Tuesday, September 21, 2021

ಮಾಜಿ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿಗೆ ಅದ್ದೂರಿ ಸ್ವಾಗತ

ಭದ್ರಾವತಿಗೆ ಮಂಗಳವಾರ ಆಗಮಿಸಿದ ಮಾಜಿ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಅವರನ್ನು ಸನ್ಮಾನಿಸಿ ಸ್ವಾಗತಿಸಲಾಯಿತು.
    ಭದ್ರಾವತಿ, ಸೆ. ೨೧: ಮಾಜಿ ಶಾಸಕ ಎಂ.ಜೆ ಅಪ್ಪಾಜಿ ಅವರ ಮೊದಲ ವರ್ಷದ ಪುಣ್ಯಸ್ಮರಣೆ, ಶಕ್ತಿಧಾಮ ಉದ್ಘಾಟನೆ ಹಾಗು ಪ್ರತಿಮೆ ಅನಾವರಣ ಕಾರ್ಯಕ್ರಮ ನಿಮಿತ್ತ ಮಂಗಳವಾರ ನಗರಕ್ಕೆ ಆಗಮಿಸಿದ ಮಾಜಿ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿಗೆ ಅದ್ದೂರಿ ಸ್ವಾಗತ ಕೋರಲಾಯಿತು.
    ಜೆಡಿಎಸ್ ಪಕ್ಷದ ಮುಖಂಡರು, ಕಾರ್ಯಕರ್ತರು, ಅಭಿಮಾನಿಗಳು ಕುಮಾರಸ್ವಾಮಿಯವರು ನಗರಕ್ಕೆ ಆಗಮಿಸುತ್ತಿದ್ದಂತೆ ಘೋಷಣೆಗಳನ್ನು ಕೂಗಿ ಜೈಕಾರ ಹಾಕುವ ಮೂಲಕ ಪಟಾಕಿ ಸಿಡಿಸಿ ಸಂಭ್ರಮಿಸಿದರು.
    ನಗರಸಭಾ ಸದಸ್ಯೆ ವಿಜಯ ಹಾಗು ಜೆಡಿಎಸ್ ಯುವ ಘಟಕದ ರಾಜ್ಯ ಪ್ರಧಾನ ಕಾರ್ಯದರ್ಶಿ ಮಧುಕುಮಾರ್ ನೇತೃತ್ವದಲ್ಲಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿ ಕುಮಾರಸ್ವಾಮಿ ಅವರನ್ನು ಸನ್ಮಾನಿಸಲಾಯಿತು.


ಕಬಡ್ಡಿ ತರಬೇತಿದಾರ ಚಿನ್ನರಾಜು ನಿಧನ

ಚಿನ್ನರಾಜು
    ಭದ್ರಾವತಿ, ಸೆ. ೨೧: ನಗರದ ಬುಳ್ಳಾಪುರ ನಿವಾಸಿ, ಕಬಡ್ಡಿ ತರಬೇತಿದಾರ ಚಿನ್ನರಾಜು(೫೫) ಹೃದಯಾಘಾತದಿಂದ ಮಂಗಳವಾರ ನಿಧನ ಹೊಂದಿದರು.
    ಪತ್ನಿ, ಇಬ್ಬರು ಹೆಣ್ಣು ಮಕ್ಕಳನ್ನು ಹೊಂದಿದ್ದರು. ಫೆ.೨೭ ಮತ್ತು ೨೮ರಂದು ಹಳೇನಗರದ ಕನಕಮಂಟಪ ಮೈದಾನದಲ್ಲಿ ಆಯೋಜಿಸಲಾಗಿದ್ದ ತಾಲೂಕು ಮಟ್ಟದ ಹೊನಲು ಬೆಳಕಿನ ಪ್ರೊ. ಕಬಡ್ಡಿ(ಮಾಟ್) ಪಂದ್ಯಾವಳಿಯಲ್ಲಿ ಸ್ನೇಹಜೀವಿ ಬಳಗದ ತಂಡ ಮೊದಲ ಬಹುಮಾನ ಪಡೆದುಕೊಳ್ಳಲು ಕಾರಣಕರ್ತರಾಗಿದ್ದರು.
    ಇವರ ನಿಧನಕ್ಕೆ ಸ್ನೇಹ ಬಳಗದ ಪೊಲೀಸ್ ಉಮೇಶ್, ಕರ್ನಾಟಕ ರಾಜ್ಯ ಅಮೆಚೂರ್ ಅಸೋಸಿಯೇಷನ್ ಹಾಗು ಕಬಡ್ಡಿ ಕ್ರೀಡಾಪಟುಗಳು ಮತ್ತು ಇನ್ನಿತರ ಗಣ್ಯರು ಸಂತಾಪ ಸೂಚಿಸಿದ್ದಾರೆ.

ಅಪ್ಪಾಜಿ ಆದರ್ಶತನ ಇಂದಿನ ರಾಜಕಾರಣಿಗಳಿಗೆ ಅವಶ್ಯಕ : ಎಚ್.ಡಿ ಕುಮಾರಸ್ವಾಮಿ

ಭದ್ರಾವತಿ ತಾಲೂಕಿನ ಗೋಣಿಬೀಡು ಗ್ರಾಮದಲ್ಲಿ ಮಾಜಿ ಶಾಸಕ ಎಂ.ಜೆ ಅಪ್ಪಾಜಿ ಅವರ ಮೊದಲ ವರ್ಷದ ಪುಣ್ಯಸ್ಮರಣೆ, ಶಕ್ತಿಧಾಮ ಉದ್ಘಾಟನೆ ಹಾಗು ಪ್ರತಿಮೆ ಅನಾವರಣ ಕಾರ್ಯಕ್ರಮವನ್ನು ಮಾಜಿ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಉದ್ಘಾಟಿಸಿ ಮಾತನಾಡಿದರು.    
    ಭದ್ರಾವತಿ, ಸೆ. ೨೧: ಮಾಜಿ ಶಾಸಕರಾದ ದಿವಂಗತ ಎಂ.ಜೆ ಅಪ್ಪಾಜಿ ಅವರು ನೇರ ನುಡಿ ವ್ಯಕ್ತಿತ್ವದ ಧೀಮಂತ ರಾಜಕಾರಣಿಯಾಗಿದ್ದು, ನಾಡಿನ ಸಜ್ಜನ ರಾಜಕಾರಣಿಗಳಲ್ಲಿ ಒಬ್ಬರಾಗಿ ನಮ್ಮಿಂದ ಕಣ್ಮರೆಯಾಗಿರುವುದು ನೋವುಂಟು ಮಾಡಿದೆ. ಇಂತಹ ನಾಯಕನ ಆದರ್ಶತನ ಇಂದಿನ ರಾಜಕಾರಣಿಗಳಿಗೆ ಮಾದರಿಯಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಬಣ್ಣಿಸಿದರು.
    ಅವರು ಮಂಗಳವಾರ ತಾಲೂಕಿನ ಗೋಣಿಬೀಡು ಗ್ರಾಮದಲ್ಲಿ ಮಾಜಿ ಶಾಸಕ ಎಂ.ಜೆ ಅಪ್ಪಾಜಿ ಅವರ ಮೊದಲ ವರ್ಷದ ಪುಣ್ಯಸ್ಮರಣೆ, ಶಕ್ತಿಧಾಮ ಉದ್ಘಾಟನೆ ಹಾಗು ಪ್ರತಿಮೆ ಅನಾವರಣ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಅಪ್ಪಾಜಿಯವರು ಹಿರಿಯ ರಾಜಕಾರಣಿಯಾಗಿದ್ದು, ದೇವೇಗೌಡರ ಅಭಿಮಾನಿಯಾಗಿ, ಜೆಡಿಎಸ್ ಪಕ್ಷದ ಒಬ್ಬ ಸಾಮಾನ್ಯ ಕಾರ್ಯಕರ್ತನಾಗಿ ನಂತರ ಶಾಸಕರಾಗಿ ಆಯ್ಕೆಯಾದವರು. ಅವರು ಶ್ರೀಮಂತ ಕುಟುಂಬದಿಂದ ಬಂದವರಲ್ಲ. ಹಣ ಸಂಪಾದನೆಗಾಗಿ ರಾಜಕಾರಣ ಮಾಡಲಿಲ್ಲ. ಬದಲಿಗೆ ಬಡವರ ಧ್ವನಿಯಾಗಿ ನಿಂತವರು. ಅವರು ನಮ್ಮಿಂದ ದೂರವಾಗಿ ೧ ವರ್ಷ ಕಳೆದರೂ ಸಹ ಕ್ಷೇತ್ರದಲ್ಲಿ ಅವರ ಮೇಲಿನ ಅಭಿಮಾನ ಕಡಿಮೆಯಾಗಿಲ್ಲದಿರುವುದು ಅಪ್ಪಾಜಿಯವರು ಕ್ಷೇತ್ರಕ್ಕೆ ಸಲ್ಲಿಸಿರುವ ಸೇವೆಗೆ ಸಾಕ್ಷಿಯಾಗಿದೆ ಎಂದರು.
    ಎಚ್.ಡಿ ದೇವೇಗೌಡರವರು ದೇಶದ ಪ್ರಧಾನಿಯಾಗಿದ್ದಾಗ ವಿಐಎಸ್‌ಎಲ್ ಕಾರ್ಖಾನೆಯನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಅಪ್ಪಾಜಿ ಅವರು ನಡೆಸಿದ ಪ್ರಯತ್ನ ಎಲ್ಲರಿಗೂ ತಿಳಿದಿರುವ ವಿಚಾರವಾಗಿದೆ. ಅಲ್ಲದೆ ಕ್ಷೇತ್ರದಲ್ಲಿ ಹಲವಾರು ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳುವ ಮೂಲಕ ಜನಮೆಚ್ಚಿದ ನಾಯಕರಾಗಿದ್ದಾರೆ. ಇಂತಹ ನಾಯಕನಿಗೆ ಗೌರವ ನೀಡುವ ನಿಟ್ಟಿನಲ್ಲಿ ನಗರದ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣಕ್ಕೆ ಸರ್ಕಾರ ಅಪ್ಪಾಜಿ ಹೆಸರನ್ನು ನಾಮಕರಣಗೊಳಿಸಬೇಕೆಂದು ಆಗ್ರಹಿಸಿದರು.
      ೨೦೨೩ರಲ್ಲಿ ರಾಜ್ಯದಲ್ಲಿ ಜೆಡಿಎಸ್ ಸರ್ಕಾರ :
    ಜೆಡಿಎಸ್ ಬಲವರ್ಧನೆಗೆ ಅಂದು ಭದ್ರಾವತಿ ನಗರದಲ್ಲಿ ಎಚ್.ಡಿ ದೇವೇಗೌಡರು, ವೀರೇಂದ್ರ ಪಾಟೀಲ್ ಹಾಗು ಸಿಂ.ಎಂ ಇಬ್ರಾಹಿಂ ಸೇರಿದಂತೆ ಹಿರಿಯರು ಕೈಗೊಂಡ ಸಂಕಲ್ಪದಿಂದಾಗಿ ದೇವೇಗೌಡರು ಈ ದೇಶದ ಪ್ರಧಾನಿಯಾಗಲು ನಾಂದಿಯಾಯಿತು. ಇಂತಹ ನೆಲದಲ್ಲಿ ಇದೀಗ ಮತ್ತೊಮ್ಮೆ ರಾಜಕೀಯದ ಹೊಸ ಇತಿಹಾಸ ನಿರ್ಮಾಣವಾಗಲಿದೆ. ಸಮ್ಮಿಶ್ರ ಸರ್ಕಾರದ ಮೂಲಕ ರಾಜ್ಯದ ಅಭಿವೃದ್ಧಿ, ಜನರಿಗೆ ನೀಡಿರುವ ಭರವಸೆಗಳನ್ನು ಈಡೇರಿಸಲು ಸಾಧ್ಯವಿಲ್ಲ. ಜೆಡಿಎಸ್ ಪಕ್ಷಕ್ಕೆ ಜನರ ಬೆಂಬಲವಿದೆ. ಪಕ್ಷವನ್ನು ಮುಳುಗಿಸಲು ಯಾರಿಂದಲೂ ಸಾಧ್ಯವಿಲ್ಲ. ರಾಜ್ಯದಲ್ಲಿ ೨೦೨೩ರಲ್ಲಿ ಜೆಡಿಎಸ್ ಸರ್ಕಾರ ಅಸ್ತಿತ್ವಕ್ಕೆ ಬರುವ ವಿಶ್ವಾಸ ನನಗಿದೆ ಎಂದರು.
    ಶಾರದ ಅಪ್ಪಾಜಿ ಬೆಂಬಲಿಸಿ :
    ಮಾಜಿ ಶಾಸಕರಾದ ಎಂ.ಜೆ ಅಪ್ಪಾಜಿ ಅವರ ಸ್ಥಾನ ತುಂಬಲು ಮುಂದಿನ ವಿಧಾನಸಭಾ ಚುನಾವಣೆಗೆ ಅವರ ಪತ್ನಿ ಶಾರದ ಅಪ್ಪಾಜಿ ಅವರನ್ನು ಎಲ್ಲರೂ ಬೆಂಬಲಿಸಬೇಕು. ಈ ನಿಟ್ಟಿನಲ್ಲಿ ರಾಜ್ಯಮಟ್ಟದಲ್ಲಿ ಜೆಡಿಎಸ್ ಬಲವರ್ಧನೆಗೆ ಕ್ಷೇತ್ರದ ಮತದಾರರು ಕಾರಣಕರ್ತರಾಗಬೇಕೆಂದು ಮನವಿ ಮಾಡಿದರು.
    ಅಕ್ಟೋಬರ್ ೨ರಂದು ರಾಜಕೀಯ ಪ್ರವೇಶ:
    ಶಾರದ ಅಪ್ಪಾಜಿ ಮಾತನಾಡಿ, ಜನರ ಅಪೇಕ್ಷೆಯಂತೆ ಅಪ್ಪಾಜಿ ಅವರ ಸ್ಥಾನ ತುಂಬಲು ನಾನು ಸಿದ್ದವಾಗಿದ್ದೇನೆ. ನಾನು ಯಾರಿಗೂ ಹೆದರಬೇಕಾದ ಅವಶ್ಯಕತೆ ಇಲ್ಲ. ಪಕ್ಷದ ಮುಖಂಡರು, ಕಾರ್ಯಕರ್ತರು, ಅಭಿಮಾನಿಗಳು, ಮುಖ್ಯವಾಗಿ ಕ್ಷೇತ್ರದ ಮತದಾರರು ನನ್ನ ಪರವಾಗಿದ್ದಾರೆ. ಈ ಹಿನ್ನಲೆಯಲ್ಲಿ ಅಕ್ಟೋಬರ್ ೨ ರಂದು ಗಾಂಧಿ ಜಯಂತಿಯಂದು ಗಾಂಧಿ ಪ್ರತಿಮೆಗೆ ಮಾಲಾರ್ಪಣೆ ಮಾಡುವ ಮೂಲಕ ನನ್ನ ರಾಜಕೀಯ ಜೀವನ ಆರಂಭಿಸುವುದಾಗಿ ಘೋಷಿಸಿದರು.
    ಮಾಜಿ ಕೇಂದ್ರ ಸಚಿವ ಸಿ.ಎಂ. ಇಬ್ರಾಹಿಂ,  ಕಡೂರು ಮಾಜಿ ಶಾಸಕ ವೈಎಸ್‌ವಿ ದತ್ತ, ಜೆಡಿಎಸ್ ಮುಖಂಡ ಎಂ. ಶ್ರೀಕಾಂತ್, ಅಪ್ಪಾಜಿ ಪತ್ನಿ ಶಾರದ ಅಪ್ಪಾಜಿ, ಪುತ್ರ ಎಂ.ಎ ಅಜಿತ್ ಮತ್ತು ಜೆಡಿಎಸ್ ತಾಲೂಕು ಅಧ್ಯಕ್ಷ ಆರ್. ಕರುಣಾಮೂರ್ತಿ ಸೇರಿದಂತೆ ವಿವಿಧ ರಾಜಕೀಯ ಪಕ್ಷಗಳ ಪ್ರಮುಖರು, ವಿವಿಧ ಸಂಘ-ಸಂಸ್ಥೆಗಳ ಅಧ್ಯಕ್ಷರು, ಪದಾಧಿಕಾರಿಗಳು, ಗಣ್ಯರು ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.

ಮಾಜಿ ಶಾಸಕ ಎಂ.ಜೆ ಅಪ್ಪಾಜಿ ಮೊದಲ ವರ್ಷದ ಪುಣ್ಯಸ್ಮರಣೆ, ಶಕ್ತಿಧಾಮ ಹಾಗು ಪ್ರತಿಮೆ ಅನಾವರಣ


ಭದ್ರಾವತಿ, ಸೆ. 21:  ಮಾಜಿ ಶಾಸಕ ಎಂ.ಜೆ ಅಪ್ಪಾಜಿ ಅವರ ಮೊದಲ ವರ್ಷದ ಪುಣ್ಯಸ್ಮರಣೆ, ಶಕ್ತಿಧಾಮ ಹಾಗು ಪ್ರತಿಮೆ ಅನಾವರಣ ಸಮಾರಂಭ ಮಂಗಳವಾರ ತಾಲೂಕಿನ ಗೋಣಿಬೀಡಿನ ಶಾಲಾ ಆವರಣದಲ್ಲಿ ನಡೆಯಿತು.

ಮಾಜಿ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಶಕ್ತಿಧಾಮ ಹಾಗು ಪ್ರತಿಮೆ ಅನಾವರಣ ನೆರವೇರಿಸಿದರು.  ಶ್ರೀ ಆದಿಚುಂಚನಗಿರಿ ಮಹಾ ಸಂಸ್ಥಾನ ಮಠದ ಕಾರ್ಯದರ್ಶಿಗಳಾದ ಶ್ರೀ ಪ್ರಸನ್ನನಾಥ ಸ್ವಾಮೀಜಿ, ಶಿವಮೊಗ್ಗ ಬಸವ ಕೇಂದ್ರದ  ಶ್ರೀ ಡಾ. ಬಸವ ಮರುಳಸಿದ್ದ ಸ್ವಾಮೀಜಿ, ಕನಕ ಗುರುಪೀಠ ಹೊಸದುರ್ಗ ಶಾಖೆಯ ಶ್ರೀ ಈಶ್ವರಾನಂದ ಸ್ವಾಮೀಜಿ, ಚಿತ್ರದುರ್ಗ ಛಲವಾದಿ ಜಗದ್ಗುರು ಪೀಠದ ಶ್ರೀ ಬಸವನಾಗಿದೇವ ಶರಣರು, ಚಿತ್ರದುರ್ಗ ಬಂಜಾರ ಪೀಠದ ಶ್ರೀ ಸರ್ದಾರ್ ಸೇವಾಲಾಲ್ ಸ್ವಾಮೀಜಿ, ಹರಿಹರ ರಾಜನಹಳ್ಳಿ ವಾಲ್ಮೀಕಿ ಗುರುಪೀಠದ ಶ್ರೀ ಮಹರ್ಷಿ ವಾಲ್ಮೀಕಿ ಪ್ರಸನ್ನಾನಂದ ಸ್ವಾಮೀಜಿ, ಹಿರಿಯೂರು ಕೋಡಿಹಳ್ಳಿ ಬೃಹನ್ಮಠ ಮಾದಾರ ಪೀಠದ ಶ್ರೀ ಆದಿಜಾಂಭವ ಮಾರ್ಕಾಂಡಮುನಿ ಸ್ವಾಮೀಜಿ, ಅರಕೆರೆ ವಿರಕ್ತಮಠದ ಶ್ರೀ ಕರಿಸಿದ್ದೇಶ್ವರ ಸ್ವಾಮೀಜಿ, ಶ್ರೀ ಕ್ಷೇತ್ರ ಭದ್ರಗಿರಿಯ ಶ್ರೀ ಮುರುಗೇಶ್ ಸ್ವಾಮೀಜಿ, ಸಿಎಸ್‌ಐ ವೇನ್ಸ್ ಮೆಮೋರಿಯಲ್ ಚರ್ಚ್‌ನ ಶಿವಮೊಗ್ಗ ವಲಯಾಧ್ಯಕ್ಷ ರೆವರೆಂಡ್ ಜಿ. ಸ್ಟ್ಯಾನ್ಲಿ ಮತ್ತು ಶಿವಮೊಗ್ಗ ದಾರುಲ್ ಇ-ಹಸನ್ ಮದರಸ ಪ್ರಿನ್ಸಿಪಾಲ್ ಶ್ರೀ ಮೌಲಾನ ಶಾಹುಲ್ ಹಮೀದ್ ಉಪಸ್ಥಿತರಿದ್ದರು..

 ಮಾಜಿ ಕೇಂದ್ರ ಸಚಿವ ಸಿ.ಎಂ. ಇಬ್ರಾಹಿಂ,  ಕಡೂರು ಮಾಜಿ ಶಾಸಕ ವೈಎಸ್‌ವಿ ದತ್ತ, ಜೆಡಿಎಸ್ ಮುಖಂಡ ಎಂ. ಶ್ರೀಕಾಂತ್ ಮತ್ತು ಜೆಡಿಎಸ್ ತಾಲೂಕು ಅಧ್ಯಕ್ಷ ಆರ್. ಕರುಣಾಮೂರ್ತಿ ಸೇರಿದಂತೆ ವಿವಿಧ ರಾಜಕೀಯ ಪಕ್ಷಗಳ ಪ್ರಮುಖರು, ವಿವಿಧ ಸಂಘ-ಸಂಸ್ಥೆಗಳ ಅಧ್ಯಕ್ಷರು, ಪದಾಧಿಕಾರಿಗಳು, ಗಣ್ಯರು ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.