Sunday, June 14, 2020

ರೈಲ್ವೆ ಮೇಲ್ಸೇತುವೆ ಮೇಲೆ ವೀರ ಸಾವರ್ಕರ್ ಹೆಸರು : ಬಜರಂಗ ದಳ ಕಾರ್ಯಕರ್ತರ ಒತ್ತಾಯ

ಭದ್ರಾವತಿ ತರೀಕೆರೆ ರಸ್ತೆಯಲ್ಲಿರುವ ರೈಲ್ವೆ ಮೇಲ್ಸೇತುವೆ ಮೇಲೆ ಬಜರಂಗದಳ ಕಾರ್ಯಕರ್ತರು ವೀರಸಾವರ್ಕರ್ ಹೆಸರು ಬರೆಯುವ ಮೂಲಕ ಸೇತುವೆಗೆ ನಾಮಕರಣಗೊಳಿಸಲು ಒತ್ತಾಯಿಸಿರುವುದು. 
ಭದ್ರಾವತಿ, ಜೂ. ೧೪: ನಗರದ ತರೀಕೆರೆ ರಸ್ತೆಯಲ್ಲಿ ಕೆಲವು ವರ್ಷಗಳ ಹಿಂದೆ ನಿರ್ಮಾಣಗೊಂಡಿರುವ ರೈಲ್ವೆ ಮೇಲ್ಸೇತುವೆಗೆ ಇದೀಗ ವೀರ ಸಾವರ್ಕರ್ ಹೆಸರಿಡಬೇಕೆಂದು ಸೇತುವೆ ಮೇಲೆ ಹೆಸರು ಬರೆಯಲಾಗಿದ್ದು, ಬಜರಂಗ ದಳ ಕಾರ್ಯಕರ್ತರು ಸಾಮಾಜಿಕ ಜಾಲತಾಣಗಳಲ್ಲಿ ಈ ಕುರಿತು ಹಂಚಿ ಕೊಂಡಿದ್ದಾರೆ. 
ಈಗಾಗಲೇ ರಾಜ್ಯದೆಲ್ಲೆಡೆ ವೀರ ಸಾವರ್ಕರ್ ಹೆಸರಿಡುವ ಸಂಬಂಧ ವಿವಾದಗಳು ತಲೆ ತೋರುತ್ತಿದ್ದು, ಈ ನಡುವೆ ಇಲ್ಲಿನ ರೈಲ್ವೆ ಮೇಲ್ಸೇತುವೆ ಮೇಲೆ ವೀರ ಸಾವರ್ಕರ್ ಹೆಸರು ಬರೆಯುವ ಮೂಲಕ ಮತ್ತಷ್ಟು ವಿವಾದ ಸೃಷ್ಟಿಯಾಗಿದೆ. ಈ ಸೇತುವೆ ಇದುವರೆಗೂ ಉದ್ಘಾಟಣೆಗೊಂಡಿಲ್ಲ. ಯಾವುದೇ ಹೆಸರನ್ನು ಸಹ ನಾಮಕರಣ ಮಾಡಿಲ್ಲ. 
ಮಹಾತ್ಮಗಾಂಧಿ ವೃತ್ತದಿಂದ ಶಿವಾನಿ ವೃತ್ತದವರೆಗೂ ತರೀಕೆರೆ ರಸ್ತೆ ಬದಲಾಗಿ ಮಹಾತ್ಮ ಗಾಂಧಿ ರಸ್ತೆ ಎಂದು ನಾಮಕರಣ ಮಾಡಬೇಕೆಂದು ನಗರಸಭೆಗೆ ಒತ್ತಾಯಿಸಲಾಗಿತ್ತು. ಆದರೆ ಈ ಹೆಸರು ಇಂದಿಗೂ ಚಾಲ್ತಿಗೆ ಬಂದಿಲ್ಲ. ಇದೀಗ ಸೇತುವೆಗೆ ವೀರ ಸಾವರ್ಕರ್ ಹೆಸರಿಡಬೇಕೆಂದು ಬಜರಂಗದಳ ಕಾರ್ಯಕರ್ತರು ಒತ್ತಾಯಿಸುತ್ತಿರುವುದು ನಗರದಲ್ಲಿ ವಿವಾದಕ್ಕೆ ಎಡೆ ಮಾಡಿಕೊಡುತ್ತಿದೆ. 

ಪುನಃ ಹೆಚ್ಚಾದ ಬೀದಿ ನಾಯಿಗಳ ಹಾವಳಿ : ೭ ಕುರಿ ಬಲಿ

ಭದ್ರಾವತಿ ನಗರಸಭೆ ವ್ಯಾಪ್ತಿಯ ೩೩ನೇ ವಾರ್ಡಿನ ಹುತ್ತಾಕಾಲೋನಿ ಮನೆಯೊಂದಕ್ಕೆ ೫-೬ ನಾಯಿಗಳು ನುಗ್ಗಿ ಕುರಿಗಳ ಮೇಲೆ ದಾಳಿ ನಡೆಸಿದ್ದು, ೭ ಕುರಿಗಳು ಮೃತಪಟ್ಟಿದ್ದು, ೪ ಗಾಯಗೊಂಡಿವೆ. 
ಭದ್ರಾವತಿ, ಜೂ. ೧೪: ಕೆಲವು ತಿಂಗಳುಗಳಿಂದ ನಗರಸಭಾ ವ್ಯಾಪ್ತಿಯಲ್ಲಿ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿದ್ದು, ರಾತ್ರಿ ವೇಳೆ ಮಕ್ಕಳು, ಮಹಿಳೆಯರು ಒಬ್ಬಂಟಿಯಾಗಿ ತಿರುಗಾಡಲು ಭಯಪಡುವ ವಾತಾವರಣ ನಿರ್ಮಾಣವಾಗಿದೆ. 
ನಗರಸಭಾ ವ್ಯಾಪ್ತಿಯ ಕೆಲವು ಭಾಗಗಳಲ್ಲಿ ಸುಮಾರು ೧೦-೧೫ ಬೀದಿ ನಾಯಿಗಳು ಒಂದೆಡೆ ಸೇರಿಕೊಳ್ಳುತ್ತಿರುವುದು ಕಂಡು ಬರುತ್ತಿದೆ. ಬೆಳಗಿನ ಜಾವ, ರಾತ್ರಿ ವೇಳೆ ರಸ್ತೆ ಮಧ್ಯ ಭಾಗದಲ್ಲಿಯೇ ಗುಂಪು ಗುಂಪಾಗಿ ಚಲಿಸುತ್ತಿವೆ. ಇದರಿಂದ ಮಕ್ಕಳು, ಮಹಿಳೆಯರು ತಿರುಗಾಡಲು ಭಯಪಡುವ ವಾತಾವರಣ ನಿರ್ಮಾಣವಾಗಿದೆ. ಅಲ್ಲದೆ ಭಾನುವಾರ ಬೆಳಗಿನ ಸುಮಾರು ೫-೬ ಬೀದಿ ನಾಯಿಗಳು ನಗರಸಭೆ ವ್ಯಾಪ್ತಿಯ ೩೩ನೇ ವಾರ್ಡಿನ ಹುತ್ತಾಕಾಲೋನಿ ಮನೆಯೊಂದಕ್ಕೆ ನುಗ್ಗಿ ಕುರಿಗಳ ಮೇಲೆ ದಾಳಿ ನಡೆಸಿವೆ. ಇದರಿಂದಾಗಿ ೭ ಕುರಿಗಳು ಮೃತಪಟ್ಟಿವೆ. ೪ ಗಾಯಗೊಂಡಿವೆ. ಮೃತಪಟ್ಟ ಕುರಿಗಳನ್ನು ಜೆಸಿಬಿ ಮೂಲಕ ವಿಲೇವಾರಿ ಮಾಡಲಾಯಿತು. 
ಈ ಹಿಂದೆ ಸಹ ಇದೆ ರೀತಿಯ ಪ್ರಕರಣಗಳು ನಡೆದಿದ್ದು, ಅಲ್ಲದೆ ರಸ್ತೆಗಳಲ್ಲಿ ಒಬ್ಬಂಟಿಯಾಗಿ ಸಂಚರಿಸುವ ಮಹಿಳೆಯರು, ಮಕ್ಕಳ ಮೇಲೂ ದಾಳಿ ನಡೆಸಿರುವ ಘಟನೆಗಳು ನಡೆದಿವೆ. ಈ ಹಿಂದೆ ನಗರಸಭೆ ಆಡಳಿತ ನಾಯಿಗಳನ್ನು ಹಿಡಿದು ನಿರ್ಜನ ಪ್ರದೇಶಗಳಿಗೆ ಬಿಡುವಲ್ಲಿ ಯಶಸ್ವಿಯಾಗಿತ್ತು. ಅಲ್ಲದೆ ನಾಯಿಗಳಿಗೆ ಸಂತಾನ ಹರಣ ಶಸ್ತ್ರ ಚಿಕಿತ್ಸೆ ಸಹ ಕೈಗೊಂಡಿತ್ತು. ಇದರಿಂದಾಗಿ ನಾಯಿಗಳ ಹಾವಳಿ ನಿಯಂತ್ರಣಕ್ಕೆ ಬಂದಿತ್ತು. ಇದೀಗ ಪುನಃ ನಾಯಿಗಳ ಸಂಖ್ಯೆ ಹೆಚ್ಚಾಗಿದ್ದು, ತಕ್ಷಣ ನಗರಸಭೆ ಆಡಳಿತ ಎಚ್ಚೆತ್ತುಕೊಂಡು ಕ್ರಮ ಕೈಗೊಳ್ಳಬೇಕಾಗಿದೆ. 

ಅಧಿಕಾರಕ್ಕಾಗಿ ಅರಳಿಕೊಪ್ಪ ಅಧ್ಯಕ್ಷೆಯಿಂದ ದ್ರೋಹ : ಮಾಜಿ ಶಾಸಕ ಎಂ.ಜೆ ಅಪ್ಪಾಜಿ ಆರೋಪ

ಮಾಜಿ ಶಾಸಕ ಎಂ.ಜೆ ಅಪ್ಪಾಜಿ 
ಭದ್ರಾವತಿ, ಜೂ. ೧೪: ತಾಲೂಕಿನ ಅರಳಿಕೊಪ್ಪ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಮಮತಾ ಎಂಬುವರು ಈ ಹಿಂದೆ ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಗೊಂಡಿರಲಿಲ್ಲ. ಕಳೆದ ಒಂದು ವರ್ಷದ ಹಿಂದೆ ನಮ್ಮ ಬೆಂಬಲ ಕೋರಿ ಬಂದಿದ್ದು, ನಂತರ ಅಧಿಕಾರಕ್ಕಾಗಿ ದ್ರೋಹವೆಸಗಿದ್ದಾರೆಂದು ಮಾಜಿ ಶಾಸಕ ಎಂ.ಜೆ ಅಪ್ಪಾಜಿ ಆರೋಪಿಸಿದ್ದಾರೆ. 
ಅವರು ಪತ್ರಿಕೆಯೊಂದಿಗೆ ಮಾತನಾಡಿ, ಈಕೆ ಇದೀಗ ಕಾಂಗ್ರೆಸ್ ಪಕ್ಷ ಸೇರ್ಪಡೆಯಾಗಿರುವುದಾಗಿ ತಿಳಿದು ಬಂದಿದೆ. ಹಣ ಬಲದ ಮೇಲೆ ಈಕೆ ಅರಳಿಕೊಪ್ಪ ಗ್ರಾಮ ಪಂಚಾಯಿತಿ ಅಧ್ಯಕ್ಷೆಯಾಗಿದ್ದು, ಎಂದಿಗೂ ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಗೊಂಡಿರಲಿಲ್ಲ. ಈಕೆಯ ಅಕ್ರಮಗಳಿಗೆ ನಾನು ಬೆಂಬಲ ನೀಡದ ಕಾರಣ ಇದೀಗ ಜೆಡಿಎಸ್ ಪಕ್ಷ ಬಿಟ್ಟಿರುವುದಾಗಿ ಸುಳ್ಳು ಹೇಳಿಕೊಳ್ಳುತ್ತಿದ್ದು, ಈಕೆ ಮೊದಲಿನಿಂದಲೂ ಕಾಂಗ್ರೆಸ್ ಪಕ್ಷದಲ್ಲಿಯೇ ಇದ್ದು ಇದೀಗ ಪುನಃ ಕಾಂಗ್ರೆಸ್ ಪಕ್ಷ ಸೇರ್ಪಡೆಗೊಂಡಿರುವುದು ಹೊಸದೇನಲ್ಲ. ಈ ಹಿನ್ನಲೆಯಲ್ಲಿ ಹೆಚ್ಚಿನ ಮಾನ್ಯತೆ ಕೊಡುವ ಅವಶ್ಯಕತೆ ಇಲ್ಲ ಎಂದರು.