Monday, November 8, 2021

ಮಧ್ಯವರ್ತಿಗಳ ಹಾವಳಿ, ಭ್ರಷ್ಟಾಚಾರ, ಸರ್ಕಾರಿ ಸೌಲಭ್ಯಗಳ ವಂಚನೆ ವಿರುದ್ಧ ಪ್ರತಿಭಟನೆ

ಭದ್ರಾವತಿ ತಾಲೂಕು ಪಂಚಾಯಿತಿ ಕಛೇರಿ ಮುಂಭಾಗ ಮಾನವ ಹಕ್ಕುಗಳ ಹೋರಾಟ ಸಮಿತಿ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ತಾಲೂಕಿನ ದೊಣಬಘಟ್ಟ ಗ್ರಾಮದಲ್ಲಿ ಮಧ್ಯವರ್ತಿಗಳ ಹಾವಳಿ ಖಂಡಿಸಿ, ರೈತರ ಸಂಕಷ್ಟಕ್ಕೆ ಸ್ಪಂದಿಸದ ಅಧಿಕಾರಿಗಳ ವರ್ತನೆ ವಿರುದ್ಧ ಪ್ರತಿಭಟನೆ ಹಾಗು ಇತ್ತೀಚೆಗೆ ನಿಧನ ಹೊಂದಿದ ಗಣ್ಯರಿಗೆ ಶ್ರದ್ಧಾಂಜಲಿ ಸಭೆ ಕಾರ್ಯಕ್ರಮದಲ್ಲಿ ಬಿಸಿಯೂಟ ನೌಕರರ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹನುಮಮ್ಮ ಪಾಲ್ಗೊಂಡು ಮಾತನಾಡಿದರು.
    ಭದ್ರಾವತಿ, ನ. ೮: ಅತಿ ಹೆಚ್ಚಿನ ಸಂಖ್ಯೆಯಲ್ಲಿ ಅಲ್ಪಸಂಖ್ಯಾತರು ವಾಸಿಸುತ್ತಿರುವ ತಾಲೂಕಿನ ದೊಣಬಘಟ್ಟ ಗ್ರಾಮದಲ್ಲಿ ಮಧ್ಯವರ್ತಿಗಳ ಹಾವಳಿ, ಭ್ರಷ್ಟಾಚಾರ ಹಾಗು ಸರ್ಕಾರಿ ಸೌಲಭ್ಯಗಳ ವಂಚನೆ ಹೆಚ್ಚಾಗಿದ್ದು, ತಾಲೂಕು ಆಡಳಿತ ಮತ್ತು ಜಿಲ್ಲಾಡಳಿತ ಈ ಸಂಬಂಧ ಯಾವುದೇ ಕ್ರಮ ಕೈಗೊಳ್ಳದೆ ನಿರ್ಲಕ್ಷ್ಯತನದಿಂದ ವರ್ತಿಸುತ್ತಿವೆ ಎಂದು ಮಾನವ ಹಕ್ಕುಗಳ ಹೋರಾಟ ಸಮಿತಿ ಅಧ್ಯಕ್ಷ ಬಿ.ಎನ್ ರಾಜು ಆರೋಪಿಸಿದರು.
    ಅವರು ಸೋಮವಾರ ಸಮಿತಿ ವತಿಯಿಂದ ತಾಲೂಕು ಪಂಚಾಯಿತಿ ಕಛೇರಿ ಮುಂಭಾಗ ಹಮ್ಮಿಕೊಳ್ಳಲಾಗಿದ್ದ ತಾಲೂಕಿನ ದೊಣಬಘಟ್ಟ ಗ್ರಾಮದಲ್ಲಿ ಮಧ್ಯವರ್ತಿಗಳ ಹಾವಳಿ ಖಂಡಿಸಿ, ರೈತರ ಸಂಕಷ್ಟಕ್ಕೆ ಸ್ಪಂದಿಸದ ಅಧಿಕಾರಿಗಳ ವರ್ತನೆ ವಿರುದ್ಧ ಪ್ರತಿಭಟನೆ ಹಾಗು ಇತ್ತೀಚೆಗೆ ನಿಧನ ಹೊಂದಿದ ಗಣ್ಯರಿಗೆ ಶ್ರದ್ಧಾಂಜಲಿ ಸಭೆ ಕಾರ್ಯಕ್ರಮದ ನೇತೃತ್ವವಹಿಸಿ ಮಾತನಾಡಿದರು.
ದೊಣಬಘಟ್ಟ ಗ್ರಾಮದಲ್ಲಿ ಸುಮಾರು ೧೦ ಸಾವಿರಕ್ಕೂ ಹೆಚ್ಚು ಮುಸ್ಲಿಂ ಸಮುದಾಯದ ಅಲ್ಪಸಂಖ್ಯಾತರು ವಾಸಿಸುತ್ತಿದ್ದು, ಇವರಿಗೆ ಕನ್ನಡ ಭಾಷೆ ಸರಿಯಾಗಿ ಬಾರದ ಹಿನ್ನಲೆಯಲ್ಲಿ ಸರ್ಕಾರಿ ಕಛೇರಿಗಳಲ್ಲಿ ವಂಚನೆ ಹೆಚ್ಚಾಗುತ್ತಿದೆ. ಇದನ್ನೇ ಬಂಡವಾಳ ಮಾಡಿಕೊಂಡಿರುವ ಮಧ್ಯವರ್ತಿಗಳಿಂದ ಮತ್ತಷ್ಟು ವಂಚನೆ ನಡೆಯುತ್ತಿದೆ. ತಮಗೆ ಆಗುತ್ತಿರುವ ವಂಚನೆ, ಅನ್ಯಾಯಗಳನ್ನು ಹೇಳಿಕೊಳ್ಳಲಾಗದ ಅಸಹಾಯಕ ಸ್ಥಿತಿಯಲ್ಲಿ ಜೀವನ ಸಾಗಿಸುತ್ತಿದ್ದಾರೆ. ಇಲ್ಲಿನ ನಿವಾಸಿಗಳಿಗೆ ಕನ್ನಡ ಭಾಷೆಯನ್ನು ಕಲಿಸಿಕೊಡುವಲ್ಲಿ ತಾಲೂಕು ಆಡಳಿತ ಮತ್ತು ಜಿಲ್ಲಾಡಳಿತಗಳು ಸೂಕ್ತ ಕ್ರಮ ಕೈಗೊಂಡಿಲ್ಲದಿರುವುದು ವಿಪರ್ಯಾಸದ ಸಂಗತಿಯಾಗಿದೆ. ತಕ್ಷಣ ಕನ್ನಡ ಭಾಷೆ ಕಲಿಸಿಕೊಡಲು ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕೆಂದು ಆಗ್ರಹಿಸಿದರು.
    ಸರ್ಕಾರಿ ಕಛೇರಿಗಳಲ್ಲಿ ಭ್ರಷ್ಟಾಚಾರ ಹೆಚ್ಚಾಗುತ್ತಿದ್ದು, ಅದರಲ್ಲೂ ಗ್ರಾಮ ಪಂಚಾಯಿತಿಗಳಲ್ಲಿ ಸರ್ಕಾರಿ ಸೌಲಭ್ಯಗಳು ಅರ್ಹ ಫಲಾನುಭವಿಗಳಿಗೆ ತಲುಪುತ್ತಿಲ್ಲ. ಕೆಲವು ಭ್ರಷ್ಟ ರಾಜಕಾರಣಿಗಳು, ಮಧ್ಯವರ್ತಿಗಳಿಂದಾಗಿ ವಂಚನೆ ಹೆಚ್ಚಾಗುತ್ತಿದೆ. ನಿಜವಾದ ಬಡವರಿಗೆ, ಶೋಷಿತರಿಗೆ ನ್ಯಾಯ ಸಿಗದಂತಾಗಿರುವುದು ಮತ್ತು ಸಂವಿಧಾನದ ಕಾನೂನುಗಳನ್ನು ಜಾರಿಗೊಳಿಸದಿರುವುದು ವಿಪರ್ಯಾಸದ ಸಂಗತಿಯಾಗಿದ್ದು, ಪ್ರಜಾ ಪ್ರಭುತ್ವ ವ್ಯವಸ್ಥೆಗೆ ಮೋಸ ಮಾಡಿದಂತಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
    ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್ ದೊರೆಸ್ವಾಮಿ, ಪ್ರಗತಿಪರ ಚಿಂತಕ ಪ್ರೊ. ಜಿ.ಕೆ ಗೋವಿಂದರಾವ್, ದಕ್ಷ ಲೋಕಾಯುಕ್ತ ವೆಂಕಟಾಚಲ ಹಾಗು ಚಲನಚಿತ್ರ ನಟ ಪುನೀತ್ ರಾಜ್‌ಕುಮಾರ್ ಅವರ ನಿಧನಕ್ಕೆ ಶ್ರದ್ದಾಂಜಲಿ ಸಲ್ಲಿಸಿ ಮೌನಾಚರಣೆ ನಡೆಸಲಾಯಿತು.
ಪ್ರಮುಖರಾದ ಜೆಡಿಎಸ್ ತಾಲೂಕು ಅಧ್ಯಕ್ಷ ಆರ್. ಕರುಣಾಮೂರ್ತಿ, ಆಮ್ ಆದ್ಮಿ ಪಾರ್ಟಿ ಜಿಲ್ಲಾಧ್ಯಕ್ಷ ಎಚ್. ರವಿಕುಮಾರ್, ಬಿಸಿಯೂಟ ನೌಕರರ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹನುಮಮ್ಮ, ಅಖಿಲ ಭಾರತ ವೀರಶೈವ ಮಹಾಸಭಾ ತಾಲೂಕು ಅಧ್ಯಕ್ಷ ಸಿದ್ದಲಿಂಗಯ್ಯ, ಹಿಂದುಳಿದ ವರ್ಗ ಮುಖಂಡ ಬಿ. ಗಂಗಾಧರ್ ಸೇರಿದಂತೆ ಇನ್ನಿತರರು ಪಾಲ್ಗೊಂಡು ಮಾತನಾಡಿದರು.
ಸಮಿತಿ ಕಾರ್ಯಾಧ್ಯಕ್ಷ ಐ.ಎಲ್ ಅರುಣ್‌ಕುಮಾರ್, ಉಪಾಧ್ಯಕ್ಷರಾದ ಬ್ರಹ್ಮಲಿಂಗಯ್ಯ, ಎಂ.ವಿ ಚಂದ್ರಶೇಖರ್, ಪ್ರಧಾನ ಕಾರ್ಯದರ್ಶಿ ಅಕ್ರಂ ಖಾನ್, ಸೈದನ್ ಸಾಬ್, ಪೀರ್ ಸಾಬ್, ಮಹಾಲಿಂಗಪ್ಪ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ಎಂ.ಜೆ.ಎ ಟ್ರೋಫಿ ಕಬಡ್ಡಿ ಪಂದ್ಯಾವಳಿ : ಎಂಜೆಎ ತಂಡಕ್ಕೆ ಮೊದಲ ಬಹುಮಾನ

ಸರ್‌ಎಂವಿ ಕಬಡ್ಡಿ ಸ್ಪೋರ್ಟ್ಸ್ ಕ್ಲಬ್ ವತಿಯಿಂದ ಭದ್ರಾವತಿ ವಿಐಎಸ್‌ಎಲ್ ಕ್ರೀಡಾಂಗಣದಲ್ಲಿ ೩ ದಿನಗಳ ಕಾಲ ಆಯೋಜಿಸಲಾಗಿದ್ದ ಎಂ.ಜೆ.ಎ ಟ್ರೋಫಿ ಕಬಡ್ಡಿ ಪಂದ್ಯಾವಳಿಯ ಕೊನೆಯ ರೋಚಕ ಪಂದ್ಯ ಎಂಜೆಎ ಮತ್ತು ಸೆವೆನ್ಸ್ ಸ್ಪೋರ್ಟ್ಸ್ ಕ್ಲಬ್ ತಂಡಗಳ ನಡುವೆ ನಡೆಯಿತು.
    ಭದ್ರಾವತಿ, ನ. ೮: ಸರ್‌ಎಂವಿ ಕಬಡ್ಡಿ ಸ್ಪೋರ್ಟ್ಸ್ ಕ್ಲಬ್ ವತಿಯಿಂದ ನಗರದ ವಿಐಎಸ್‌ಎಲ್ ಕ್ರೀಡಾಂಗಣದಲ್ಲಿ ೩ ದಿನಗಳ ಕಾಲ ಆಯೋಜಿಸಲಾಗಿದ್ದ ಎಂ.ಜೆ.ಎ ಟ್ರೋಫಿ ಕಬಡ್ಡಿ ಪಂದ್ಯಾವಳಿ ಎಂಜೆಎ ತಂಡ ಮೊದಲ ಬಹುಮಾನ ಪಡೆದುಕೊಂಡಿತು.
    ಭಾನುವಾರ ರಾತ್ರಿ ಅಂತಿಮ ಪಂದ್ಯದಲ್ಲಿ ಎಂಜೆಎ ಮತ್ತು ಸೆವೆನ್ಸ್ ಸ್ಪೋರ್ಟ್ಸ್ ಕ್ಲಬ್ ತಂಡಗಳು ಟ್ರೋಫಿಗಾಗಿ ರೋಚಕ ಸೆಣೆಸಾಟ ನಡೆಸಿದವು. ಅಂತಿಮವಾಗಿ ಎಂಜೆಎ ತಂಡ ಮೊದಲ ಬಹುಮಾನ ಪಡೆದುಕೊಂಡಿತು. ಎರಡನೇ ಬಹುಮಾನ ಸೆವೆನ್ಸ್ ಸ್ಪೋರ್ಟ್ಸ್ ಕ್ಲಬ್ ತಂಡದ ಪಾಲಾಯಿತು. ಶಿವಮೊಗ್ಗ ಜಿಲ್ಲೆಯಿಂದ ಒಟ್ಟು ೮ ತಂಡಗಳು ಪಾಲ್ಗೊಂಡಿದ್ದವು.
    ಜೆಡಿಎಸ್ ಮುಖಂಡರಾದ ಶಾರದ ಅಪ್ಪಾಜಿ ವಿಜೇತ ತಂಡಗಳಿಗೆ ಬಹುಮಾನಗಳನ್ನು ವಿತರಿಸಿದರು. ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಎಸ್. ಕುಮಾರ್ ಪಂದ್ಯಾವಳಿ ನೇತೃತ್ವ ವಹಿಸಿದ್ದರು. ಪ್ರಮುಖರಾದ ಅಂತರಾಷ್ಟ್ರೀಯ ಕಬಡ್ಡಿ ಆಟಗಾರ ಕೃಷ್ಣೇಗೌಡ, ನಗರಸಭೆ ಮಾಜಿ ಸದಸ್ಯರಾದ ಕರಿಯಪ್ಪ, ಎಂ.ಎ ಅಜಿತ್, ಬದರಿನಾರಾಯಣ, ಗುಣಶೇಖರ್, ಅನಿಲ್‌ಕುಮಾರ್, ಎಚ್.ಬಿ ರವಿಕುಮಾರ್, ಎಂ. ರಾಜು, ಮುಖಂಡರಾದ ಉಮೇಶ್, ದಿಲೀಪ್, ಕ್ಲಬ್ ಸುರೇಶ್, ಡಾರ್ವಿನ್, ಗಿರೀಶ್‌ಕುಮಾರ್, ಲಕ್ಷ್ಮೀನಾರಾಯಣ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
    ಸರ್‌ಎಂವಿ ಕಬಡ್ಡಿ ಸ್ಪೋರ್ಟ್ಸ್ ಕ್ಲಬ್ ವತಿಯಿಂದ ಈ ಹಿಂದೆ ೨೦೧೫ರಲ್ಲಿ ಮಾಜಿ ಶಾಸಕ ದಿವಂಗತ ಎಂ.ಜೆ ಅಪ್ಪಾಜಿ ಅವರ ನೇತೃತ್ವದಲ್ಲಿ ರಾಜ್ಯಮಟ್ಟದ ಮ್ಯಾಟ್ ಪ್ರೋ ಮಾದರಿ ಪಂದ್ಯಾವಳಿಯನ್ನು ಯಶಸ್ವಿಯಾಗಿ ಆಯೋಜಿಸಲಾಗಿತ್ತು. ಅವರ ನಿಧನದ ನಂತರ ಇದೀಗ ಅವರ ಸವಿನೆನಪಿನಲ್ಲಿ ಕಬಡ್ಡಿ ಪಂದ್ಯಾವಳಿ ಆಯೋಜಿಸುವ ಮೂಲಕ ಜಿಲ್ಲೆಯಲ್ಲಿರುವ ಯುವ ಕಬಡ್ಡಿ ಕ್ರೀಡಾಪಟುಗಳನ್ನು ಪ್ರೋತ್ಸಾಹಿಸುವ ಕಾರ್ಯ ಕೈಗೊಳ್ಳಲಾಗಿದೆ.


ಸರ್‌ಎಂವಿ ಕಬಡ್ಡಿ ಸ್ಪೋರ್ಟ್ಸ್ ಕ್ಲಬ್ ವತಿಯಿಂದ ಭದ್ರಾವತಿ ವಿಐಎಸ್‌ಎಲ್ ಕ್ರೀಡಾಂಗಣದಲ್ಲಿ ೩ ದಿನಗಳ ಕಾಲ ಆಯೋಜಿಸಲಾಗಿದ್ದ ಎಂ.ಜೆ.ಎ ಟ್ರೋಫಿ ಕಬಡ್ಡಿ ಪಂದ್ಯಾವಳಿ ಎಂಜೆಎ ತಂಡ ಮೊದಲ ಬಹುಮಾನ ಪಡೆದುಕೊಂಡಿತು.