Monday, July 31, 2023

ಸಮಸ್ಯೆಗಳು ಹೊಸದಲ್ಲ, ಪರಿಹಾರ ಕಂಡುಕೊಳ್ಳುವ ದಾರಿಯಲ್ಲಿ ಸಾಗಲಿ : ನಾಡೋಜ ಡಾ. ಗೊ.ರು ಚನ್ನಬಸಪ್ಪ

ಭದ್ರಾವತಿ ತಾಲೂಕು ಶರಣ ಸಾಹಿತ್ಯ ಪರಿಷತ್ ವತಿಯಿಂದ ಬಂಟರ ಸಂಘದ ಸಹಕಾರದೊಂದಿಗೆ ನ್ಯೂಟೌನ್‌ ಬಂಟರ ಭವನದಲ್ಲಿ ದತ್ತಿ ದಾನಿ  ಎಂ.ವಿರುಪಾಕ್ಷಪ್ಪ ಮತ್ತು ಕುಟುಂಬದವರು ಆಯೋಜಿಸಿದ್ದ  ಲಿಂ.ಲಕ್ಕಮ್ಮ ಮತ್ತು ಮಂಜಪ್ಪ ಸಂಸ್ಕರಣ ದತ್ತಿ ಹಾಗು ವಿಶೇಷ ಉಪನ್ಯಾಸ ಮಾಲೆ ಕಾರ್ಯಕ್ರಮ ಬಂಟರ ಸಂಘದ ಅಧ್ಯಕ್ಷ ಬಿ. ದಿವಾಕರ ಶೆಟ್ಟಿ ಉದ್ಘಾಟಿಸಿದರು.
    ಭದ್ರಾವತಿ :  ಮಹಿಳೆಯರಿಗೆ ಸಮಸ್ಯೆ ಎಂಬುದು ಹೊಸದಲ್ಲ. ಬೆಂಕಿ ಇರುವಲ್ಲಿ ಬಿಸಿ, ಮಂಜು ಇರುವಲ್ಲಿ ತಂಪು ಇರಲೇಬೇಕು. ಅದರಂತೆ ಹೆಣ್ಣು ಎಂದ ಮೇಲೆ ಸಮಸ್ಯೆಗಳು ಇದ್ದೇ ಇರುತ್ತದೆ. ಇದನ್ನು ನಾವುಗಳು ಮೊದಲು ಅರ್ಥಮಾಡಿಕೊಂಡು ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ದಾರಿಯಲ್ಲಿ ಸಾಗಬೇಕಾಗಿದೆ ಎಂದು ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ ನ ಗೌರವ ಸಲಹೆಗಾರರಾದ ನಾಡೋಜ ಡಾ.ಗೊ.ರು ಚನ್ನಬಸಪ್ಪ ಹೇಳಿದರು.
    ಅವರು ತಾಲೂಕು ಶರಣ ಸಾಹಿತ್ಯ ಪರಿಷತ್ ವತಿಯಿಂದ ಬಂಟರ ಸಂಘದ ಸಹಕಾರದೊಂದಿಗೆ ನ್ಯೂಟೌನ್‌ ಬಂಟರ ಭವನದಲ್ಲಿ ದತ್ತಿ ದಾನಿ  ಎಂ.ವಿರುಪಾಕ್ಷಪ್ಪ ಮತ್ತು ಕುಟುಂಬದವರು ಆಯೋಜಿಸಿದ್ದ  ಲಿಂ.ಲಕ್ಕಮ್ಮ ಮತ್ತು ಮಂಜಪ್ಪ ಸಂಸ್ಕರಣ ದತ್ತಿ ಹಾಗು ವಿಶೇಷ ಉಪನ್ಯಾಸ ಮಾಲೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
    ಮಹಿಳೆಯರ ಸಮಸ್ಯೆಗಳಿಗೆ ಸ್ವ ಹಿತಾಸಕ್ತಿ, ಸ್ವಾರ್ಥತೆ, ಪಟ್ಟಭದ್ರ ಹಿತಾಸಕ್ತಿ ಸೇರಿದಂತೆ ಇತರ ಸಂಗತಿಗಳು ಕಾರಣಗಳಾಗಿವೆ. ಅಲ್ಲದೆ ಈಕೆ ತಾನೇ ಹೆಣೆದುಕೊಂಡ ಬಲೆಯಲ್ಲಿ ಸಿಕ್ಕಿಹಾಕಿಕೊಂಡು ಒದ್ದಾಡುತ್ತಿದ್ದಾಳೆ. ಅದರಿಂದ ಹೊರ ಬರುವ ದಾರಿಯನ್ನು ಆಕೆಯೇ ಹುಡುಕಿಕೊಳ್ಳಬೇಕಾಗಿದೆ ಎಂದರು.
    ಮಹಿಳೆಯ ಸುತ್ತಮುತ್ತಲಿನ ಪರಿಸರದಿಂದಲೇ ಆಕೆಯ ಸಮಸ್ಯೆಗಳನ್ನು ಅರಿತುಕೊಳ್ಳಬಹುದಾಗಿದೆ. ಪ್ರತಿ ಮಹಿಳೆಯ ಸಮಸ್ಯೆ ವಿಭಿನ್ನವಾಗಿದ್ದು,  ವಿಜ್ಞಾನಿಗಳು ಸಮಾಜದಲ್ಲಿ ಮಹಿಳೆಯರ ಸಮಸ್ಯೆಗಳನ್ನು ನಾಲ್ಕು ವಿಧಗಳಾಗಿ ವಿಂಗಡಿಸಿದ್ದಾರೆ. ಪ್ರಾಕೃತಿಕ ಅಥವಾ ನೈಸರ್ಗಿಕ, ಕೌಟುಂಬಿಕ, ಸಾಮಾಜಿಕ ಮತ್ತು ಆರ್ಥಿಕ ಸಮಸ್ಯೆಗಳನ್ನು ಮಹಿಳೆ ಎದುರಿಸುತ್ತಿದ್ದಾಳೆ. ಕೆಲವು ಬಾಹ್ಯ ಆದರೆ ಇನ್ನು ಕೆಲವು ಆಂತರಿಕ ಸಮಸ್ಯೆಗಳಾಗಿವೆ. ಇವುಗಳನ್ನು ಅಕೆಯೇ ಬಗೆಹರಿಸಿಕೊಳ್ಳಬೇಕು ಎಂದರು.
    ಬಂಟರ ಸಂಘದ ಅಧ್ಯಕ್ಷ  ಬಿ. ದಿವಾಕರ ಶೆಟ್ಟಿ ಕಾರ್ಯಕ್ರ ಉದ್ಘಾಟಿಸಿದರು.  ಎನ್.ಎಸ್  ಮಲ್ಲಿಕಾರ್ಜುನ್ ಅಧ್ಯಕ್ಷತೆ ವಹಿಸಿದ್ದರು. ನಗರಸಭೆ ಅಧ್ಯಕ್ಷೆ ಶೃತಿ ವಸಂತ ಕುಮಾರ್, ಶರಣ ಸಾಹಿತ್ಯ ಪರಿಷತ್‌ ಜಿಲ್ಲಾಧ್ಯಕ್ಷ ಎಚ್.ಎನ್ ಮಹಾರುದ್ರ, ದತ್ತಿ ದಾನಿ  ಎಂ. ವಿರುಪಾಕ್ಷಪ್ಪ ವೇದಿಕೆಯಲ್ಲಿ ಉಪಸ್ಥಿತರಿದ್ದರು.      
    ಕದಳಿ ವೇದಿಕೆ ಸದಸ್ಯರುಗಳಿಂದ ವಚನ ಗಾಯನ ನಡೆಯಿತು. ವಿ. ರಾಜಶೇಖರಪ್ಪ ಸ್ವಾಗತಿಸಿದರು. ಹೊನ್ನಾಳಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ.ಬಿ.ಜಿ ಧನಂಜಯ ಪ್ರಸ್ತಾವಿಕ ನುಡಿಗಳನ್ನಾಡಿದರು.
    ಸಾಹಿತಿ ಅರಳೇಹಳ್ಳಿ ಅಣ್ಣಪ್ಪ ಅತಿಥಿಗಳ ಪರಿಚಯ ನಡೆಸಿ ಕೊಟ್ಟರು.  ನಂದಿನಿ ಮಲ್ಲಿಕಾರ್ಜುನ್ ಕಾರ್ಯಕ್ರಮ ನಿರೂಪಿಸಿ, ಕತ್ತಲಗೆರೆ ತಿಮ್ಮಪ್ಪ ವಂದಿಸಿದರು.

ವಿದ್ಯಾರ್ಥಿಗಳು ಪತ್ರಿಕೆಗಳನ್ನು ಓದುವ ಹವ್ಯಾಸ ಬೆಳೆಸಿಕೊಳ್ಳಿ : ಡಾ. ಸಿದ್ದಲಿಂಗಮೂರ್ತಿ

ಭದ್ರಾವತಿ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಹಳೇನಗರದ ಸಂಚಿಯ ಹೊನ್ನಮ್ಮ ಸರ್ಕಾರಿ ಬಾಲಕಿಯರ ಪದವಿ  ಕಾಲೇಜಿನಲ್ಲಿ ಹಮ್ಮಿಕೊಳ್ಳಲಾಗಿದ್ದ ಪತ್ರಿಕಾ ದಿನಾಚರಣೆ ಕಾರ್ಯಕ್ರಮದಲ್ಲಿ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಕೆ.ಎನ್‌ ಶ್ರೀಹರ್ಷ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
    ಭದ್ರಾವತಿ, ಜು. ೩೧ : ವಿದ್ಯಾರ್ಥಿಗಳು ಪತ್ರಿಕೆಗಳನ್ನು ಓದುವ ಹವ್ಯಾಸ ಬೆಳೆಸಿಕೊಳ್ಳಬೇಕೆಂದು ಹಳೇನಗರದ ಸಂಚಿಯ ಹೊನ್ನಮ್ಮ ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜಿ ಪ್ರಾಂಶುಪಾಲ ಡಾ. ಸಿದ್ದಲಿಂಗಮೂರ್ತಿ ಕರೆ ನೀಡಿದರು.
    ಅವರು ಸೋಮವಾರ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಕಾಲೇಜಿನಲ್ಲಿ ಹಮ್ಮಿಕೊಳ್ಳಲಾಗಿದ್ದ ಪತ್ರಿಕಾ ದಿನಾಚರಣೆ ಕಾರ್ಯಕ್ರಮದ ನೇತೃತ್ವವಹಿಸಿ ಮಾತನಾಡಿದರು.
    ಸಮಾಜದ ಸ್ವಾಸ್ಥ್ಯ ಕಾಪಾಡುವಲ್ಲಿ ಪತ್ರಿಕೆಗಳ ಪಾತ್ರ ಬಹಳ ಮುಖ್ಯವಾಗಿದೆ.  ಇಂದು ದೃಶ್ಯ ಮಾಧ್ಯಮಗಳಿಗೆ ಜನರು ಜೋತು ಬಿದ್ದಿದ್ದು, ಈ ನಡುವೆಯೂ ಪತ್ರಿಕೆಗಳು ತಮ್ಮ ಜವಾಬ್ದಾರಿಗಳನ್ನು ಅರಿತು ಕರ್ತವ್ಯ ನಿರ್ವಹಿಸುತ್ತಿವೆ. ಯಾವುದೇ ಸ್ವಾರ್ಥವಿಲ್ಲದೆ ಸಮಾಜದ ಸ್ವಾಸ್ಥ್ಯಕ್ಕಾಗಿ  ಪತ್ರಕರ್ತರು ಇದನ್ನು ನಾವೆಲ್ಲರೂ ಅರ್ಥಮಾಡಿಕೊಳ್ಳಬೇಕು. ವಿದ್ಯಾರ್ಥಿಗಳು ಪ್ರತಿದಿನ ಪತ್ರಿಕೆಗಳನ್ನು ಓದುವ ಮೂಲಕ ಸಮಾಜದ ಎಲ್ಲಾ ವಿಚಾರಗಳ ಕುರಿತು ಅರಿವು ಹೊಂದಬೇಕೆಂದರು.
    ಪತ್ರಿಕಾಭವನ ಟ್ರಸ್ಟ್‌ ಅಧ್ಯಕ್ಷ ಕಣ್ಣಪ್ಪ, ಹಿರಿಯ ಪತ್ರಕರ್ತ ಎನ್. ಬಾಬು, ಜಿಲ್ಲಾ ಸಂಘದ ಪ್ರಮುಖರಾದ ಪ್ರಧಾನ ಕಾರ್ಯದರ್ಶಿ ಅರುಣ್‌, ಆರ್.ಎಸ್‌ ಹಾಲಪ್ಪ ಸೇರಿದಂತೆ ಇನ್ನಿತರರು ಮಾತನಾಡಿ, ಇಂದು ವಿದ್ಯಾರ್ಥಿಗಳು ಸಾಮಾಜಿಕ ಜಾಲತಾಣಗಳಿಗೆ ನೀಡುವಷ್ಟು ಮಹತ್ವ ಪತ್ರಿಕೆಗಳಿಗೂ ನೀಡಬೇಕು. ಆ ಮೂಲಕ ತಮ್ಮ ಭವಿಷ್ಯಕ್ಕೆ ಸಹಕಾರಿಯಾಗಿರುವ ವಿಚಾರಗಳನ್ನು ಅರಿತುಕೊಳ್ಳಬೇಕೆಂದರು.
    ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಕೆ.ಎನ್‌ ಶ್ರೀಹರ್ಷ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
    ಪತ್ರಿಕಾ ದಿನಾಚರಣೆ ಅಂಗವಾಗಿ ಕಾಲೇಜಿನ ವಿದ್ಯಾರ್ಥಿನಿಯರಿಗೆ ಹಮ್ಮಿಕೊಳ್ಳಲಾಗಿದ್ದ ಚರ್ಚಾಸ್ಪರ್ಧೆಯಲ್ಲಿ ವಿಜೇತರಾದ ಮಾಯಾವತಿ, ಕೃಪಾಶ್ರೀ, ಆರ್. ಮೇಘನಾ, ಸುಚಿತ್ರ ಹಾಗು ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದ ಎಚ್‌.ಎಸ್‌ ರಚನಾ, ಎಸ್. ದೀಕ್ಷಿತಾ, ಓ. ಪೂಜಾ ಮತ್ತು ಎಚ್.ಎಸ್‌ ಸಂಜನಾ ಅವರಿಗೆ ಪ್ರಶಸ್ತಿ ಪತ್ರಗಳನ್ನು ವಿತರಿಸಲಾಯಿತು.
    ಸಂಘದ ಪ್ರಧಾನ ಕಾರ್ಯದರ್ಶಿ ಬಸವರಾಜ್‌ ಸ್ವಾಗತಿಸಿದರು. ಕಾಲೇಜಿನ ಚನ್ನಯ್ಯ ಕಾರ್ಯಕ್ರಮ ನಿರೂಪಿಸಿದರು. ಉಪಾಧ್ಯಕ್ಷ ಕೂಡ್ಲಿಗೆರೆ ಮಂಜುನಾಥ್‌ ಪ್ರಾಸ್ತಾವಿಕ ನುಡಿಗಳನ್ನಾಡಿದರು, ಖಜಾಂಚಿ ಅನಂತಕುಮಾರ್‌ ವಂದಿಸಿದರು.
    ಸಂಘದ ಹಿರಿಯ ಹಾಗು ಕಿರಿಯ ಸದಸ್ಯರು, ಕಾಲೇಜಿನ ಬೋಧಕ ಹಾಗು ಬೋಧಕೇತರ ಸಿಬ್ಬಂದಿಗಳು ಹಾಗು ವಿದ್ಯಾರ್ಥಿನಿಯರು ಪಾಲ್ಗೊಂಡಿದ್ದರು.