂ. ೨೬ : ಸ್ನೇಹ ಜೀವಿ ಬಳಗದ ವತಿಯಿಂದ ಪೊಲೀಸ್ ಉಮೇಶ್ ನೇತೃತ್ವದಲ್ಲಿ ನಾಡಪ್ರಭು ಕೆಂಪೇಗೌಡ ಜಯಂತಿ ಜೂ. ೨೭ರಂದು ಬೆಳಿಗ್ಗೆ ೯ ಗಂಟೆಗೆ ನಗರದ ಬಿ.ಎಚ್ ರಸ್ತೆ  ಕೆಎಸ್‌ಆರ್‌ಟಿಸಿ ಮುಖ್ಯ ಬಸ್ ನಿಲ್ದಾಣದ ಸಮೀಪದಲ್ಲಿರುವ ಆಟೋ ನಿಲ್ದಾಣದಲ್ಲಿ ಹಮ್ಮಿಕೊಳ್ಳಲಾಗಿದೆ.
    ಕೆಂಪೇಗೌಡರ ಭಾವಚಿತ್ರಕ್ಕೆ ಪುಷ್ಪನಮನದೊಂದಿಗೆ ಕಾರ್ಯಕ್ರಮ ಆರಂಭಗೊಳ್ಳಲಿದ್ದು, ಸಿಹಿ ಹಂಚಿಕೆ, ಅನ್ನಸಂತರ್ಪಣೆ ಸಹ ಏರ್ಪಡಿಸಲಾಗಿದೆ. ಕಾರ್ಯಕ್ರಮದಲ್ಲಿ ಒಕ್ಕಲಿಗ ಸಮಾಜದ ವಿವಿಧ ಸಂಘಟನೆಗಳ ಪ್ರಮುಖರು, ಸಮಾಜದ ಗಣ್ಯರು ಸೇರಿದಂತೆ ಇನ್ನಿತರರು ಉಪಸ್ಥಿತರಿರುವರು.
    ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಕಾರ್ಯಕ್ರಮ ಯಶಸ್ವಿಗೊಳಿಸುವಂತೆ ಪೊಲೀಸ್ ಉಮೇಶ್ ಕೋರಿದ್ದಾರೆ.

ಜೂ.೨೭ರಂದು ನಾಡಪ್ರಭು ಕೆಂಪೇಗೌಡರ ಜಯಂತಿ

    ಭದ್ರಾವತಿ, ಜೂ. ೨೬: ತಾಲೂಕು ಆಡಳಿತ, ತಾಲೂಕು ಪಂಚಾಯಿತಿ, ನಗರಸಭೆ ಹಾಗು ವಿವಿಧ ಸಂಘಟನೆಗಳ ವತಿಯಿಂದ ಜೂ.೨೭ರಂದು ಬೆಳಿಗ್ಗೆ ೧೧ ಗಂಟೆಗೆ ನಾಡಪ್ರಭು ಕೆಂಪೇಗೌಡ ಜಯಂತಿ ಬಸವೇಶ್ವರ ಸಭಾಭವನದಲ್ಲಿ ಹಮ್ಮಿಕೊಳ್ಳಲಾಗಿದೆ.
    ಶಾಸಕ ಬಿ.ಕೆ ಸಂಗಮೇಶ್ವರ್ ಅಧ್ಯಕ್ಷತೆ ವಹಿಸಲಿದ್ದು, ಶಿವಮೊಗ್ಗ ಗ್ರಾಮಾಂತರ ವಿಧಾನಸಭಾ ಕ್ಷೇತ್ರದ ಶಾಸಕ ಕೆ.ಬಿ ಅಶೋಕ್‌ನಾಯ್ಕ್ ಕಾರ್ಯಕ್ರಮ ಉದ್ಘಾಟಿಸುವರು. ಜಿಲ್ಲಾ ಉಸ್ತುವಾರಿ ಸಚಿವ ಕೆ.ಸಿ ನಾರಾಯಣಗೌಡ, ಗೃಹ ಸಚಿವ ಅರಗ ಜ್ಞಾನೇಂದ್ರ, ಸಂಸದ ಬಿ.ವೈ ರಾಘವೇಂದ್ರ, ಮಾಜಿ ಸಚಿವ ಕೆ.ಎಸ್ ಈಶ್ವರಪ್ಪ, ವಿಧಾನ ಪರಿಷತ್ ಸದಸ್ಯರಾದ ಆಯನೂರು ಮಂಜುನಾಥ್, ಎಸ್.ಎಲ್ ಭೋಜೇಗೌಡ, ಎಸ್. ರುದ್ರೇಗೌಡ, ಭಾರತಿ ಶೆಟ್ಟಿ, ಡಿ.ಎಸ್ ಅರುಣ್, ನಗರಸಭೆ ಅಧ್ಯಕ್ಷೆ ಗೀತಾ ರಾಜ್‌ಕುಮಾರ್, ಉಪಾಧ್ಯಕ್ಷ ಚನ್ನಪ್ಪ, ಸ್ಥಾಯಿ ಸಮಿತಿ ಅಧ್ಯಕ್ಷ ಕೆ. ಸುದೀಪ್‌ಕುಮಾರ್, ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಬಿ. ಸಿದ್ದಬಸಪ್ಪ, ತಹಸೀಲ್ದಾರ್ ಆರ್. ಪ್ರದೀಪ್, ಪೊಲೀಸ್ ಉಪಾಧೀಕ್ಷಕ ಜಿತೇಂದ್ರ ಕುಮಾರ್ ದಯಾಮ, ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಎಸ್. ರಮೇಶ್, ನಗರಸಭೆ ಪೌರಾಯುಕ್ತ ಮನುಕುಮಾರ್ ಮತ್ತು ಕ್ಷೇತ್ರ ಶಿಕ್ಷಣಾಧಿಕಾರಿ ಎ.ಕೆ ನಾಗೇಂದ್ರಪ್ಪ ಸೇರಿದಂತೆ ಇನ್ನಿತರರು ಉಪಸ್ಥಿತರಿರುವರು.
    ಕುವೆಂಪು ವಿಶ್ವ ವಿದ್ಯಾನಿಲಯದ ಪ್ರೊ. ಈ ಚಂದ್ರಶೇಖರ್ ಉಪನ್ಯಾಸ ನೀಡಲಿದ್ದಾರೆ. ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಕಾರ್ಯಕ್ರಮ ಯಶಸ್ವಿಗೊಳಿಸುವಂತೆ ತಹಸೀಲ್ದಾರ್ ಆರ್. ಪ್ರದೀಪ್ ಕೋರಿದ್ದಾರೆ.  
    ಸಾಂಸ್ಕೃತಿಕ ಕಲಾ ತಂಡಗಳೊಂದಿಗೆ ಮೆರವಣಿಗೆ :
    ನಾಡಪ್ರಭು ಕೆಂಪೇಗೌಡ ಜಯಂತಿ ಅಂಗವಾಗಿ ತಾಲೂಕು ಆಡಳಿತ, ತಾಲೂಕು ಪಂಚಾಯಿತಿ, ನಗರಸಭೆ, ತಾಲೂಕು ಒಕ್ಕಲಿಗರ ಸಂಘ, ಕೆಂಪೇಗೌಡ ಯುವಪಡೆ ಹಾಗು ಇನ್ನಿತರ ಸಂಘಟನೆಗಳ ನೇತೃತ್ವದಲ್ಲಿ ಬೆಳಿಗ್ಗೆ ೯ ಗಂಟೆಗೆ ನಗರದ ಬಿ.ಎಚ್ ರಸ್ತೆ ಅಪ್ಪರ್ ಹುತ್ತಾದಿಂದ ಸಭಾ ವೇದಿಕೆವರೆಗೂ ನಾಡಪ್ರಭು ಕೆಂಪೇಗೌಡರ ಭಾವಚಿತ್ರ ಹಾಗು ಸಾಂಸ್ಕೃತಿಕ ಕಲಾತಂಡಗಳೊಂದಿಗೆ ಬೃಹತ್ ಮೆರವಣಿಗೆ ನಡೆಯಲಿದೆ.
    ಒಕ್ಕಲಿಗರ ಸಂಘದಿಂದ ಆಚರಣೆ :
    ತಾಲೂಕು ಒಕ್ಕಲಿಗರ ಸಂಘ ದಿಂದ ಸಂಜೆ ೫.೩೦ಕ್ಕೆ  ಅಪ್ಪರ್ ಹುತ್ತಾದಲ್ಲಿರುವ ಕೆಂಪೇಗೌಡ ಸಮುದಾಯ ಭವನದಲ್ಲಿ ನಾಡಪ್ರಭು ಕೆಂಪೇಗೌಡರ ಜಯಂತಿ ನಡೆಯಲಿದೆ. ಸಂಘದ ಅಧ್ಯಕ್ಷ ಎ.ಟಿ ರವಿ ಅಧ್ಯಕ್ಷತೆ ವಹಿಸಲಿದ್ದು, ಕಾರ್ಯಕ್ರಮ ಯಶಸ್ವಿಗೊಳಿಸುವಂತೆ ಕಾರ್ಯದರ್ಶಿ ಆರ್. ಪ್ರಕಾಶ್ ಕೋರಿದ್ದಾರೆ.