Sunday, August 13, 2023

೭೬ನೇ ಸ್ವಾತಂತ್ರ್ಯ ದಿನಾಚರಣೆಗೆ ನಗರದಲ್ಲಿ ವಿಭಿನ್ನ ಕಾರ್ಯಕ್ರಮಗಳು

    ಭದ್ರಾವತಿ, ಆ. ೧೩: ಈ ಬಾರಿ ನಗರದಲ್ಲಿ ೭೬ನೇ ಸ್ವಾತಂತ್ರ್ಯ ದಿನಾಚರಣೆ ವಿಭಿನ್ನವಾಗಿ ಆಚರಿಸಲು ಸಿದ್ದತೆಗಳು ನಡೆಯುತ್ತಿದ್ದು, ಫ್ಲಾಗಥಾನ್, ಮಾಜಿ ಸೈನಿಕರಿಗೆ ಗೌರವ ಸಮರ್ಪಣೆ, ಉಚಿತ ಆರೋಗ್ಯ ತಪಾಸಣಾ ಶಿಬಿರ ಸೇರಿದಂತೆ ವಿಭಿನ್ನ ಕಾರ್ಯಕ್ರಮಗಳು ಜರುಗಲಿವೆ.  
    ಎಸ್‌ಎಇ ವಿದ್ಯಾಲಯದಿಂದ ಫ್ಲಾಗಥಾನ್ :
    ಶ್ರೀ ಆದಿಚುಂಚನಗಿರಿ ಶಿಕ್ಷಣ ಟ್ರಸ್ಟ್  ೫೦ನೇ ವರ್ಷದ ಸುವರ್ಣ ಮಹೋತ್ಸವ ಹಿನ್ನಲೆಯಲ್ಲಿ ಆ.೧೫ರ ಸ್ವಾತಂತ್ರ್ಯ ದಿನಾಚರಣೆಯಂದು ಕಾರೆಹಳ್ಳಿಯಲ್ಲಿರುವ ಎಸ್‌ಎಇ ವಿದ್ಯಾಲಯದಲ್ಲಿ ಫ್ಲಾಗಥಾನ್ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
    ೫೦೦ ಮೀಟರ್ ಬೃಹತ್ ತ್ರಿವರ್ಣ ಧ್ವಜ ಹಿಡಿದು ಶಾಲೆಯ ಆಡಳಿತ ವರ್ಗದವರು, ವಿದ್ಯಾರ್ಥಿಗಳು, ಶಿಕ್ಷಕರು, ಸಿಬ್ಬಂದಿ ವರ್ಗದವರು, ಹಳೇಯ ವಿದ್ಯಾರ್ಥಿಗಳು ಮೆರವಣಿಗೆ ನಡೆಸಲಿದ್ದಾರೆ. ಬಾರಂದೂರು ಗ್ರಾಮದಿಂದ ಬೆಳಿಗ್ಗೆ ೯ ಗಂಟೆಗೆ ಆರಂಭಗೊಳ್ಳುವ ಮೆರವಣಿಗೆ ಕೆಂಪೇಗೌಡ ನಗರ, ಕಾರೇಹಳ್ಳಿ ಹಾಗು ಬೊಮ್ಮೇನಹಳ್ಳಿ  ಮಾರ್ಗವಾಗಿ ಎಸ್‌ಎಇ ವಿದ್ಯಾಲಯ ತಲುಪಲಿದೆ.
    ಶ್ರೀ ಕ್ಷೇತ್ರ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಕಾರ್ಯದರ್ಶಿ ಶ್ರೀ ಪ್ರಸನ್ನನಾಥ ಸ್ವಾಮೀಜಿ,  ಕಾರೇಹಳ್ಳಿ ಶಾಖಾ ಮಠದ ಶ್ರೀ ವಿಶ್ವದೇವಾನಂದಪುರಿ ಸ್ವಾಮೀಜಿ, ಶ್ರೀ ಆದಿಚುಂಚನಗಿರಿ ಶಿಕ್ಷಣ ಟ್ರಸ್ಟ್ ಆಡಳಿತಾಧಿಕಾರಿ ಬಿ. ಜಗದೀಶ್, ಪೇಪರ್‌ಟೌನ್ ಪೊಲೀಸ್ ಠಾಣೆ ಉಪ ನಿರೀಕ್ಷಕಿ ಕವಿತಾ, ಕ್ಷೇತ್ರ ಶಿಕ್ಷಣಾಧಿಕಾರಿ ಎ.ಕೆ ನಾಗೇಂದ್ರಪ್ಪ ಸೇರಿದಂತೆ ಇನ್ನಿತರರು ಉಪಸ್ಥಿತರಿರುವರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಕಾರ್ಯಕ್ರಮ ಯಶಸ್ವಿಗೊಳಿಸುವಂತೆ ವಿದ್ಯಾಲಯದ ಮುಖ್ಯ ಶಿಕ್ಷಕ ರವಿಕುಮಾರ್ ಕೋರಿದ್ದಾರೆ.
    ಸಂಗೊಳ್ಳಿ ರಾಯಣ್ಣ ಯುವ ವೇದಿಕೆಯಿಂದ ಮಾಜಿ ಸೈನಿಕರಿಗೆ ಗೌರವ ಸಮರ್ಪಣೆ:
    ಕ್ರಾಂತಿವೀರ ಸಂಗೊಳ್ಳಿರಾಯಣ್ಣ ಯುವ ವೇದಿಕೆ ವತಿಯಿಂದ ಆ.೧೫ರಂದು ಸಂಗೊಳ್ಳಿರಾಯಣ್ಣ ಜನ್ಮದಿನದ ಪ್ರಯುಕ್ತ ಹಾಗೂ ೭೬ನೇ  ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಸಂಜೆ ೪ ಗಂಟೆಗೆ ಸಿದ್ಧಾರೂಢನಗರದ ಶ್ರೀ ಧರ್ಮಶ್ರೀ ಸಭಾಭವನದಲ್ಲಿ ಕುರುಬ ಸಮಾಜದ ಮಾಜಿ ಸೈನಿಕರಿಗೆ ಯೋಧರಿಗೆ ಗೌರವ ಸಮರ್ಪಣೆ, ಚುನಾಯಿತ ಪ್ರತಿನಿಧಿಗಳು, ನಗರಸಭೆ ಮತ್ತು ಗ್ರಾಮ ಪಂಚಾಯಿತಿ ಸದಸ್ಯರುಗಳಿಗೆ ಸನ್ಮಾನ ಹಾಗು ೨೦೨೨-೨೩ನೇ ಸಾಲಿನಲ್ಲಿ ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿಯಲ್ಲಿ ಶೇ.೮೫ರಷ್ಟು ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
    ಯುವ ವೇದಿಕೆ ಅಧ್ಯಕ್ಷ ಅಭಿಲಾಷ್ ಅಧ್ಯಕ್ಷತೆ ವಹಿಸಲಿದ್ದು, ಶಾಸಕ ಬಿ.ಕೆ ಸಂಗಮೇಶ್ವರ್ ಸೇರಿದಂತೆ ಇನ್ನಿತರ ಗಣ್ಯರು ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ. ಕಾರ್ಯಕ್ರಮ ಯಶಸ್ವಿಗೊಳಿಸುವಂತೆ ಕೋರಲಾಗಿದೆ.
    ಲಯನ್ಸ್ ಕ್ಲಬ್‌ನಲ್ಲಿ ಉಚಿತ ಆರೋಗ್ಯ ತಪಾಸಣೆ ಶಿಬಿರ:
    ನಗರದ ಮೀನಾ ನರ್ಸಿಂಗ್ ಹೋಂ ಮತ್ತು ಲಯನ್ಸ್ ಕ್ಲಬ್ ವತಿಯಿಂದ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಆ.೧೫ರಂದು ಉಚಿತ ಆರೋಗ್ಯ ತಪಾಸಣಾ ಶಿಬಿರ ಹಮ್ಮಿಕೊಳ್ಳಲಾಗಿದೆ.
    ಮೂತ್ರಕೋಶ ಮತ್ತು ಶ್ವಾಸಕೋಶ ತಜ್ಞ ವೈದ್ಯರು ತಪಾಸಣೆ ನಡೆಸಲಿದ್ದು, ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬಹುದಾಗಿದೆ. ವೈದ್ಯರನ್ನು ಸಂಪರ್ಕಿಸಲು ಮೊ: ೯೫೧೩೮೭೮೨೬೫ ಹಾಗು ಹೆಸರು ನೋಂದಾಯಿಸಿಕೊಳ್ಳಲು ಮೊ: ೯೭೪೧೧೩೬೩೬೦ ಸಂಖ್ಯೆಗೆ ಕರೆ ಮಾಡಬಹುದಾಗಿದೆ.

ಧರ್ಮಸ್ಥಳ, ಧರ್ಮಾಧಿಕಾರಿ ಕುರಿತು ಅವಹೇಳನ

ಜಿಲ್ಲಾ ಜನಜಾಗೃತಿ ವೇದಿಕೆ ಹೋರಾಟದ ಎಚ್ಚರಿಕೆ

    ಭದ್ರಾವತಿ, ಆ. ೧೩: ವಿದ್ಯಾರ್ಥಿನಿ ಸೌಜನ್ಯ ಅಸಹಜ ಸಾವಿನ ಪ್ರಕರಣವನ್ನು ಕೆಲವರು ದಾಳವಾಗಿಟ್ಟುಕೊಂಡು ಹಿಂದೂಗಳ ಧಾರ್ಮಿಕ ಶ್ರದ್ಧಾಕೇಂದ್ರ ಶ್ರೀ ಕ್ಷೇತ್ರ ಧರ್ಮಸ್ಥಳ ಹಾಗೂ ಧರ್ಮವೇ ಬದುಕೆಂದು ಜೀವನ ಸಾಗಿಸುತ್ತಿರುವ ಧರ್ಮಾಧಿಕಾರಿಗಳ ಕುರಿತು ಅಪಪ್ರಚಾರ ನಡೆಸುತ್ತಿರುವುದು ಸರಿಯಲ್ಲ. ಇದನ್ನು ಜಿಲ್ಲಾ ಜನಜಾಗೃತಿ ವೇದಿಕೆ ಖಂಡಿಸುತ್ತದೆ. ಅಲ್ಲದೆ ಇದೆ ರೀತಿ ಮುಂದುವರೆದ್ದಲ್ಲಿ ಉಗ್ರ ಹೋರಾಟ ನಡೆಸಬೇಕಾಗುತ್ತದೆ ಎಂದು ವೇದಿಕೆ ಸದಸ್ಯರು ಎಚ್ಚರಿಸಿದ್ದಾರೆ.
    ಶ್ರೀ ಕ್ಷೇತ್ರ ಧರ್ಮಸ್ಥಳ ಎಂದಾಗ ಭಕ್ತರ ಮನೋಮಂದಿರದಲ್ಲಿ ಶ್ರೀ ಮಂಜುನಾಥಸ್ವಾಮಿ ಪ್ರತ್ಯಕ್ಷನಾಗುತ್ತಾನೆ. ಅಂತಹ ಸ್ವಾಮಿಯ ಸನ್ನಿಧಿಯಲ್ಲಿ ಇರುವ ಧರ್ಮಾಧಿಕಾರಿಗಳು ಅಭಯ, ಅನ್ನ, ಅಕ್ಷರ, ಆರೋಗ್ಯ ಎಂಬ ಚರ್ತುದಾನಗಳಿಂದ ಜನರನ್ನು ಹಾರೈಸಿದ್ದಾರೆ. ಪ್ರಾಚೀನ ಪರಂಪರೆಯಿಂದಲೂ ಪುಣ್ಯಕಾರ್ಯಗಳೊಂದಿಗೆ ನೊಂದ ಭಕ್ತರ ಮನಸ್ಸುಗಳ ಕಣ್ಣೀರು ಒರೆಸುವ ಅವರ ಕಾಯಕ ನಿಜವಾಗಿಯೂ ಶ್ಲಾಘನೀಯ ಎಂದು ಬಣ್ಣಿಸಿದ್ದಾರೆ.
  ಪುಣ್ಯ ಕಾರ್ಯಗಳನ್ನು ಶ್ರೀ ಕ್ಷೇತ್ರ ಧರ್ಮಸ್ಥಳದ ಮೂಲಕ ಕೈಗೊಳ್ಳುತ್ತಿರುವ ಧರ್ಮಾಧಿಕಾರಿಗಳ ವಿರುದ್ಧ ಅವಹೇಳನಕಾರಿಯಾಗಿ ಮಾತನಾಡುವುದನ್ನು ದುಷ್ಟಶಕ್ತಿಗಳು ತಕ್ಷಣ ನಿಲ್ಲಿಸಬೇಕು. ಇಲ್ಲವಾದಲ್ಲಿ ಉಗ್ರ ಹೋರಾಟ ನಡೆಸುವುದಾಗಿ ವೇದಿಕೆ ಸದಸ್ಯರಾದ ಜಿ.ಆನಂದ್ ಕುಮಾರ್, ಆರ್. ಕರುಣಾಮೂರ್ತಿ, ಜಯರಾಮ್ ಗೋಂದಿ ಮತ್ತು ಪಾರ್ವತಮ್ಮ, ಸೇರಿದಂತೆ ಇನ್ನಿತರರು ಎಚ್ಚರಿಸಿದ್ದಾರೆ.

ಅರಳಿಕೊಪ್ಪ ಗ್ರಾಮ ಪಂಚಾಯಿತಿ : ಅಧ್ಯಕ್ಷೆ ಭಾಗ್ಯಮ್ಮ, ಉಪಾಧ್ಯಕ್ಷ ಸೂರ್ಯನಾಯ್ಕ

ಭದ್ರಾವತಿ ತಾಲೂಕಿನ ಅರಳಿಕೊಪ್ಪ ಗ್ರಾಮ ಪಂಚಾಯತಿ ಅಧ್ಯಕ್ಷರಾಗಿ ಭಾಗ್ಯಮ್ಮ ಮತ್ತು ಉಪಾಧ್ಯಕ್ಷರಾಗಿ ಸೂರ್ಯನಾಯ್ಕ ಆಯ್ಕೆಯಾಗಿದ್ದಾರೆ.
    ಭದ್ರಾವತಿ, ಆ. ೧೩: ತಾಲೂಕಿನ ಅರಳಿಕೊಪ್ಪ ಗ್ರಾಮ ಪಂಚಾಯತಿ ಅಧ್ಯಕ್ಷರಾಗಿ ಭಾಗ್ಯಮ್ಮ ಮತ್ತು ಉಪಾಧ್ಯಕ್ಷರಾಗಿ ಸೂರ್ಯನಾಯ್ಕ ಆಯ್ಕೆಯಾಗಿದ್ದಾರೆ.
    ಗ್ರಾಮ ಪಂಚಾಯಿತಿಯಲ್ಲಿ ಹಿಂದುಳಿದ ವರ್ಗ(ಎ) ಮಹಿಳೆ ಮೀಸಲಾತಿ ಹೊಂದಿರುವ ಅಧ್ಯಕ್ಷ ಸ್ಥಾನಕ್ಕೆ ಭಾಗ್ಯಮ್ಮ ಹಾಗು ಸಾಮಾನ್ಯ ಮೀಸಲಾತಿ ಹೊಂದಿರುವ ಉಪಾಧ್ಯಕ್ಷ ಸ್ಥಾನಕ್ಕೆ ಸೂರ್ಯನಾಯ್ಕ ಆಯ್ಕೆಯಾಗಿದ್ದಾರೆ.
    ನೂತನ ಅಧ್ಯಕ್ಷ-ಉಪಾಧ್ಯಕ್ಷರನ್ನು ಬಿಜೆಪಿ ಮುಖಂಡರಾದ ಮಂಗೋಟೆ ರುದ್ರೇಶ್, ಗೋಕುಲ್ ಕೃಷ್ಣ, ನಕುಲ್ ಹಾಗು ಗ್ರಾಮದ ಮುಖಂಡರು ಮತ್ತು ಪಂಚಾಯಿತಿ ಸದಸ್ಯರು ಅಭಿನಂದಿಸಿದ್ದಾರೆ.

ಇಸ್ಪೀಟ್‌ ಜೂಜಾಟ : ದಾಳಿ

    ಭದ್ರಾವತಿ, ಆ. ೧೩ :  ತಾಲೂಕಿನ ಬೆಳ್ಳಿಗೆರೆ ಗ್ರಾಮದ ಅರಣ್ಯ ಪ್ರದೇಶದಲ್ಲಿ ಇಸ್ಪೀಟ್‌ ಜೂಜಾಟದಲ್ಲಿ ತೊಡಗಿದ್ದ ಅಡ್ಡೆಯೊಂದರ ಮೇಲೆ ಗ್ರಾಮಾಂತರ ಠಾಣೆ ಪೊಲೀಸರು ದಾಳಿ ನಡೆಸಿರುವ ಘಟನೆ ನಡೆದಿದೆ.
    ಪಾಪಣ್ಣ ಸೇರಿದಂತೆ ೪-೫ ಜನರ ಅಡ್ಡೆಯೊಂದು ಇಸ್ಪೀಟ್‌ ಜೂಜಾಟದಲ್ಲಿ ತೊಡಗಿದ್ದು, ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿರುವ ಪೊಲೀಸರು ನ್ಯಾಯಾಲಯದ ಅನುಮತಿ ಮೇರೆಗೆ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.